Saturday, 14th December 2024

Pralhad Joshi: ರೈತರಿಗೆ ಕೇಂದ್ರದಿಂದ ಬೆಂಬಲ ಬೆಲೆ, ರಾಜ್ಯ ಸರ್ಕಾರದಿಂದ ಬೆಲೆ ಕಡಿತದ ಬರೆ: ಪ್ರಲ್ಹಾದ್‌ ಜೋಶಿ ಕಿಡಿ

Pralhad joshi

ಹುಬ್ಬಳ್ಳಿ: ಗಣೇಶ ಹಬ್ಬದ ವೇಳೆ ಕೇಂದ್ರ ಸರ್ಕಾರ ರಾಜ್ಯದ ರೈತರಿಗೆ ಬೆಂಬಲ ಬೆಲೆಯ ಗಿಫ್ಟ್ ಕೊಟ್ಟರೆ, ರಾಜ್ಯ ಸರ್ಕಾರ ಹಾಲಿನ ಬೆಲೆ ಕಡಿತದ ಕೊಡುಗೆ ಕೊಟ್ಟಿದೆ. ಬೆಲೆ ಕುಸಿತದ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಬೆಂಬಲ ಬೆಲೆಯಲ್ಲಿ ಆಹಾರ ಧಾನ್ಯ ಖರೀದಿಸುತ್ತಿದೆ. ಆದರೆ, ರಾಜ್ಯ ಸರ್ಕಾರ ಹಾಲು ಉತ್ಪಾದಕರಿಗೆ ಈಗಿರುವ ಬೆಲೆಯನ್ನೂ ಕಡಿತಗೊಳಿಸಿ ಹಾಲು ಖರೀದಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಕಿಡಿ ಕಾರಿದ್ದಾರೆ.

ಹಾಲು ಖರೀದಿ ದರದಲ್ಲಿ ಕಡಿತದ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ರಾಜ್ಯ ಸರ್ಕಾರ, ರಾಜ್ಯದ ಹಾಲು ಉತ್ಪಾದಕರಿಗೆ ಕೊಡುವ ಬೆಲೆಯಲ್ಲಿ 1.5 ರೂ., 2 ರೂ.ವರೆಗೂ ಕಡಿತಗೊಳಿಸುವ ಮೂಲಕ ಹೈನುಗಾರರ ಶ್ರಮಕ್ಕೆ ತಣ್ಣೀರೆರೆಚುವ ಕೆಲಸ ಮಾಡಿದೆ ಎಂದು ಜೋಶಿ ಖಂಡಿಸಿದ್ದಾರೆ.

ಹೈನುಗಾರರು ಹೈರಾಣ

ಅತಿವೃಷ್ಟಿಯಿಂದಾಗಿ ರಾಜ್ಯದ ರೈತರು ಬೆಳೆ ಹಾನಿಯಾಗಿ ತೀವ್ರ ಸಂಕಷ್ಟದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನೆರವಿಗೆ ಧಾವಿಸಿ ಹೆಸರು, ಉದ್ದು, ಸೂರ್ಯಕಾಂತಿ, ಸೋಯಾಬಿನ್ ಗೆ ಬೆಂಬಲ ಬೆಲೆ ಹೆಚ್ಚಿಸಿ ಖರೀದಿ ಕೇಂದ್ರ ತೆರೆಯಲು ಅನುಮತಿ ನೀಡಿದೆ. ಆದರೆ, ರಾಜ್ಯ ಸರ್ಕಾರದ ಹಾಲು ಒಕ್ಕೂಟಗಳು ರೈತರಿಗೆ ನೀಡುವ ಹಾಲಿನ ದರ ಕಡಿತಗೊಳಿಸಿ ಹೈನುಗಾರರನ್ನು ಹೈರಾಣಾಗಿಸಿದೆ ಎಂದು ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದೆಡೆ ಕೇಂದ್ರ ಸರ್ಕಾರ ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕೆಂದು ಶ್ರಮಿಸುತ್ತಿದ್ದರೆ, ಇತ್ತ ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರ ರೈತರಿಗೆ ನೀಡುವ ಹಾಲಿನ ದರದಲ್ಲಿ ಕಡಿತ ಮಾಡಿದೆ ಎಂದು ಹರಿ ಹಾಯ್ದಿದ್ದಾರೆ. ಒಕ್ಕೂಟಗಳು ಪ್ರತಿ ಲೀಟರ್ ಹಾಲಿಗೆ ಗರಿಷ್ಠ 30.50 ರೂ.ನೀಡಿ ಖರೀದಿ ಮಾಡುತ್ತಿದ್ದವು. ಆದರೀಗ 1.5 ರೂ. ಕಡಿತಗೊಳಿಸಿ ರೈತರಿಗೆ ಪ್ರತಿ ಲೀಟರ್ ಗೆ 28, 29 ರೂ. ನೀಡುತ್ತಿವೆ. ಕೆಲವೆಡೆ ಇದಕ್ಕೂ ಖೋತಾ ಆಗಿದೆ. ಇದು ಹೈನುಗಾರರ ದುರಂತ ಸ್ಥಿತಿ ಎಂದು ಸಚಿವ ಜೋಶಿ ಆತಂಕಿಸಿದ್ದಾರೆ.

