Thursday, 12th December 2024

Paneer Purity Test: ಪನೀರ್‌ನ ಶುದ್ಧತೆ ಬಗ್ಗೆ ಅನುಮಾನವೇ? ಹೀಗೆ ಪರೀಕ್ಷಿಸಿ ನೋಡಿ!

Paneer Purity Test

ಈಗಿನ ಮನ್ವಂತರವನ್ನು ಕಲಿಯುಗ ಎನ್ನಲಾಗುತ್ತದೆ. ಬದಲಿಗೆ, ʻಕಲಬೆರಕೆ ಯುಗʼ ಎಂದರೂ ತಪ್ಪಿಲ್ಲ. ಸಕಲ ಚರಾಚರ ವಸ್ತುಗಳಲ್ಲಿ ಯಾವುದೂ ಶುದ್ಧವಲ್ಲ ಎನ್ನುವಷ್ಟು ಎಲ್ಲದರಲ್ಲೂ ಕಲಬೆರಕೆ ಕಂಡುಬರುತ್ತದೆ. ತಿನ್ನುವ ವಸ್ತುಗಳಲ್ಲಂತೂ ಯಾವುದು ಶುದ್ಧವಾದದ್ದು, ಯಾವುದು ಸರಿಯಿಲ್ಲದ್ದು ಎಂಬುದನ್ನು ಪತ್ತೆ (Paneer Purity Test) ಹಚ್ಚುವುದೇ ದುಸ್ತರ ಎಂಬಂತಾಗಿದೆ. ಮನೆಯಲ್ಲಿ ಎಲ್ಲವನ್ನೂ ಮಾಡಿಕೊಳ್ಳುತ್ತೇವೆ ಎಂದರೆ ಆಗದ ಮಾತು. ಹಾಗೆಂದೇ ಹೆಚ್ಚಿನ ವಸ್ತುಗಳನ್ನು ಹೊರಗಿನಿಂದ ಖರೀದಿಸುವುದು ಅನಿವಾರ್ಯ. ಉದಾ, ಗಡಿಬಿಡಿಯ ಬದುಕಿನಲ್ಲಿ ಮನೆಯಲ್ಲಿ ಪನೀರ್‌ ಮಾಡಿಕೊಳ್ಳಲು ಕಷ್ಟಸಾಧ್ಯವೆಂದು ಹೊರಗಿನಿಂದ ಖರೀದಿಸುವುದು ಮಾಮೂಲಿ. ಆದರೆ ಕಲಬೆರಕೆ ಪನೀರ್‌ ಅಥವಾ ಕೃತಕ ಪನೀರ್‌ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿರುವ ಸುದ್ದಿ ಬಂದಾಗಲೆಲ್ಲ ಗಾಬರಿಯಾಗುತ್ತದೆ. ಪನೀರ್‌ ಎಂಬ ಹೆಸರಿನಲ್ಲಿ ಏನನ್ನು ತಿನ್ನುತ್ತಿದ್ದೇವೆ ಎಂದು ಆತಂಕವಾಗುತ್ತದೆ. ನಿಜವಾದ ಪನೀರ್‌ ಮತ್ತು ಕಲಬೆರಕೆ ಪನೀರ್‌ ನಡುವೆ ವ್ಯತ್ಯಾಸ ಕಂಡುಕೊಳ್ಳುವುದು ಹೇಗೆ? ಇಲ್ಲಿದೆ ಟಿಪ್ಸ್‌.

