Saturday, 14th December 2024

Pro Ludo Star League: ಜನವರಿಯಲ್ಲಿ ಆರಂಭವಾಗಲಿದೆ ‘ಪ್ರೊ ಲುಡೋ ಸ್ಟಾರ್ ಲೀಗ್’; ಹಿರಿತೆರೆ, ಕಿರುತೆರೆ ಕಲಾವಿದರು ಭಾಗಿ

Pro Ludo Star League

ಬೆಂಗಳೂರು: ರಿಯಾಲಿಟಿ ಶೋಗಳು ಮತ್ತು ಕ್ರೀಡಾ ಲೀಗ್‌ಗಳ ಈ ಜಮಾನಾದಲ್ಲಿ ಇದೇ ಮೊದಲ ಬಾರಿಗೆ ‘ಪ್ರೊ ಲುಡೋ ಸ್ಟಾರ್ ಲೀಗ್’ (Pro Ludo Star League) ಒಂದು ವಿಶೇಷ ಮನರಂಜನಾ ಕ್ರೀಡೆಯಾಗಿ ಹೊರಹೊಮ್ಮುತ್ತಿದೆ. ಜನವರಿಯಲ್ಲಿ ಆರಂಭವಾಗಲಿದ್ದು, ಈ ಕ್ರೀಡೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಆಯೋಜಕರು, ನಿರೂಪಕರು ಹಾಗೂ ಆಟಗಾರರು ಮಾತನಾಡಿದರು. ಆಸ್ತ್ರ ಪ್ರೊಡಕ್ಷನ್ಸ್ ಲಂಚು ಲಾಲ್ ಈ ಲೀಗ್‌ನ ಆಯೋಜಕರಾಗಿದ್ದು, ಸುದೇಶ್ ಭಂಡಾರಿ ನಿರ್ದೇಶಕರು ಹಾಗೂ ಅಜ್ಫರ್ ರಜಾಕ್ ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದಾರೆ.

ಇದೇ ಮೊದಲ ಬಾರಿಗೆ 40×40 ಚದರ ಅಡಿಯ ವರ್ಣರಂಜಿತ ಒಳಾಂಗಣ ಅಖಾಡದಲ್ಲಿ ಲುಡೋ ಆಟ ಅಷ್ಟೇ ಆಕರ್ಷಕವಾಗಿರಲಿದೆ. ಈ ಲೀಗ್‌ನಲ್ಲಿ ಒಟ್ಟು ಎಂಟು ತಂಡಗಳಿದ್ದು, ಸಿನಿಮಾ ಮತ್ತು ಕಿರುತೆರೆಯಲ್ಲಿ ಮೋಡಿ ಮಾಡಿದ 16 ತಾರೆಯರು ಈ ಎಂಟು ತಂಡಗಳಲ್ಲಿ ಇಬ್ಬರಂತೆ ಇರುತ್ತಾರೆ. ಇವರಲ್ಲದೆ 16 ಜನ ಮಾಡಲ್ಸ್ ಕೂಡ ಇರಲಿದ್ದಾರೆ ಹಾಗೂ ಈ ಆಟದ ಭಾಗವಾಗಲಿದ್ದಾರೆ.

ಅರುಣ್ ಹರಿಹರನ್ ಮತ್ತು ಜಾಹ್ನವಿ ಈ ಲುಡೋ ಸ್ಟಾರ್‌ ಲೀಗ್‌ನ ಆಂಕರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಪ್ರತಿ ಪಂದ್ಯಕ್ಕೂ ಮೊದಲು ಮತ್ತು ನಂತರ ಆಟಗಾರರೊಂದಿಗೆ ಆಕರ್ಷಕವಾದ ಕಾಮೆಂಟರಿ, ಉತ್ಸಾಹಭರಿತ ಸಂವಾದಗಳೊಂದಿಗೆ ವೀಕ್ಷಕರನ್ನು ಈ ಜೋಡಿ ಆಕರ್ಷಿಸಲಿದೆ. ಡೈಸ್ ಹಾಕಿದಾಗ ಕಾಯಿನ್ ಬದಲು ಕಾಯಿನ್ ಗರ್ಲ್ಸ್ ಮೂವ್ ಆಗಲಿದ್ದಾರೆ. ಈ ಸ್ಪರ್ಧೆಯ ವಿಶೇಷ. ಮಾಮೂಲಿ ಲುಡೋ ಆಟದ ನಿಯಮಗಳಿಗಿಂತ ನಾವು ಸ್ವಲ್ಪ ಬೇರೆ ನಿಯಮಗಳನ್ನು ಅಳವಡಿಸಿಕೊಂಡಿದ್ದೇವೆ‌. ಹದಿನೈದು ದಿನಗಳ ಚಿತ್ರೀಕರಣ ನಡೆಯಲಿದೆ.

