Friday, 13th December 2024

ಶಾಲಾ ಶುಲ್ಕಕ್ಕೆ ಫೈಟ್ ಶುರು

ಲಾಕ್‌ಡೌನ್ ಸಂಕಷ್ಟದಲ್ಲಿ ಶುಲ್ಕ ಭರಿಸುವುದು ಹೇಗೆ?

ಶುಲ್ಕ ಪಡೆಯದಿದ್ದರೆ ಶಾಲೆ ನಡೆಸುವುದಾದರೂ ಹೇಗೆ?

ರಾಜ್ಯ ಸರಕಾರ ಶೈಕ್ಷಣಿಕ ವರ್ಷವನ್ನು ಘೋಷಿಸಿದ ಬೆನ್ನಲ್ಲೇ ಶುಲ್ಕ ಪಾವತಿಗೆ ಸಂಬಂಧಿಸಿದಂತೆ ಖಾಸಗಿ ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರ ನಡುವೆ ಪುನಃ ಗೊಂದಲ ಶುರುವಾಗಿದೆ.

ಜುಲೈ 1ರಿಂದ ಶೈಕ್ಷಣಿಕ ವರ್ಷ ಆರಂಭಿಸುವುದಾಗಿ ಸರಕಾರ ಘೋಷಣೆ ಮಾಡುತ್ತಿದ್ದಂತೆ, ಖಾಸಗಿ ಶಾಲೆಯ ಆಡಳಿತ ಮಂಡಳಿ ಗಳು ಶುಲ್ಕ ಪಾವತಿಗೆ ಪೋಷಕರಿಗೆ ಸೂಚನೆ ನೀಡಿದೆ. ಶುಲ್ಕ ಕಡಿತಕ್ಕೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟ ಆದೇಶ ಹೊರಡಿಸದೇ ಇರುವುದರಿಂದ ಪೂರ್ಣ ಶುಲ್ಕ ಪಾವತಿಸುವಂತೆ ಸೂಚನೆ ನೀಡಿದ್ದಾರೆ.

ಕೆಲವು ಖಾಸಗಿ ಶಾಲೆಗಳು ಶುಲ್ಕ ಪಾವತಿಸದಿದ್ದರೆ ಆನ್‌ಲೈನ್ ತರಗತಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿವೆ ಎನ್ನಲಾ ಗಿದೆ. ಲಾಕ್‌ಡೌನ್‌ನಿಂದ ಈಗಾಗಲೇ ಕಷ್ಟದಲ್ಲಿರುವ ಪೋಷಕರಿಗೆ ಶುಲ್ಕ ನೀಡುವಂತೆ ಒತ್ತಡ ಹೇರಿದರೆ ಕಷ್ಟವಾಗುತ್ತದೆ ಎನ್ನುವ ವಾದವನ್ನು ಪೋಷಕರು ಹಾಕಿದ್ದಾರೆ. ಆದರೆ ಈಗಾಗಲೇ ಎರಡು ವರ್ಷದಿಂದ ನಷ್ಟದಲ್ಲಿರುವ ಖಾಸಗಿ ಶಾಲೆಗಳಿಗೆ ಈಗಲೂ ಶುಲ್ಕ ಪಡೆಯಬೇಡಿ ಎಂದರೆ ಶಾಲೆ ನಡೆಸುವುದು ಹೇಗೆ ಎನ್ನುವ ಪ್ರಶ್ನೆಗಳು ಶುರುವಾಗಿದೆ.

