Thursday, 19th December 2024

SM Krishna Death: ಉದ್ಯಾನ ನಗರಿಯನ್ನು ʼಸಿಲಿಕಾನ್‌ ಸಿಟಿʼ ಆಗಿಸಿದ ಮುತ್ಸದ್ಧಿ ಎಸ್‌ಎಂ ಕೃಷ್ಣ

sm krishna

ಬೆಂಗಳೂರು: ʼಉದ್ಯಾನವನಗಳ ನಗರಿʼ (Garden city) ಆಗಿದ್ದ ಕರ್ನಾಟಕದ ರಾಜಧಾನಿ ಬೆಂಗಳೂರನ್ನು (Bengaluru) ʼಐಟಿ ಸಿಟಿʼ ʼಸಿಲಿಕಾನ್‌ ಸಿಟಿʼ (IT city, silicon city) ಆಗಿಸಲು ಇಂದು ನಿಧನರಾದ ಮುತ್ಸದ್ಧಿ ರಾಜಕಾರಣಿ ಎಸ್‌ಎಂ ಕೃಷ್ಣ (SM Krishna Death) ಸಾಕಷ್ಟು ಯೋಗದಾನ ನೀಡಿದ್ದಾರೆ. ಬೆಂಗಳೂರಿನಲ್ಲಿ ಐಟಿ ಹಬ್‌ ವಿಸ್ತೃತವಾಗಿ ಬೆಳೆಯುವುದಕ್ಕೆ ಅಂದು ಮುಖ್ಯಮಂತ್ರಿಯಾಗಿದ್ದ ಕೃಷ್ಣ ಅವರ ಮುನ್ನೋಟ, ನಡೆಗಳು ಕಾರಣವಾಗಿದ್ದವು.

1999ರ ಹೊತ್ತಿಗಾಗಲೇ ಬೆಂಗಳೂರಿಗೆ ಐಟಿ ಕಂಪನಿಗಳು ಕಾಲಿಡಲಾರಂಭಿಸಿದ್ದವು. ಅದೇ ವರ್ಷ ಕೃಷ್ಣ ಅವರ ನೇತೃತ್ವದ ಸರಕಾರ ಆಡಳಿತ ಆರಂಭಿಸಿತ್ತು. 1999ರಿಂದ 2004ರ ಕೃಷ್ಣ ಆಡಳಿತದ ಅವಧಿ, ಇಲ್ಲಿ ಪ್ರಮುಖ ಐಟಿ ಕಂಪನಿಗಳ ಆಗಮನದ ಕಾಲವಾಗಿತ್ತು. ಈ ಕಂಪನಿಗಳು ಬೆಂಗಳೂರಿನಲ್ಲಿ ತಮ್ಮ ಶಾಖೆ ತೆರೆಯುವಂತೆ ಪ್ರೇರೇಪಿಸಲು ಅಗತ್ಯವಾದ ಕೆಲಸಗಳನ್ನು ಕೃಷ್ಣ ಮಾಡಿದರು.

ಇವುಗಳಿಗೆ ರಿಯಾಯತಿ ದರದಲ್ಲಿ ಜಮೀನು ಒದಗಣೆ, ನೀರು ಹಾಗೂ ವಿದ್ಯುತ್‌ ನೀಡುವಿಕೆ ಖಾತ್ರಿಪಡಿಸಿದರು. ರಸ್ತೆಗಳು ಮುಂತಾದ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದರು. ಕಂಪನಿಗಳ ಸ್ಥಾಪನೆಗೆ ಅಗತ್ಯವಾದ ಸರ್ಕಾರಿ ಕಡತ ಫೈಲಿಂಗ್‌ ವ್ಯವಸ್ಥೆಯನ್ನು ಸರಳಗೊಳಿಸಿದರು. ಕಡತಗಳ ಹಾಗೂ ಲೆಕ್ಕಪತ್ರ ಗಣಕೀಕರಣಕ್ಕೆ ಮುಂದಾದರು. ತೆರಿಗೆ ವ್ಯವಸ್ಥೆ ಸುಗಮಗೊಳಿಸಿ ಪರವಾನಗಿ ನೀಡುವಿಕೆಗೆ ಸಿಂಗಲ್‌ ವಿಂಡೋ ಪರಿಚಯಿಸಿದರು.

