Saturday, 14th December 2024

Student Death: ಎದೆನೋವು ಎಂದರೂ ಪರೀಕ್ಷೆ ಬರೆಸಿದ ಶಿಕ್ಷಕರು; ವಿದ್ಯಾರ್ಥಿ ಸಾವು

yadgir student death

ಯಾದಗಿರಿ : ಹೃದಯಾಘಾತದಿಂದ (Heart failure) ಶಾಲಾ ವಿದ್ಯಾರ್ಥಿ ಚೇತನ್ (16) ಎಂಬಾತ ಶಾಲೆಯಲ್ಲೇ (Student Death) ಸಾವನ್ನಪ್ಪಿದ್ದಾನೆ. ಈತ ಎದೆನೋವು (Heart Attack) ಎಂದರೂ ಶಿಕ್ಷಕರು ನಿರ್ಲಕ್ಷಿಸಿ, ಪರೀಕ್ಷೆ ಬರೆಯುವಂತೆ ಮಾಡಿದ್ದಲ್ಲದೆ, ಹೆತ್ತವರಿಗೆ ಮಾಹಿತಿ ನೀಡಲು ಫೋನನ್ನೂ ನೀಡಲಿಲ್ಲ ಎಂದು ಆರೋಪಿಸಲಾಗಿದೆ. ಯಾದಗಿರಿ ಜಿಲ್ಲೆಯ (Yadgir News) ಶಹಾಪುರ‌ ನಗರದಲ್ಲಿ ಘಟನೆ ನಡೆದಿದೆ.

ಡಿಡಿಯು ಖಾಸಗಿ ವಸತಿ ಶಾಲೆಯ ಶಿಕ್ಷಕರ ನಿರ್ಲಕ್ಷ್ಯದಿಂದ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಹತ್ತನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಚೇತನ್‌ನನ್ನು ಅನಾರೋಗ್ಯ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಪೋಷಕರು ಮನೆಗೆ ಕರೆದುಕೊಂಡು ಹೋಗಿದ್ದರು. ಆ ನಂತರ ಯುವಕನನ್ನುಆಸ್ಪತ್ರೆಗೆ ಕರೆದುಕೊಂಡು ಹೋಗಿ ಪೋಷಕರು ಚಿಕಿತ್ಸೆ ಕೊಡಿಸಿದ್ದಾರೆ.

ಇದಾದ ನಂತರ ನಿನ್ನೆ ಶಾಲೆಯಲ್ಲಿ ಕಿರು ಪರೀಕ್ಷೆ ಇದೆ ಎಂದು ವಿದ್ಯಾರ್ಥಿ ಚೇತನ್ ಶಾಲೆಗೆ ಬಂದಿದ್ದ. ಪರೀಕ್ಷೆ ಬರೆಯುವಾಗ ಸುಸ್ತಾಗಿ ವಾಂತಿ ಹಾಗೂ ಎದೆನೋವು ಕಾಣಿಸಿಕೊಂಡಿತ್ತು. ಆದರೆ ವಾಂತಿ ಮಾಡಿಕೊಂಡರೂ ಈ ಬಗ್ಗೆ ಗಮನ ಕೊಡದ ಶಿಕ್ಷಕರು ಚೇತನ್‌ನನ್ನು ಗದರಿ ಶಾಲೆಯಲ್ಲೇ ವಿಶ್ರಾಂತಿ ಪಡೆಯುವಂತೆ ಹೇಳಿದ್ದರಂತೆ.

ಆದರೆ ಚೇತನ್ ಸಹೋದರಿ ಪವಿತ್ರಾ ತನ್ನ ಸಹೋದರನಿಗೆ ಹುಷಾರಿಲ್ಲದ ವಿಚಾರವನ್ನು ಪೋಷಕರಿಗೆ ಕರೆ ಮಾಡಿ ತಿಳಿಸುವುದಾಗಿ ಹೇಳಿದ್ದರೂ, ಮುಖ್ಯ ಶಿಕ್ಷಕರ ಅನುಮತಿ ಇಲ್ಲದೆ ಫೋನ್ ಕೊಡಲ್ಲ ಎಂದು ಶಿಕ್ಷಕರು ನಿರ್ಲಕ್ಷ್ಯ ತೋರಿದ್ದಾರೆ. ಇದಾದ ಬಳಿಕ, ನಿತ್ರಾಣಗೊಂಡಿದ್ದ ವಿದ್ಯಾರ್ಥಿ ಚೇತನ್ ಶಾಲೆಯಲ್ಲೇ ಮೃತಪಟ್ಟಿದ್ದಾನೆ.

ಆ ಬಳಿಕ ಚೇತನ್ ಸಹಪಾಠಿಗಳು ಬೈಕ್ ಮೇಲೆ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ‌. ಆದರೆ ಅಷ್ಟು ಹೊತ್ತಿಗಾಗಲೇ ಪ್ರಾಣ ಹೋಗಿರುವುದನ್ನು ವೈದ್ಯರು ಖಚಿತಪಡಿಸಿದ್ದರು. ಶಾಲೆಯ ಶಿಕ್ಷಕರ ನಿರ್ಲಕ್ಷ್ಯದಿಂದಲೇ ಚೇತನ್ ಸಾವಾಗಿದೆ ಎಂದು ಪೋಷಕರ ಆರೋಪಿಸಿದ್ದು, ಶಹಾಪುರ‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Viral Video: ಮಗನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ತಾಯಿ ಹೃದಯಾಘಾತದಿಂದ ಸಾವು