ಕೊಲ್ದಾರ: ಜೀವನ ಅತ್ಯಮೂಲ್ಯವಾದದ್ದು ಈ ಅಮೂಲ್ಯ ಜೀವನವನ್ನು ಸಂಜೀವಿನಿಯಾಗಿ ಸಲುಹುದೇ ಶಿಕ್ಷಣ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಕ್ಕಳ ಸಾಹಿತಿ ಪ.ಗು ಸಿದ್ದಾಪುರ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಕುಪಕಡ್ಡಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಪ್ರತಿಭಾ ಪುರಸ್ಕಾರ ಹಾಗೂ ೮ ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು ಮಕ್ಕಳನ್ನು ಸರ್ವ ರೀತಿಯಲ್ಲೂ ಸರಿಪಡಿಸುವುದೇ ಶಿಕ್ಷಣ ಎಂದರು. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಲ್ಲಿ ಆ ಮಗು ಸಮಾಜದಲ್ಲಿ ಬದುಕಲು ಕಲಿತಂತೆ, ಶಿಕ್ಷಣ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸಿ ಬದುಕುವ ಮಾರ್ಗ ತೋರುತ್ತದೆ ಎಂದು ಅವರು ಹೇಳಿದರು.
ರೋಣಿಹಾಳ ಗ್ರಾ ಪಂ ಉಪಾಧ್ಯಕ್ಷ ಗುರುನಗೌಡ ಬಿರಾದಾರ ಮಾತನಾಡುತ್ತಾ ಗುರುಭ್ರಹ್ಮ, ಗುರುವಿಷ್ಣು, ಗುರುದೇವೋ ಮಹೇಶ್ವರ ಎಂದು ಗುರುವಿಗೆ ಜಗತ್ತು ಸೃಷ್ಟಿಸಿದ ತ್ರಿಮೂರ್ತಿಗಳಿಗೆ ಹೋಲಿಸಲಾಗುತ್ತದೆ ಗುರುವಿನ ಗರಿಮೆ ವಿಶಿಷ್ಟವಾದದ್ದು, ಮಕ್ಕಳ ಸಂಪೂರ್ಣ ಬದುಕು ಸೃಜಿಸುವಲ್ಲಿ ಗುರುವಿನ ಪಾತ್ರ ಹಿರಿದಾಗಿರುತ್ತದೆ ಎಂದು ಅವರು ಹೇಳಿದರು. ಮುಂದಿನ ತಮ್ಮ ಭವ್ಯ ಭವಿಷ್ಯ ರೂಪಿಸಿಕೊಳ್ಳಲು ಶಾಲೆಯಿಂದ ತೆರಳುತ್ತಿರುವ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಕ್ಕಳ ಸಾಹಿತಿ ಪ.ಗು ಸಿದ್ದಾಪುರ ಹಾಗೂ ಪ್ರಗತಿಪರ ರೈತ ಹಾಗೂ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಸಿದ್ದಪ್ಪ ಬಾಲಗೊಂಡರವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವೇದಮೂರ್ತಿ ಮುಕ್ಕಣ್ಣ ಹಿರೇಮಠ ಹಾಗೂ ಅಡಿವಯ್ಯ ಹಿರೇಮಠ ವಹಿಸಿದ್ದರು, ಎಸ್ಡಿಎಂಸಿ ಅಧ್ಯಕ್ಷ ಮುರಗೇಶ ಹಳ್ಳಿ ಅಧ್ಯಕ್ಷತೆ ವಹಿಸಿದ್ದರು, ಅತಿಥಿಗಳಾಗಿ ಕುಮಾರಗೌಡ ಪಾಟೀಲ್, ಗುರುನಗೌಡ ಬಿರಾದಾರ, ಸಂಗನಗೌಡ ಬಿರಾದಾರ, ಶ್ರೀಮಂತ ಇಂಡಿ, ಉದಯಕುಮಾರ ಹಳ್ಳಿ, ಈಶ್ವರ ಕೊಲ್ಹಾರ, ದುಂಡಪ್ಪ ಕೊಣ್ಣುರ, ಸಂಗಪ್ಪ ಕೊರ್ತಿ, ಶಿವಾನಂದ ಬಿರಾದಾರ, ಜಿ.ಎಸ್ ಗಣಿಯವರ, ಜಿ.ಐ ಗೋಡಿಹಾಳ, ಶ್ರೀಕಾಂತ ಪಾರಗೊಂಡ, ಜಗದೀಶ್ ಸಾಲಳ್ಳಿ, ಶಿವು ಮಡಿಕೇಶ್ವರ, ಶಾಲೆಯ ಮುಖ್ಯ ಗುರುಗಳಾದ ಸಿದ್ದು ಕೊಟ್ಯಾಳ, ಶಿಕ್ಷಕರಾದ ಹಣಮಂತ ಬಿರಾದಾರ, ಶಾಂತಪ್ಪ ನಾಗರಹಳ್ಳಿ, ಬಾಬು ಪವಾರ, ಆನಂದ ಹೊಲ್ದೂರ, ಹೇಮಾವತಿ, ಕವಿತಾ ಹಿರೇಮಠ, ಲಕ್ಷ್ಮೀ ವನೇಶಿ ಹಾಗೂ ಇತರರು ಉಪಸ್ಥಿತರಿದ್ದರು.