ಒಕ್ಕೂಟಗಳಿಂದ ನಷ್ಟದ ಸಬೂಬು

ಹಾಲು ಉತ್ಪಾದಕರು ದರ ಕಡಿತದ ಬಗ್ಗೆ ಪ್ರಶ್ನಿಸಿದರೆ ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರ ಹಾಲು ಒಕ್ಕೂಟವು ನಷ್ಟದ ಸಬೂಬು ನೀಡಿದೆ. ನಷ್ಟದ ನೆಪದಲ್ಲಿ ಸರ್ಕಾರ ಹಾಲು ಉತ್ಪಾದಕರಿಗೆ ಬೆಲೆ ಕಡಿತದ ಬರೆ ಎಳೆದಿದೆ. ಹೈನುಗಾರಿಕೆಯಲ್ಲಿ ನಿಜವಾಗಿ ರೈತರು ನಷ್ಟದಲ್ಲಿ ಇದ್ದಾರೆ, ಹಾಲಿನ ಒಕ್ಕೂಟಗಳಲ್ಲ. ಕಾರಣ ಹಾಲು ಉತ್ಪಾದನೆ ವೆಚ್ಚ ದುಪ್ಪಟ್ಟಾಗಿದೆ. ಹಸು, ಎಮ್ಮೆಗಳ ಬೆಲೆ ಹೆಚ್ಚಿದೆ. ಪಶು ಆಹಾರ ಬೆಲೆಯೂ ದುಪ್ಪಟ್ಟಾಗಿ ಸಾಕಾಣಿಕೆ ದುಬಾರಿಯಾಗಿದೆ. ಇತ್ತ ನ್ಯಾಯಯುತ ದರವೂ ದಕ್ಕುತ್ತಿಲ್ಲ ಎಂದು ಸಚಿವ ಜೋಶಿ ಹೇಳಿದ್ದಾರೆ.

ಮಾರುವ ದರ ದುಪ್ಪಟ್ಟು, ಕೊಳ್ಳೋ ಬೆಲೆ ತೀರಾ ಕಡಿಮೆ

2013-14ರಲ್ಲಿ ನಂದಿನಿ ಹಾಲಿನ ಬೆಲೆ ಲೀಟರ್ ಗೆ 29 ರೂ. ಇತ್ತು, 2024ರಲ್ಲಿ ಅರ್ಧ ಲೀಟರ್ ಹಾಲಿಗೇ ಇಷ್ಟು ಬೆಲೆಯಿದೆ. ಅಂದರೆ ಹತ್ತು ವರ್ಷದಲ್ಲಿ ಗ್ರಾಹಕರಿಗೆ ಶೇ.100ರಷ್ಟು ಬೆಲೆಯ ಹೊರೆ ಹೇರಲಾಗಿದೆ. ಆದರೆ ರೈತರಿಗೆ ಶೇ.10 ರಷ್ಟೂ ಬೆಲೆ ಹೆಚ್ಚಿಲ್ಲ. ಈಗಲೂ 2014ರಲ್ಲಿ ಇದ್ದಷ್ಟೇ ಇದೆ. ಅತ್ಯಂತ ಕನಿಷ್ಠ ದರ 26 ರಿಂದ 29 ರೂ.ಲೀಟರ್ ಗೆ ದಕ್ಕುತ್ತಿದೆ. ಸರ್ಕಾರ 2 ತಿಂಗಳ ಹಿಂದೆ 2 ರೂಪಾಯಿ ಹಾಲಿನ ದರ ಹೆಚ್ಚಳ ಮಾಡಿ ಗ್ರಾಹಕರಿಗೆ ಬರೆ ಎಳೆದಿತ್ತು. ಈಗ ಖರೀದಿ ಬೆಲೆ ಕಡಿತಗೊಳಿಸಿ ಉತ್ಪಾದಕರಿಗೂ ಬರೆ ಎಳೆದಿದೆ ಎಂದಿದ್ದಾರೆ.