ಹಲವು ರೀತಿಯ ಅಡುಗೆಗಳಲ್ಲಿ ಪನೀರ್‌ ಬಳಸುವ ಮೂಲಕ, ಅಡುಗೆಯ ಪೌಷ್ಟಿಕತೆಯನ್ನು ಸುಲಭವಾಗಿ ಹೆಚ್ಚಿಸಬಹುದು ಮಾತ್ರವಲ್ಲ, ರುಚಿಯನ್ನೂ ವೃದ್ಧಿಸಬಹುದು. ಅದನ್ನು ಚೌಕ ಕತ್ತರಿಸಿ, ಪುಡಿ ಮಾಡಿ, ತುರಿಯಿರಿ, ಹುರಿಯಿರಿ, ಕರಿಯಿರಿ- ಏನೇ ಮಾಡಿದರೂ ಅದನ್ನು ಮೆಚ್ಚಿ ತಿನ್ನುವವರು ಬಹಳಷ್ಟು ಮಂದಿ ಇದ್ದಾರೆ. ಹಾಗೆಂದು ಎಲ್ಲರ ನೆಚ್ಚಿನ ತಿನಿಸೇ ಶುದ್ಧವಾಗಿಲ್ಲದಿದ್ದರೆ ಆರೋಗ್ಯದ ಗತಿಯೇನು? ಅದರಲ್ಲೂ ಸಸ್ಯಾಹಾರಿಗಳಿಗೆ ಪ್ರೊಟೀನ್‌ನ ಪ್ರಮುಖ ಮೂಲಗಳಲ್ಲಿ ಪನೀರ್‌ ಸಹ ಒಂದು. ಇಂಥ ಉತ್ತಮ ಆಹಾರದ ಶುದ್ಧಾಶುದ್ಧತೆಯನ್ನು ಪರೀಕ್ಷಿಸುವುದು ಸುಲಭವಲ್ಲ, ಹಾಗೆಂದು ಈ ಬಗ್ಗೆ ನಮಗೆ ಅರಿವಿದ್ದರೆ ಅಂಥಾ ಕಷ್ಟವೂ ಅಲ್ಲ.

ಈ ಸುದ್ದಿಯನ್ನೂ ಓದಿ | Anish Sarkar: ಮೂರರ ಪೋರ ಅನೀಶ್​ ಈಗ ಫಿಡೆ ರೇಟೆಡ್​ ಚೆಸ್​ ಆಟಗಾರ

ಕೃತಕ ಪನೀರ್‌ ಅಂದರೆ…?

ಇದನ್ನು ಸಿಂಥೆಟಿಕ್‌ ಪನೀರ್‌ ಎಂದೂ ಕರೆಯಲಾಗುತ್ತದೆ. ಹಾಲಿನ ಪುಡಿಯನ್ನು ಯಾವುದೋ ನೀರಲ್ಲಿ ಬೆರೆಸಿ, ಇದರ ಜತೆಗೆ ಬೇರೆ ಪಿಷ್ಟಗಳನ್ನೂ ಕರಗಿಸಿ, ಅದಕ್ಕೆ ಹುಳಿ ಹಿಂಡಿ ಒಡೆಸಲಾಗುತ್ತದೆ. ಕೆಲವೊಮ್ಮೆ ಈ ಮಿಶ್ರಣಕ್ಕೆ ತಾಳೆ ಎಣ್ಣೆಯನ್ನು ಸೇರಿಸಲಾಗುತ್ತದೆ. ಈ ಕೃತಕ ಪಿಷ್ಟ ಮತ್ತು ಜಿಡ್ಡುಗಳೇ ಸಾಕಾಗದು ಎಂಬಂತೆ, ಇದರ ಬಣ್ಣ ಮತ್ತು ಮೇಲ್ಮೈಯನ್ನು ಆಕರ್ಷಕವಾಗಿಸುವುದಕ್ಕೆ ಡಿಟರ್ಜಂಟ್‌ ಸೇರಿಸುವ ಸಾಧ್ಯತೆಯೂ ಇದೆ. ಇದರಿಂದ ಪನೀರ್‌ನಲ್ಲಿ ಅಧಿಕ ಕೆನೆ ಬೆರೆತಂತೆ ಕಾಣಿಸಲು ಸಾಧ್ಯವಾಗುತ್ತದೆ. ಇಂಥದ್ದನ್ನು ತಿಂದಾಗ ಆರೋಗ್ಯದ ಮೇಲಾಗುವ ಪರಿಣಾಮಗಳನ್ನು ನೆನೆಸಿಕೊಂಡು ಭಯ ಪಡುವುದು ಸಹಜವೇ ತಾನೆ.

ಪತ್ತೆ ಮಾಡುವುದು ಹೇಗೆ?

