ಪರಿಣಾಮಕಾರಿ ಸಾಮೂಹಿಕ ಪ್ರಯತ್ನದ ಮೂಲಕ ತ್ಯಾಜ್ಯ ಸಂಗ್ರಹಗಾರರು ಸುರಕ್ಷಿತ ಹಾಗೂ ಗೌರವಯುತ ಬದುಕನ್ನು ನಡೆಸುವಂತಾಗಲು, ರೂಪಿಸಿ ರುವ ಈ ಯೋಜನೆಯು ಬಾರತದಲ್ಲಿಯೇ ಮೊದಲ ಪ್ರಯತ್ನವಾಗಿದೆ. ಮುಖ್ಯವಾಗಿ ಲಿಂಗಾಧಾರಿತ ಸಮಾನತೆಗೆ ಇದು ಒತ್ತು ನೀಡುತ್ತದೆ.
ವಿಶ್ವ ಬ್ಯಾಂಕ್ ನ ಮಾಹಿತಿಯ(2020) ಪ್ರಕಾರ ಭಾರತದಲ್ಲಿನ ನಗರ ಜನಸಂಖ್ಯೆಯ ಶೇಕಡಾ 49 ರಷ್ಟು ಜನರು ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ. ಶುದ್ಧ ಕುಡಿಯುವ ನೀರು ಮತ್ತು ಸಮರ್ಪಕ ಶೌಚಾಲಯಗಳಿಗೆ ಇವರ ಹೋರಾಟ ಮೊದಲಿನಿಂದಲೂ ನಡೆಯುತ್ತಲೇ ಇದೆ, ನಗರ ಕೊಳೆಗೇರಿಗಳಲ್ಲಿ ವೇಗವಾಗಿ ಹೆಚ್ಚುತ್ತಿರುವ ಜನಸಂಖ್ಯೆಯು ಅಸ್ತಿತ್ವದಲ್ಲಿರುವ ಸೌಲಭ್ಯಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡುತ್ತಿದೆ. ಉತ್ತಮ ಜೀವನವನ್ನು ಹೊಂದುವ ಸ್ಲಂ ನಿವಾಸಿಗಳ ಬಯಕೆ ಭಾಗಶಃ ಮಾತ್ರ ಈಡೇರಿದೆ.
ಸಾಮಾನ್ಯವಾಗಿ ಈ ಸಮುದಾಯಗಳ ಜನರು ಬಡವರು, ಕಡೆಗಣನೆಗೆ ಒಳಪಟ್ಟವರು, ಸ್ಥಳೀಯ ಸರ್ಕಾರಗಳ ಅಭಿವೃದ್ಧಿ ಯೋಜನೆಗಳಲ್ಲಿ ಆಗಾಗ್ಗೆ ನಿರ್ಲಕ್ಷಿಸಲ್ಪಟ್ಟವರೇ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ವಾಟರ್’ಏಡ್ ಇಂಡಿಯಾ ಸಂಸ್ಥೆಯು ಪರಿಣಾಮಕಾರಿ ಸಾಮೂಹಿಕ ಕಾರ್ಯಕ್ರಮ – ಸಾಮೂಹಿಕ ಶಕ್ತಿಯ ಭಾಗವಾಗಿ, ಕರ್ನಾಟಕ ರಾಜ್ಯದ ಬೆಂಗಳೂರು ನಗರದಲ್ಲಿ 2020 ರ ಜನವರಿಯಂದು ವಾಶ್ ಫಾರ್ ಹೆಲ್ತ್ ಅಂಡ್ ಡಿಗ್ನಿಟಿ ಆಫ್ ವೇಸ್ಟ್ ಪಿಕ್ಕರ್ಸ್ ಎಂಬ ಯೋಜನೆಯನ್ನು ಪ್ರಾರಂಭಿಸಿತು. ತ್ಯಾಜ್ಯ ಸಂಗ್ರಹಗಾರರಿಗೆ ಶುದ್ಧ ಕುಡಿಯುವ ನೀರು, ಸ್ವಚ್ಛ ಶೌಚಾಲಯಗಳು, ಸರಿಯಾದ ನೈರ್ಮಲ್ಯ ಅಭ್ಯಾಸ ಗಳನ್ನು ತಲುಪಿಸುವ ಗುರಿಯೊಂದಿಗೆ ಈ ಕಾರ್ಯಕ್ರಮವು ಆರಂಭವಾಯಿತು.