ಇದೆಲ್ಲದಕ್ಕಾಗಿ ಬೆಂಗಳೂರು ಟಾಸ್ಕ್‌ ಫೋರ್ಸ್‌ ಸ್ಥಾಪಿಸಿದರು. ಹೂಡಿಕೆ ಪ್ರಚೋದನೆ ಮತ್ತು ಆಡಳಿತಾತ್ಮಕ ಕಾರ್ಯಗಳಿಗಾಗಿ ನಿಯಂತ್ರಣ ಪ್ರಾಧಿಕಾರ ಸ್ಥಾಪಿಸಿದರು. ಕಾರ್ಮಿಕ ನೀತಿಗಳನ್ನು ವಿಶೇಷವಾಗಿ ಸಡಿಲಿಸಿದರು. ಕಾರ್ಮಿಕರು ಹಗಲಿರುಳು ದುಡಿಯಬಹುದು, ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಬಹುದು ಎಂಬ ಅನುಕೂಲಗಳು ಐಟಿ ವಲಯದ ಬೆಳವಣಿಗೆಗೆ ಅನುಕೂಲವಾಯಿತು. ಇದೇ ಸಂದರ್ಭದಲ್ಲಿ ಆಂಧ್ರಪ್ರದೇಶದಲ್ಲಿ ಆಡಳಿತದಲ್ಲಿದ್ದ ಚಂದ್ರಬಾಬು ನಾಯ್ಡು ಕೂಡ ಇವರಿಗೆ ಪೈಪೋಟಿ ನೀಡಲು ಯತ್ನಿಸಿದರು.

ಇನ್ಫೋಸಿಸ್, ವಿಪ್ರೋ, ಟಾಟಾ ಕನ್ಸಲ್ಟೆನ್ಸಿ ಮೊದಲಾದ ಕಂಪನಿಗಳು ಇದರ ಲಾಭ ಪಡೆದು ಬೆಂಗಳೂರಿನಲ್ಲಿ ಗಟ್ಟಿಯಾಗಿ ನೆಲೆ ನಿಂತವು. ಪಕ್ಕದ ರಾಜ್ಯಗಳಿಂದ ಇಲ್ಲಿಗೆ ಲಕ್ಷಗಟ್ಟಲೆ ಉದ್ಯೋಗಿಗಳು ಬಂದು ದುಡಿಯತೊಡಗಿದರು. ಅಮೆರಿಕದ ಕಂಪನಿಗಳು ಇಲ್ಲಿಗೆ ತಮ್ಮ ಕೆಲಸಗಳನ್ನು ಔಟ್‌ಸೋರ್ಸಿಂಗ್‌ ಕೊಡತೊಡಗಿದವು. ಐಟಿ ಹೊರಗುತ್ತಿಗೆ ಸೇವೆ ಒದಗಿಸುವ ಅತಿ ದೊಡ್ಡ ಹಬ್‌ ಆಯಿತು. ದೇಶದ ಮಾಹಿತಿ ತಂತ್ರಜ್ಞಾನದ ಕೇಂದ್ರವಾಯಿತು. ರಿಯಲ್‌ ಎಸ್ಟೇಟ್‌ ಉದ್ಯಮದ ಬೆಳವಣಿಗೆಯಾಗಿ ನಗರ ಅನಿಯಂತ್ರಿತವಾಗಿ ಬೆಳೆಯಲು ಕೂಡ ಕಾರಣವಾಯಿತು.

ಈ ಜನಪ್ರಿಯತೆಯ ಧೈರ್ಯದಿಂದಲೇ 2004ರಲ್ಲಿ ಅವಧಿಗೂ ಮುನ್ನ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ತೆರಳಲು ಕೃಷ್ಣ ನಿರ್ಧರಿಸಿದರು. ಆದರೆ ಅವರ ಈ ನಿರ್ಧಾರ ಕೈಹಿಡಿಯಲಿಲ್ಲ. ಬೆಂಗಳೂರಿನ ನಗರದ ಬೆಳವಣಿಗೆ ಅವರಿಗೆ ಇಡೀ ರಾಜ್ಯದಲ್ಲಿ ಗೆಲುವಾಗಿ ಪರಿವರ್ತನೆ ಆಗಲಿಲ್ಲ.

ಇದನ್ನೂ ಓದಿ: SM Krishna Death: ವರನಟ ರಾಜ್‌ಕುಮಾರ್‌ ಅಪಹರಣ ಪ್ರಕರಣ ಎದುರಿಸಿದ್ದ ಎಸ್‌ಎಂ ಕೃಷ್ಣ