ಶ್ರೀ ಗುರು ರಾಘವೇಂದ್ರ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್
ಬೆಂಗಳೂರು: ಗುರುವಾರ ವಿಧಾನಸೌಧದ ಕೂಗಳತೆ ದೂರದ ಸಿಐಡಿ ಕಚೇರಿ ರಸ್ತೆಯಿಂದ ಕಾಲ್ನಡಿಗೆ ಮೂಲಕ ವಿಧಾನಸೌಧ ಎಲ್. ಹೆಚ್ ಗೇಟ್ ವರೆಗೆ ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೆಸ್ ಸಮಿತಿಯ ವೈದ್ಯಕೀಯ ಘಟಕದ ಅಧ್ಯಕ್ಷರು ಹಾಗೂ ರಾಘವೇಂದ್ರ ಬ್ಯಾಂಕ್ ಠೇವಣಿದಾರರ ಪರ ನಿರಂತರ ಹೋರಾಟ ನಡೆಸುತ್ತಿರುವ ಡಾ. ಶಂಕರ ಗುಹಾ ದ್ವಾರಕಾನಾಥ್ ಬೆಳ್ಳೂರು ನೇತೃತ್ವದಲ್ಲಿ ಶಾಂತಿಯುತ ವಿಧಾನ ಸೌಧ ಛಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಶ್ರೀ ಗುರು ರಾಘವೇಂದ್ರ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಎರಡು ವರ್ಷ ತುಂಬಿ ದರೂ, ಹೂಡಿಕೆದಾರರು ತಮ್ಮ ಹಣ ವಾಪಸ್ ತಮ್ಮ ಕೈಗೆ ಸೇರುತ್ತದೊ ಇಲ್ಲವೋ ಎಂಬ ಚಿಂತೆಯಿಂದ ವಿವಿಧ ಕಾಯಿಲೆಗಳಿಗೆ ತುತ್ತಾಗಿ ಮರಣ ಹೊಂದಿದರೆ ಇನ್ನು ಕೆಲವರು ತಮ್ಮ ಜೀವನಪೂರ್ತಿ ದುಡಿದ ಹಣವನ್ನೆಲ್ಲಾ ಬ್ಯಾಂಕ್ ನಲ್ಲಿ ಹೂಡಿಕೆ ಮಾಡಿದ್ದಾರೆ.
ಚಿಕಿತ್ಸೆಗೆ, ಮಕ್ಕಳ ಮದುವೆ, ವಿದ್ಯಾಭ್ಯಾಸ, ಮನೆ ಬಾಡಿಗೆ ಕಟ್ಟಲು ಹಣ ವಿಲ್ಲದೆ ಕಣ್ಣೀರಿನಲ್ಲಿ ಕೈ ತೊಳೆಯು ತ್ತಿದ್ದಾರೆ. ಹೂಡಿಕೆದಾರರಿಗೆ ಹಣ ಕೊಡಿಸುವ ಕೆಲಸ ಮಾಡಬೇಕಾದ ಸರ್ಕಾರ ಹಾಗೂ ಜನಪ್ರತಿನಿಧಿಗಳು ಆರ್. ಬಿ. ಐ ಮೇಲೆ ಜವಾಬ್ದಾರಿ ಹಾಕಿ ತಮಗೂ ಇದಕ್ಕೂ ಸಂಬಂಧವೆ ಇಲ್ಲದಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿದೆ. ಇನ್ನು ಕೆಲ ಜನಪ್ರತಿನಿಧಿಗಳು ಹೂಡಿಕೆದಾರರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
ಹೂಡಿಕೆ ಮಾಡಿರುವವರ ಪೈಕಿ ಹೆಚ್ಚಿನವರು ಹಿರಿಯ ನಾಗರಿಕರು ಹತ್ತಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು, ತಮ್ಮ ಹಣಕ್ಕಾಗಿ ಬ್ಯಾಂಕ್ ವಿರುದ್ಧ ನಾನಾ ಬಗೆಯ ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಇಂದು ಕೂಡಾ ಶಾಂತಿಯುತ ಪ್ರತಿಭಟನೆ ಮಾಡಲು ಬಂದಿದ್ದ ಹೂಡಿಕೆದಾರರಿಗೆ ಪೊಲೀಸರು ಅನುಮತಿ ನೀಡಲು ನಿರಾಕರಿಸಿದ್ದಾರೆ.
