-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಉಟ್ಟ ಒಂದೊಂದು ಸಾದಾ ಸೀರೆಗಳು (Star Saree Trend) ಇದೀಗ ಸೀರೆಲೋಕದಲ್ಲಿ ಟ್ರೆಂಡಿಯಾಗಿವೆ. ಹೌದು, ಸಿಂಪಲ್ ಹಾಗೂ ಹೆಚ್ಚು ಡಿಸೈನ್ ಇಲ್ಲದಿರುವ ಈ ಸಾದಾ ಪ್ಲೇನ್ ಸೀರೆಗಳನ್ನು ನಟಿ ರಶ್ಮಿಕಾ ಮಂದಣ್ಣ ,ತಮ್ಮ ಪುಷ್ಪ 2 ಪ್ರಮೋಷನ್‌ಗಾಗಿ ಉಟ್ಟಿದ್ದು, ಸಾಮಾನ್ಯ ಮಹಿಳೆಯರನ್ನು ಸೆಳೆದಿವೆ. ಪರಿಣಾಮ, ಈ ಸಿಂಪಲ್ ಹಾಗೂ ಕೈಗೆಟಕುವ ಬೆಲೆಯಲ್ಲಿ ದೊರೆಯುವ ನಾನಾ ಬಗೆಯ ಸಾದಾ ಸೀರೆಗಳು ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಲಗ್ಗೆ ಇಟ್ಟಿದ್ದು, ಸದ್ಯ ಸೀರೆ ಲೋಕದಲ್ಲಿ ಇವು ಸಖತ್ ಟ್ರೆಂಡಿಯಾಗಿವೆ.
ರಶ್ಮಿಕಾ ಮಂದಣ್ಣ ಸಾದಾ ಸೀರೆ ಕಥೆ
ಅಂದಹಾಗೆ, ರಶ್ಮಿಕಾ ಮಂದಣ್ಣ ಸಿನಿಮಾ ಪ್ರಮೋಷನ್‌ಗಳಿಗೆ ತಕ್ಕಂತೆ ಕಾಸ್ಟ್ಯೂಮ್ ಧರಿಸುತ್ತಿರುತ್ತಾರೆ. ಇನ್ನು, ಪುಷ್ಪಾ 2 ಪ್ರಮೋಷನ್ ಸಂದರ್ಭದಲ್ಲೂ ಐದಾರು ಬಗೆಯ ಬಗೆಬಗೆಯ ತೆಳುವಾದ ಹಾಗೂ ಲೈಟ್‌ವೇಟ್ ಹೊಂದಿರುವಂತಹ ಸೀರೆಗಳನ್ನು ಉಟ್ಟಿ ಕಾಣಿಸಿಕೊಂಡಿದ್ದರು. ಅವರು ಉಟ್ಟಿದ ಒಂದೊಂದು ಸೀರೆಯೂ ಕೂಡ ತೀರಾ ಸಿಂಪಲ್ ಆಗಿತ್ತು. ಹೆಚ್ಚೇನೂ ಡಿಸೈನ್ ಹೊಂದಿರಲಿಲ್ಲ! ಯೆಲ್ಲೋ, ಚಾಕೋಲೇಟ್ ಬ್ರೌನ್, ಹಸಿರು ರಾಯಲ್ ಬ್ಲ್ಯೂ ಹಾಗೂ ಸ್ಕಾರ್ಲೆಟ್ ಶೇಡ್ನ ಸೀರೆಗಳನ್ನು ಸ್ಲಿವ್ಲೆಸ್ ಬ್ಲೌಸ್ನೊಂದಿಗೆ ಮ್ಯಾಚ್ ಮಾಡಿದ್ದರು. ಇನ್ನು ಹೆಚ್ಚೆನೂ ಖರ್ಚು ವೆಚ್ಚ ಮಾಡದೇ ಉಟ್ಟಿದ್ದ ಈ ಸೀರೆಗಳು ಅತ್ಯಾಕರ್ಷಕ ಲುಕ್ ಕೂಡ ನೀಡಿದ್ದವು. ಈ ಸೀರೆಗಳ ರಿಪ್ಲಿಕಾ ಇದೀಗ ಈಗಾಗಲೇ ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟಿವೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಮರುಕಳಿಸುವ ಸೀರೆ ಟ್ರೆಂಡ್
ಅಂದಹಾಗೆ, ಈ ಸೀರೆಗಳ ಟ್ರೆಂಡ್ ಇದು ಮೊದಲೇನಲ್ಲ! ಈ ಹಿಂದೆಯೂ ಬಾಲಿವುಡ್ ಸಿನಿಮಾಗಳಲ್ಲಿ ಮಾಧುರಿ ದೀಕ್ಷಿತ್, ಕರೀಷ್ಮಾ, ಕಾಜೋಲ್ ಉಟ್ಟಿದ್ದ ಸೀರೆಗಳು, ಸಿನಿಮಾ ಹಾಡುಗಳಲ್ಲಿ ಕಾಣಿಸಿಕೊಂಡಾಗಲೆಲ್ಲಾ ಮರು ಎಂಟ್ರಿ ನೀಡಿದ್ದವು. ಆಯಾ ಜನರೇಷನ್‌ಗೆ ತಕ್ಕಂತೆ ಕೊಂಚ ರೂಪ ಬದಲಿಸಿ ಕಾಣಿಸಿಕೊಳ್ಳುತ್ತಿದ್ದವು ಅಷ್ಟೇ! ಎನ್ನುತ್ತಾರೆ ಸೀರೆ ಸ್ಟೈಲಿಸ್ಟ್‌ಗಳು.
ಈ ಸುದ್ದಿಯನ್ನೂ ಓದಿ | Reliance Retail: ಹೋಮ್ ಥಿಯೇಟರ್ ಎಲ್‌ಇಡಿ ಟಿವಿಗಳನ್ನು ಬಿಡುಗಡೆ ಮಾಡಿದ ರಿಲಯನ್ಸ್ ರಿಟೇಲ್!
ಸಾದಾ ಸೀರೆಯಲ್ಲಿ ರಶ್ಮಿಕಾ ಮಂದಣ್ಣರಂತೆ ಕಾಣಿಸಿಕೊಳ್ಳಲು ಇಲ್ಲಿದೆ 5 ಟಿಪ್ಸ್
- ನಿಮ್ಮ ಸ್ಕಿನ್‌ಟೋನ್‌ಗೆ ತಕ್ಕಂತೆ ಸೀರೆ ಕಲರ್ ಆಯ್ಕೆ ಮಾಡಿ.
- ಸ್ಲಿವ್ಲೆಸ್ ಬ್ಲೌಸ್ ಸಾದಾ ಸೀರೆಯ ಗ್ಲಾಮರ್ ಹೆಚ್ಚಿಸಬಲ್ಲದು.
- ಆದಷ್ಟೂ ಸ್ಟೇಟ್‌ಮೆಂಟ್ ಜ್ಯುವೆಲರಿ ಧರಿಸಿ.
- ಹೇರ್‌ಸ್ಟೈಲ್ & ಮೇಕಪ್ ಮ್ಯಾಚ್ ಆಗುವಂತಿರಲಿ.
- ಸಿಂಗಲ್ ಸೆರಗನ್ನು ಪಿನ್ ಮಾಡಿ. ಮನಮೋಹಕವಾಗಿ ಕಾಣಿಸುವುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)