ವಾಟರ್ ಏಡ್ ಇಂಡಿಯಾ – ನೈರ್ಮಲ್ಯ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ, ಅನೌಪಚಾರಿಕ ತ್ಯಾಜ್ಯ ಸಂಗ್ರಹಗಾರ ಸಮುದಾಯಕ್ಕೆ ಸರಿಯಾದ ನೈರ್ಮಲ್ಯ ಅಭ್ಯಾಸಗಳ ಬಗ್ಗೆ ಶಿಕ್ಷಣವನ್ನು ನೀಡುವ ಮೂಲಕ, ಅವರ ಈ ಕುರಿತಾದ ನಡವಳಿಕೆಗಳಲ್ಲಿ ಧನಾತ್ಮಕ ಬದಲಾವಣೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ವಿಶೇಷವಾಗಿ ಹದಿಹರೆಯದ ಹುಡುಗಿಯರು ಮತ್ತು ಮಹಿಳೆಯರಲ್ಲಿ ಮುಟ್ಟಿನ ನೈರ್ಮಲ್ಯದ ನಿರ್ವಹಣೆಗೆ ಸಂಬಂಧ ಪಟ್ಟ ಶಿಕ್ಷಣ ನೀಡುವುದಕ್ಕೆ ಪ್ರಾಮುಖ್ಯತೆ ನೀಡುತ್ತಿದೆ.
ಈ ಕಾರ್ಯಕ್ರಮವು ಮಹತ್ವದ್ದಾಗಿದೆ, ಏಕೆಂದರೆ ನೀರಿನ ಪೂರೈಕೆ ಅಥವಾ ಶೌಚಾಲಯವನ್ನು ಖಾತ್ರಿಪಡಿಸುವಂತಹ ಮೂಲಭೂತ ಅಗತ್ಯವನ್ನು ಪೂರೈಸುವ ಮೂಲಕ, ಸಮುದಾಯದಲ್ಲಿ ಧನಾತ್ಮಕ ಬದಲಾವಣೆಯನ್ನು ಹೇಗೆ ಉಂಟುಮಾಡಬಹುದು ಎಂಬುದನ್ನು ಇದು ತೋರಿಸುತ್ತದೆ.
ಸಮಯೋಜಿತ ಯೋಜನೆಯ ಮುಖಾಂತರ, ಈಗಾಗಲೇ 3274 ತ್ಯಾಜ್ಯ ಸಂಗ್ರಹಗಾರರು ಹಾಗೂ ಅವರ ಕುಟುಂಬಗಳು ಕುಡಿಯುವ ನೀರಿನ ಸೌಲಭ್ಯ ಮತ್ತು 1335 ತ್ಯಾಜ್ಯ ಸಂಗ್ರಹಗಾರರು ಹಾಗೂ ಅವರ ಕುಟುಂಬಗಳು ಶೌಚಾಲಯದ ಸೌಲಭ್ಯಗಳನ್ನು ಪಡೆದಿದ್ದಾರೆ. ಜೊತೆಗೆ ನೈರ್ಮಲ್ಯ ಶಿಕ್ಷಣವನ್ನು ಸಮುದಾಯದಲ್ಲಿ ಮುಂದುವರಿಸುವ ಉದ್ದೇಶದಿಂದ 106 ವಾಶ್ ಚಾಂಪಿಯನ್ಸ್ ಗಳನ್ನು ರೂಪಿಸಲಾಗಿದೆ. ನೀರಿನ ಸರಬರಾಜು ವ್ಯವಸ್ಥೆ ಹಾಗೂ ಶೌಚಾಲಯಗಳ ನಿರ್ವಹಣೆಯ ಉದ್ದೇಶದಿಂದ 8 ಕಾರ್ಯಾಚರಣೆಗಳು ಮತ್ತು ನಿರ್ವಹಣಾ ಸಮಿತಿಗಳನ್ನು ಪ್ರಾರಂಭಿಸಲಾಗಿದೆ. ಈ ಸಮಿತಿಯಲ್ಲಿ 103 ಸದಸ್ಯರಿದ್ದು ಅವರಲ್ಲಿ 54 ಮಹಿಳೆಯರಿರುವುದು ವಿಶೇಷ.
