Friday, 13th December 2024

ಹೆಣ್ಣು ಜನಿಸಿದರೆ ಸಂತೋಷ ಪಡಬೇಕು: ತರನಳ್ಳಿ

ಹೆಣ್ಣು ಹೆತ್ತ ಐವರು ಮಾತೆಯರಿಗೆ ಮಹಾಲಕ್ಷ್ಮೀ ದೇವಿ ಚಿತ್ರವುಳ್ಳ ಬೆಳ್ಳಿ ಪದಕ, ಸಿಹಿ ನೀಡಿ ಸತ್ಕಾರ

ಸೇಡಂ: ನಾವು ದೇಶ, ಭಾಷೆ, ಭೂಮಿ, ನದಿ ಸೇರಿದಂತೆ ಎಲ್ಲವನ್ನು ಮಾತೆಯ ರೂಪದಲ್ಲಿ ಕಾಣುತ್ತೇವೆ. ಆದರೆ ಹೆಣ್ಣು ಮಗು ಹುಟ್ಟಿದರೆ ಹೋರೆ, ಹುಣ್ಣು ಎಂದು ಭಾವಿಸುವ ಕಾಲ ಒಂದಿತ್ತು. ಇಂದು ಕಾಲ ಬದಲಾಗಿದೆ ಹೆಣ್ಣು ಮಗು ಹೆತ್ತರೆ ಸಂಭ್ರಮ ಪಡುವ ಅನೇಕ ಜನರು ನಮಗೆ ಕಾಣಸಿಗುತ್ತಾರೆ ಎಂದು ಸಾಹಿತಿ, ಹಿರಿಯ ಪತ್ರಕರ್ತ ಜಗನ್ನಾಥ ತರನಳ್ಳಿ ಹೇಳಿದರು.

ಪಟ್ಟಣದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದಲ್ಲಿ ಪತ್ರಕರ್ತ ಸುಧೀರ ಬಿರಾದಾರ ಪುತ್ರಿ ವಿಸ್ಮಯಳ ಜನ್ಮ ದಿನದ ಅಂಗವಾಗಿ ಹೆಣ್ಣು ಹೆತ್ತ ಐವರು ತಾಯಂದಿರಿಗೆ ಸನ್ಮಾನ ಕಾರ್ಯಮದಲ್ಲಿ ಮಾತನಾಡಿದ ಅವರು, ಕೆಲವು ಕಡೆ ಹೆಣ್ಣು ಹೆತ್ತರೆ ಏನೋ ತಪ್ಪು ಮಾಡಿದ್ದಾಳೆ ಎನ್ನುವ ರೀತಿಯಲ್ಲಿ ಮನೆಮಂದಿಯಲ್ಲಾ ನೋಡು ತ್ತಿದ್ದರು. ಆದರೆ ಇದೀಗ ಕಾಲ ಬದಲಾವಣೆಯಾಗಿದೆ.

ಭೂಮಿ ಮಾತ್ರವಲ್ಲ, ಬಾಹ್ಯಾಕಾಶದವರೆಗೆ ಹೆಣ್ಣುಮಕ್ಕಳು ಸಾಧನೆ ಮಾಡುತ್ತಿದ್ದಾರೆ. ಹೆಣ್ಣುಮಕ್ಕಳನ್ನು ಹೆತ್ತ ತಂದೆ ತಾಯಿ ಅತ್ಯಂತ ಸಂತೋಷದಿಂದ ಇದ್ದಾರೆ. ಕೆಲವು ಮನೆಗಳಲ್ಲಿ ಗಂಡು ಮಕ್ಕಳಿಗಿಂತ ಹೆಚ್ಚಾಗಿ ಹೆಣ್ಣು ಮಕ್ಕಳೇ ಆಸರೆಯಾಗಿದ್ದಾರೆ ಎನ್ನು ವುದು ಅಲ್ಲಲ್ಲಿ ನಾವು ಕಾಣುತ್ತೇವೆ.

ಇಂದು ಪತ್ರಕರ್ತ ಸುಧೀರ ತಮ್ಮ ಮಗಳ ಜನ್ಮದಿನದಂದು ಹೆಣ್ಣು ಮಕ್ಕಳನ್ನು ಹೆತ್ತ ಐವರು ತಾಯಂದಿರಿಗೆ ಸಾಕ್ಷಾತ್ ಮಹಾ ಲಕ್ಷ್ಮೀ ದೇವಿಯ ಚಿತ್ರವುಳ್ಳ ಬೆಳ್ಳಿ ಪದಕ, ಸಿಹಿ ನೀಡಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದ್ದು ಹೆಮ್ಮೆಪಡುವ ವಿಷಯ. ಕೆಲವು ಕಡೆಗಳಲ್ಲಿ ಹೆಣ್ಣು ಮಗುವನ್ನು ಕಸದ ತೊಟ್ಟಿಗೆ ಬಿಸಾಡುವುದು, ಮಗುವನ್ನು ಹೆತ್ತು ಆಸ್ಪತ್ರೆಯಲ್ಲಿಯೇ ಬಿಟ್ಟು ಹೋಗುವುದನ್ನು ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ದಯವಿಟ್ಟು ಇಂತಹ ಮಹಾಪಾಪದ ಕೆಲಸ ಯಾರೂ ಸಹ ಮಾಡಬಾರದು ಎಂದರು.

ಈ ವೇಳೆ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಶಿವುಕುಮಾರ ನಿಡಗುಂದಾ, ಪ್ರಧಾನ ಕಾರ್ಯದರ್ಶಿ ಶರಣು ಮಹಾಗಾಂವ, ಪತ್ರಕರ್ತರಾದ ಅವಿನಾಶ ಬೋರಂಚಿ, ಸುಧೀರ ಬಿರಾದಾರ, ಕಾರ್ಯಾಲಯದ ಸಿಬ್ಬಂದಿಗಳಾದ ನಾಗಮ್ಮ, ಮಹೇಶ್ವರಿ, ಶಶಿಕಾಂತ ಗುತ್ತೇದಾರ, ಮಲ್ಲೇಶ ಊಡಗಿ, ಸಿದ್ದಯ್ಯ ಸ್ವಾಮಿ, ಗುರುದೇವಿ ಸೇರಿದಂತೆ ಇನ್ನಿತರರಿದ್ದರು.