ಆನ್‌ಲೈನ್ ಕ್ಲಾಸ್ ಬಂದ್ ಮಾಡಿದರೆ ಕ್ರಮ: ಖಾಸಗಿ ಶಾಲೆಯ ವಿದ್ಯಾರ್ಥಿಗಳು ಶುಲ್ಕ ಪಾವತಿಸಿಲ್ಲ ಎಂದು ಆನ್‌ಲೈನ್ ಕ್ಲಾಸ್‌ಗಳನ್ನು ಬಂದ್ ಮಾಡಿದರೆ ಅಂತಹ ಶಾಲೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಶಿಕ್ಷಣ ಸಚಿವ ಸುರೇಶ್
ಕುಮಾರ್ ಎಚ್ಚರಿಕೆ ನೀಡಿದ್ದಾರೆ. ರಾಜ್ಯದ ಯಾವುದೇ ಶಾಲೆಗಳು, ವಿದ್ಯಾರ್ಥಿಗಳು ಶುಲ್ಕ ಪಾವತಿ ಮಾಡಿಲ್ಲ ಎಂದು ಆನ್‌ಲೈನ್ ಕ್ಲಾಸ್‌ಗಳನ್ನು ಬಂದ್ ಮಾಡುವಂತಿಲ್ಲ.

ಒಂದು ವೇಳೆ ವಿದ್ಯಾರ್ಥಿಗಳ ಶುಲ್ಕ ಬಾಕಿಯನ್ನೇ ನೆಪವಾಗಿಟ್ಟುಕೊಂಡು ಆನ್‌ಲೈನ್ ಕ್ಲಾಸ್ ಬಂದ್ ಮಾಡಿದರೆ ಕಾನೂನು ಕ್ರಮ ನಿಶ್ಚಿತ ಎಂದು ಅವರು ತಿಳಿಸಿದ್ದಾರೆ. ಶುಲ್ಕ ಪಾವತಿಸಿಲ್ಲ ಎಂದು ಆನ್‌ಲೈನ್ ಕ್ಲಾಸ್ ಬಂದ್ ಮಾಡುವ ಶಾಲೆಗಳ ವಿರುದ್ಧ ಕ್ರಮ
ಕೈಗೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಸಹ ಸೂಚನೆ ನೀಡಿದ್ದಾರೆ. ಅಲ್ಲದೆ ಈ ಬಗ್ಗೆ ನ್ಯಾಯಾಲಯದ ಸೂಚನೆಯೂ ಇದೆ ಎಂದು ಅವರು ಹೇಳಿದರು.

ಶಾಲಾ ಶುಲ್ಕ ಕಟ್ಟಿಲ್ಲವೆಂದು ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್ ಬಂದ್ ಮಾಡುವ ಶಾಲೆಗಳ ವಿರುದ್ಧ ಪೋಷಕರು ದೂರು ನೀಡುವಂತೆಯೂ ಅವರು ಮನವಿ ಮಾಡಿದ್ದಾರೆ. ಪೋಷಕರುಗಳು ಖುದ್ದಾಗಿ ತಮಗೆ ಇಲ್ಲವೇ ಆಯಾ ಶಾಲಾ ವ್ಯಾಪ್ತಿಯ ಬಿಇಓಗಳಿಗೆ ದೂರು ನೀಡಿದರೆ ಅಂತಹ ಶಾಲೆಗಳ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಹೇಳಿದರು.

ಮಾರ್ಗಸೂಚಿಯಲ್ಲಿ ಏನಿದೆ?
*ದೀಕ್ಷಾ ಆಪ್‌ನಲ್ಲಿ 1 ರಿಂದ 10ನೇ ತರಗತಿ ಮಕ್ಕಳಿಗೆ ಇರುವ ವಿಷಯ ಗಳನ್ನು ಡೌನ್‌ಲೋಡ್ ಮಾಡಿಕೊಂಡು ಅಭ್ಯಾಸ
ಮಾಡಬಹುದು.

*ಶಿಕ್ಷಕರು ಪಠ್ಯ ಬೋಧನೆಯ ಪುಟ್ಟ ವಿಡಿಯೊ ಮಾಡಿ ಮಕ್ಕಳ ಪೋಷಕರಿಗೆ ಹಂಚಿಕೊಳ್ಳಬಹುದು.

*ತರಗತಿವಾರು ಮಕ್ಕಳ ಪೋಷಕರ ವಾಟ್ಸ್ ಆಪ್ ಗ್ರೂಪ್ ಮಾಡಿ ಸಂಪರ್ಕಿಸಿ, ಮಕ್ಕಳ ಕಲಿಕೆಗೆ ಅಗತ್ಯ ಮಾರ್ಗದರ್ಶನ
ನೀಡಬೇಕು.

*ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ 30ನ ಸೇತುಬಂಧ ಕಾರ್ಯಕ್ರಮ ನಡೆಸಲಾಗುತ್ತದೆ.

*ಶಾಲೆಯ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ವೇಳಾಪಟ್ಟಿಯನ್ನು ಸಿದ್ಧಪಡಿಸಿ ವಾರಕ್ಕೊಮ್ಮೆ ವಿದ್ಯಾರ್ಥಿಗಳ ಪೋಷಕರು ಶಾಲೆಗೆ
ಭೇಟಿ ನೀಡುವಂತೆ ಮಾಡಿ, ವಿದ್ಯಾರ್ಥಿಯ ಕಾರ್ಯಕ್ಷಮತೆ ಕುರಿತು ಮಾತುಕತೆ ನಡೆಸಬೇಕು.

ಶೈಕ್ಷಣಿಕ ವರ್ಷಕ್ಕೆ ಮಾರ್ಗಸೂಚಿ ಪ್ರಕಟ

2021-22 ಶೈಕ್ಷಣಿಕ ವರ್ಷ ಜುಲೈ1 ರಿಂದ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಮಾರ್ಗಸೂಚಿಗಳನ್ನು ಪ್ರಕಟಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, 5ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಕೋವಿಡ್ ಹಿನ್ನೆಲೆಯಲ್ಲಿ ಭೌತಿಕ ತರಗತಿ ಬದಲು ಆನ್‌ಲೈನ್ ಮತ್ತು ಆಫ್ಲೈನ್ ನಲ್ಲಿ ಪಠ್ಯ ಬೋಧನೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಕಳೆದ ವರ್ಷದಂತೆ ಈ ವರ್ಷವೂ ದೂರದರ್ಶನ ಚಂದನ ವಾಹಿನಿಯಲ್ಲಿ ಸಂವೇದನಾ ಕಾರ್ಯಕ್ರಮದ ಮೂಲಕ 1662
ವಿಡಿಯೊ ಪಾಠ ಬೋಧನಾ ನಡೆಯಲಿದೆ. ಎಫ್ ಎಂ ರೇಡಿಯೋದಲ್ಲಿ ಆಡಿಯೊ ಪಾಠಗಳ ಪ್ರಸಾರ ನಡೆಯಲಿದೆ. ವಿದ್ಯಾರ್ಥಿ ಗಳಿಗೆ ವಾರಕ್ಕೆ ಎರಡು ಬಾರಿ ಶಾಲೆಗೆ ಭೇಟಿ ನೀಡಲು ಅವಕಾಶ  ನೀಡಲಾಗಿದ್ದು, ಈ ವೇಳೆ ಪ್ರಾಕ್ಟೀಸ್ ಶೀಟ್ ಗಳನ್ನು ನೀಡುವ ಶಿಕ್ಷಕರು, ಅವುಗಳನ್ನು ಯಾವ ರೀತಿ ಬರೆಯಬೇಕೆಂಬುದನ್ನು ಮಕ್ಕಳಿಗೆ ವಿವರಿಸಬೇಕು. ಮಕ್ಕಳು ಅಭ್ಯಾಸ ಮಾಡಿದ ಈ
ಹಾಳೆಗಳು ಮುಂದಿನ ದಿನಗಳಲ್ಲಿ ಮೌಲ್ಯಮಾಪನಕ್ಕೆ ಬಳಕೆಯಾಗಲಿದೆ.

ಪ್ರತಿ ಶಿಕ್ಷಕರು 10-15 ಮಕ್ಕಳಿಗೆ ಬೋಧನೆ ಮಾಡುವ ಜವಾಬ್ದಾರಿ ತೆರೆದುಕೊಳ್ಳಬೇಕು. ಮನೆಗಳಲ್ಲಿ ಟಿವಿ ಸೌಲಭ್ಯ ಇರುವ ಮಕ್ಕಳೂ ಕೂಡ ಈ ಅಭ್ಯಾಸವನ್ನು ಮಾಡಬೇಕು ಎಂದು ಸೂಚಿಸಿದೆ.