ದಾವಣಗೆರೆ, ಮೈಸೂರಿನಲ್ಲಿಯೇ ಶೇ.30ಕ್ಕಿಂತ ಹೆಚ್ಚು ಸೋಂಕು
ವಿಶೇಷ ವರದಿ: ರಂಜಿತ್ ಎಚ್. ಅಶ್ವತ್ಥ ಬೆಂಗಳೂರು
ಕರೋನಾ ಎರಡನೇ ಅಲೆ ಇಳಿಯುತ್ತಿದೆ ಎನ್ನುವ ಸಮಾಧಾನದ ನಡುವೆಯೂ ರಾಜ್ಯದ 15 ತಾಲೂಕುಗಳಲ್ಲಿ ಪಾಸಿಟಿವಿಟಿ ರೇಟ್ ಶೇ.30ಕ್ಕಿಂತ ಹೆಚ್ಚಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಕರೋನಾ ಸೋಂಕು ನಿಯಂತ್ರಣವಾಗುತ್ತಿದ್ದರೂ, 15 ತಾಲೂಕು ಗಳಲ್ಲಿ ಈ ಪ್ರಮಾಣ ಶೇ.30ಕ್ಕಿಂತ ಹೆಚ್ಚಿದೆ. ಅದರಲ್ಲಿಯೂ ದಾವಣಗೆರೆ, ಮೈಸೂರು ಹಾಗೂ ಚಿಕ್ಕಮಗಳೂರಿನಲ್ಲಿ ಸೋಂಕಿನ ಪ್ರಮಾಣ ನಿಯಂತ್ರಣಕ್ಕೆ ಬಂದಿಲ್ಲ. ಇದರಿಂದ ಈ ಜಿಲ್ಲೆಗಳಲ್ಲಿ ಆತಂಕ ಸೃಷ್ಟಿಯಾಗಿದೆ.
ಅತಿಹೆಚ್ಚು ಸೋಂಕಿತರನ್ನು ಕಂಡಿದ್ದ ಬೆಂಗಳೂರಿನ ದಕ್ಷಿಣ, ಪೂರ್ವ ಹಾಗೂ ಉತ್ತರ ವಿಭಾಗದಲ್ಲಿ ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿಯಿದ್ದರೆ, ಶೇ.10 ರಷ್ಟು ಪಾಸಿಟಿವಿಟಿ ಹೊಂದಿರುವ ಪಟ್ಟಿಯಲ್ಲಿ ಆನೇಕಲ್ ಪಡೆದಿದೆ. ಇನ್ನುಳಿದಂತೆ ಹಾವೇರಿ, ಕಲಬುರಗಿ, ಬೀದರ್ ಜಿಲ್ಲೆಯ ಹೆಚ್ಚು ತಾಲೂಕುಗಳು ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ಹೊಂದಿರುವ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ರೆಡ್ ಝೋನ್ನಲ್ಲಿ ದಾವಣಗೆರೆ, ಮೈಸೂರು: ಆದರೆ ದಾವಣಗೆರೆ ಹಾಗೂ ಮೈಸೂರಿನ ತಲಾ ನಾಲ್ಕು ತಾಲೂಕುಗಳಲ್ಲಿ ಪಾಸಿಟಿವಿಟಿ ಶೇ.30ಕ್ಕಿಂತ ಹೆಚ್ಚಿರುವುದು ಇದೀಗ ಆತಂಕಕ್ಕೆ ಕಾರಣವಾಗಿದೆ. ಇದರೊಂದಿಗೆ ಚಾಮರಾಜನಗರ, ಚಿತ್ರದುರ್ಗ
ದಲ್ಲಿ, ಉತ್ತರಕನ್ನಡದ ಬಹುತೇಕ ತಾಲೂಕುಗಳು ಶೇ.25ಕ್ಕಿಂತ ಹೆಚ್ಚು ಸೋಂಕಿರುವ ಪಟ್ಟಿಯಲ್ಲಿ ಕಾಣಿಸಿಕೊಂಡಿರುವುದು ಇದೀಗ ಆ ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಇನ್ನುಳಿದಂತೆ ಯಾದಗಿರಿ ಜಿಲ್ಲೆಯ ಯಾದಗಿರಿ, ಶಹಪುರ ಹಾಗೂ ಸುರಪುರ ತಾಲೂಕಿನ ಮಾಹಿತಿ ಲಭ್ಯವಾಗಿಲ್ಲ.
ಶೇ.೩೦ಕ್ಕಿಂತ ಹೆಚ್ಚು ಸೋಂಕಿರುವ ತಾಲೂಕು: ದೊಡ್ಡಬಳ್ಳಾ ಪುರ, ಕಡೂರು, ತರೀಕೆರೆ, ಚಿತ್ರದುರ್ಗ, ಸುಳ್ಯ, ಚನ್ನಗಿರಿ,
ದಾವಣಗೆರೆ, ಕೆ.ಆರ್ ನಗರ, ಎಚ್.ಡಿ ಕೋಟೆ, ಟಿ. ನರಸೀಪುರ, ಹುಣಸೂರು, ಶಿಕಾರಿಪುರ, ಕುಮಟಾ, ಹೊನ್ನಾಳಿ, ಹರಿಹರ.
ಸೇಫ್ ತಾಲೂಕುಗಳು
ಬೈಲಹೊಂಗಲ, ರಾಮದುರ್ಗ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಬೆಂಗಳೂರು ಉತ್ತರ, ಭಾಲ್ಕಿ, ಹುಮ್ನಾಬಾದ್, ಔರಾದ್, ಬಸವಕಲ್ಯಾಣ, ಬೀದರ್, ಗುಡಿಬಂಡೆ, ಕಲಘಟಗಿ, ನವಲಗುಂದ, ರೋಣ, ಆಲೂರು, ಬ್ಯಾಡಗಿ, ಹಾನಗಲ್, ಸವಣೂರು, ಹಿರೇಕೆರೂರು, ರಾಣೆಬೆನ್ನೂರು, ಶಿಗ್ಗಾವಿ, ಸೇಡಂ, ಆಳಂದ, ಜೀವರ್ಗಿ, ಅಫಜಲಪುರ, ಕಲಬುರಗಿ, ಚಿತ್ತಾಪುರ, ಚಿಂಚೋಳಿ, ಕೊಪ್ಪಳ, ನಾಗಮಂಗಲ, ಚನ್ನಪಟ್ಟಣ, ಮುಂಡಗೋಡು.