Wednesday, 11th December 2024

HD Kumaraswamy: ಜಾತಿಗಣತಿ ವರದಿ ಇಟ್ಟುಕೊಂಡು ವಿಧಾನಸಭೆ ವಿಸರ್ಜಿಸಿ, ಚುನಾವಣೆ ಎದುರಿಸಿ; ಕುಮಾರಸ್ವಾಮಿ ಸವಾಲ್

HD Kumaraswamy

ಬೆಂಗಳೂರು: ಮುಡಾ ಹಗರಣದಿಂದ (MUDA Scam) ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಜಾತಿಗಣತಿ ವಿಷಯವನ್ನು ಮುನ್ನಲೆಗೆ ತಂದು ನಾಟಕ ಆಡಲಾಗುತ್ತಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ದೂರಿದ್ದಾರೆ. ತಮ್ಮ ನಿವಾಸದ ಬಳಿ ಸೋಮವಾರ ಬೆಳಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಗುರುತರ ಆರೋಪಗಳು ಕೇಳಿ ಬಂದಾಗಲೆಲ್ಲ ಜನರ ಗಮನ ಬೇರೆಡೆಗೆ ಹೊರಳಿಸಲು ತಂತ್ರಗಾರಿಕೆ ಮಾಡುತ್ತಿದ್ದಾರೆ. ಈಗ ಮುಡಾ ಹಗರಣದ ಮೂಲಕ ಜನರ ದಿಕ್ಕು ತಪ್ಪಿಸಲು ಜಾತಿಗಣತಿಯ ವಿಚಾರವನ್ನು ಮುಂದಕ್ಕೆ ತಂದಿದೆ ಎಂದು ಆರೋಪಿಸಿದರು.

ಈ ಸುದ್ದಿಯನ್ನೂ ಓದಿ | Namo Bharat Train: ಬೆಂಗಳೂರಿಂದ ಮೈಸೂರು, ತುಮಕೂರಿಗೆ ಶೀಘ್ರವೇ ಹೈ ಸ್ಪೀಡ್‌ ನಮೋ ಭಾರತ್‌ ಎಕ್ಸ್‌ಪ್ರೆಸ್‌ ರೈಲು

ಚುನಾವಣೆಗೆ ಮೊದಲೇ ವರದಿ ಕೊಟ್ಟಿದ್ದರು!

ಕಾಂತರಾಜು ಆಯೋಗ ರಚನೆ ಮಾಡಿದ್ದು 10 ವರ್ಷಗಳ ಹಿಂದೆ. ಈಗ ಅ ವರದಿಗೆ 10 ವರ್ಷ ಆಗಿ ಹೋಗಿದೆ. 10 ವರ್ಷಗಳಲ್ಲಿ ಅನೇಕ ಬೆಳವಣಿಗೆಗಳು ಆಗಿವೆ. ಹಳೆಯ ಜಾತಿಗಣತಿ ವರದಿಯನ್ನು ಇಷ್ಟು ದಿನ ಯಾಕೆ ಬಿಡುಗಡೆ ಮಾಡಿರಲಿಲ್ಲ? ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಪ್ರಶ್ನಿಸಿದರು.

ಕುಮಾರಸ್ವಾಮಿ ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡಲು ಬಿಡಲಿಲ್ಲ ಎಂದು ನನ್ನ ಮೇಲೆ ಆರೋಪ ಮಾಡುತ್ತಲೇ ಇದ್ದಾರೆ. ಲೋಕಸಭೆ ಚುನಾವಣೆಗೆ ಮೊದಲೇ ಸಿದ್ದರಾಮಯ್ಯ ಅವರ ಕೈಗೆ ಜಾತಿಗಣತಿ ವರದಿ ಕೊಡಲಾಗಿದೆ, ಅಲ್ಲವೇ? ಲೋಕಸಭೆ ‌ಚುನಾವಣೆ ಮೊದಲೇ ವರದಿ ಪಡೆದರೂ ಇಷ್ಟು ದಿನಗಳವರೆಗೂ ಅದರ ಬಗ್ಗೆ ಸದ್ದೇ ಇರಲಿಲ್ಲ, ಯಾಕೆ? ಎಂದು ತೀಕ್ಷ್ಣವಾಗಿ ಕೇಳಿದರು.

