ಕೊಲ್ಹಾರ: ಪುನಿತ್ ರಾಜಕುಮಾರ ಕೇವಲ ನಟ ನಿರ್ಮಾಪಕರಲ್ಲದೆ ಸಾವಿರಾರು ಅನಾಥರು,ವೃದ್ಧರ ಸೇವೆಯ ಜೊತೆಗೆ ಬಡಮಕ್ಕಳಿಗೆ ಶಿಕ್ಷಣ ನೀಡಿ ಜನರ ಮನಸಲ್ಲಿ ಅಚ್ಚಳಿಯದಂತೆ ಉಳಿದಿದ್ದಾರೆ ಎಂದು ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಜಗದೀಶ ಸಾಲಳ್ಳಿ ಹೇಳಿದರು.
ಮಸೂತಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಪುನಿತ್ ರಾಜಕು ಮಾರ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಸೇರಿ ಹಮ್ಮಿಕೊಂಡ ಪುನಿತ್ ರಾಜಕುಮಾರ ಪುಣ್ಯ ಸ್ಮರಣೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದು ಮಾತನಾಡಿದರು.
ಕಡಿಮೆ ವಯಸ್ಸಿನಲ್ಲಿ ಅವರು ಗಳಿಸಿದ ಪ್ರೀತಿ ಹಾಗೂ ಜನಪ್ರೀಯತೆಯೇ ಅವರು ಮಾಡಿದ ಸಾಮಾಜಿಕ ಕಾರ್ಯಗಳನ್ನು ಎತ್ತಿ ತೋರಿಸುತ್ತದೆ,ಅವರ ಆದರ್ಶಗಳನ್ನು ಯುವಕರು ಅಳವಡಿಸಿಕೊಳ್ಳಬೇಕು ಎಂದರು.
ಎಬಿಆರ್ ಎಂಟರ್ಪ್ರೈಸಸ್ ನ ರವಿ ಕಾಗಲ್, ವಕೀಲರಾದ ಬಸವರಾಜ ಕಾಗಲ್, ಅಪ್ಪು ಕಾಗಲ್, ಪುನಿತ್ ರಾಜಕುಮಾರ ಪುಣ್ಯ ಸ್ಮರಣೆ ಆಯೋ ಜಿಸಿ ಅಭಿಮಾನಿ ಯುವಕರಿಗೆ ಪುನಿತ್ ರಾಜಕುಮಾರ ಭಾವಚಿತ್ರದ ಟೀ ಶರ್ಟಗಳ ಕೊಡುಗೆ ಜೊತೆಗೆ ಸ್ಮರಣಾರ್ಥ ನೆರೆದ ಸರ್ವರಿಗೂ ಅನ್ನ ಸಂತರ್ಪಣೆಗೈದು ಅಪ್ಪು ಅಭಿಮಾನ ಮೆರೆದರು.
ಗ್ರಾಮ ಪಂಚಾಯತಿ ಅಧ್ಯಕ್ಷ ಸಂತೋಷ ಗಣಾಚಾರಿ ಮಾತನಾಡಿ ಪುನಿತ್ ರಾಜಕುಮಾರ ಮಾಡಿದ ಸಾಮಾಜಿಕ ಕಾರ್ಯಗಳು ಇಂದಿನ ಪೀಳಿಗೆಗೆ ಸ್ಪೂರ್ತಿಯಾಗಿದ್ದು ನಾವು ದುಡಿದ ದುಡ್ಡಿನಲ್ಲಿ ಸ್ವಲ್ಪ ಹಣ ನಿರ್ಗತಿಕರು,ಅನಾಥರು, ಶಿಕ್ಷಣಕ್ಕೆ ನೀಡಬೇಕು ಆಗಮಾತ್ರ ಅವರ ಸ್ಮರಣೆಗೆ ಅರ್ಥಬರುತ್ತದೆ ಎಂದರು.
ಶಿಕ್ಷಕ ರುದ್ರಗೌಡ ಗಂಗಲ್ ನಿರೂಪಿಸಿದರು.ನೂರಾರು ಪುನಿತ್ ರಾಜಕುಮಾರ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿ ಪುನಿತ ರಾಜಕುಮಾರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆಗೈದರು ನೆರೆದ ಜನರು ಮೊಬೈಲ ಟಾರ್ಚ ಆನ್ ಮಾಡಿ ಎಲ್ಲರೂ ಮತ್ತೂಮ್ಮೆ ಹುಟ್ಟಿ ಬಾ ಅಪ್ಪು ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.