ಇನ್ನು ಹಾಲಿನ ಗುಣಮಟ್ಟದ ನೆಪದಲ್ಲಿ ಐದಾರು ರೂಪಾಯಿ ಪ್ರೋತ್ಸಾಹ ಧನಕ್ಕೂ ಕೊಕ್ ಹಾಕುತ್ತಿದೆ. ರಾಜ್ಯ ಸರ್ಕಾರ, ಈ ರೀತಿ ಪ್ರೋತ್ಸಾಹ ಧನ ಉಳಿಕೆ, ಖರೀದಿ ದರ ಕಡಿತ, ಮಾರಾಟ ದರ ಹೆಚ್ಚಳ ರೂಪದಲ್ಲಿ ಲೀಟರ್ ಹಾಲಿನ ಮೇಲೆ ಹತ್ತಾರು ರೂಪಾಯಿ ಹೆಚ್ಚುವರಿ ಆದಾಯದ ಮಾರ್ಗ ಕಂಡುಕೊಂಡಿದೆ. ಹೀಗಿರುವಾಗ ನಷ್ಟ ಹೇಗೆಂದು? ಸಚಿವ ಜೋಶಿ ಪ್ರಶ್ನಿಸಿದ್ದು, ಹಾಲು ಒಕ್ಕೂಟಗಳು ನಷ್ಟದಲ್ಲಿ ಇದ್ದರೆ ಮೊದಲು ಹಾಲು ಒಕ್ಕೂಟ, ಶೀತಲೀಕರಣ ಘಟಕ ಹಾಗೂ ಹಾಲು ಸಂಗ್ರಹ ಕೇಂದ್ರಗಳಲ್ಲಿ ಆಗುತ್ತಿರುವ ಸೋರಿಕೆಯನ್ನೇ ತಡೆ ಗಟ್ಟಿದರೆ ಸಾಕು ಎಂದು ಸರ್ಕಾರಕ್ಕೆ ಟಾಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ | CM Siddaramaiah: ಗುಣಮಟ್ಟ ನಿರ್ವಹಿಸದಿದ್ದರೆ ಕ್ರಮ: ಚಾಮುಂಡಿ ಬೆಟ್ಟ ಪ್ರಾಧಿಕಾರದ ಮೊದಲ ಸಭೆ ನಡೆಸಿ ಸಿಎಂ ಎಚ್ಚರಿಕೆ

ಹೈನುಗಾರಿಕೆಯಿಂದ ವಿಮುಖ

ಒಂದೆಡೆ ಮೇವು, ಪಶು ಆಹಾರ ಬೆಲೆ ಹೆಚ್ಚಳ, ಇನ್ನೊಂದೆಡೆ ಹಾಲು ಒಕ್ಕೂಟಗಳು ಮತ್ತು ಸರ್ಕಾರದಿಂದ ವಂಚನೆ. ಹೀಗಾಗಿ ರಾಜ್ಯದ ಅನೇಕ ಗ್ರಾಮಗಳಲ್ಲಿ ಇಂದು ಸಣ್ಣಪುಟ್ಟ ರೈತರು ಹೈನುಗಾರಿಕೆಯಿಂದಲೇ ವಿಮುಖರಾಗುವಂತಾಗಿ, ಹೈನುಗಾರಿಕೆ ಪ್ರಭಾವಿಗಳ ಸ್ವತ್ತಾಗಲಿದೆ ಎಂದು ಜೋಶಿ ಎಚ್ಚರಿಸಿದ್ದು, ನಮ್ಮದು ರೈತಪರ ಸರ್ಕಾರ, ಜನಪರ ಸರ್ಕಾರ ಎನ್ನುವ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನಿಲುವುಗಳನ್ನೇ ತೆಗೆದುಕೊಳ್ಳುತ್ತಿದ್ದು, ನಾಚಿಕೆಯಾಗಬೇಕು ಈ ಸರ್ಕಾರಕ್ಕೆ ಎಂದು ಕಿಡಿ ಕಾರಿದ್ದಾರೆ.

ಬೆಲೆ ಕಡಿತ ಕೈಬಿಟ್ಟು ನ್ಯಾಯಯುತ ದರ ನೀಡಲಿ

ರಾಜ್ಯ ಸರ್ಕಾರ ಕೂಡಲೇ ಬೆಲೆ ಕಡಿತದ ಆದೇಶ ಹಿಂಪಡೆಯಬೇಕು. ಹಾಲು ಉತ್ಪಾದಕರಿಗೆ ನ್ಯಾಯಯುತ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟ್ವೀಟ್ ಮಾಡಿದ್ದಾರೆ.