Saturday, 14th December 2024

Pralhad Joshi: ರಾಜಭವನ ಚಲೋ ಅಲ್ಲ, ಮುಡಾ ಚಲೋ ನಡೆಸಲಿ: ಕೈ ನಾಯಕರ ವಿರುದ್ಧ ಜೋಶಿ ಕಿಡಿ

Pralhad joshi

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದವರು ರಾಜಭವನ ಚಲೋ ಅಲ್ಲ, ಮುಡಾ ಚಲೋ ನಡೆಸಲಿ. ಸಿಎಂ, ಡಿಸಿಎಂ ಸೇರಿದಂತೆ ಕಾಂಗ್ರೆಸ್‌ನವರು ರಾಜಭವನ ಚಲೋ ಏಕೆ ಮಾಡುತ್ತಾರೆ? ತಪ್ಪಿಗೆ ಕ್ಷಮೆ ಕೇಳಲು ಮುಡಾ ಚಲೋ ಮಾಡಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೇವಡಿ ಮಾಡಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್‌ ನಾಯಕರು ಮುಡಾಕ್ಕೆ ತೆರಳಿ ನಿವೇಶನ ತೆಗೆದುಕೊಂಡದ್ದು, ಆಪ್ತರಿಗೆ ಕೊಡಿಸಿದ್ದು ತಪ್ಪಾಯಿತು ಎಂದು ಮುಡಾಕ್ಕೆ ಕೈ ಮುಗಿದು ಕ್ಷಮೆ ಕೇಳಿ ಬರಲಿ. ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನಿಖೆಗೇಕೆ ಹೆದರುತ್ತಾರೆ? ಅರ್ಥವಾಗುತ್ತಿಲ್ಲ ಎಂದು ಕಿಡಿಕಾರಿದರು.

ಹಿಂದೆ ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ಮೇಲೂ ಖಾಸಗಿ ದೂರಿನ ಮೇರೆಗೆ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ್ದರು. ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಲಿಲ್ಲವೇ? ಬಿಎಸ್ ವೈ ಶುದ್ಧ ಹಸ್ತರಾಗಿ ಬಂದ ಮೇಲೆ ಸಿದ್ದರಾಮಯ್ಯ ಕ್ಷಮೆ ಕೇಳಿದ್ದರೇ ಎಂದು ಪ್ರಶ್ನಿಸಿದ ಅವರು, ಮುಡಾ ಹಗರಣದಲ್ಲಿ ಖಾಸಗಿಯವರು ದೂರು ನೀಡಿದ್ದರಿಂದ ಈಗ ರಾಜ್ಯಪಾಲರು ತನಿಖೆಗೆ ಅನುಮತಿ ಕೊಟ್ಟಿದ್ದಾರೆ. ಬಿಎಸ್ ವೈ ಪ್ರಕರಣಕ್ಕೂ, ಸಿದ್ದರಾಮಯ್ಯ ಪ್ರಕರಣಕ್ಕೂ ವ್ಯತ್ಯಾಸವೇನಿಲ್ಲ. ಸಿಎಂ ಮೊದಲು ತನಿಖೆ ಎದುರುಸಲಿ ಎಂದು ಪ್ರಲ್ಹಾದ್ ಜೋಶಿ ಆಗ್ರಹಿಸಿದರು.

ರಾಜ್ಯಪಾಲರನ್ನು ಏಕೆ ಬೆದರಿಸುತ್ತೀರಿ:?‌

ಮುಡಾ ಹಗರಣದಲ್ಲಿ ತನಿಖೆಗೆ ಅನುಮತಿ ನೀಡಿದ ಕಾರಣಕ್ಕೆ ರಾಜಭವನ ಚಲೋ ಮೂಲಕ ರಾಜ್ಯಪಾಲರನ್ನು ಬೆದರಿಸುವ, ಹೆದರಿಸುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಡೆಯನ್ನು ತೀವ್ರವಾಗಿ ಖಂಡಿಸಿದ ಜೋಶಿ ಅವರು, ಸಿಎಂ ಭ್ರಷ್ಟಾಚಾರದಲ್ಲಿ ತೊಡಗಿಲ್ಲ, ಮುಡಾ ಹಗರಣದಲ್ಲಿ ತಪ್ಪು ಮಾಡಿಲ್ಲ ಎಂದ ಮೇಲೆ ರಾಜ್ಯಪಾಲರನ್ನು ಬೆದರಿಸುವಂತಹ ರಾಜಭವನ ಚಲೋ ದಂತಹ ಡ್ರಾಮಾ ಏಕೆ? ಎಂದು ಪ್ರಶ್ನಿಸಿದರು.

