ಶ್ರಮಿಕರ ಮನೆ ಬಾಗಿಲಿಗೆ ಆರೋಗ್ಯ ಸೇವೆ
ಹುಬ್ಬಳ್ಳಿ : ಇಲ್ಲಿನ ಹೊಸ ನ್ಯಾಯಾಲಯದಲ್ಲಿಂದು ಕಾರ್ಮಿಕ ಇಲಾಖೆಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಅನುದಾನದಲ್ಲಿ ಸ್ಕೊಡ್ ವೆಸ್ ಸಂಸ್ಥೆ ಸಹಯೋಗದಲ್ಲಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ಶ್ರಮಿಕ್ ಸಂಜೀವಿನಿ ಸಂಚಾರಿ ಚಿಕಿತ್ಸಾ ಘಟಕ ವಾಹನಕ್ಕೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪರಮೇಶ್ವರ ಪ್ರಸನ್ನ, ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಆರ್.ಎಸ್. ಚಿನ್ನಣ್ಣವರ, ಸದಸ್ಯ ಕಾರ್ಯದರ್ಶಿ ರಾಜಶೇಖರ ತಿಳಗಂಜಿ ಮತ್ತು ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷರಾದ ಸಿ.ಆರ್. ಪಾಟೀಲ್ ಚಾಲನೆ ನೀಡಿದರು.
ನಂತರ ಕಾರ್ಮಿಕ ಅಧಿಕಾರಿ ಮಲ್ಲಿಕಾರ್ಜುನ ಜೋಗುರ ಮಾತನಾಡಿ, ಕಟ್ಟಡ ಕಾರ್ಮಿಕರು ಹಾಗೂ ಅವರ ಕುಟುಂಬಸ್ಥರಿಗೆ ಉಚಿತ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಕಾರ್ಮಿಕ ಇಲಾಖೆಯಿಂದ ಶ್ರಮಿಕ ಸಂಜೀವಿನಿ ಸಂಚಾರಿ ಚಿಕಿತ್ಸಾ ಘಟಕ ವಾಹನವನ್ನು ಆರಂಭಿಸಲಾಗಿದೆ.
ಈಗಾಗಲೇ ನೋಂದಣಿ ಮಾಡಿಕೊಂಡಿರುವ ಕಾರ್ಮಿಕರು ಹಾಗೂ ಹೊಸದಾಗಿ ನೋಂದಣಿ ಮಾಡಿಸಿ ಕೊಂಡಿರುವ ಜಿಲ್ಲೆಯ 15 ಸಾವಿರ ಕಾರ್ಮಿಕರಿಗೆ ಉಚಿತ ಆರೋಗ್ಯ ಸೇವೆ ದೊರೆ ಯಲಿದೆ. ಈ ವಾಹನವು ಇಸಿಜಿ, ಕೋವಿಡ್ 19 ಪರೀಕ್ಷೆ, ಪ್ರಯೋಗಾಲಯ ಪರೀಕ್ಷೆ ಹಾಗೂ ಇಲಾಖೆ ನಿರ್ದೇಶಿತ ಇತರೆ ಆರೋಗ್ಯ ಸೇವೆಗಳನ್ನು ನೀಡಲಿದೆ ಎಂದರು.