ಈ ಯೋಜನೆಯಿಂದಾಗಿ ಕೊಳಗೇರಿಗಳಲ್ಲಿ ವಾಸಿಸುವ ಮಹಿಳೆಯರು ಸಮುದಾಯ ಶೌಚಾಲಯವನ್ನು ಬಳಸಲು ಸಾಧ್ಯವಾಯಿತು, ದೂರದ ನೀರಿನ ಮೂಲಗಳಿಂದ ನೀರು ತರುತ್ತಿದ್ದ ಅವರಿಗೆ ಮನೆ ಮನೆಗೆ ನೀರಿನ ಸರಬರಾಜು ದೊರೆತ ಕಾರಣ ಅವರ ಸಮಯ, ಶ್ರಮ, ಹಾಗೂ ಹಣದ ಉಳಿತಾಯ ವಾಯಿತು.
ಬೆಂಗಳೂರಿನ ಸಿಮೆಂಟ್ ಕಾಲೋನಿ ನಿವಾಸಿ ಲಕ್ಷ್ಮಿ, ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರದಲ್ಲಿ ಕೆಲಸ ಮಾಡುತ್ತಾರೆ. ಮಲ/ಮೂತ್ರ ವಿಸರ್ಜನೆಗೆ ಕೆಲಸದ ಸ್ಥಳದಿಂದ ಹೊರಗೆ ಹೋಗಬೇಕಾಗುತ್ತಿದ್ದ ಸಂದರ್ಭವನ್ನು ಅವರು ನೆನಪಿಸಿಕೊಳ್ಳೆತ್ತಾರೆ. ಲಕ್ಷ್ಮಿ ಹೇಳುವಂತೆ. “ಕೆಲಸದ ಸ್ಥಳದಲ್ಲಿ ಶೌಚಾಲಯ ಇಲ್ಲದ ಕಾರಣ ಸಮುದಾಯ ಶೌಚಾಲಯಗಳನ್ನು ಬಳಸಲು, ನಾವು (ಮಹಿಳೆಯರು) ಕಿಲೋ ಮೀಟರ್ ದೂರದವರೆಗೆ ಹೋಗಬೇಕಾಗುತ್ತಿತ್ತು”. ಅವರೇ ಹೇಳುವಂತೆ, ಅವರು ಕೆಲಸ ಮಾಡುವ ಸ್ಥಳದಲ್ಲಿ ಕೈ ತೊಳೆಯಲು ಸಹಾ ಯಾವುದೇ ಸೌಲಭ್ಯಗಳು ಇರಲಿಲ್ಲ. ಮೂತ್ರ ವಿಸರ್ಜನೆಗೆ ಶೌಚಾಲಯದ ವ್ಯವಸ್ಥೆ ಇಲ್ಲದ ಕಾರಣ ಮರೆಮಾಡಿದಂತಿದ್ದ ಸಾರ್ವಜನಿಕ ಸ್ಥಳಗಳನ್ನು ಹುಡುಕುವುದು ದುಃಖದ ಸಂಗತಿಯಾಗಿತ್ತು ಎಂದು ಲಕ್ಷ್ಮಿ ನೆನೆಯುತ್ತಾರೆ.
