Friday, 13th December 2024

Bangalore Traffic: ಕೊಡಗಿನಲ್ಲೂ ಬೆಂಗಳೂರನ್ನು ಮೀರಿಸುವ ಟ್ರಾಫಿಕ್‌ ಜಾಮ್! ನಾಲ್ಕು ಗಂಟೆ ರಸ್ತೆಯಲ್ಲೇ ಲಾಕ್!‌ ‌

traffic jam1

ಬೆಂಗಳೂರು: ಲಾಂಗ್‌ ವೀಕೆಂಡ್‌ಗಳು (Long weekend) ಹಾಗೂ ಹಬ್ಬದ ಸಮಯದಲ್ಲಿ ರಾಜ್ಯದ ಬಲುಬೇಡಿಕೆಯ ಪ್ರವಾಸಿ ತಾಣಗಳು (Tourist spots) ಬೆಂಗಳೂರಿನಂತೆಯೇ (Bengaluru news) ಸಂಚಾರ ದಟ್ಟಣೆಯ (Bangalore Traffic Jam) ತಾಣಗಳಾಗಿವೆ. ಇದು ಈ ವಾರಾಂತ್ಯದಲ್ಲಿ ಕಂಡುಬಂದದ್ದು ಮಾತ್ರವಲ್ಲದೆ, ಸಾವಿರಾರು ಮಂದಿ ಪ್ರವಾಸಿಗರಿಗೆ ನರಕದರ್ಶನವನ್ನೇ ಮಾಡಿಸಿತು. ಸಾವಿರಾರು ವಾಹನಗಳು ಬೆಂಗಳೂರು ಪ್ರವೇಶಿಸಲಾಗದೆ ರಸ್ತೆಯಲ್ಲೇ ಕನಿಷ್ಠ ನಾಲ್ಕು ಗಂಟೆ ಲಾಕ್‌ ಆದವು.

ರಾಜಧಾನಿಗೆ ಸಮೀಪವಾದ ಪ್ರವಾಸಿ ತಾಣ ಕೊಡಗಿನಲ್ಲಿ ಎಂದೂ ಇಲ್ಲದ ಜನಜಂಗುಳಿ ಹಾಗೂ ಪ್ರವಾಸಿ ದಟ್ಟಣೆ ಕಂಡುಬಂತು. ಇದೇ ಸನ್ನಿವೇಶ ಚಿಕ್ಕಮಗಳೂರಿನಲ್ಲೂ ಕಂಡುಬಂದಿದೆ. ದೀಪಾವಳಿ, ಕನ್ನಡ ರಾಜ್ಯೋತ್ಸವ, ಶನಿವಾರ ಭಾನುವಾರಗಳ ಸುದೀರ್ಘ ರಜೆ ಒಟ್ಟಾಗಿ ಬಂದ ಪರಿಣಾಮ ವಿಪರೀತ ವಾಹನ ಸಂಚಾರ ದಟ್ಟಣೆಗೂ ಕಾರಣವಾಗಿದೆ. ಕೊಡಗು ಜಿಲ್ಲೆಯ ಮಡಿಕೇರಿ ಮೈಸೂರು ಹೆದ್ದಾರಿಯಲ್ಲಿ ಭಾನುವಾರ ಸಂಜೆ ಹಾಗೂ ರಾತ್ರಿ ರಜೆ ಮುಗಿಸಿ ರಾಜಧಾನಿಗೆ ಮರಳುತ್ತಿದ್ದವರ ಸಂಚಾರ ದಟ್ಟಣೆ ವಿಪರೀತವಾಗಿ, ಟ್ರಾಫಿಕ್‌ ಜಾಮ್‌ನಲ್ಲಿ ವಾಹನ ಸವಾರರು ನಾಲ್ಕಾರು ಗಂಟೆ ಪರದಾಡಿದರು.