ಸ್ಥಳಕ್ಕೆ ಹೂಡಿಕೆದಾರರು ಆಗಮಿಸಿ ಪ್ರತಿಭಟನೆ ಮಾಡಲು ಸಿದ್ಧತೆ ನಡೆಸುತ್ತಿದ್ದಂತೆ ಪೊಲೀಸಲು ಎಲ್ಲರನ್ನು ತಡೆದು ಅಲ್ಲಿಂದ ಕಳುಹಿಸುವ ಪ್ರಯತ್ನ ಮಾಡಿದ್ರು. ಇದಕ್ಕೆ ಬಗ್ಗದ ಹೂಡಿಕೆದಾರರು ಕೆ. ಆರ್ ಸರ್ಕಲ್ ಮಾರ್ಗವಾಗಿ ವಿಧಾನಸೌಧದತ್ತ ಭಿತ್ತಿ ಪತ್ರಗಳನ್ನು ಹಿಡಿದುಕೊಂಡು ಸಾಗಿದರು. ಅಧಿವೇಶನ ಹಿನ್ನೆಲೆ ವಿಧಾನ ಸೌಧ ಸುತ್ತಮುತ್ತ 144 ಸೆಕ್ಷನ್ ಜಾರಿ ಇದೆ ಅನ್ನೋ ಕಾರಣ ಕೊಟ್ಟು ಹೂಡಿಕೆದಾರರಿಗೆ ಶಾಂತಿಯುತ ಪ್ರತಿಭಟನೆ ಮಾಡಲು ಅನುಮತಿ ನೀಡದೆ, ಹಿರಿಯ ನಾಗರೀಕರ ಸಹಿತ ಎಲ್ಲರನ್ನು ವಶಕ್ಕೆ ಪಡೆದು ಪೊಲೀಸರು ಕರೆದೋಯ್ದರು.
ಇನ್ನು ಪ್ರತಿಭಟನೆಯ ನೇತೃತ್ವವಹಿಸಿದ್ದ ಡಾ. ಶಂಕರ್ ಗುಹಾ ದ್ವಾರಕಾನಾಥ್ ಮಾಧ್ಯಮಗಳಿಗೆ ಮಾತನಾಡಿ, ಹೂಡಿಕೆದಾರರು ಕಳೆದ ಎರಡು ವರ್ಷಗಳಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸಮಸ್ಯೆಗಳಿಗೆ ಸಿಲುಕಿ ಕಷ್ಟ ಅನುಭವಿಸುತ್ತಿದ್ದರು. ರಾಜ್ಯ ಹಾಗೂ ಕೇಂದ್ರ ಸರ್ಕಾರ ಹೂಡಿಕೆದಾರರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿಲ್ಲ. ಸದನದಲ್ಲಿಯೂ ಸಚಿವರು ತಪ್ಪು ಮಾಹಿತಿ ನೀಡಿದ್ದಾರೆ.
2020/21 ರ ಆಡಿಟ್ ರಿಪೋರ್ಟ್ ಬಂದಿದೆ ಎಂದು ರಾಜ್ಯದ ಜನರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಆದರೆ ರಿಪೋರ್ಟ್ ಬಂದಿರುವುದು 2019/20 ಇಸವಿ ಯದ್ದು. 1400 ಕೋಟಿ ಲೋನ್ ಹಣವನ್ನ ಮನ್ನಾ ಮಾಡಲಾಗಿದೆ ಅಂತ ಆಡಿಟ್ ರಿಪೋರ್ಟ್ ನಲ್ಲಿ ತಿಳಿಸಲಾಗಿದೆ. ಇದರಿಂದಲೇ ಎಷ್ಟು ಅವ್ಯವಹಾರ ನಡೆದಿದೆ ಎಂಬುದು ತಿಳಿಯುತ್ತದೆ. ಬಿಜೆಪಿ ಮುಖಂಡ ಅಶ್ವಥ್ ನಾರಾಯಣ್ ಗೌಡ 12 ಕೋಟಿ ಡಿಫಾಲ್ಟರ್ ಆದರೂ ಅವರ ವಿರುದ್ಧ ಕ್ರಮ ಯಾಕೆ ಆಗಿಲ್ಲ. ನಮ್ಮ ಬೇಡಿಕೆ ಕೂಡಲೇ ಎಲ್ಲಾ ಹೂಡಿಕೆದಾರರ ಪೂರ್ತಿ ಹಣವನ್ನು ಬಡ್ಡಿ ಸಮೇತ ನೀಡಬೇಕು. ಹಾಗೂ ಹೂಡಿಕೆದಾರರಿಗೆ ವಂಚನೆ ಮಾಡಿ ಸಮಸ್ಯೆಗಳನ್ನು ಎದುರಿಸುವಂತೆ ಮಾಡಿರುವವರನ್ನು ಬಂಧಿಸಬೇಕು ಎಂದು ಒತ್ತಾಯಪಡಿಸಿದರು.