ಲಕ್ಷ್ಮಿ ಹೇಳುವಂತೆ, ಕೆಲಸದ ಸ್ಥಳದಲ್ಲಿ ಶೌಚಾಲಯದ ಸೌಲಭ್ಯವನ್ನು ಮೊದಲ ಬಾರಿಗೆ ಬಳಸಿದಾಗ ಮಹಿಳೆಯರು ಸಂತೋಷಪಟ್ಟರು, “ಈಗ ಮೂತ್ರ ವಿಸರ್ಜನೆಗೆ ದೂರದ ಸ್ಥಳಗಳನ್ನು ಹುಡುಕಿ ಹೋಗಬೇಕಾಗಿಲ್ಲ ಅಥವಾ ಸ್ಥಳದ ಲಭ್ಯತೆ ಇಲ್ಲದೆ ಮೂತ್ರ ವಿಸರ್ಜನೆಯನ್ನು ನಿಯಂತ್ರಿಸಬೇಕಾಗಿಲ್ಲ, ಅಲ್ಲದೆ ಋತುಚಕ್ರದ ಸಮಯದಲ್ಲಿ ಮಹಿಳೆಯರಿಗೆ ಇದು ತುಂಬಾ ಉಪಯುಕ್ತವಾಗಿದೆ. ಇದು ಸಮಾಧಾನಕರ ಸಂಗತಿ. ಈಗ ನಾವು ಶೌಚಾಲಯವನ್ನು ಬಳಸಿದ ನಂತರ ನಮ್ಮ ಕೈಗಳನ್ನು ಸ್ವಚ್ಛಗೊಳಿಸಬಹುದು. ಇದು ನಮ್ಮ ಜೀವನದಲ್ಲಿ ಬದಲಾವಣೆ ತಂದಿದೆ”.
ವಿಮಲಾ ಸಿಮೆಂಟ್ ಕಾಲೋನಿ ನಿವಾಸಿ, ಆಕೆ ಹೇಳುತ್ತಾರೆ ” ನೀರಿನ ಸರಬರಾಜು ಹೊಂದಿದ ಶೌಚಾಲಯಗಳನ್ನು ಬಳಸುತ್ತಿರುವುದು ನಮ್ಮ ಜೀವನ ವನ್ನೇ ಬದಲಾಯಿಸಿದೆ”. ಈಗ ಅವರು ಮೂತ್ರ ವಿಸರ್ಜನೆಗೆ ದೂರಕ್ಕೆ ಹೋಗಬೇಕಾಗಿಲ್ಲ. ಬಹಳಸ್ಟು ಮಹಿಳೆಯರು ಸರಿಯಾದ ಮುಟ್ಟಿನ ನೈರ್ಮಲ್ಯ ವನ್ನು ಹೊಂದಿರದ ಕಾರಣ ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ (PMS) & ಮೂತ್ರನಾಳದ ಸೋಂಕಿನಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಈಗ ಮುಟ್ಟಿನ ನೈರ್ಮಲ್ಯ ನಿರ್ವಹಣೆಯ ಬಗ್ಗೆ ಶಿಕ್ಷಣವನ್ನು ಪಡೆದ ಸಮುದಾಯದ ಯುವತಿಯರು ಮತ್ತು ಮಹಿಳೆಯರು ಮುಟ್ಟಿನ ಸಮಯದಲ್ಲಿ ಉಪಯೋಗಿಸುವ ಬಟ್ಟೆಗಳನ್ನು ಬಳಸುವ ಮೊದಲು & ನಂತರ ನೈರ್ಮಲ್ಯವಾಗಿ ಸ್ವಚ್ಛಗೊಳಿಸಲು ಮತ್ತು ಒಣಗಿಸಲು ಪ್ರಾರಂಭಿಸಿದ್ದಾರೆ.
