ಬೆಂಗಳೂರು: ವಯೋಮಿತಿ, ಶುಲ್ಕ ಪಾವತಿ ಸಮಸ್ಯೆ ಸೇರಿ ನಾನಾ ಕಾರಣಗಳಿಂದ ಪಿಡಿಒ ಹುದ್ದೆಗಳ ನೇಮಕಾತಿಗೆ (PDO Recruitment 2024) ಅರ್ಜಿ ಸಲ್ಲಿಸಲು ಸಾಧ್ಯವಾಗದ ಆಕಾಂಕ್ಷಿಗಳಿಗೆ ಕೆಪಿಎಸ್‌ಸಿ ಸಿಹಿ ಸುದ್ದಿ ನೀಡಿದೆ. ರಾಜ್ಯ ಸರ್ಕಾರ ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ 247 ಪಿಡಿಒ ಹುದ್ದೆಗಳಿಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಈ ಬಗ್ಗೆ ಕೆಪಿಎಸ್‌ಸಿ ಪ್ರಕಟಣೆ ಹೊರಡಿಸಿದೆ. ಆಯೋಗವು 2023-24ನೇ ಸಾಲಿನ ಗ್ರೂಪ್-ಸಿ ವೃಂದದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ಒಟ್ಟು 247 ‘ಪಂಚಾಯಿತಿ ಅಭಿವೃದ್ಧಿ ಅಧಿಕಾರಿ” ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮಾರ್ಚ್ 15ರಂದು ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಇದಕ್ಕೆ ಗರಿಷ್ಠ ವಯೋಮಿತಿಯನ್ನು ಸಾಮಾನ್ಯ ಅರ್ಹತೆ-35 ವರ್ಷ, ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ- 38 ವರ್ಷಗಳು ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ 1- 40 ವರ್ಷಗಳು” ಎಂದು ನಿಗದಿಪಡಿಸಲಾಗಿತ್ತು.
ಆದರೆ, “ರಾಜ್ಯ ಸಿವಿಲ್ ಸೇವೆಗಳಲ್ಲಿನ ವಿವಿಧ ಇಲಾಖೆಗಳ ಗ್ರೂಪ್-ಸಿ ಮತ್ತು ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ (one time measure) ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆಯನ್ನು ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ. ಹೀಗಾಗಿ ಹುದ್ದೆಗಳಿಗೆ ಕೆಳಕಂಡಂತೆ ವಯೋಮಿತಿಯಲ್ಲಿ ಮಾರ್ಪಾಡು ಮಾಡಲಾಗಿದೆ.
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ: 03.10.2024ಕ್ಕೆ ಆಯಾ ಮೀಸಲಾತಿಗಳ ಮುಂದೆ ನಮೂದಿಸಿರುವ ಕನಿಷ್ಠ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಟ ವಯೋಮಿತಿಯನ್ನು ಮೀರಿರಬಾರದು.
ವಯಸ್ಸು ಎಷ್ಟಿರಬೇಕು? (ಕನಿಷ್ಠ-18 ವರ್ಷಗಳು)
ಸಾಮಾನ್ಯ ಅರ್ಹತೆ ಗರಿಷ್ಠ-38 ವರ್ಷ
ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಗರಿಷ್ಠ- 41 ವರ್ಷ
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1- ಗರಿಷ್ಠ- 43 ವರ್ಷ
ಸೆ.18ರಿಂದ ಅರ್ಜಿ ಸಲ್ಲಿಕೆ ಆರಂಭ
ಸರ್ಕಾರದ ಮೇಲ್ಕಂಡ ಆದೇಶದ ಹಿನ್ನೆಲೆಯಲ್ಲಿ ಗ್ರೂಪ್-ಸಿ ವೃಂದದ “ಪಂಚಾಯತಿ ಅಭಿವೃದ್ಧಿ ಅಧಿಕಾರಿ* ಹುದ್ದೆಗಳಿಗೆ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ (one time measure) ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆಯನ್ನು ನೀಡಿ ಅರ್ಹ ಅಭ್ಯರ್ಥಿಗಳಿಗೆ ಸೆ.18ರಿಂದ ಅ.3 ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶವನ್ನು ಕಲ್ಪಿಸಲಾಗಿದೆ.
"ಪಂಚಾಯತಿ ಅಭಿವೃದ್ಧಿ ಅಧಿಕಾರಿ" ಹುದ್ದೆಗಳಿಗೆ ಸಂಬಂಧಿಸಿದಂತೆ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ (one time measure) ಗರಿಷ್ಟ ವಯೋಮಿತಿಯಲ್ಲಿ 03 ವರ್ಷಗಳ ಸಡಿಲಿಕೆಯನ್ನು ನೀಡಿ ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಕಾಲಾವಕಾಶವನ್ನು ಕಲ್ಪಿಸಿ, ತಿದ್ದುಪಡಿ ಅಧಿಸೂಚನೆಯನ್ನು ಹೊರಡಿಸಲಾಗಿರುತ್ತದೆ. pic.twitter.com/MnVmJJ1Ed3
— Secretary KPSC (@secretarykpsc) September 17, 2024
ವಿಶೇಷ ಸೂಚನೆ:
- ಈ ಹಿಂದೆ ತಾಂತ್ರಿಕ ಕಾರಣದಿಂದ ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿ ಮಾಡಲು ಸಾಧ್ಯವಾಗದ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು.