ಮುಡಾ ಅಕ್ರಮದಿಂದ ರಕ್ಷಣೆ ಪಡೆಯಲು ಯತ್ನ

ಈಗ ಮುಡಾ ಹಗರಣದ ಹಿನ್ನಲೆಯಲ್ಲಿ ಜನರನ್ನು ದಾರಿ ತಪ್ಪಿಸಲು ಮತ್ತು ಜಾತಿಗಣತಿ ವರದಿ ಇಟ್ಟುಕೊಂಡು ಮುಡಾ ಅಕ್ರಮದಿಂದ ರಕ್ಷಣೆ ಪಡೆಯುವ ಕೆಲಸಕ್ಕೆ ಹೊರಟಿದ್ದಾರೆ. 10 ವರ್ಷಗಳ ಹಿಂದೆ ಮಾಡಿರುವ ಈ ಜಾತಿಗಣತಿ ವರದಿಯಿಂದ ಯಾವುದೇ ಸಮುದಾಯಕ್ಕೆ ಅನುಕೂಲಗಳು ಆಗುವುದಿಲ್ಲ. ಮುಡಾ ಹಗರಣವನ್ನು ಮರೆಮಾಚಿಕೊಳ್ಳಲು ಈಗ ಜಾತಿಗಣತಿ ವಿಷಯವನ್ನು ಮುನ್ನೆಲೆಗೆ ತಂದಿದ್ದಾರೆ. ಇಷ್ಟು ದಿನ ಇಲ್ಲದೇ ಇರೋದು ಈಗ ಯಾಕೆ ಮುನ್ನಲೆಗೆ ತರಲು ಹೊರಟಿದ್ದಾರೆ ಎಂದು ನೇರ ಆರೋಪ ಮಾಡಿದರು.

ಈ ಸುದ್ದಿಯನ್ನೂ ಓದಿ | Tirupati Laddu: ಬೆಂಗಳೂರಿನಲ್ಲಿ ತಿರುಪತಿ ಲಡ್ಡು ವಿತರಣೆ ತಾತ್ಕಾಲಿಕ ಸ್ಥಗಿತ

ಜಾತಿಗಣತಿ ವರದಿ ಜಾರಿ ಮಾಡದಂತೆ ಸಿದ್ದರಾಮಯ್ಯ ಅವರನ್ನು ಹಿಡಿದುಕೊಂಡವರು ಯಾರು? ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ವರದಿ ಸ್ವೀಕಾರ ಮಾಡಿ ಎಷ್ಟು ದಿನವಾಯಿತು? ಇನ್ನೂ ಯಾಕೆ ಇಟ್ಟುಕೊಂಡು ಕೂತಿದ್ದಾರೆ? ಇಷ್ಟು ದಿನ ಸದ್ದುಗದ್ದಲ ಇರಲಿಲ್ಲ. ಈಗ ಈ ವಿಷಯ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಇವರು ಮಾಡಿರುವ ತಪ್ಪುಗಳನ್ನು ಮುಚ್ಚಿಕೊಳ್ಳೋಕೆ‌ ಜಾತಿಯಂತಹ ವಿಷಯಗಳನ್ನು ಮುಂದೆ ಬಿಟ್ಟುಕೊಂಡು ಹೊರಟಿದ್ದಾರೆ ಎಂದು ಸರ್ಕಾರದ ವಿರುದ್ದ ಕುಮಾರಸ್ವಾಮಿ ಅವರು ಕಿಡಿಕಾರಿದರು.