ಎಂಟು ತಂಡಗಳ ವಿವರ ಹಾಗೂ ಅದರಲ್ಲಿ ಆಡುವ ಸ್ಟಾರ್ ಆಟಗಾರರ ಹೆಸರು

1.ಪ್ರೌಡ್‌ ತುಳುವರು – ನವೀನ್ ಡಿ ಪಡೀಲ್ ಮತ್ತು ಸುಂದರ್ ರೈ ಮಂದಾರ, 2. ಮಿಮಿಕ್ರಿ ಮ್ಯಾಜಿಕ್ – ಮಿಮಿಕ್ರಿ ಗೋಪಿ ಮತ್ತು ವಿನುತ, 3. ಟ್ವಿನ್‌ ಸ್ಟಾರ್ಸ್‌- ಅದ್ವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿ, 4. ದಿ ಪವರ್ ಕಪಲ್ – ತುಕಾಲಿ ಸಂತೋಷ್ ಮತ್ತು ಮಾನಸ ಸಂತೋಷ್, 5. ಲಾಫ್ಟರ್ ಲೆಜೆಂಡ್ಸ್ – ಮಂಜು ಪಾವಗಡ ಮತ್ತು ಹುಲಿ ಕಾರ್ತಿಕ್, 6. ಮಲೆನಾಡು ಕ್ವೀನ್ಸ್ – ಚಂದನ ಗೌಡ ಮತ್ತು ಅಮೃತ, 7. ಗೌಡ ವಾರಿಯರ್ಸ್ – ಕೆಂಪೇಗೌಡ ಮತ್ತು ಮಾನ್ಯ ಗೌಡ, 8. ದಿ ಡ್ರೀಮರ್ಸ್ – ಸೀತಾರಾಮ್ ಮತ್ತು ಸಾಕ್ಷಿ ಮೇಘನ ಎಂದು ʼಪ್ರೋ ಲುಡೋ ಸ್ಟಾರ್ ಲೀಗ್ʼ ಬಗ್ಗೆ ನಿರ್ದೇಶಕ ಸುದೇಶ್ ಭಂಡಾರಿ ಮಾಹಿತಿ ನೀಡಿದರು.

ಈ ಸುದ್ದಿಯನ್ನೂ ಓದಿ | Reliance Retail: ಹೋಮ್ ಥಿಯೇಟರ್ ಎಲ್‌ಇಡಿ ಟಿವಿಗಳನ್ನು ಬಿಡುಗಡೆ ಮಾಡಿದ ರಿಲಯನ್ಸ್ ರಿಟೇಲ್!

ನಮ್ಮ ಮೊದಲ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ ಎಂದರು ಆಯೋಜಕರಾದ ಲಂಚುಲಾಲ್. ಲೀಗ್ ನಲ್ಲಿ ಪಾಲ್ಗೊಳ್ಳುತ್ತಿರುವ ಕಲಾವಿದರಾದ ಕೆಂಪೇಗೌಡ, ಅದ್ವಿತಿ ಶೆಟ್ಟಿ, ಅಶ್ವಿತಿ ಶೆಟ್ಟಿ, ಮಾನ್ಯ ಗೌಡ, ಸೀತರಾಮ, ಚಂದನ ಗೌಡ, ಸಾಕ್ಷಿ ಮೇಘನ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.