ಬೆಂಗಳೂರು: ಉಪೇಂದ್ರ ಅವರು ನಟಿಸಿ, ನಿರ್ದೇಶಿಸಿರುವ ಬಹು ನಿರೀಕ್ಷಿತ ‘UI’ ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದ್ದು, ತಮ್ಮ ಹುಟ್ಟುಹಬ್ಬದ ದಿನ UI ಚಿತ್ರದ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಮಾಹಿತಿ ಹಂಚಿಕೊಂಡಿದ್ದಾರೆ. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ನಿವಾಸದಲ್ಲಿ ಆಯೋಜಿಸಲಾಗಿದ್ದ ʼUIʼ ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ನಾನು ಬಹಳ ವರ್ಷಗಳ ನಂತರ ನಿರ್ದೇಶಿಸಿರುವ ʼUIʼ ಚಿತ್ರ ಬಿಡುಗಡೆಯ ಹಂತಕ್ಕೆ ತಲುಪಿದೆ. ಚಿತ್ರವನ್ನು (UI Movie) ಅದ್ಧೂರಿಯಾಗಿ ನಿರ್ಮಿಸಿರುವ ನಿರ್ಮಾಪಕರು ಅಕ್ಟೋಬರ್‌ನಲ್ಲಿ ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ನನ್ನ ಹುಟ್ಟುಹಬ್ಬಕ್ಕೆ ಹಾರೈಸಿರುವ ಪ್ರತಿಯೊಬ್ಬರಿಗೂ ಧನ್ಯವಾದ. ಐದಾರು ಮದುವೆ ಆಗಬಹುದು. ಆದರೆ ಒಂದು ಚಿತ್ರ ನಿರ್ದೇಶನ ಮಾಡುವುದು ಅದಕ್ಕಿಂತ ಕಷ್ಟ. ನನ್ನ ನಿರ್ದೇಶನದ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿರುವ ನಿರ್ಮಾಪಕರು ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡುವ ಪ್ರಯತ್ನದಲ್ಲಿದ್ದಾರೆ ಎಂದು ಹೇಳಿದ್ದಾರೆ.
ತಾಂತ್ರಿಕ(ಟೆಕ್ನಿಕಲ್) ಕಾರ್ಯಗಳು ಹೆಚ್ಚಾಗಿರುವುದು ಹಾಗೂ ಸಿನಿಮಾ ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ಬರುತ್ತಿರುವುದರಿಂದ ಬಿಡುಗಡೆ ಸ್ವಲ್ಪ ವಿಳಂಬವಾಗುತ್ತಿದೆ. ಜನರು ಯಾವಗಲೂ ನನಗೆ ತಲೆಯಲ್ಲಿ ಹುಳ ಬಿಡುತ್ತೀರಾ ಎನ್ನುತ್ತಾರೆ. ಆದರೆ ಈ ಚಿತ್ರದಲ್ಲಿ ಹುಳ ತೆಗೆಯುವ ಕೆಲಸ ಮಾಡುತ್ತಿದ್ದೇನೆ. ಪ್ರೇಕ್ಷಕರು ನಮಗಿಂತ ತುಂಬಾ ಬುದ್ಧಿವಂತರು. ಅವರ ನಿರೀಕ್ಷೆ ಹೆಚ್ಚು ಇರುತ್ತದೆ. ಅದಕ್ಕೆ ತಕ್ಕ ಹಾಗೆ ಸಿನಿಮಾ ಮಾಡುವ ಜವಾಬ್ದಾರಿ ನಮ್ಮ ಮೇಲಿರುತ್ತದೆ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಕಲಾ ನಿರ್ದೇಶಕ ಶಿವಕುಮಾರ್ ಸೇರಿದಂತೆ ಎಲ್ಲಾ ತಂತ್ರಜ್ಞರ ಹಾಗೂ ಕಲಾವಿದರ ಸಹಕಾರದಿಂದ “UI” ಉತ್ತಮ ಚಿತ್ರವಾಗಿ ಬರಲಿದೆ ಎಂದಿದ್ದಾರೆ.
Here it is…..
— Upendra (@nimmaupendra) September 18, 2024
The Making of #UiTheMovie ❤🔥https://t.co/nyZUghEIcF
A Mad cinematic experience awaits this October! 🔥#UppiDirects #Upendra @Upendra @ReeshmaNanaiah #GManoharan @LahariFilms @VENUSEnterrtainers @K.P.Sreekanth #NaveenManoharan @AjaneeshLoknath #LahariFilms…
ಉಪೇಂದ್ರ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿ ಮಾತನಾಡಿದ ನಿರ್ಮಾಪಕ ಜಿ.ಮನೋಹರನ್, ಇದು ಪ್ಯಾನ್ ಇಂಡಿಯಾ ಚಿತ್ರವಾಗಿರುವುದರಿಂದ ಬಿಡುಗಡೆ ಸ್ವಲ್ಪ ತಡವಾಯಿತು. ಅಕ್ಟೋಬರ್‌ನಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ತಿಳಿಸಿದರು.
ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಮಾತನಾಡಿ, 25 ವರ್ಷಗಳ ನನ್ನ ಸಿನಿ ಜರ್ನಿಯಲ್ಲಿ ಶಿವಣ್ಣ ಅವರ ಜೊತೆಗಿನ ಒಡನಾಟ ಹಾಗೂ ಉಪೇಂದ್ರ ಅವರು ನಮ್ಮ ಬ್ಯಾನರ್‌ನ ಚಿತ್ರವನ್ನು ನಿರ್ದೇಶಿಸಿರುವುದು ನನಗೆ ತುಂಬಾ ಖುಷಿಕೊಟ್ಟ ವಿಚಾರ. ಎಲ್ಲರಂತೆ ನಾನು ಉಪೇಂದ್ರ ಅವರ ನಿರ್ದೇಶನಕ್ಕೆ ಅಭಿಮಾನಿ. ಈ ಚಿತ್ರವನ್ನು ತೆರೆಯ ಮೇಲೆ ನೋಡುವ ಕಾತುರ ಅವರ ಅಭಿಮಾನಿಗಳಂತೆ ನನಗೂ ಇದೆ. ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡುತ್ತೇವೆ ಎಂದರು.
ಈ ಸುದ್ದಿಯನ್ನೂ ಓದಿ | Actor Upendra: ʼಯುಐʼ ಚಿತ್ರ ಬಿಡುಗಡೆ ಬಗ್ಗೆ ಉಪೇಂದ್ರ ಹೇಳಿದ್ದೇನು?
ಸಹ ನಿರ್ಮಾಪಕರಾದ ನವೀನ್, ತುಳಸಿರಾಮ ನಾಯ್ಡು(ಲಹರಿ ವೇಲು), ನಾಯಕಿ ರೀಶ್ಮಾ ನಾಣಯ್ಯ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ಕಲಾ ನಿರ್ದೇಶಕ ಶಿವಕುಮಾರ್ ಅವರು “UI” ಚಿತ್ರದ ಬಗ್ಗೆ ಮಾತನಾಡಿದರು. ಇದೇ ಸಂದರ್ಭದಲ್ಲಿ ʼUIʼ ಚಿತ್ರದ ವಿಭಿನ್ನ ಪೋಸ್ಟರ್ ಸಹ ಬಿಡುಗಡೆಯಾಗಿದೆ.