ಜಾತಿ ಗಣತಿ ವರದಿ ಇಟ್ಟುಕೊಂಡು ಚುನಾವಣೆಗೆ ಹೋಗಿ

ಜಾತಿಗಣತಿ ವರದಿ ಇಟ್ಟುಕೊಂಡು ರಾಜಕೀಯ ಮಾಡುತ್ತೀರಿ, ಈ ವಿಷಯ ಇಟ್ಟುಕೊಂಡು ಚುನಾವಣೆ ಹೋಗಿ ನೋಡೋಣ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ ಕುಮಾರಸ್ವಾಮಿ ಅವರು, ಸರ್ಕಾರ ಹೋದರೆ ಹೋಗಲಿ ಎನ್ನುವ ಬದಲಿಗೆ ಮುಕ್ತವಾಗಿ ಘೋಷಣೆ ಮಾಡಿ ಚುನಾವಣೆಗೆ ಹೋಗಲಿ ಎಂದರು.

ಸರ್ಕಾರ ಹೋದರೆ ಹೋಗಲಿ, ಜಾತಿಗಣತಿ ಜಾರಿ ಮಾಡಿ ಎಂಬ ಬಿ.ಕೆ. ಹರಿಪ್ರಸಾದ್‌ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಜಾತಿಗಣತಿ ವಿಷಯ ಇಟ್ಟುಕೊಂಡು ಸರ್ಕಾರ ವಿಸರ್ಜನೆ ಮಾಡಿ ಚುನಾವಣೆಗೆ ಹೋಗಿ ನೋಡೋಣ. ಹರಿಪ್ರಸಾದ್‌ ಅವರು ಈ ರೀತಿ ಹೇಳುವುದು ಏನಿದೆ? ಅದರ ಬದಲು ವಿಧಾನಸಭೆಯನ್ನು ವಿಸರ್ಜನೆ ಮಾಡಿ ಚುನಾವಣೆಗೆ ಹೋಗಬಹುದಲ್ಲವೆ? ಎಂದು ಕೇಂದ್ರ ಸಚಿವರು ಸವಾಲು ಹಾಕಿದರು.

ಸಿದ್ದರಾಮಯ್ಯನವರು ಹಾಗೂ ಕಾಂಗ್ರೆಸ್ ನಾಯಕರು ಜಾತಿಗಣತಿ ವರದಿ ಇಟ್ಟುಕೊಂಡು ನಾವು ಅನುಷ್ಠಾನ ಮಾಡುತ್ತೇವೆ, ನಮಗೆ ಇನ್ನೊಂದು ಅವಕಾಶ ಕೊಡಿ ಅಂತ ಜನರ ಮುಂದೆ ಹೋಗಬಹುದು. ದೆಹಲಿಯಲ್ಲಿ ರಾಹುಲ್ ಗಾಂಧಿ ಒಂದು ಹೇಳುತ್ತಾರೆ. ಇಲ್ಲಿ ಇವರು ಇನ್ನೊಂದು ಹೇಳುತ್ತಾರೆ. ಸರ್ಕಾರದಲ್ಲಿ ಆಗಿರುವ ಹಲವಾರು ತಪ್ಪುಗಳನ್ನು ಮುಚ್ಚಿಕೊಳ್ಳೋದಕ್ಕೆ ಜಾತಿಗಣತಿ ವಿಷಯವನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ಕುಮಾರಸ್ವಾಮಿ ಅವರು ಆರೋಪ ಮಾಡಿದರು.

ಈ ಸುದ್ದಿಯನ್ನೂ ಓದಿ | Gold Price Today: ಕೊನೆಗೂ ಇಳಿದ ಚಿನ್ನದ ದರ; ಇಂದು ಅಗ್ಗವಾಗಿದ್ದು ಇಷ್ಟು

ರಾಜ್ಯದಲ್ಲಿ ಅಭಿವೃದ್ಧಿ ಇಲ್ಲ. ಇದೆಲ್ಲವನ್ನು ಜನರ ಮನಸಿನಿಂದ ಡೈವರ್ಟ್ ಮಾಡೋದಕ್ಕೆ ಈ ಡ್ರಾಮಾಗಳು ಪ್ರಾರಂಭ ಮಾಡಿದ್ದಾರೆ ಎಂದು ಅವರು ದೂರಿದರು.