ಬೆಂಗಳೂರು: 2024-25ನೇ ಸಾಲಿನ ಶೈಕ್ಷಣಿಕ ಪ್ರವಾಸಗಳನ್ನು (school trips) ರದ್ದು ಮಾಡಿಲ್ಲ. ಈಗಾಗಲೇ ತೆರಳಿರುವ ವಿದ್ಯಾರ್ಥಿಗಳನ್ನು ವಾಪಸು ಬರುವಂತೆ ಸೂಚಿಸಿಲ್ಲ ಎಂದು ಶಾಲಾ ಶಿಕ್ಷಣ ಇಲಾಖೆ (Education department) ಸ್ಪಷ್ಟಪಡಿಸಿದೆ. ಈ ಕುರಿತು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಮುರ್ಡೇಶ್ವರದಲ್ಲಿ ನಡೆದ ಶಾಲಾ ಮಕ್ಕಳ ದುರಂತಕ್ಕೆ (Students death) ಸಂಬಂಧಿಸಿ ಈ ಸುದ್ದಿ ಹಬ್ಬಿತ್ತು.
ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ ರದ್ದು ಕುರಿತಂತೆ ಹರಿದಾಡುತ್ತಿರುವ ಸುದ್ದಿ ಸುಳ್ಳು. ಈ ರೀತಿಯ ಯಾವುದೇ ಆದೇಶ ಇಲಾಖೆ ಹೊರಡಿಸಿಲ್ಲ. ಶಾಲಾ ಶಿಕ್ಷಣ ಇಲಾಖೆಯ ಶಾಲೆಗಳ ವತಿಯಿಂದ 2024-25ನೇ ಸಾಲಿನ ಪ್ರಸ್ತುತದ ಶೈಕ್ಷಣಿಕ ಪ್ರವಾಸ ಮಾಡದಂತೆ, ಹಮ್ಮಿಕೊಂಡಿದ್ದಲ್ಲಿ ಕೂಡಲೇ ಹಿಂತಿರುಗಿ ಬರುವಂತೆ ಯಾವುದೇ ಸೂಚನೆ, ನಿರ್ದೇಶನ ನೀಡಿರುವುದಿಲ್ಲ ಎಂದಿದ್ದಾರೆ.
2024-25ನೇ ಸಾಲಿನಲ್ಲಿ ಪ್ರಸ್ತುತ ಹಮ್ಮಿಕೊಳ್ಳಲಾಗುತ್ತಿರುವ ಶೈಕ್ಷಣಿಕ ಪ್ರವಾಸಗಳನ್ನು ಇಲಾಖೆಯ ಸೂಚನೆ, ನಿರ್ದೇಶನ ಅನುಸರಿಸಿ, ಡಿಸೆಂಬರ್ ಒಳಗೆ ಪೂರ್ಣಗೊಳಿಸುವುದು ಅಂತ ಹೇಳಿದ್ದಾರೆ.
ಶೈಕ್ಷಣಿಕ ಪ್ರವಾಸವನ್ನು ವ್ಯವಸ್ಥಿತವಾಗಿ ಕೈಗೊಳ್ಳುವುದು. ಪ್ರವಾಸದ ಸಂದರ್ಭದಲ್ಲಿ ಮಕ್ಕಳನ್ನು ಅಪಾಯಕಾರಿ ಸ್ಥಳಗಳಿಗೆ ಕರೆದುಕೊಂಡು ಹೋಗಬಾರದು. ಪ್ರವಾಸದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಉಂಟಾಗುವ ಯಾವುದೇ ಅವಘಢ, ಹಾನಿಗೆ ಸಂಬಂಧಿಸಿದ ಶಾಲಾ ಮುಖ್ಯಸ್ಥರು ಮತ್ತು ಪ್ರವಾಸದ ಉಸ್ತುವಾರಿ ವಹಿಸಿದ ಸಿಬ್ಬಂದಿಯವರೇ ಜವಾಬ್ದಾರಿ ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರೌಢಶಾಲಾ ಸಹ ಶಿಕ್ಷಕರಿಗೆ ಸಿಹಿ ಸುದ್ದಿ, ಫೆ.15ರೊಳಗೆ ಬಡ್ತಿ ಪ್ರಕ್ರಿಯೆ: ಮಧು ಬಂಗಾರಪ್ಪ
ಬೆಳಗಾವಿ: ಪ್ರೌಢಶಾಲಾ ಸಹ ಶಿಕ್ಷಕರಿಗೆ ಬಡ್ತಿ ನೀಡುವ ಪ್ರಕ್ರಿಯೆಯನ್ನು ಬರುವ 2025ರ ಫೆಬ್ರವರಿಯೊಳಗೆ ಪೂರ್ಣಗೊಳಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್ ಮಧು ಬಂಗಾರಪ್ಪ ಅವರು ಹೇಳಿದ್ದಾರೆ.
ಶಾಲಾ ಶಿಕ್ಷಣ ಇಲಾಖೆಯಿಂದ ರಾಜ್ಯಮಟ್ಟದ ಪ್ರೌಢಶಾಲಾ ಸಹ ಶಿಕ್ಷಕರ ಒಂದೇ ಜ್ಯೇಷ್ಠತಾ ಪಟ್ಟಿ ಪಡೆದು, ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ ಪ್ರಕಟಿಸಿ, ಸ್ವೀಕೃತವಾಗುವ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಜ್ಯೇಷ್ಠತಾ ಪಟ್ಟಿ ಪ್ರಕಟಿಸಿದ ನಂತರ ವರ್ಗ ಪ್ರಕ್ರಿಯೆ ನೆರವೇರಿಸಲಾಗುತ್ತದೆ.
ವಿಧಾನ ಪರಿಷತ್ ನ ಪ್ರಶ್ನೋತ್ತರ ವೇಳೆಯಲ್ಲಿ ಎಸ್ ವಿ ಸಂಕನೂರ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ 2013ನೇ ಸಾಲಿನವರೆಗೆ ಪದೋನ್ನತಿ ಪ್ರಕ್ರಿಯೆ ನಡೆಸಲಾಗಿದೆ. ಪದೋನ್ನತಿ ಪ್ರಕ್ರಿಯೆ ನಡೆಸುವ ಹಿನ್ನೆಲೆಯಲ್ಲಿ ರಾಜ್ಯಮಟ್ಟದಲ್ಲಿ ಒಂದೇ ಜ್ಯೇಷ್ಠತಾ ಪಟ್ಟಿಯನ್ನು ತಯಾರಿಸುವ ಬಗ್ಗೆ ಮಾರ್ಗದರ್ಶನ ಕೋರಿ 2024ರ ಫೆಬ್ರವರಿ ಮತ್ತು ಮಾರ್ಚ್ ಮಾಸದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪ್ರಾಥಮಿಕ ಮತ್ತು ಪ್ರೌಢ)ಯ ಆಯುಕ್ತರು ಹಾಗೂ ಏಪ್ರಿಲ್ ಮಾಹೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ನಿರ್ದೇಶಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಈ ಪ್ರಸ್ತಾವನೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 2024ರ ಅಕ್ಟೋಬರ್ 16ರಂದು ನೀಡಿರುವ ಅಭಿಪ್ರಾಯದನ್ವಯ ಶಾಲಾ ಶಿಕ್ಷಣ ಇಲಾಖೆಯ ನಾಲ್ಕು ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ಪಡೆದ ಅರ್ಹ ಸಹ ಶಿಕ್ಷಕರ ಜೇಷ್ಠತಾ ಪಟ್ಟಿಯನ್ನು ಪರಿಶೀಲಿಸಿ ಸಾಮಾನ್ಯ ಜೇಷ್ಠತಾ ಪಟ್ಟಿಯನ್ನು ಅಂತಿಮಗೊಳಿಸಿ, ಅಂತಿಮ ರಾಜ್ಯಮಟ್ಟದ ಒಂದೇ ಜೇಷ್ಠತಾ ಪಟ್ಟಿಯನ್ನು ತಯಾರಿಸಲು ಕರ್ನಾಟಕ ಸರ್ಕಾರಿ ನೌಕರರ (ಜೇಷ್ಠತಾ) ನಿಯಮಗಳು 1957ರ ನಿಯಮ 7-ಎ ರ ನಿಯಮದನ್ವಯ ಪರಿಶೀಲಿಸಿ ಅಗತ್ಯ ಕ್ರಮವಹಿಸಲು 2024ರ ಅಕ್ಟೋಬರ್ ಮಾಹೆಯಲ್ಲಿ ಬರೆದ ಪತ್ರದಲ್ಲಿ ಬೆಂಗಳೂರಿನ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಿಗೆ, ಧಾರವಾಡ ಮತ್ತು ಕಲಬುರಗಿಯ ಅಪರ ಆಯುಕ್ತರಿಗೆ ಹಾಗೂ ಪದವಿ ಪೂರ್ವ ವಿಭಾಗದ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದ್ದು, ಇದರನ್ವಯ ಪದೋನ್ನತಿ ಪ್ರಕ್ರಿಯೆಯನ್ನು ತ್ವರಿತವಾಗಿ ನಿಯಮಾನುಸಾರ ನಡೆಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: Karnataka High Court: ಕನ್ನಡದಲ್ಲೇ ತೀರ್ಪು ಪ್ರಕಟಿಸಿ ಇತಿಹಾಸ ಬರೆದ ಕರ್ನಾಟಕ ಹೈಕೋರ್ಟ್