Wednesday, 11th December 2024

ಕರೋನಾ: ಚಿತ್ರಮಂದಿರಗಳ ಚೇತರಿಕೆ

ಮನರಂಜನೆಯ ರಸದೌತಣ

ಮಹಾಮಾರಿ ಮರೆಯದಿರೋಣ

ವಿಶೇಷ ವರದಿ: ರಂಗನಾಥ್‌ ಕೆ.ಮರಡಿ

ತುಮಕೂರು: ಕರೋನಾ ಸಂಕಷ್ಟದಿಂದ ನಲುಗಿಹೋಗಿದ್ದ ಜಿಲ್ಲೆಯ ಚಿತ್ರಮಂದಿರಗಳು ಮತ್ತೆ ಚೇತರಿಸಿಕೊಳ್ಳುತ್ತಿವೆ. ಒಂದು
ವರ್ಷ ಟಾಕೀಸ್ ಮುಚ್ಚಿದ್ದರಿಂದ ಮಾಲೀಕರು, ಸಿಬ್ಬಂದಿ, ಕಲಾವಿದರ ಬದುಕು ಅತಂತ್ರಗೊಂಡಿತ್ತು.

ಇತ್ತೀಚೆಗೆ ಸರಕಾರ ಚಿತ್ರಮಂದಿರ ತೆರೆಯಲು ಅನುಮತಿ ನೀಡಿದ್ದರಿಂದ ಕಳೆದ ಮೂರ್ನಾಲ್ಕು ವಾರಗಳಿಂದ ಮಂದಿರಗಳು ತೆರೆಯಲ್ಪಟ್ಟಿವೆ. ಕರೋನಾ ಮುಂಜಾಗ್ರತೆ ನಿಯಮಗಳನ್ನು ಕೈಗೊಂಡು ಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗುತ್ತಿದೆ.
ಚಿತ್ರಮಂದಿರಗಳನ್ನೇ ನಂಬಿಕೊಂಡಿದ್ದ ಕಾರ್ಮಿಕರು ಒಂದು ವರ್ಷದಿಂದ ಜೀವನ ನಡೆಸಲು ಸಂಕಷ್ಟಕ್ಕೊಳಗಾಗಿದ್ದರು. ಟಾಕೀಸ್ ಬಂದ್ ಆಗಿದ್ದರಿಂದ ಕಲಾವಿದರಿಗೆ ದಾರಿತೋರದಂತಾಗಿತ್ತು. ಕಳೆದ ವಾರ ರಿಲೀಸ್ ಆಗಿದ್ದ ಮಂಗಳವಾರ ರಜಾದಿನ, ರಾಮಾರ್ಜುನ ಇತರೆ ಸಿನಿಮಾಗಳು ಟಾಕೀಸ್ ಮಾಲೀಕರಿಗೆ ಸ್ವಲ್ಪ ಸಮಧಾನ ಉಂಟುಮಾಡಿತ್ತು.

ಶುಕ್ರವಾರ ಬಿಡುಗಡೆಯಾಗಿರುವ ಪೊಗರು ಸಿನಿಮಾದಿಂದಾಗಿ ಚಿತ್ರಮಂದಿರಗಳು ಚೇತರಿಕೆಯಾಗುವ ಲಕ್ಷಣ ಕಂಡುಬಂದಿದೆ. ಅಭಿಮಾನಿಗಳಿಂದಾಗಿ ಟಾಕೀಸ್ ಹೌಸ್‌ಪುಲ್ ಆಗಿತ್ತು. ಟಾಕೀಸ್ ಮಾಲೀಕರು, ಕಾರ್ಮಿಕರಲ್ಲಿ ಹೊಸ ಹುರುಪು ಮೂಡಿಸಿತ್ತು.

ಸ್ಯಾನಿಟೈಸರ್ ವ್ಯವಸ್ಥೆ: ಗಾಯತ್ರಿ, ಕೃಷ್ಣ, ಪ್ರಶಾಂತ ಮಾರುತಿ, ಜೈಭಾರತ್ ಸೇರಿದಂತೆ ಜಿಲ್ಲೆಯ ಇತರ  ಮಂದಿರಗಳಲ್ಲಿ ಕರೋನಾ ಮುಂಜಾಗ್ರತಾ ನಿಯಮಗಳನ್ನು ಕೈಗೊಳ್ಳಲಾಗಿತ್ತು. ಪ್ರತಿಯೊಬ್ಬ ಪ್ರೇಕ್ಷಕರಿಗೂ ಸ್ಯಾನಿಟೈಸರ್ ಹಾಕಿ ಟಾಕೀಸ್ ಒಳಗಡೆ ಬಿಡಲಾಗುತ್ತಿತ್ತು. ಪ್ರದರ್ಶನಕ್ಕೂ ಮುನ್ನಾ ಇಡೀ ಚಿತ್ರಮಂದಿರಗಳಿಗೆ ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕರೋನಾ ಮರೆತ ಪ್ರೇಕ್ಷಕರು: ಶುಕ್ರವಾರದಿಂದ ಗಾಯತ್ರಿ, ಕೃಷ್ಣ ಮಂದಿರದಲ್ಲಿ ಪೊಗರು ಸಿನಿಮಾ ಪ್ರದರ್ಶನಗೊಳ್ಳುತ್ತಿದ್ದು, ಎರಡು ಟಾಕೀಸ್‌ಗಳು ಪ್ರೇಕ್ಷಕರಿಂದ ಭರ್ತಿಯಾಗಿದ್ದವು. ಬೆರಳೆಣಿಯಷ್ಟು ಮಂದಿ ಮಾತ್ರ ಮಾಸ್ಕ್‌ ಧರಿಸಿದ್ದರು, ಬಹತೇಕ ಮಂದಿ ಮಾಸ್ಕ್ ಇಲ್ಲದೆ ನೂಕುನುಗ್ಗಲಿನಲ್ಲಿ ಕುಣಿದು ಕುಪ್ಪಳಿಸುತ್ತಿದ್ದರು. ಟಾಕೀಸ್ ಸಿಬ್ಬಂದಿ ಎಚ್ಚರಿಸುತ್ತಿದ್ದರೂ ಕೆಲವರು ಕರೋನಾ
ಮರೆತು ಸಂಭ್ರಮಿಸುತ್ತಿದ್ದರು.

ಮಹಾಮಾರಿ ಮರೆಯದಿರಿ: ಜನ ಜೀವನದ ಮೇಲೆ ಸಾಕಷ್ಟು ಒಡೆತ ಉಂಟು ಮಾಡಿರುವ ಕರೋನಾ ಮಹಾಮಾರಿಯನ್ನು ಪ್ರೇಕ್ಷಕರು ಮರೆಯಬಾರದು. ಚಿತ್ರ ವೀಕ್ಷಣೆಗೆ ಬಂದ ಸಂದರ್ಭದಲ್ಲಿ ಮುಂಜಾಗ್ರತೆ ನಿಯಮಗಳನ್ನು ಪಾಲಿಸುವುದು ಒಳಿತು. ಕರೋನಾ ಮರೆತು ಮತ್ತೆ ಚೇತರಿಸಿಕೊಳ್ಳುತ್ತಿರುವ ಜನಜೀವನಕ್ಕೆ ಪುನಃ ಪೆಟ್ಟಾಗದಿರಲಿ ಎಂಬುದು ಹಿರಿಯರ ಆಶಯ.