ಮೊದಲಿಗೆ ನಮ್ಮ ಕಣ್ಣು, ಮೂಗು ಮತ್ತು ನಾಲಿಗೆಯನ್ನ ಚುರುಕಾಗಿಸಿಕೊಳ್ಳಬೇಕು. ಪನೀರ್‌ನ ಮೇಲ್ಮೈ, ಬಣ್ಣ, ಘಮ ಮತ್ತು ರುಚಿಗಳು ಅದರ ಶುದ್ಧಾಶುದ್ಧತೆಯ ಬಗ್ಗೆ ನಮಗೆ ಬಹಳಷ್ಟನ್ನು ಹೇಳುತ್ತವೆ. ಜತೆಗೆ, ಖರೀದಿಸುವಾಗ ಒಮ್ಮೆ ಅದರ ಲೇಬಲ್‌ ಪರಿಶೀಲಿಸುವುದು ಸಹ ಒಳ್ಳೆಯ ಅಭ್ಯಾಸ. ಅಂದರೆ, ತಯಾರಾದ ದಿನಾಂಕ ಮತ್ತು ಬೆಲೆ ಮಾತ್ರವಲ್ಲ, ಏನೇನೆಲ್ಲ ಇದರಲ್ಲಿ ಸೇರಿಕೊಂಡಿದೆ ಎಂಬುದನ್ನು ಈ ಮೂಲಕವೂ ತಿಳಿಯಬಹುದು. ತಯಾರಕರೆಲ್ಲರೂ ಪ್ರಾಮಾಣಿಕತೆಯಿಂದ ಸೇರಿಸಿದ್ದನ್ನು ಅದರಲ್ಲಿ ಬರೆದಿರುತ್ತಾರೆ ಎಂಬ ಭರವಸೆ ಇದ್ದರೆ ಈ ಕ್ರಮ ನೆರವಾಗಬಹುದು.

ಮೇಲ್ಮೈ

ನಿಜವಾಗಿ ಶುದ್ಧ ಹಾಲಿನಿಂದಲೇ ತಯಾರಾದ ಪನೀರ್‌ನ ಮೇಲ್ಮೈ ದೃಢವಾಗಿದ್ದರೂ, ಬೆರಳಿನಿಂದ ಒತ್ತಿದಾಗ ಕೊಂಚ ಒಳಗೆ ಹೋಗಬೇಕು; ಆದರೆ ಸ್ಪಾಂಜ್‌ನಂತೆ ಮೆತ್ತಗಿರಬಾರದು. ಜೊತೆಗೆ, ಪುಡಿ ಮಾಡಿದಾಗ ಬ್ರೆಡ್‌ ಪುಡಿಯಂತೆ ಸ್ವಲ್ಪ ಹರಳು ಹರಳಾಗಿ ಪನೀರ್‌ ಪುಡಿಯಾಗಬೇಕು. ಇದರ ಬದಲಿಗೆ, ಪನೀರ್‌ ಮುಟ್ಟಿದಾಗ ರಬ್ಬರ್‌ನಂತೆ ಇದ್ದರೆ, ಸ್ಟ್ರೆಸ್‌ ಬಾಲ್‌ ಒತ್ತಿದ ಹಾಗಾದರೆ, ಅಥವಾ ಸ್ಪಾಂಜ್‌ನಂತೆ ತೀರಾ ಮೆತ್ತಗಿದ್ದರೆ, ಪುಡಿ ಮಾಡಿದಾಗ ಹರಳಿನ ಬದಲು ಹಿಟ್ಟಿನಂತಾದರೆ ಅದನ್ನು ಶುದ್ಧ ಪನೀರ್‌ ಅಲ್ಲ ಎಂದು ಪರಿಗಣಿಸಬಹುದು.

