Tuesday, 10th December 2024

Jog Falls: ಜೋಗ ಜಲಪಾತದ ಬಳಿ ರೋಪ್‌ವೇ, ಪಂಚತಾರಾ ಹೋಟೆಲ್: ಅರಣ್ಯ ಇಲಾಖೆ ಒಪ್ಪಿಗೆ

jog falls

ಶಿವಮೊಗ್ಗ: ಇನ್ನಷ್ಟು ಪ್ರವಾಸವನ್ನು ಆಕರ್ಷಿಸುವ ಉದ್ದೇಶದಿಂದ ಜೋಗ ಜಲಪಾತದ (Jog Falls) ಬಳಿ ರೋಪ್ ವೇ (Rope Way) ಹಾಗೂ ಪಂಚತಾರಾ ಹೋಟೆಲ್ (Five Star Hotel) ನಿರ್ಮಾಣ ಮಾಡಲು ಅರಣ್ಯ ಇಲಾಖೆ (Forest department) ಒಪ್ಪಿಗೆ ನೀಡಿದೆ.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನೋಡೆಲ್ ಅಧಿಕಾರಿ ಬ್ರಿಜೇಶ್ ಕುಮಾರ್ ಅವರು ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಈ ಬಗ್ಗೆ ಅನುಮತಿ ಕೋರಿದ್ದರು. ಅರಣ್ಯ ಇಲಾಖೆ ಪಂಚತಾರಾ ಹೋಟೆಲ್ ಹಾಗೂ ರೋಪ್ ವೇಗೆ ಅನುಮತಿ ನೀಡಿದೆ. ಐದು ಹೆಕ್ಟೇರ್ ಒಳಗಿನ ಅರಣ್ಯ ಭೂಮಿಯ ಪರಿವರ್ತನೆ ಯೋಜನೆಗಳಿಗೆ ಅರಣ್ಯ ಪಡೆ ಮುಖ್ಯಸ್ಥರ ಶಿಫಾರಸ್ಸು ಇಲ್ಲದೆಯೇ ರಾಜ್ಯ ಸರ್ಕಾರಕ್ಕೆ ನೇರವಾಗಿ ಶಿಫಾರಸು ಮಾಡುವ ಅಧಿಕಾರ ನೋಡಲ್‌ ಅಧಿಕಾರಿಗೆ ಇದೆ ಎಂದು ಅರಣ್ಯ ಕಾಯ್ದೆ ಹೊಸ ತಿದ್ದುಪಡಿಯಲ್ಲಿದೆ.

ಭಾರತದ ಅತಿ ಎತ್ತರದ ಜಲಪಾತಗಳಲ್ಲಿ ಒಂದಾದ ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿರುವ ಜೋಗ ಜಲಪಾತವನ್ನು ಕಣ್ತುಂಬಿಕೊಳ್ಳಲು ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ. ಈ ಸ್ಥಳವನ್ನು ಮತ್ತಷ್ಟು ಅಂದವಾಗಿಸಲು ಹಾಗೂ ಪ್ರವಾಸಿಗರಿಗೆ ಅನುಕೂಲವನ್ನು ಒದಗಿಸಿಕೊಡಲು ಪಂಚತಾರಾ ಹೋಟೆಲ್ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಅಲ್ಲದೆ ಪ್ರವಾಸಿಗರಿಗೆ ಜೋಗ ಜಲಪಾತವನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಲು ರೋಪ್‌ ವೇ ನಿರ್ಮಾಣಕ್ಕೂ ವ್ಯವಸ್ಥೆ ಮಾಡಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂಬರುವ ವರ್ಷ ನಿರ್ಮಾಣ ಕಾರ್ಯ ಆರಂಭವಾಗಬಹುದು ಎನ್ನಲಾಗುತ್ತಿದೆ.

ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶದಲ್ಲಿರುವ ಜೋಗ ಜಲಪಾತದ ಬಳಿ ಪರಿಸರ ಪ್ರವಾಸೋದ್ಯಮಕ್ಕಾಗಿ ಪಂಚತಾರಾ ಹೋಟೆಲ್ ನಿರ್ಮಾಣದ ಬಗ್ಗೆ ಪರಿಸರ ಸಂರಕ್ಷಣಾ ತಜ್ಞರು ಮತ್ತು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಜಲವಿದ್ಯುತ್ ಯೋಜನೆಗಳು, ಆಣೆಕಟ್ಟುಗಳು, ರಸ್ತೆಗಳು, ರೈಲುಮಾರ್ಗಗಳು ಸೇರಿದಂತೆ ವಿವಿಧ ಸೌಕರ್ಯ ಯೋಜನೆಗಳಿಂದ ಶರಾವತಿ ಕಣಿವೆ ಈಗಾಗಲೇ ಅಪಾಯದಲ್ಲಿದೆ. ಹೀಗಾಗಿ ಈ ಪ್ರದೇಶದಲ್ಲಿ ಹೋಟೆಲ್ ಹಾಗೂ ರೋಪ್‌ವೇಗೆ ಅವಕಾಶ ನೀಡಬಾರದು ಎಂದು ಪರಿಸರವಾದಿಗಳು ವಿರೋಧಿಸಿದ್ದರು.

ಆದರೆ ಜೋಗ ಜಲಪಾತದ ಬಳಿ ರೋಪ್ ವೇ ಹಾಗೂ ಪಂಚತಾರಾ ಹೋಟೆಲ್ ನಿರ್ಮಾಣದಿಂದ ಮರಗಳು, ವನ್ಯ ಜೀವಿಗಳಿಗೆ ತೊಂದರೆಯಾಗುವುದಿಲ್ಲ. ಫೈವ್‌ಸ್ಟಾರ್‌ ಹೋಟೆಲನ್ನು ನದಿಗೆ ಸಮೀಪದಲ್ಲಿ ಮಾಡಲಾಗುವುದಿಲ್ಲ ಹಾಗೂ ಇದರ ತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಜೋಗ ಜಲಪಾತ ನಿರ್ವಹಣಾ ಪ್ರಾಧಿಕಾರ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಜೋಗಕ್ಕೆ ಜೀವಕಳೆ