ದೀರ್ಘ ವಾರಾಂತ್ಯ ರಜೆಯ ಕಾರಣ ಕರ್ನಾಟಕದ ಜನಪ್ರಿಯ ಪ್ರವಾಸಿ ತಾಣವಾದ ಕೊಡಗಿಗೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡಿದ್ದರು. ಹೀಗಾಗಿ ಭಾನುವಾರ ಭಾರಿ ಟ್ರಾಫಿಕ್ ಜಾಮ್ ಉಂಟಾಯಿತು. ಅತ್ತ ಚಿಕ್ಕಮಗಳೂರಿನಲ್ಲೂ ದೇವೀರಮ್ಮನ ಬೆಟ್ಟದಲ್ಲಿ ಪ್ರವಾಸಿಗರಿಗೆ ದರ್ಶನ ಹಾಗೂ ಹಾಸನದಲ್ಲಿ ಹಾಸನಾಂಬೆಯ ದರ್ಶನಗಳಿಂದಾಗಿ ಇತ್ತ ಭೇಟಿ ನೀಡಿದ್ದ ಲಕ್ಷಾಂತರ ಮಂದಿ ಮರಳುತ್ತಿದ್ದುದರಿಂದ ಹಾಸನ- ಬೆಂಗಳೂರು ರಸ್ತೆಯಲ್ಲೂ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ಈ ಬಗ್ಗೆ ಅನೇಕ ವಾಹನ ಸವಾರರು ಸಾಮಾಜಿಕ ಜಾಲತಾಣ ಎಕ್ಸ್‌ಗೆ ಬಂದು ಆಕ್ರೋಶ ವ್ಯಕ್ತಪಡಿಸಿದರು.

“ಬೆಂಗಳೂರು ಟ್ರಾಫಿಕ್ ಹಾಗಿರಲಿ! ಕೊಡಗಿನಿಂದ ಮೈಸೂರಿಗೆ ತೆರಳುವ ಹೆದ್ದಾರಿಯಲ್ಲಿ ಟ್ರಾಫಿಕ್ ನೋಡಿ, ಅಕ್ಷರಶಃ ಬಂಪರ್-ಟು-ಬಂಪರ್ ಟ್ರಾಫಿಕ್! ನಾನು ರಾಷ್ಟ್ರೀಯ ಹೆದ್ದಾರಿ, ಗ್ರಾಮಗಳ ಬಗ್ಗೆ ಮಾತನಾಡುತ್ತಿದ್ದೇನೆ. ಈ ವರ್ಷದ ಇಡೀ ಕೊಡಗಿಗೆ ಬಂದ ಪ್ರವಾಸಿಗರ ಸಂಖ್ಯೆ ಜತೆ ಹೋಲಿಸಿದರೆ ಈ ವಾರಾಂತ್ಯದಲ್ಲಿ ಆಗಮಿಸಿದ ಪ್ರವಾಸಿಗರ ಸಂಖ್ಯೆ ಅತಿಹೆಚ್ಚಾಗಿದೆ. ಪ್ರವಾಸಿಗರ ಬೃಹತ್ ಹರಿವನ್ನು ನಿಯಂತ್ರಿಸಲು ಕೊಡಗಿನಲ್ಲಿ ಇನ್ನರ್ ಲೈನ್ ಪರ್ಮಿಟ್ (ಐಎಲ್‌ಪಿ) ವ್ಯವಸ್ಥೆ ಪರಿಚಯಿಸಬೇಕು” ಎಂದು ಪ್ರತೀಕ್ ಪೊನ್ನಣ್ಣ ಎಂಬ ಎಕ್ಸ್​​ ಬಳಕೆದಾರರು ಟ್ರಾಫಿಕ್ ಜಾಮ್‌ನ ವೀಡಿಯೊವನ್ನು ಹಂಚಿಕೊಂಡು ಹೇಳಿದ್ದಾರೆ.