ಘಮ

ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ಪರಿಮಳ ಇರುವಂತೆಯೇ ಹಾಲಿಗೂ ಇದೆ. ಶುದ್ಧ ಹಾಲಿಗೆ ಕೊಂಚ ನಿಂಬೆ ರಸ ಹಿಂಡಿ ಅಥವಾ ಮೊಸರು ಸೇರಿಸಿ ಒಡೆಸಿದಾಗ ಇವೆರಡೇ ವಸ್ತುಗಳ ಪರಿಮಳ ಬರಬೇಕು. ಇದರ ಬದಲಿಗೆ ಯಾವುದೇ ಅಡ್ಡ ಕಂಪು ಅಥವಾ ಕಟುವಾದ ವಾಸನೆಯಿದ್ದರೆ, ವಿನೇಗರ್‌ನಂಥ ವಸ್ತು ಸೇರಿದ ವಾಸನೆಯಿದ್ದರೆ ಅಂಥ ಪನೀರ್‌ನ ಶುದ್ಧತೆಯ ಬಗ್ಗೆ ಎಚ್ಚರ ವಹಿಸುವುದು ಒಳ್ಳೆಯದು.

ಬಣ್ಣ

ಶುದ್ಧ ಪನೀರಿಗೆ ಇರುವುದು ತಿಳಿಯಾದ ಕೆನೆ ಬಣ್ಣ. ಇನ್ನು ಅಪ್ಪಟ ಎಮ್ಮೆಯ ಹಾಲಿನಿಂದ ಮಾತ್ರವೇ ಮಾಡಿದ ಪನೀರ್‌ ಆದರೆ ಬಿಳಿಯ ಬಣ್ಣದಲ್ಲಿ ಇರುತ್ತದೆ. ಹಾಗಲ್ಲದೆ ಮಾಮೂಲಿ ಡೈರಿ ಹಾಲಿನ ಪನೀರ್‌ ಸಾಮಾನ್ಯವಾಗಿ ಇರುವುದು ಕೆನೆ ಬಣ್ಣದಲ್ಲೇ. ಹಾಲಿನಿಂದ ಮಾತ್ರವೇ ಪನೀರ್‌ಗೆ ಬಣ್ಣ ಬರಬೇಕೆ ವಿನಹ ಬೇರಾವುದರಿಂದಲೂ ಅಲ್ಲ. ಇದರ ಹೊರತಾಗಿ ಇನ್ನಾವುದೇ ಬಣ್ಣದಲ್ಲಿದ್ದರೂ ಆ ಪನೀರ್‌ಗೆ ಕೃತಕವಾದ ಏನನ್ನೋ ಬೆರೆಸಲಾಗಿದೆ ಎಂಬುದು ಸ್ಪಷ್ಟ.

ಈ ಸುದ್ದಿಯನ್ನೂ ಓದಿ | Bagheera Movie: ʼಬಘೀರʼನಿಗೆ ಪ್ರಭಾಸ್‌ ಮೆಚ್ಚುಗೆ!

ರುಚಿ

ಇದು ಅತ್ಯಂತ ವಿಶ್ವಾಸಾರ್ಹ ಪ್ರಮಾಣಪತ್ರ. ಹಾಲಿನ ಕೆನೆಯ ಗಾಢವಾದ ರುಚಿಯೊಂದಿಗೆ ಅತಿ ಸ್ವಲ್ಪ (ನಿಂಬೆ ರಸ ಅಥವಾ ಮೊಸರಿನ) ಹುಳಿ ಅಂಶವಿದ್ದರೆ ಅದು ಪನೀರ್‌ನ ನಿಜವಾದ ರುಚಿ. ಿದರ ಹೊರತಾಗಿ ಇನ್ನಾವುದೇ ರುಚಿಯನ್ನು ಅದು ಹೊಂದಿದ್ದರೂ, ಬೇರೇನೋ ಅದರೊಂದಿಗೆ ಸೇರಿದೆ ಎಂಬುದಲ್ಲಿ ಅನುಮಾನ ಬೇಡ. ಒಂದೊ ಪನೀರ್‌ ಕಲಬೆರಕೆ ಆಗಿರಬೇಕು ಅಥವಾ ಮೂಲದಲ್ಲಿ ಹಾಲೇ ಕಲಬೆರಕೆ ಆಗಿರಲಿಕ್ಕೂ ಸಾಧ್ಯವಿದೆ.