Wednesday, 11th December 2024

Road Accident: ಫ್ಲೈಓವರ್‌ನಿಂದ ಕೆಳಗೆ ಹಾರಿದ ಕಾರು; ವೀಸಾ ಪಡೆಯಲು ಬಂದ ವ್ಯಕ್ತಿ ಸಾವು

yeshwanthpur accident

ಬೆಂಗಳೂರು: ರಾಜಧಾನಿಯ ಯಶವಂತಪುರದಲ್ಲಿ ಭಾರಿ ಅಪಘಾತವೊಂದು (Road Accident) ಸಂಭವಿಸಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಪರದೇಶಕ್ಕೆ ತೆರಳಲು ವೀಸಾ ಪಡೆಯಲು ಬಂದಿದ್ದ ತಮಿಳುನಾಡಿನ ವ್ಯಕ್ತಿ, ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಮಂಗಳವಾರ ಬೆಳಗಿನ ಜಾವ ಈ ದುರಂತ ಸಂಭವಿಸಿದೆ. ಶಬರೀಶ್‌ (29) ಮೃತಪಟ್ಟ ಟೆಕ್ಕಿ. ಈತ ಯಶವಂತಪುರ ಫ್ಲೈ ಓವರ್ ಬಳಿ ನಾಲ್ಕು ಜನ ಗೆಳೆಯರ ಜೊತೆಗೆ ವೋಕ್ಸ್‌ವ್ಯಾಗನ್ ಕಾರಿನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಸ್ಯಾಂಕಿಟ್ಯಾಂಕ್ ರಸ್ತೆಯಿಂದ ಮೈಸೂರು ರಸ್ತೆ ಕಡೆ ಡ್ರೈವ್‌ ಮಾಡುತ್ತಿದ್ದಾಗ ಯಶವಂತಪುರ ಫ್ಲೈ ಓವರ್ ಬರುತ್ತಿದ್ದಂತೆ ಗೆಳೆಯ ಅತಿ ವೇಗವಾಗಿ ಚಲಾಯಿಸಿದ್ದಾನೆ. ಅಜಾಗರೂಕ ಚಾಲನೆ ಹಾಗೂ ಅತಿ ವೇಗದ ಪರಿಣಾಮ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಎದುರು ಬರುತ್ತಿದ್ದ ಬೈಕಿಗೆ ಗುದ್ದಿ ಫ್ಲೈ ಓವರ್‌ ಮೇಲಿನಿಂದ ಚಿಮ್ಮಿ ಕೆಳಗಡೆ ಬಿದ್ದಿದೆ.

ಈ ವೇಳೆ ಶಬರೀಶ್ ತೀವ್ರವಾಗಿ ಗಾಯಗೊಂಡಿದ್ದ. ಕಾರು ಫ್ಲೈ ಓವರ್ ಮೇಲಿನ ಬಲ ಭಾಗದಿಂದ ಕೆಳಗಡೆ ಬಿದ್ದಿದ್ದು ಕಾರಿನಲ್ಲಿದ್ದ ನಾಲ್ವರಿಗೂ ಗಂಭೀರ ಗಾಯಗಳಾಗಿದ್ದವು. ಬೈಕ್ ಸವಾರ ಮಂಜುನಾಥಗೂ ತೀವ್ರ ಗಾಯಗಳಾಗಿವೆ. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಶಬರೀಶ್ ಬೆಳಗ್ಗೆ ಎಂಟುಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಉಳಿದವರಿಗೆ ಚಿಕಿತ್ಸೆ ಮುಂದುವರೆದಿದ್ದು ಅದರಲ್ಲಿ ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ.

ಶಬರೀಶ್‌ ಮೃತನಾಗಿದ್ದರೆ, ಶಂಕರ್, ರಾಮ್, ಅನುಶ್ರೀ, ಮಿಥುನ್ ಗಾಯಗೊಂಡ ಗೆಳೆಯರು. ತಮಿಳುನಾಡಿನವನಾದ ಶಬರೀಶ್ ವೀಸಾ ಕಲೆಕ್ಟ್ ಮಾಡಿಕೊಂಡು ಗೆಳೆಯ ಮಿಥುನ್, ಸ್ನೇಹಿತ ಶಂಕರ್ ಮತ್ತು ಆತನ ಸಹೋದರಿ ಅನುಶ್ರೀ ಜೊತೆ ಮಾಡಿಕೊಂಡು ಬೆಂಗಳೂರು ರೌಂಡ್ಸ್ ಹಾಕಿದ್ದಾರೆ. ಜಾಲಿ ರೈಡ್ ಎಂದು ಸದಾಶಿವನಗರದಿಂದ ಯಶವಂತಪುರ ಫ್ಲೈ ಓವರ್ ಹತ್ತಿದ್ದರು. ಮಿಥುನ್ ಕಾರು ಓಡಿಸುತ್ತಿದ್ದ. ಪರಿಶೀಲನೆ ವೇಳೆ ಕಾರಿನಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಇದು ಕುಡಿದ ನಶಯೆಲ್ಲಿ ಆಗಿರುವ ಅಪಘಾತವೇ ಎಂದು ತನಿಖೆಯಿಂದ ತಿಳಿಯಬೇಕಿದೆ.

ಈ ಸುದ್ದಿಯನ್ನೂ ಓದಿ: Oman Accident: ಒಮನ್‌ನಲ್ಲಿ ಭೀಕರ ರಸ್ತೆ ಅಪಘಾತ; ಗೋಕಾಕ್‌ ಮೂಲದ ಕುಟುಂಬ ಸಜೀವ ದಹನ