Friday, 13th December 2024

ನಳ ಜೋಡಣೆ ಕಾಮಗಾರಿಯ ಭೂಮಿ ಪೂಜೆ

ಬಸವನಬಾಗೇವಾಡಿ: ಬಸವನಬಾಗೇವಾಡಿ ಮತಕ್ಷೇತ್ರದ ಡೋಣಿ ಸಾಲಿನ ಗ್ರಾಮಗಳ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಮಾಡುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡಲಾಗಿದೆ. ಮತಕ್ಷೇತ್ರದಲ್ಲಿ ಒಂದೆರಡು ರಸ್ತೆಗಳನ್ನು ಬಿಟ್ಟರೆ ಎಲ್ಲ ರಸ್ತೆಗಳನ್ನು ಸುಧಾರಣೆ ಮಾಡಲಾಗಿದೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.
ತಾಲೂಕಿನ ನಂದಿಹಾಳ ಪಿಯು ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ೨೦೨೧-೨೨ ನೇ ಸಾಲಿನ ಜಲ ಜೀವನ ಮಿಷನ್ ಯೋಜನೆಯಡಿ ಯಲ್ಲಿ ಕಾರ್ಯಾತ್ಮಕ ನಳ ಜೋಡಣೆ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿದ ನಂತರ ಮಾತನಾಡಿದ ಅವರು,  ನಾನು ಮತಕ್ಷೇತ್ರ ಶಾಸಕನಾದ ನಂತರ ಯಂಬತ್ನಾಳ-ಉಕ್ಕಲಿ, ಮಸಬಿನಾಳ-ಇಂಗಳೇಶ್ವರ ರಸ್ತೆಗಳನ್ನು ಮಾಡಲಾಗಿದೆ.
ಮುಂದಿನ ದಿನಗಳಲ್ಲಿ ಡೋಣೂರ-ದೇಗಿನಾಳ ಸಂಪರ್ಕ ಮಾಡುವ ರಸ್ತೆಯ ಅಂದಾಜು ರೂ. ೮ ಕೋಟಿ ನಾಳೆ ಟೆಂಡರ್ ಆಗಲಿದೆ. ಮುಂದಿನ ಎರಡು ವರ್ಷದಲ್ಲಿ ಮತಕ್ಷೇತ್ರದ ಪ್ರತಿ ಗ್ರಾಮಗಳಿಗೂ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಖಂಡಿತ ಮಾಡಲಾಗುವುದು. ಇದರಲ್ಲಿ ಎರಡು ಮಾತಿಲ್ಲ.
ಮನಗೂಳಿ-ಉಕ್ಕಲಿಯಲ್ಲಿ ಇಬ್ಬರು ಶಾಸಕರಿದ್ದರೂ ಮನಗೂಳಿ-ಉಕ್ಕಲಿಗೆ ರಸ್ತೆ ಇರಲಿಲ್ಲ. ನಾನು ಬಂದ ಮೇಲೆ ಈ ಎರಡು ಗ್ರಾಮಗಳಿಗೆ ಸಂಪರ್ಕ ಮಾಡುವ ರಸ್ತೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ನಂದಿಹಾಳ-ಹತ್ತರಕಿಹಾಳ ರಸ್ತೆಯನ್ನು ಖಂಡಿತ ಮಾಡಿಕೊಡತ್ತೇನೆ. ಖಂಡಿತ ರೂ.೫೦ ಲಕ್ಷ ಅನುದಾನದಲ್ಲಿ  ನಂದಿಹಾಳ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡವನ್ನು ಮುಂದಿನ ದಿನಗಳಲ್ಲಿ ನಿರ್ಮಿಸಿಕೊಡುವುದಾಗಿ ಹೇಳಿದರು.
ಕೇಂದ್ರ-ರಾಜ್ಯ ಸರ್ಕಾರದ ಸಹಯೋಗದಲ್ಲಿ ಪ್ರತಿಯೊಂದು ಮನೆಗೂ ನಳ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ. ಈ ಕಾಮಗಾರಿ ಅಂದಾಜು ಮೊತ್ತ ರೂ. ೧೦೫ ಲಕ್ಷ ವೆಚ್ಚದಲ್ಲಿ ನಡೆಯಲಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಬೇಕೆಂದರು.
ಈ ಸಂದರ್ಭದಲ್ಲಿ ಸಂಗಯ್ಯಮುತ್ಯಾ ಕೊಡೆಕಲ್ಲಮಠ, ಯರನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ಜಾಲಗೇರಿ, ಗ್ರಾಮ ಪಂಚಾಯಿತಿ ಸದಸ್ಯರಾದ ಅನಿಲ ಹಾರಿವಾಳ, ಪ್ರಕಾಶ ಕೋಲಕಾರ, ಮುಖಂಡರಾದ ಶಂಕರಗೌಡ ಪಾಟೀಲ, ಸಿದ್ರಾಮಪ್ಪ ಕಾಳಗಿ, ಶ್ರೀಶೈಲ ಯರನಾಳ,ಸಂಗೊಂಡ ಕಲ್ಮನಿ, ರಾವುತಪ್ಪ ಬೆಂಕಿ, ಬಸಣ್ಣ ಹಾದಿಮನಿ, ನಜೀರಸಾಬ ಜಾಗೀರದಾರ, ಪರಪ್ಪ ಕೋಲಕಾರ, ಅಲಗೊಂಡ ಹಾದಿಮನಿ, ಸುರೇಶ ಬೆಂಕಿ, ಕುಮಾರಗೌಡ ಪಾಟೀಲ ಇತರರು ಇದ್ದರು.