Wednesday, 11th December 2024

ಆರ್.ಎಸ್.ಎಸ್. ಕಾರ್ಯಕರ್ತರಿಗೆ ಐಎಎಸ್, ಐಪಿಎಸ್ ಆಗಲು ಟ್ರೇನಿಂಗ್: ಹೆಚ್‌ಡಿಕೆ ಆರೋಪ

ರಾಮನಗರ; ದೇಶದ ಆಡಳಿತ ವ್ಯವಸ್ಥೆಯಲ್ಲಿ ನಾಲ್ಕು ಸಾವಿರ ಸಿವಿಲ್ ಸರ್ವೆಂಟ್ ಗಳು ಆರ್.ಎಸ್.ಎಸ್. ಹಾಗೂ ಬಿಜೆಪಿ ಕಾರ್ಯಕರ್ತರಾಗಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ರಾಮನಗರದ ಕೇತಗಾನಹಳ್ಳಿಯಲ್ಲಿ ನಡೆಯುತ್ತಿರುವ ಜೆಡಿಎಸ್ ಕಾರ್ಯಾಗಾರದಲ್ಲಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಕಾರ್ಯಕರ್ತರು ಎಂದರೆ ಆರ್.ಎಸ್.ಎಸ್. ಕಾರ್ಯಕರ್ತರು ಎಂದರ್ಥ. ಆರ್.ಎಸ್.ಎಸ್. ಕಾರ್ಯಕರ್ತರಿಗೆ ಐಎಎಸ್, ಐಪಿಎಸ್ ಆಗಲು ಟ್ರೇನಿಂಗ್ ನೀಡ ಲಾಗುತ್ತಿದೆ ಎಂದು ಕಿಡಿಕಾರಿದರು.

2016ರಲ್ಲಿ ಒಂದೇ ವರ್ಷದಲ್ಲಿ 676 ಆರ್.ಎಸ್.ಎಸ್. ಕಾರ್ಯಕರ್ತರು ಪಾಸ್ ಆಗಿದ್ದಾರೆ. ಬೇರೆ ಬೇರೆ ಇನ್ ಸ್ಟಿ ಟ್ಯೂಟ್ ಗಳಲ್ಲಿ ಕಾರ್ಯಕರ್ತರಿಗೆ ಮಾತ್ರ ಟ್ರ‍ೇನಿಂಗ್ ನೀಡುವಂತೆ ಮಾಡುತ್ತಿದ್ದಾರೆ. ಈ ರೀತಿ ದೇಶದ ಆಡಳಿತ ವ್ಯವಸ್ಥೆಯನ್ನು ಬೇರೆ ದಿಕ್ಕಿನತ್ತ ಕೊಂಡೊ ಯ್ಯುವ ಹಿಡನ್ ಅಜೆಂಡಾ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಆರ್ಎಸ್ಎಸ್ ನ ಸಂಘಟನೆಗಳಿಂದಾಗಿ ಬಿಜೆಪಿ ಸರ್ಕಾರ ಎಂಬ ಹೆಸರಿನ ಸರ್ಕಾರ ರಚನೆ ಮಾಡಿಕೊಂಡಿದ್ದಾರೆ. ಇಲ್ಲಿರುವ  ಹಾಗೂ ಕೇಂದ್ರದಲ್ಲಿರುವ ಪ್ರಧಾನಿ ಮೋದಿ ಸರ್ಕಾರವಾಗಲಿ ಬಿಜೆಪಿ ಸರ್ಕಾರವಲ್ಲ, ಆರ್.ಎಸ್.ಎಸ್ ಸರ್ಕಾರ. ಸರ್ವಜನಾಂಗದ ಶಾಂತಿಯ ತೋಟದಂತಿರುವ ರಾಜ್ಯದಲ್ಲಿ ಅಶಾಂತಿ ಉಂಟಾಗಬಾರದು, ಬಡ ಜನರಿಗೆ, ದುಡಿಯುವ ಕೈಗಳಿಗೆ ಕೆಲಸ ಸಿಗಬೇಕು, ಸರ್ಕಾರದ ಯೋಜನೆಗಳು ತಲುಪಬೇಕು ಎಂಬುದು ನಮ್ಮ ಉದ್ದೇಶ ಎಂದು ಹೇಳಿದರು.