ಇಂತಹ ಹೆಚ್ಚಿನ ದಟ್ಟಣೆಯನ್ನು ನಿಭಾಯಿಸಲು ಪ್ರವಾಸಿ ತಾಣಗಳಲ್ಲಿ ಉತ್ತಮ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಬೇಕೆಂದು ಅನೇಕ ಎಕ್ಸ್​ ಬಳಕೆದಾರರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕೆಲಸದ ಮಾನಸಿಕ ಒತ್ತಡ ಹಾಗೂ ಹೊರೆಯಿಂದ ಸ್ವಲ್ಪಮಟ್ಟಿಗೆ ಹೊರಬರಲು ದೀರ್ಘ ವಾರಾಂತ್ಯ ಪ್ರಯೋಜನಕಾರಿಯಾಗುತ್ತದೆ. ಆದರೆ, ಇಂಥ ಅವ್ಯವಸ್ಥೆಗಳಿಂದಾಗಿ ನಮ್ಮ ದೇಶದಲ್ಲಿ ನಾವು ವಾರಾಂತ್ಯ ಅಥವಾ ದೀರ್ಘ ವಾರಾಂತ್ಯಗಳನ್ನು ಆನಂದಿಸಲು ಸಾಧ್ಯವಿಲ್ಲ ಎಂದು ಮತ್ತೊಬ್ಬ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನರ, ಪ್ರವಾಸಿಗರ ಬೇಡಿಕೆಯನ್ನು ನಿರ್ಬಂಧಿಸುವ ಬದಲು ಅದನ್ನು ಈಡೇರಿಸಲು ಯತ್ನಿಸಬೇಕು. ಅದಕ್ಕೆ ತಕ್ಕುದಾದ ಮೂಲಸೌಕರ್ಯ ಸುಧಾರಿಸಬೇಕು. ಹೆದ್ದಾರಿಯನ್ನು ವಿಸ್ತರಿಸಿ ಮತ್ತು ಹೆಚ್ಚಿನ ಕೊಠಡಿಗಳು ಲಭ್ಯವಾಗುವಂತೆ ಮಾಡಬೇಕು. ಪ್ರವಾಸೋದ್ಯಮ ಒಂದು ದೊಡ್ಡ ಉದ್ಯಮವಾಗಿದೆ. ಅದನ್ನು ಪೋಷಿಸಿ ಮತ್ತು ಆ ವಲಯದಲ್ಲಿ ಜನರನ್ನು ಶ್ರೀಮಂತರನ್ನಾಗಿ ಮಾಡಿ ಎಂದು ಜನ ಆಗ್ರಹಿಸಿದ್ದಾರೆ.

ಪ್ರವಾಸಿಗರ ಸಂಖ್ಯೆಯನ್ನು ನಿಯಂತ್ರಿಸುವ ಮೂಲಕ ಪಶ್ಚಿಮ ಘಟ್ಟಗಳಲ್ಲಿ ಪ್ರವಾಸೋದ್ಯಮವನ್ನು ನಿರ್ಬಂಧಿಸಲು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಈ ಹಿಂದೆ ಯೋಜಿಸಿತ್ತು. ಬೆಂಗಳೂರು ಮತ್ತು ಚೆನ್ನೈನಿಂದ ಅನೇಕ ಜನರು ಗಿರಿಧಾಮಕ್ಕೆ ಬರುತ್ತಾರೆ. ಇದರಿಂದಾಗಿ ಪರಿಸರಕ್ಕೆ ಅಪಾಯವಿದೆ ಎಂಬ ಆತಂಕದಿಂದ ಇಲಾಖೆ ಪ್ರವಾಸೋದ್ಯಮವನ್ನು ನಿರ್ಬಂಧಿಸಲು ಚಿಂತನೆ ಮಾಡಿತ್ತು. ಆದರೆ, ಇನ್ನೂ ನಿರ್ಬಂಧ ವಿಧಿಸಿಲ್ಲ.

ಇದನ್ನೂ ಓದಿ: Bengaluru Rains: ಬೆಂಗಳೂರಿನಲ್ಲಿ ಟ್ರಾಫಿಕ್‌ ಜಾಮ್‌, ರಸ್ತೆಯಲ್ಲೇ ಕಾರು ಬಿಟ್ಟು ಮನೆಗೆ ನಡೆದ ಜನ; ವಿಡಿಯೊ ಇದೆ