ಮುಟ್ಟಿನ ಆರೋಗ್ಯ ಮತ್ತು ನಿರ್ವಹಣೆಗೆ ಸಂಬಂಧಪಟ್ಟ ನೀತಿ ಹಾಗೂ ಯೋಜನೆಗಳನ್ನು ರೂಪಿಸುವಾಗ ತ್ಯಾಜ್ಯ ಸಂಗ್ರಹಿಸುವ ಮಹಿಳಾ ಕಾರ್ಮಿಕರನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿಲ್ಲ. ಮುಟ್ಟಿನ ಸಮಯದಲ್ಲಿ, ಅನೇಕ ಮಹಿಳೆಯರು ಕಸ ತೆಗೆಯುವುದು ಅಥವಾ ಮನೆಕೆಲಸದಲ್ಲಿ ತೊಡಗುತ್ತಾರೆ, ಪ್ಯಾಡ್ ಗಳ ಹೊರತಾಗಿ ಬಟ್ಟೆಯನ್ನು ಬಳಸುತ್ತಾರೆ. ವಾಶ್ ಸೌಲಭ್ಯಗಳು ಇಲ್ಲದ ಸ್ಥಳಗಳಲ್ಲಿ ಅವರು ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಸಾಮೂಹಿಕ ಶಕ್ತಿ ಯೋಜನೆಯ ಮೂಲಕ ಮುಟ್ಟಿನ ನೈರ್ಮಲ್ಯದ ಮಹತ್ವದ ಬಗ್ಗೆ ಶಿಕ್ಷಣವನ್ನು ಪಡೆದ ಯುವತಿಯರು ಮತ್ತು ಮಹಿಳೆಯರು ಈಗ ಸುಧಾರಿತ ಮುಟ್ಟಿನ ನೈರ್ಮಲ್ಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿದ್ದಾರೆ.
ಈ ಕಾರ್ಯಕ್ರಮದ ಉದ್ದೇಶವು ವಾಶ್ ಗೆ ಸಂಬಂಧಿಸದ ಮೂಲ ಸೌಕರ್ಯಗಳ ನಿರ್ಮಾಣ ಮಾತ್ರವಲ್ಲದೆ, ಮುಖ್ಯವಾಗಿ ಸಮುದಾಯದ ಸಾಮರ್ತ್ಯಾ ಭಿವೃದ್ದಿಯಾಗಿದೆ. ಸಮುದಾಯಕ್ಕೆ, ವಿಶೇಷವಾಗಿ ಅದರ ಮಹಿಳೆಯರು ಮತ್ತು ಯುವತಿಯರಿಗೆ ನೀರು, ನೈರ್ಮಲ್ಯ ಮತ್ತು ಸ್ವಚ್ಛತೆಯ ಪ್ರಾಮುಖ್ಯತೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಅವರ ಹಕ್ಕುಗಳ ಬಗ್ಗೆ ಶಿಕ್ಷಣ ನೀಡುವುದು ಈ ಪ್ರಯತ್ನದ ಪ್ರಮುಖ ಅಂಶವಾಗಿದೆ. ಸ್ವಚ್ಛ ಪರಿಸರ, ಹಾಗೆಯೇ ನೀರು ಮತ್ತು ಶುದ್ಧ ಶೌಚಾಲಯಗಳ ಲಭ್ಯತೆಯು ಅವರ ಮೂಲಭೂತ ಅವಶ್ಯಕತೆಗಳನ್ನು ಪೂರೈಸುತ್ತದೆ ಮಾತ್ರವಲ್ಲದೆ ಜನರು ಹೆಚ್ಚು ಗೌರವಯುತ ಜೀವನ ನಡೆಸಲು ಭರವಸೆಯನ್ನು ನೀಡುತ್ತದೆ.