Sunday, 1st December 2024

Pralhad Joshi: ಗೋಪಾಲ್ ಜೋಶಿ ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಿ: ಜೋಶಿ

Pralhad Joshi

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಸ್ಪಷ್ಟಪಡಿಸಿದ್ದಾರೆ. ನವದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ, ಬೆಂಗಳೂರಿನಲ್ಲಿ ದಾಖಲಾಗಿರುವ ಬಿಜೆಪಿ ಟಿಕೆಟ್ ವಂಚನೆ ಪ್ರಕರಣದ ಕುರಿತು ಹೀಗೆ ಸ್ಪಷ್ಟನೆ ನೀಡಿದರು.

ಮೊದಲನೆಯದಾಗಿ ನನಗೆ ಯಾರೂ ಸಹೋದರಿ ಇಲ್ಲ. ಇನ್ನು, ನನ್ನ ತಾಯಿಗೆ ಗೋಪಾಲ್ ಜೋಶಿ ಸೇರಿ ನಾಲ್ವರು ಮಕ್ಕಳು. ಆದರೆ, ಗೋಪಾಲ್ ಜೋಶಿ ಅವರೊಂದಿಗೆ ಕಳೆದ 32 ವರ್ಷಗಳಿಂದ ತಮ್ಮ ಸಂಪರ್ಕ, ಸಂಬಂಧವಿಲ್ಲ ಎಂದು ಆರೋಪವನ್ನು ತಳ್ಳಿ ಹಾಕಿದರು.

ಗೋಪಾಲ್ ಜೋಶಿ ಮಾತ್ರವಲ್ಲ ಯಾರೇ ತಮ್ಮ ಕೆಲಸ ಕಾರ್ಯಗಳಿಗೆ ನನ್ನ ಹೆಸರು ದುರುಪಯೋಗ ಪಡಿಸಿಕೊಳ್ಳುತ್ತಿದ್ದರೆ ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಪ್ರಲ್ಹಾದ ಜೋಶಿ ಪುನರುಚ್ಚರಿಸಿದರು.

ಈ ಸುದ್ದಿಯನ್ನೂ ಓದಿ | R Ashok: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ, ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌: ಆರ್‌. ಅಶೋಕ್‌

ಯಾರೊಂದಿಗೂ ನನ್ನ ಹೆಸರು ಉಲ್ಲೇಖಿಸದಂತೆ 2013 ರಲ್ಲೇ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ ತಡೆಯಾಜ್ಞೆ ನೀಡಿದೆ. ನ್ಯಾಯಾಲಯದ ಅಫಿಡವಿಟ್‌ನಲ್ಲಿ ಅದರ ವಿವರವಿದೆ ಎಂದು ದಾಖಲೆ ಸಮೇತ ಸ್ಪಷ್ಟನೆ ನೀಡಿದರು.

ಇನ್ನು, ಬೆಂಗಳೂರಿನಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ವಿಜಯಲಕ್ಷ್ಮಿ ನನ್ನ ಸಹೋದರಿ ಎಂದು ಉಲ್ಲೇಖಿಸಿದ್ದಾರೆ. ವಾಸ್ತವವಾಗಿ ನನಗೆ ಸಹೋದರಿಯೇ ಇಲ್ಲ. ಇದನ್ನೆಲ್ಲ ನೋಡಿದರೆ ಎಲ್ಲ ಬೋಗಸ್ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ ಎಂದು ಹೇಳಿದರು.

ಗೋಪಾಲ್ ಜೋಶಿ ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಿ

ಈ ಪ್ರಕರಣದಲ್ಲಿ ನನಗೂ, ನನ್ನ ಕುಟುಂಬಕ್ಕೂ ಹಾಗೂ ಬಿಜೆಪಿ ಪಕ್ಷಕ್ಕೂ ಸಹ ಸಂಬಂಧವಿಲ್ಲ. ಗೋಪಾಲ್ ಜೋಶಿ ತಪ್ಪೆಸಗಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ ಎಂದು ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು.

ತನಿಖೆ ಆಗಬೇಕಿದೆ

ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಗೋಪಾಲ್ ಜೋಶಿ ಹಣ ಪಡೆದಿದ್ದಾರೋ ಇಲ್ಲವೋ ಗೊತ್ತಿಲ್ಲ. ಇದು ತನಿಖೆಯಿಂದ ಸಾಬೀತಾಗಬೇಕಿದೆ ಅಷ್ಟೇ ಎಂದು ಪ್ರಲ್ಹಾದ್‌ ಜೋಶಿ ಪ್ರತಿಕ್ರಿಯಿಸಿದರು

ಬೌದ್ಧಿಕ ದಿವಾಳಿತನ ಪ್ರದರ್ಶಿಸುತ್ತಿದೆ ಕಾಂಗ್ರೆಸ್: ಈ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷ ಅತ್ಯಂತ ಬೌದ್ಧಿಕ ದಿವಾಳಿತನ ಪ್ರದರ್ಶನ ಮಾಡುತ್ತಿದೆ ಎಂದು ಜೋಶಿ ಕಿಡಿ ಕಾರಿದರು.

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿಯನ್ನು ಬಂಧಿಸಬೇಕೆನ್ನುವ ಮೂಲಕ ಕಾಂಗ್ರೆಸ್ ಮುಠ್ಠಾಳತನ ತೋರುತ್ತಿದೆ. ಸತ್ಯಾಸತ್ಯತೆ ವಿಮರ್ಶೆ ಮಾಡದೆ ಒಂದು ರೀತಿ ಹುಂಬತನ ಪ್ರದರ್ಶಿಸುತ್ತಿದೆ ಎಂದು ಲೇವಡಿ ಮಾಡಿದರು.

ಈ ಸುದ್ದಿಯನ್ನೂ ಓದಿ | Chikkaballapur News: ನ.24 ರಂದು ಆದಿಕವಿ, ವಾಗ್ದೇವಿ ಪುರಸ್ಕಾರ ಪ್ರದಾನ ಸಮಾರಂಭ

ನನ್ನ ಕೈ ಮಸಿ ಬಳಿದುಕೊಂಡಿಲ್ಲ

ಕಳೆದ 25 ವರ್ಷಗಳಿಂದ ರಾಜಕೀಯ ಜೀವನದಲ್ಲಿ ಇದ್ದೇನೆ. ಒಂದು ಕಾಲದಲ್ಲಿ “ಕೋಲ್ ಎಂದರೆ ಭ್ರಷ್ಟಾಚಾರ, ಹಗರಣದ್ದೇ ಸದ್ದು ಮಾಡುತ್ತಿತ್ತು”. ಇಂಥ ಒಂದು ಖಾತೆ ನಿರ್ವಹಿಸಿದಾಗ್ಯೂ ಯಾವತ್ತೂ ಕೈ ಮಸಿ ಮಾಡಿಕೊಂಡಿಲ್ಲ. ಇಂದಿಗೂ ಶುದ್ಧ ಹಸ್ತನಾಗಿದ್ದೇನೆ ಎಂದು ಸಚಿವ ಪ್ರಲ್ಹಾದ ಜೋಶಿ ಕಾಂಗ್ರೆಸ್ಸಿಗರಿಗೆ ತಿರುಗೇಟು ನೀಡಿದರು.