ಸ್ಕೊಡ್ ವೆಸ್ ಸಂಸ್ಥೆಯ ಧಾರವಾಡ ಘಟಕದ ಯೋಜನಾ ಸಂಯೋಜನಾಧಿಕಾರಿ ಚಂದ್ರ ಶೇಖರ ಆಚಾರ್ಯ ಬಡಿಗೇರ ಮಾತನಾಡಿ, ಧಾರವಾಡ ಜಿಲ್ಲೆಯಲ್ಲಿ ಎರಡು ಚಿಕಿತ್ಸಾ ವಾಹನಗಳು ಕಾರ್ಯನಿರ್ವಹಿಸಲಿವೆ. ವೈದ್ಯಾಧಿಕಾರಿ, ಶುಶ್ರೂಷಕಿ, ಪ್ರಯೋಗಾಲಯ ತಜ್ಞರು, ಔಷಧ ವಿತರಣಾ ತಜ್ಞರು, ವೈದ್ಯಕೀಯ ಸಮಾಜ ಕಾರ್ಯಕರ್ತರು, ಚಾಲಕ, ಸಹಾಯಕ ಸಿಬ್ಬಂದಿಯನ್ನು ಘಟಕ ವಾಹನ ಹೊಂದಿರುತ್ತದೆ. ನೋಂದಾಯಿತ ಕಾರ್ಮಿಕ ರಿಗೆ ಸಿಗುವ ವೈದ್ಯಕೀಯ ಸೌಲಭ್ಯಗಳು ಮತ್ತು ಇತರೆ ಆರೋಗ್ಯ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿಯನ್ನು ಸಹ ಒದಗಿಸಲಿದೆ.
ಆಧುನಿಕ ಸ್ಟ್ರಚರ್, ಬೆಡ್, ಆಕ್ಸಿಜನ್ ಸಿಲಿಂಡರ್, ಪ್ರಥಮ ಚಿಕಿತ್ಸಾ ಕಿಟ್, ಲ್ಯಾಬ್ ಪರಿಕರಗಳು, ಜೀವನಾವಶ್ಯಕ ಔಷಧಿಗಳು, ಬಿಪಿ ಟೆಸ್ಟ್, ಇಸಿಜಿ ಸೌಲಭ್ಯ, ರೆಫ್ರಿಜರೇಟರ್, ವ್ಹೀಲ್ ಚೇರ್, ಇತರೆ ಪ್ರಯೋಗಾಲಯ ಸಲಕರಣೆಗಳನ್ನು ಹೊಂದಿರುತ್ತದೆ. ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4.30 ರವರೆಗೆ ಹಾಗೂ ಶನಿವಾರದಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸೇವೆಯನ್ನು ನೀಡಲಿದೆ. ಕಾರ್ಮಿಕ ನೋಂದಾಯಿತ ಕಾರ್ಡ್ ಹಾಗೂ ಆಧಾರ್ ಕಾರ್ಡ್ ತೋರಿಸಿ ಚಿಕಿತ್ಸೆಗೆ ನೋಂದಣಿ ಮಾಡಿಕೊಳ್ಳಬಹುದು ಎಂದು ನ್ಯಾಯಾಧೀಶರಿಗೆ ಚಿಕಿತ್ಸಾ ಘಟಕ ವಾಹನದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ಕಾರ್ಮಿಕ ಆಯುಕ್ತೆ ಎಸ್. ಶ್ವೇತಾ, ಕಾರ್ಮಿಕ ಅಧಿಕಾರಿ ಲಲಿತಾ ಸಾತೇನಹಳ್ಳಿ, ಹಿರಿಯ ಕಾರ್ಮಿಕ ನಿರೀಕ್ಷಕ ಅಶೋಕ ಒಡೆಯರ್, ಅಕ್ರಮ ಅಲ್ಲಾಪುರ, ಡಾ.ಶಿವಶಂಕರ ನರೇಗಲ್, ಜಿಎನ್ ಎಂ, ಫಾರ್ಮಾಸಿಸ್ಟ್, ಲ್ಯಾಬ್ ಟೆಕ್ನಿಷಿ ಯನ್, ವೈದ್ಯಕೀಯ ಸಮಾಜ ಕಾರ್ಯಕರ್ತರು, ಆರೋಗ್ಯ ಸಹಾಯಕರು, ವಾಹನ ಚಾಲಕರು, ಹುಬ್ಬಳ್ಳಿ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರು, ಹಿರಿಯ ಹಾಗೂ ಕಿರಿಯ ಶ್ರೇಣಿಯ ನ್ಯಾಯಾಧೀಶರು, ವಕೀಲರು ಸೇರಿದಂತೆ ಇತರರು ಉಪಸ್ಥಿತರಿದ್ದರು.