Friday, 13th December 2024

Satellite Ring Road: ಬೆಂಗಳೂರಿನ ಇನ್ನೊಂದು ಭಾರೀ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದ ಕೇಂದ್ರ ಸರ್ಕಾರ

Satellite Ring Road

ಬೆಂಗಳೂರು: ರಾಜಧಾನಿ, ಬೆಂಗಳೂರು ಗ್ರಾಮಾಂತರ (Bangalore Rural) ಹಾಗೂ ಸುತ್ತಮುತ್ತಲಿನ ತಾಲೂಕುಗಳನ್ನು ಸಂಪರ್ಕಿಸುವ ಭಾರೀ ಯೋಜನೆಯಾದ ಸ್ಯಾಟಲೈಟ್ ರಿಂಗ್ ರಸ್ತೆ ಯೋಜನೆಗೆ (Satellite Ring Road Project) ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಮಹತ್ವಾಕಾಂಕ್ಷೆಯ ಯೋಜನೆಯಾದ ಇದು ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಸಂಸತ್ ಅಧಿವೇಶನದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ (HD Devegowda) ಮತ್ತು ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್. ಮಂಜುನಾಥ್ (Dr. CN Manjunath) ಅವರ ಮನವಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ (Minister of Road Transport and Highways) ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಸ್ಪಂದಿಸಿದ್ದು, ಕಾಮಗಾರಿಗೆ ಅನುಮೋದನೆ ನೀಡಿದ್ದಾರೆ.

ಯಾವುದೀ ಯೋಜನೆ?

₹4,750 ಕೋಟಿ ಮೌಲ್ಯದ ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಯೋಜನೆಯಿಂದ ಬೆಂಗಳೂರು ನಗರ, ಗ್ರಾಮೀಣ ಮತ್ತು ಸುತ್ತಮುತ್ತಲಿನ ತಾಲ್ಲೂಕುಗಳಾದ ಕನಕಪುರ, ಮಾಗಡಿ, ರಾಮನಗರ, ದಾಬಸ್‌ಪೇಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಸೂಲಿಬೆಲೆ ಹಾಗೂ ಆನೇಕಲ್‌ ಪ್ರದೇಶಗಳಿಗೆ ಪ್ರಯೋಜನವಾಗಲಿದೆ. ಇದರಿಂದ ಬೆಂಗಳೂರು ಸುತ್ತಮುತ್ತಲಿನ ಸಂಚಾರ ದಟ್ಟಣೆಯನ್ನು ನಿವಾರಿಸುವುದರ ಜೊತೆಗೆ ಪ್ರಯಾಣದ ಸಮಯವೂ ಕಡಿತಗೊಳುತ್ತದೆ. ಈ ಯೋಜನೆಯನ್ನು ಅನುಮೋದಿಸಿರುವುದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್. ಮಂಜುನಾಥ್ ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ ಧನ್ಯವಾದ ಸಲ್ಲಿಸಿದ್ದಾರೆ.

4-5 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಕಾಮಗಾರಿಗೆ ಚಾಲನೆ ನೀಡಬೇಕೆಂದು ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಹಾಗೂ ಡಾ. ಸಿ.ಎನ್. ಮಂಜುನಾಥ್ ಅವರು ಸಂಸತ್ ಅಧಿವೇಶನದ ಸಂದರ್ಭದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, 45 ದಿನಗಳಲ್ಲಿ ಪ್ರಾರಂಭ ಮಾಡುವುದಾಗಿ ಭರವಸೆ ನೀಡಿದ್ದರು.

ಬೆಂಗಳೂರಿನೊಂದಿಗೆ ಗ್ರಾಮೀಣ ಸಂಪರ್ಕ

₹4,750 ಕೋಟಿಯ ಅಂದಾಜಿನ ಸ್ಯಾಟಲೈಟ್​ ಟೌನ್ ರಿಂಗ್ ರಸ್ತೆ ಯೋಜನೆಯ ಟೆಂಡರ್ ಪ್ರಕ್ರಿಯೆಗೆ ಅನುಮೋದನೆ ನೀಡಲಾಗಿದೆ. ಈ ಪ್ರಮುಖ ಮೂಲಸೌಕರ್ಯ ಯೋಜನೆಯು ಇಡೀ ಬೆಂಗಳೂರು ನಗರ, ಗ್ರಾಮೀಣ ಮತ್ತು ಸುತ್ತಮುತ್ತಲಿನ ತಾಲ್ಲೂಕುಗಳಾದ ಡಾಬಸ್ ಪೇಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ಸರ್ಜಾಪುರ ಹೊಸಕೋಟೆ, ಕನಕಪುರ, ಅತ್ತಿಬೆಲೆ, ಸೂಲಿಬೆಲೆ, ತಟ್ಟೆಕೆರೆ, ರಾಮನಗರ, ಮಾಗಡಿ ಮತ್ತು ಆನೇಕಲ್‌ಗೆ ಗಣನೀಯ ಪ್ರಯೋಜನವನ್ನು ನೀಡುತ್ತದೆ. ಇದು ವಾಹನ ಸಂಚಾರ ದಟ್ಟಣೆಯನ್ನು ನಿವಾರಿಸಲಿದ್ದು, ಪ್ರಯಾಣದ ದಕ್ಷತೆ, ಸುರಕ್ಷತೆಯನ್ನು ಹೆಚ್ಚಿಸುವುದರ ಜೊತೆಗೆ ಪ್ರಯಾಣದ ಸಮಯವನ್ನು ಉಳಿಸುತ್ತದೆ.

ಭಾರತ್​ಮಾಲಾ ಪರಿಯೋಜನಾ ಯೋಜನೆ

ಈ ಯೋಜನೆಯನ್ನು ಭಾರತ್​​ ಮಾಲಾ ಪರಿಯೋಜನಾ ಯೋಜನೆಯಡಿಯಲ್ಲಿ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ನಿರ್ಮಿಸಲಾಗುತ್ತಿದೆ. ಇದರಿಂದ ಬೆಂಗಳೂರಿನ ಸಂಚಾರ ಸಮಸ್ಯೆಗಳಿಗೆ ದೀರ್ಘಕಾಲಿಕ ಪರಿಹಾರ ಸಿಕ್ಕಿ ಲಕ್ಷಾಂತರ ದೈನಂದಿನ ಪ್ರಯಾಣಿಕರಿಗೆ ಪ್ರಯಾಣವನ್ನು ಸುಲಭಗೊಳಿಸಲಿದೆ.

ಈ ಸುದ್ದಿ ಓದಿ: Nitin Gadkari: ಶೀಘ್ರ ಭಾರತದಲ್ಲಿ ಡೀಸೆಲ್‌ ಕಾರುಗಳ ಯುಗಾಂತ್ಯ; ಸಚಿವ ನಿತಿನ್‌ ಗಡ್ಕರಿ ನೀಡಿದ ಸೂಚನೆ ಏನು?