Friday, 13th December 2024

Stabbing Case: ಗಣೇಶ ಮೂರ್ತಿ ವಿಸರ್ಜನೆ ವೇಳೆ ಚಾಕು ಇರಿತ, ಮೂವರಿಗೆ ಗಾಯ

stabbing case

ಬೆಳಗಾವಿ: ದುಷ್ಕರ್ಮಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಗಳನ್ನು ಬಳಸಿಕೊಳ್ಳುತ್ತಿದ್ದು, ಬೆಳಗಾವಿಯಲ್ಲಿ ಮತ್ತೊಂದು ಇಂಥ ಘಟನೆ ನಡೆದಿದೆ. ಮಂಡ್ಯದ ನಾಗಮಂಗಲ (Mandya violence) ಕೋಮು ಗಲಭೆ ಬಳಿಕ ಇದೀಗ ಬೆಳಗಾವಿಯಲ್ಲಿ (Belagavi news) ಐತಿಹಾಸಿಕ ಗಣೇಶೋತ್ಸವ ವಿಸರ್ಜನೆ (Ganesh Visarjan) ಮೆರವಣಿಗೆ ವೇಳೆ ಚಾಕು (Stabbing Case) ಇರಿಯಲಾಗಿದೆ.

ಬೆಳಗಾವಿ ನಗರದ ಚೆನ್ನಮ್ಮ ವೃತ್ತದ ಬಳಿ ಮೂವರು ಹಾಸ್ಟೆಲ್​ ವಿದ್ಯಾರ್ಥಿಗಳಿಗೆ (Students) ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದಾರೆ. ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುವಾಗ ಕಾಲು ತಾಗಿದ್ದಕ್ಕೆ ಕಿರಿಕ್​ ಆಗಿದ್ದು ದುಷ್ಕರ್ಮಿಗಳು ವಿದ್ಯಾರ್ಥಿಗಳ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾರೆ.

ಸಮಾಜ ಕಲ್ಯಾಣ ವಸತಿ ನಿಲಯದ ಮೂವರು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಹೊಟ್ಟೆ, ಕತ್ತು, ಬೆನ್ನಿನ ಭಾಗಕ್ಕೆ ಚಾಕುವಿನಿಂದ ಇರಿಯಲಾಗಿದೆ. ಬೆಳಗಾವಿಯ ಚರ್ಚ್​ ಗಲ್ಲಿಯ ಯುವಕರ ಗ್ಯಾಂಗ್​ನಿಂದ ಈ ಕೃತ್ಯ ನಡೆದಿದೆ ಎನ್ನಲಾಗುತ್ತಿದೆ. ಘಟನೆಯಲ್ಲಿ ಪ್ರವೀಣ್ ಗುಂಡ್ಯಾಗೋಳ್​ ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ದರ್ಶನ್​​ ಪಾಟೀಲ್​, ಸತೀಶ್​​ ಪೂಜಾರಿ ಎಂಬವರಿಗೆ ಬಿಮ್ಸ್​​ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಾಕುವಿನಿಂದ ಇರಿದು ಪರಾರಿಯಾಗುತ್ತಿದ್ದ ಮೂವರು ಆರೋಪಿಗಳನ್ನು ಎಪಿಎಂಸಿ ಠಾಣೆ ಪೊಲೀಸರು ಚೇಸ್​ ಮಾಡಿ ಹಿಡಿದಿದ್ದಾರೆ. ಬೈಕ್​ನಲ್ಲಿ ಪರಾರಿಯಾಗುತ್ತಿದ್ದ ಮೂವರು ಆರೋಪಿಗಳು ವಿಶ್ವೇಶ್ವರಯ್ಯನಗರದಲ್ಲಿ ಸೆರೆಯಾಗಿದ್ದಾರೆ. ಸಿಪಿಐ ವಿಶ್ವನಾಥ್ ಕಬ್ಬೂರ ಮತ್ತು ಸಿಬ್ಬಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಗಾಂಜಾ ಮತ್ತಿನಲ್ಲಿ ಇರಿದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ವಶಕ್ಕೆ ಪಡೆದ ಆರೋಪಿಗಳ ವಿಚಾರಣೆ ನಡೆಯುತ್ತಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.

“ಗಣಪತಿ ಮೆರವಣಿಗೆಯಲ್ಲಿ ಡ್ಯಾನ್ಸ್​ ಮಾಡುತ್ತಿದ್ದಾಗ ಕಾಲು ತಾಗಿದೆ. ಇದಾದ ಬಳಿಕ ಹೊರಬಂದು ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಮೂವರಿಗೆ ಚಾಕು ಇರಿತವಾಗಿದೆ. ಬಿಮ್ಸ್​​ ಆಸ್ಪತ್ರೆಯಲ್ಲಿ ಮೂವರಿಗೆ ಚಿಕಿತ್ಸೆ ಕೊಡಿಸಲಾಗಿದೆ. ವೈಯಕ್ತಿಕ ಕಾರಣಕ್ಕೆ ಚಾಕು ಇರಿದ ಮಾಹಿತಿ ಇದೆ. ಗಾಂಜಾ ಮತ್ತಿನಲ್ಲಿ ಕೃತ್ಯವೆಸಗಿದ ಆರೋಪ ಕೇಳಿ ಬಂದಿದ್ದು ಆರೋಪಿಗಳ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತೆ” ಎಂದು ಬೆಳಗಾವಿ ನಗರ ಪೊಲೀಸ್ ಕಮಿಷನರ್​​ ಯಡಾ ಮಾರ್ಟಿನ್ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: Mandya Violence: ರಾಜಕೀಯ ಒತ್ತಡಕ್ಕೆ ಒಳಗಾಗದಂತೆ ಮಂಡ್ಯ ಎಸ್ಪಿಗೆ ಸಚಿವ ಪ್ರಲ್ಹಾದ್‌ ಜೋಶಿ ಎಚ್ಚರಿಕೆ