- ವಯೋಮಿತಿಯನ್ನು ಹೊರತುಪಡಿಸಿ ಉಳಿದಂತೆ, ಆಯೋಗದ ಅಧಿಸೂಚನೆ (2)597/2023-24/2, 2:15.03.20240 3 ಮಾಹಿತಿ/ವಿವರಗಳನ್ನು ಯಥಾವತ್ತಾಗಿ ಅನ್ವಯಿಸಿಕೊಳ್ಳತಕ್ಕದ್ದು ಹಾಗೂ ಹೆಚ್ಚಿನ ವಿವರಗಳಿಗಾಗಿ ಸದರಿ ಅಧಿಸೂಚನೆಯನ್ನು ಓದಿಕೊಳ್ಳತಕ್ಕದ್ದು.
- ಈಗಾಗಲೇ ಆಯೋಗದ ಅಂತರ್ಜಾಲದಲ್ಲಿ ಪ್ರಕಟಿಸಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ಪರೀಕ್ಷಾ ದಿನಾಂಕಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.
ಪರೀಕ್ಷೆ ಯಾವಾಗ?
- 97 ಪಿಡಿಒ ಹುದ್ದೆಗಳು (ಹೈ.ಕ): ನ. 16– ಕನ್ನಡ ಭಾಷಾ ಪರೀಕ್ಷೆ, ನ. 17– ಸ್ಪರ್ಧಾತ್ಮಕ ಪರೀಕ್ಷೆ)
- 150 ಪಿಡಿಒ ಹುದ್ದೆಗಳು (ಉಳಿಕೆ ಮೂಲವೃಂದ): ಡಿ. 7-ಕನ್ನಡ ಭಾಷಾ ಪರೀಕ್ಷೆ, ಡಿ. 8– ಸ್ಪರ್ಧಾತ್ಮಕ ಪರೀಕ್ಷೆ
ಹುದ್ದೆಗಳ ವಿವರ, ವಿದ್ಯಾರ್ಹತೆ
ಉಳಿಕೆ ಮೂಲ ವೃಂದದಲ್ಲಿ 150 ಮತ್ತು ಹೈದರಾಬಾದ್ ಕರ್ನಾಟಕ ವೃಂದದಲ್ಲಿ 97 ಹುದ್ದೆಗಳಿದ್ದು, ಅಭ್ಯರ್ಥಿಗಳು ಭಾರತದ ಕಾನೂನಿನ್ವಯ ಸ್ಥಾಪಿತವಾದ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
ಅರ್ಜಿ ಶುಲ್ಕ
ಅರ್ಜಿ ಶುಲ್ಕವಾಗಿ ಸಾಮಾನ್ಯ ವರ್ಗದ ಅಭ್ಯರ್ಥಿಗಳು 600 ರೂ., ಇತರ ಹಿಂದುಳಿದ ಎಲ್ಲ ವರ್ಗದ ಅಭ್ಯರ್ಥಿಗಳು 300 ರೂ., ಮಾಜಿ ಸೈನಿಕ ಅಭ್ಯರ್ಥಿಗಳು 50 ರೂ. ಪಾವತಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ. ಇನ್ನು ಅರ್ಜಿ ಶುಲ್ಕ ಸಲ್ಲಿಸುವವರು ಆನ್‌ಲೈನ್ ಮೂಲಕ ಪಾವತಿಸಬೇಕಾಗುತ್ತದೆ.
ಆಯ್ಕೆ ವಿಧಾನ ಮತ್ತು ಮಾಸಿಕ ವೇತನ
ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 37,900 ರೂ. – 70,850 ರೂ. ಮಾಸಿಕ ವೇತನವಿದೆ.
ಸ್ಪರ್ಧಾತ್ಮಕ ಪರೀಕ್ಷೆಯ ವಿಧಾನ
ಎರಡು ಪತ್ರಿಕೆಗಳ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಪತ್ರಿಕೆ-1 ಸಾಮಾನ್ಯ ಜ್ಞಾನ ಪತ್ರಿಕೆಯಲ್ಲಿ ಪ್ರಚಲಿತ ವಿದ್ಯಮಾನ, ಸಾಮಾನ್ಯ ವಿಜ್ಞಾನ, ಭೂಗೋಳಶಾಸ್ತ್ರ, ಸಮಾಜ ವಿಜ್ಞಾನ, ಸಂವಿಧಾನ, ಇತಿಹಾಸ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಬೌದ್ಧಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ ವಸ್ತುನಿಷ್ಠ ಬಹು ಆಯ್ಕೆಯ 100 ಪ್ರಶ್ನೆಗಳು ಇರುತ್ತವೆ. ಪತ್ರಿಕೆ-2ರಲ್ಲಿ ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್, ಕಂಪ್ಯೂಟರ್ ಜ್ಞಾನ ಕುರಿತ ವಿಷಯಕ್ಕೆ ಸಂಬಂಧಿಸಿದ 100 ಪ್ರಶ್ನೆಗಳು ಇರುತ್ತವೆ. ಇದು ಕೂಡ ವಸ್ತುನಿಷ್ಠ ಬಹು ಆಯ್ಕೆ ಪ್ರಶ್ನೆಗಳಾಗಿರುತ್ತವೆ.