Thursday, 12th December 2024

TG Ashwathtanarayana: ಹಿರಿಯ ಪತ್ರಕರ್ತ ಟಿ.ಜಿ.ಅಶ್ವತ್ಥನಾರಾಯಣ ಇನ್ನಿಲ್ಲ

TG Ashwathtanarayana

ಬೆಂಗಳೂರು: ‘ಕನ್ನಡ ಪ್ರಭ’ ಪತ್ರಿಕೆಯ ಸುದ್ದಿ ಸಂಪಾದಕರೂ, ದಿಲ್ಲಿಯ ವಿಶೇಷ ವರದಿಗಾರರೂ ಆಗಿ ಸೇವೆ ಸಲ್ಲಿಸಿ ನಿವೃತ್ತ ಜೀವನ ಸಾಗಿಸುತ್ತಿದ್ದ ಟಿ.ಜಿ.ಅಶ್ವತ್ಥನಾರಾಯಣ (82) ಅವರು ಸೋಮವಾರ (ನ. 11) ಸಾಯಂಕಾಲ ವಯೋಸಹಜ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ವಿಲ್ಸನ್ ಗಾರ್ಡನ್ ಶವಾಗಾರದಲ್ಲಿ ಮಂಗಳವಾರ (ನ. 12) ಬೆಳಗ್ಗೆ ಅಂತ್ಯಸಂಸ್ಕಾರ ನಡೆಯಲಿದೆ.

ʼʼಕೋರಮಂಗಲದಲ್ಲಿ ವಾಸವಿದ್ದ ಟಿ.ಜಿ.ಅಶ್ವತ್ಥನಾರಾಯಣ ಅವರು ವಯೋಸಹಜ ಕಾಯಿಲೆಯಿಂದ ನಿಧನರಾದರುʼʼ ಎಂದು ಮೂಲಗಳು ತಿಳಿಸಿವೆ. ಅವರು ಪತ್ನಿ, ಮಗ ಮತ್ತು ಮಗಳು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ʼಕನ್ನಡಪ್ರಭʼ ಆರಂಭಗೊಂಡ ಮೊದಲ ದಿನದಿಂದ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದ ಅಶ್ವತ್ಥನಾರಾಯಣ ಅವರು, ದಿಲ್ಲಿಯಲ್ಲಿ ಚೀಫ್‌ ಕರೆಸ್ಪಾಂಡೆಂಟ್‌ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು.

ಹಿನ್ನೆಲೆ

ಟಿ.ಜಿ.ಅಶ್ವತ್ಥನಾರಾಯಣ ಅವರು 1942ರಲ್ಲಿ ಕೋಲಾರ ಜಿಲ್ಲೆಯ ಮಾಸ್ತಿ ಗ್ರಾಮದಲ್ಲಿ ಜನಿಸಿದರು. ವಿದ್ಯಾರ್ಥಿಯಾಗಿದ್ದಾಗಲೇ ಅವರ ಬರಹಗಳು ನಾಡಿನ ಪ್ರತಿಷ್ಠಿತ ಪತ್ರಿಕೆಗಳಾದ ಪ್ರಜಾವಾಣಿ, ಜನವಾಣಿಯಲ್ಲೂ ಪ್ರಕಟಗೊಂಡಿದ್ದವು. ಅವರು ತಮ್ಮ ಪತ್ರಿಕೋದ್ಯಮ ವೃತ್ತಿಜೀವನವನ್ನು ʼಜನವಾಣಿʼ ಪತ್ರಿಕೆಯಲ್ಲಿ ಆರಂಭಿಸಿದ್ದರು. ಬಳಿಕ ʼಇಂಡಿಯನ್ ಎಕ್ಸ್ ಪ್ರೆಸ್ʼ ಪತ್ರಿಕೆಯ ಮುಖ್ಯಸ್ಥರಾಗಿದ್ದ ಗೋಯೆಂಕಾ ಅವರು ಕನ್ನಡದಲ್ಲಿ ’ಕನ್ನಡ ಪ್ರಭ’ ಆರಂಭಿಸಿದಾಗ ಮೊದಲ ದಿನದಿಂದಲೂ ಅದರಲ್ಲಿಯೇ ದುಡಿದಿದ್ದರು.

ʼಕನ್ನಡ ಪ್ರಭʼದಲ್ಲಿ ಉಪ-ಸಂಪಾದಕ ಸ್ಥಾನದಿಂದ ವಿವಿಧ ಹುದ್ದೆಗಳನ್ನ ಅಲಂಕರಿಸಿ 4 ದಶಕಗಳ ಕಾಲ ಅದೇ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿ ಸುದ್ದಿ ಸಂಪಾದಕ ಸ್ಥಾನಕ್ಕೇರಿದರು. 6 ವರ್ಷಗಳ ಕಾಲ ‘ಕನ್ನಡ ಪ್ರಭ’ದ ದಿಲ್ಲಿಯ ವಿಶೇಷ ಪ್ರತಿನಿಧಿಯಾಗಿದ್ದರು. ಅದರ ಜತೆ ʼಮೇನಕಾʼ ವಾರಪತ್ರಿಕೆಯ ಮೂಲಕ ಸಿನಿ ವರದಿಗಾರರಾಗಿಯೂ ಜನಪ್ರಿಯರಾಗಿದ್ದರು. ಅವರ ’ಬೆಂಗಳೂರು ಪ್ರದಕ್ಷಿಣೆ/ಅಶ್ವತ್ಥ ಪ್ರದಕ್ಷಿಣೆ’ ಅಂಕಣವು ಪ್ರಸಿದ್ಧವಾಗಿತ್ತು.

ಎರಡು ಕನ್ನಡ ಕೃತಿಗಳನ್ನು ಹಾಗೂ ಮೂರು ಅನುವಾದಿತ ಕೃತಿಗಳನ್ನು ಅವರು ರಚಿಸಿದ್ದರು. ದೂರದರ್ಶನದ ಮೂರು ಧಾರವಾಹಿಗಳಿಗೆ ಚಿತ್ರಕತೆ-ಸಂಭಾಷಣೆ ಒದಗಿಸಿದ ಹೆಗ್ಗಳಿಕೆಯೂ ಅವರದ್ದು. ಖ್ಯಾತ ಸಿನಿಮಾ ನಿರ್ದೇಶಕ ಪುಟ್ಟಣ್ಣ ಕಣಗಾಲರ ’ಮಸಣದ ಹೂ’ ಮತ್ತು ’ಋಣ ಮುಕ್ತಳು’ ಚಿತ್ರಗಳ ಸಂಭಾಷಣೆ ಬರೆದಿದ್ದರು. ಸಿನಿಮಾ ಬರವಣಿಗೆಗೆ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದರು. ಇತ್ತೀಚೆಗೆ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ’ಮನೆಯಂಗಳದಲ್ಲಿ ಮನದುಂಬಿ ನಮನ’ ಕಾರ್ಯಕ್ರಮದಲ್ಲಿ ಗೌರವ ಸಲ್ಲಿಸಲಾಗಿತ್ತು.

ಈ ಸುದ್ದಿಯನ್ನೂ ಓದಿ: Sharda Sinha: ಜನಪ್ರಿಯ ಗಾಯಕಿ ಶಾರದಾ ಸಿನ್ಹಾ ನಿಧನ; ಕಳಚಿತು ಜಾನಪದ ಸಂಗೀತದ ಪ್ರಮುಖ ಕೊಂಡಿ