Saturday, 14th December 2024

Prahlad Joshi: ಲೋಕಸಭೆ, ವಿಧಾನಸಭೆ ನಮಾಜ್ ಮಾಡುವ ಸ್ಥಳವೇ? ಪ್ರಹ್ಲಾದ್‌ ಜೋಶಿ ಕಿಡಿ

Pralhad Joshi

ಹುಬ್ಬಳ್ಳಿ: ವಿಧಾನಸಭೆ, ಲೋಕಸಭೆ, ರಾಜ್ಯಸಭೆ ನಮಾಜ್ (Namaz) ಮಾಡಲು ಇವೆಯೇ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ (Prahlad Joshi) ಪ್ರಶ್ನಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಸಚಿವರು, ಶುಕ್ರವಾರ ನಮಾಜ್‌ಗಾಗಿ ವಿಧಾನಸಭೆ ಕಲಾಪಕ್ಕೆ ಬ್ರೇಕ್ ನೀಡದೆ ಮುಂದುವರಿಸುವ ಬಗ್ಗೆ ಅಸ್ಸಾಂ ವಿಧಾನಸಭೆ (Vidhana Sabha)  ನಿರ್ಣಯ ಕೈಗೊಂಡದ್ದರ ಬಗ್ಗೆ ಪ್ರತಿಕ್ರಿಯಿಸಿದರು.

ಅಸ್ಸಾಂ ವಿಧಾನಸಭೆಯಲ್ಲಿ ಶುಕ್ರವಾರ, ಮುಸ್ಲಿಂ ಶಾಸಕರಿಗೆ ನೀಡುತ್ತಿದ್ದ 2 ಗಂಟೆ ನಮಾಜ್ ಬ್ರೇಕ್ ರದ್ದುಗೊಳಿಸಲು ಕೈಗೊಂಡ ನಿರ್ಣಯ ಸರಿಯಾಗಿದೆ ಎಂದು ಸಮರ್ಥಿಸಿಕೊಂಡ ಸಚಿವ ಜೋಶಿ, ಸಂಸತ್ ಮತ್ತು ವಿಧಾನಸಭೆ ನಮಾಜ್ ಮಾಡುವ ಸ್ಥಳವೇ ಎಂದು ಪ್ರಶ್ನಿಸಿದರು.

ಇದು ತುಷ್ಟೀಕರಣದ ಪರಮಾವಧಿ. ನಾನು ರಾಯರ ಆರಾಧನೆಗೆ ಗುರುವಾರ ಬ್ರೇಕ್ ಕೊಡಿ ಎಂದರೆ ಹೇಗಿರುತ್ತದೆ? ನಾನು ಶ್ರೀ ರಾಘವೇಂದ್ರ ಸ್ವಾಮಿ ಆರಾಧಕ. ನಾನಂದು ಗುರುರಾಯರನ್ನು ಆರಾಧಿಸಬೇಕು. 2 ತಾಸು ಸದನ ಮುಂದೂಡಿ ಅಥವಾ ಅಂದು ರಜೆ ಘೋಷಿಸಿ ಎಂದರೆ ಆಗುತ್ತದೆಯೇ? ಎಂದು ಪ್ರಶ್ನಿಸಿದರು.

https://x.com/ANI/status/1830170635487580649

ನನ್ನಂತೆ ಎಲ್ಲಾ ಸದಸ್ಯರು ಅವರವರ ದೇವರ ಆರಾಧನೆಗೆ ಸದನಕ್ಕೆ 2 ಗಂಟೆ ವಿರಾಮ ನೀಡಿ, ಸೋಮವಾರ ರಜೆ ಕೊಡಿ, ಗುರುವಾರ ರಜೆ ಕೊಡಿ ಎನ್ನಬಹುದೇ? ಅದೆಲ್ಲ ನಡೆಯುವಂಥದ್ದೇ? ಭಾನುವಾರ ಸದನಕ್ಕೆ ಬ್ರೇಕ್ ಇದ್ದೇ ಇರುತ್ತದೆ. ನಮ್ಮ ನಮ್ಮ ವೈಯಕ್ತಿಕ ಅನುಕೂಲಕ್ಕೆ ಸೋಮವಾರ ಕೊಡಿ ಎಂದರೆ ಅದು ಎಷ್ಟರ ಮಟ್ಟಿಗೆ ಸಮಂಜಸವಾಗಿರುತ್ತದೆ ಎಂದು ಅವರು ಪ್ರಶ್ನಿಸಿದರು.

ಅಸ್ಸಾಂ ವಿಧಾನಸಭೆ ಮುಸ್ಲಿಂ ಶಾಸಕರಿಗೆ ಶುಕ್ರವಾರ 2 ಗಂಟೆ ಕಲಾಪಕ್ಕಿದ್ದ ವಿರಾಮವನ್ನು ರದ್ದುಪಡಿಸಲು ಕೈಗೊಂಡ ನಿರ್ಣಯ ಸ್ವಾಗತಾರ್ಹ. ಆದರೆ, ವಿಪಕ್ಷಗಳು ಇದನ್ನು ವಿರೋಧಿಸುವುದು ತುಷ್ಟೀಕರಣದ ಪರಮಾವಧಿ, ಇದು ಅವರ ಮೂರ್ಖತನದ ಪ್ರದರ್ಶನ ಎಂದು ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದರು.