Tuesday, 10th December 2024

Shiva Rajkumar: ಶಿವರಾಜ್ ಕುಮಾರ್‌‌ಗೆ ಅನಾರೋಗ್ಯ, ಚಿಕಿತ್ಸೆಗೆ ಅಮೆರಿಕಕ್ಕೆ; ʼಗಾಬರಿ ಬೇಡ, 2 ತಿಂಗಳಲ್ಲಿ ಸರಿಹೋಗುತ್ತೆʼ ಎಂದ ಶಿವಣ್ಣ

shiva rajkumar

ಬೆಂಗಳೂರು: ಖ್ಯಾತ ನಟ ಶಿವರಾಜ್ ಕುಮಾರ್ (Shiva Rajkumar) ಅವರು ತೀವ್ರ ಅನಾರೋಗ್ಯ ಸಮಸ್ಯೆಯಿಂದ (health problem) ಬಳಲುತ್ತಿದ್ದು, ಚಿಕಿತ್ಸೆಗಾಗಿ ಒಂದು ತಿಂಗಳು ಅಮೆರಿಕಕ್ಕೆ ತೆರಳುವ ಸಾಧ್ಯತೆಯಿದೆ. “ಇದು ತಿಳಿದಾಗ ಮೊದಲು ನನಗೂ ಗಾಬರಿಯಾಯಿತು, ಆದರೆ ಚಿಕಿತ್ಸೆ ಮೂಲಕ ಈಗ ಚೇತರಿಸಿಕೊಳ್ಳುತ್ತಿದ್ದೇನೆ” ಎಂದು ಶಿವಣ್ಣ ಹೇಳಿದ್ದಾರೆ. ಈ ವಿಚಾರವನ್ನು ಸ್ವತಃ ಶಿವರಾಜ್‌ ಕುಮಾರ್‌ ಅವರು ತಿಳಿಸಿದ್ದು, ಈ ಸುದ್ದಿಯಿಂದ ಅಭಿಮಾನಿಗಳು ಆತಂಕಪಟ್ಟಿದ್ದಾರೆ.

ಶಿವಣ್ಣ ಅವರು ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಡುವ ಸಾಧ್ಯತೆ ಇದೆ. ಸದ್ಯ ಅವರು ‘ಭೈರತಿ ರಣಗಲ್’ ಚಿತ್ರದ ಪ್ರಮೋಷನ್​ನಲ್ಲಿ ಬ್ಯುಸಿ ಇದ್ದು, ಇದರ ಬಳಿಕ ಶಸ್ತ್ರಚಿಕಿತ್ಸೆಗೆ ಅಮೆರಿಕಕ್ಕೆ ತೆರಳುವುದಾಗಿ ಹೇಳಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಶಾಕಿಂಗ್ ವಿಚಾರ. ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಶಿವಣ್ಣ ಈ ವಿಚಾರ ಮಾತನಾಡಿದ್ದಾರೆ.

ನಟ ಶಿವರಾಜ್​ಕುಮಾರ್ ಅವರಿಗೆ 60 ವರ್ಷದ ಮೇಲಾಗಿದೆ. ಈಗಲೂ ಅವರು ಫಿಟ್ ಆಗಿದ್ದಾರೆ. ಆರೋಗ್ಯಕರ ಡಯಟ್ ಫಾಲೋ ಮಾಡುತ್ತಾರೆ. ನಿತ್ಯ ಶೂಟಿಂಗ್​​ನಲ್ಲಿ ಭಾಗವಹಿಸುತ್ತಾರೆ. ಅನೇಕ ಸಲ ಸ್ಟೇಜ್‌ ಫಂಕ್ಷನ್‌ಗಳಲ್ಲಿ ಡ್ಯಾನ್ಸ್‌ ಸ್ಟೆಪ್ಸ್‌ಗೆ ಮುಲಾಜಿಲ್ಲದೆ ಎನರ್ಜೆಟಿಕ್‌ ಆಗಿ ಹೆಜ್ಜೆ ಹಾಕುತ್ತಾರೆ. ಇದರ ನಡುವೆ ಆರೋಗ್ಯ ಸಮಸ್ಯೆ ಅವರನ್ನು ಅಟಕಾಯಿಸಿಕೊಂಡಿದೆ.

“ನನಗೆ ಅನಾರೋಗ್ಯ ಇದೆ. ನಾನು ಸುಳ್ಳು ಹೇಳಲ್ಲ. ನಾನೂ ಮನುಷ್ಯನೇ. ಟ್ರೀಟ್​ಮೆಂಟ್ ತೆಗೆದುಕೊಳ್ಳುತ್ತಿದ್ದೇನೆ. ಟ್ರೀಟ್​ಮೆಂಟ್​ಗೆ ನಾಲ್ಕು ಸೆಷನ್ ಇದೆ. ಈಗಾಗಲೇ ಎರಡು ಸೆಷನ್ ಆಗಿದೆ. ಇನ್ನೆರಡು ಸೆಷನ್ ಮಾಡಬೇಕಿದೆ. ಒಂದು ಸರ್ಜರಿ ನಡೆಯಬೇಕಿದೆ. ಅಮೆರಿಕದಲ್ಲಿ ಮಾಡೋದಾ ಅಥವಾ ಇಲ್ಲಿ ಮಾಡೋದಾ ಎನ್ನುವ ಬಗ್ಗೆ ಯೋಚನೆ ನಡೆಯುತ್ತಿದೆ. ಅಮೆರಿಕದಲ್ಲಿ ಮಾಡೋದು ಎಂದಾದರೆ ಒಂದು ತಿಂಗಳು ನಾನು ಅಲ್ಲಿಗೆ ಹೋಗಬೇಕಾಗುತ್ತದೆ. ಜನವರಿಯಿಂದ ನಾನು ಫುಲ್ ಫಾರ್ಮ್‌ನಲ್ಲಿ ಬರ್ತೀನಿ” ಎಂದಿದ್ದಾರೆ ಶಿವಣ್ಣ.

ಶಿವರಾಜ್​ಕುಮಾರ್ ಅವರು ತಮ್ಮ ನಿರ್ಮಾಪಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರಂತೆ. ಮುಂದೆ ಯಾವುದೇ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ಅವರು ಈ ರೀತಿ ಮಾಡಿದ್ದಾರೆ. ‘ಉಳಿದ ಸಮಯದಲ್ಲಿ ನಾವು ಅಭಿಮಾನಿಗಳು ಬೇಕು ಎನ್ನುತ್ತೇವೆ. ಈ ರೀತಿ ವಿಚಾರ ಬಂದಾಗ ಏಕೆ ಅವರನ್ನು ದೂರ ಇಡಬೇಕು? ಈ ಕಾರಣಕ್ಕೆ ನಾನು ಸುಳ್ಳು ಹೇಳೋದು ಬೇಡ ಎಂದು ಗೀತಾ ಅವರ ಬಳಿ ಹೇಳಿದೆ. ಅಭಿಮಾನಿಗಳು ಫೋಟೋ ತೆಗೆಸಿಕೊಳ್ಳೋಕೆ ಬಂದಾಗ ದೂರ ನಿಲ್ಲಿ ಎನ್ನುತ್ತೇನೆ. ಅವರಿಗೆ ಇನ್​ಫೆಕ್ಷನ್ ಆಗಬಾರದು ಎನ್ನುವ ಕಾರಣಕ್ಕೆ ಈ ರೀತಿ ಮಾಡಿದ್ದೇನೆ ಅಷ್ಟೇ. ಇದೆಲ್ಲ ಇನ್ನೆರಡು ತಿಂಗಳು ಅಷ್ಟೇ’ ಎಂದಿದ್ದಾರೆ ಅವರು.

ಶಿವರಾಜ್​ಕುಮಾರ್ ಅವರು ಯಾವ ರೀತಿಯ ತೊಂದರೆ ಎದುರಿಸುತ್ತಿದ್ದಾರೆ ಎಂಬುದನ್ನು ತಿಳಿಸಿಲ್ಲ. ಅವರು ಬೇಗ ಚೇತರಿಸಲಿ ಎಂದು ಫ್ಯಾನ್ಸ್ ಬಯಸಿದ್ದಾರೆ. ಅವರ ನಟನೆಯ ‘ಭೈರತಿ ರಣಗಲ್’ ಚಿತ್ರ ನವೆಂಬರ್ 15ರಂದು ರಿಲೀಸ್ ಆಗಲಿದೆ.

ಇದನ್ನೂ ಓದಿ: Shiva Rajkumar: ಶಿವರಾಜ್‌ ಕುಮಾರ್‌ ಕಾಲಿಗೆ ನಮಸ್ಕರಿಸಿದ ಐಶ್ವರ್ಯಾ ರೈ ಪುತ್ರಿ ಆರಾಧ್ಯಾ ಬಚ್ಚನ್‌