ಮುಡಾ ಭ್ರಷ್ಟಾಚಾರದಲ್ಲಿ ಸಹಾಯ ಮಾಡಿದ ಅಧಿಕಾರಿಗೆ ರಿಜಿಸ್ಟ್ರಾರ್ ಆಗಿ ಪ್ರಮೋಶನ್ ಮಾಡಿದ್ದೀರಿ. ಅದೇ ತಪ್ಪು ನಡೆದಿದೆ ಎಂದು ಪತ್ರ ಬರೆದ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿದ್ದೀರಿ. ಈಗ ತನಿಖೆಗೆ ಅನುಮತಿ ನೀಡಿದರೆಂದು ರಾಜ್ಯಪಾಲರಿಗೆ ಬೆದರಿಕೆ ಹಾಕುತ್ತಿದ್ದೀರಿ ಎಂದು ಸಿಎಂ, ಡಿಸಿಎಂ ವಿರುದ್ಧ ಜೋಶಿ ಹರಿಹಾಯ್ದರು.

ರಾಜ್ಯಪಾಲರೂ ದಲಿತರೇ

ಸಿಎಂ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದವನು ಎರಡು ಬಾರಿ ಸಿಎಂ ಅದ ಕಾರಣಕ್ಕೆ ಷಡ್ಯಂತ್ರ ಮಾಡುತ್ತಿದ್ದಾರೆ ಎಂದಿದ್ದಾರೆ. ಆದರೆ, ಘನ ರಾಜ್ಯಪಾಲರು ದಲಿತರೇ, ಅತ್ಯಂತ ಹಿಂದುಳಿದ ವರ್ಗದಿಂದ ಬಂದವರೇ ಆಗಿದ್ದಾರೆ. ಆಗ ಅವರನ್ನು ಹೊಗಳುತ್ತಿದ್ದ ಸಿಎಂ, ಈಗ ತಮ್ಮ ವಿರುದ್ಧ ತನಿಖೆಗೆ ಅನುಮತಿ ನೀಡಿದಾಕ್ಷಣ ರಾಜ್ಯಪಾಲರನ್ನು ಬೆದರಿಸುವುದೇಕೆ? ಎಂದು ಪ್ರಶ್ನಿಸಿದ ಜೋಶಿ, ಇಂಥದ್ದಕ್ಕೆಲ್ಲ ಯಾರೂ ಬಗ್ಗಲ್ಲ ಎಂದು ಖಡಕ್ ಆಗಿ ಹೇಳಿದರು.

ಡ್ರಾಮಾ ಬಿಟ್ಟು ತನಿಖೆ ಎದುರಿಸಲಿ ಸಿಎಂ

ಸಿಎಂ ಸಿದ್ದರಾಮಯ್ಯ ಅವರು ಹೈ ಡ್ರಾಮಾ ಬಿಟ್ಟು ತನಿಖೆ ಎದುರಿಸಲಿ. ನ್ಯಾಯಾಂಗವಿದೆ. ತಾವು ಶುದ್ಧರು ಹೌದೋ..ಅಲ್ಲವೋ..ಎಂಬುದನ್ನು ನ್ಯಾಯಾಲಯ ತೀರ್ಮಾನಿಸುತ್ತದೆ. ಎಲ್ಲರೂ ಅದರ ತೀರ್ಮಾನಕ್ಕೆ ಬದ್ಧರಾಗಿರುತ್ತಾರೆ. ಹಾಗಾಗಿ ಸಿಎಂ ಮೊದಲು ತನಿಖೆ ಎದುರಿಸಲಿ ಎಂದು ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದರು.