Wednesday, 11th December 2024

Pralhad Joshi: ಹೈಕಮಾಂಡ್ ರಾಜೀನಾಮೆ ಕೇಳಿದರೆ ರಾಹುಲ್ ಗಾಂಧಿ ಕೊಡಲಿ ಅಂತಾರೆ ಸಿದ್ದರಾಮಯ್ಯ: ಜೋಶಿ ವ್ಯಂಗ್ಯ

Pralhad Joshi

ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ರಾಜೀನಾಮೆ ಕೇಳಿದರೆ ಸಿದ್ದರಾಮಯ್ಯ ಅವರು ವಿರೋಧ ಪಕ್ಷ ನಾಯಕ ಸ್ಥಾನಕ್ಕೆ ರಾಹುಲ್ ಗಾಂಧಿ (Rahul Gandhi) ರಾಜೀನಾಮೆ ಕೊಡಲಿ ಎನ್ನುತ್ತಾರೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಹೀಗೆ ಕಾಂಗ್ರೆಸ್ಸಿಗರ ಕಾಲೆಳೆದರು.

ಬೆಂಗಳೂರಿನಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹೈ ಕಮಾಂಡೇ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವ ನೈತಿಕತೆ ಉಳಿಸಿಕೊಂಡಿಲ್ಲ ಎಂದು ಚಾಟಿ ಬೀಸಿದರು.

ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ರಾಬರ್ಟ್ ವಾದ್ರಾ ಎಲ್ಲಾ ಬೇಲ್ ಮೇಲೆ ಇದ್ದಾರೆ. ಹೀಗಿರುವಾಗ ಕಾಂಗ್ರೆಸ್ ಹೈಕಮಾಂಡ್ ಹೇಗೆ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುತ್ತದೆ? ಎಂದು ಪ್ರಶ್ನಿಸಿದರು.

ಈ ಸುದ್ದಿಯನ್ನೂ ಓದಿ | HD Kumaraswamy: ವಿಜ್ಞಾನಿಗಳು ದೇಶದ ಆಸ್ತಿಯಷ್ಟೇ ಅಲ್ಲ, ಹೆಮ್ಮೆ: ಎಚ್.ಡಿ. ಕುಮಾರಸ್ವಾಮಿ

ಕಾಂಗ್ರೆಸ್ ಹೈಕಮಾಂಡ್‌ನ ಈ ನಾಯಕರೇ ಪ್ರಖರ ಮತ್ತು ಗಹನವಾದಂತಹ ಆರ್ಥಿಕ ಅಪರಾಧ ಪ್ರಕರಣದಲ್ಲಿ ಬೇಲ್ ಮೇಲೆ ಹೊರಗಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ಕೊಡಿ ಎನ್ನುವ ನೈತಿಕತೆ ಹೊಂದಿಲ್ಲ ಎಂದು ಜೋಶಿ ಲೇವಡಿ ಮಾಡಿದರು.

ಕಾಂಗ್ರೆಸ್ ಹೈ ಅಲ್ಲ ಲೋ ಕಮಾಂಡ್

ಭ್ರಷ್ಟಾಚಾರದಲ್ಲಿ ಮುಳುಗಿ ಕಾಂಗ್ರೆಸ್ ಹೈ ಕಮಾಂಡ್ ಲೋ ಕಮಾಂಡ್ ಆಗಿಬಿಟ್ಟಿದೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳಿದರೆ ರಾಹುಲ್ ಗಾಂಧಿ ಅವರು ಮೊದಲು ವಿರೋಧ ಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಬಳಿಕ ನನ್ನನ್ನು ಕೇಳಿರೆಂದು ತಿರುಗಿ ಹೇಳುತ್ತಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ಕೊಡಿ ಎನ್ನುವ ಸ್ಥೈರ್ಯ ತೋರುತ್ತಿಲ್ಲ. ಸಂಪೂರ್ಣ ನೈತಿಕತೆ ಕಳೆದುಕೊಂಡಿದ್ದಾರೆ ಕಾಂಗ್ರೆಸ್ ನಾಯಕರು ಎಂದು ಜೋಶಿ ಹೇಳಿದರು.

ಸಿಎಂ ಭಂಡತನ ಪ್ರದರ್ಶನ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡದೆ ಭಂಡತನ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದ ಸಚಿವ ಪ್ರಲ್ಹಾದ್‌ ಜೋಶಿ, ಪಕ್ಷದಲ್ಲಿ ಬೆಲೆ, ಗೌರವ-ಮರ್ಯಾದೆ, ನೈತಿಕತೆ ಏನಾದರೂ ಇದ್ದರೆ ಮೊದಲು ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ ಎಂದು ಆಗ್ರಹಿಸಿದರು.

ಮುಡಾ ಹಗರಣದ ತನಿಖೆ ಬಳಿಕ ಸಿಎಂ ಸಿದ್ದರಾಮಯ್ಯ ಶುದ್ಧರು ಎಂದಾದರೆ ಮತ್ತೆ ಮುಖ್ಯಮಂತ್ರಿ ಆಗಲಿ. ಆದರೆ, ಈಗ ರಾಜೀನಾಮೆ ಕೊಡಲಿ ಎಂದು ಪ್ರಲ್ಹಾದ್‌ ಜೋಶಿ ತಿಳಿಸಿದರು.

ಕಾಂಗ್ರೆಸ್‌ನಲ್ಲಿ ಸಿಎಂ ಆಗೋರು ಬೇರೆ ಯಾರೂ ಇಲ್ಲವೇ?

ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಆಗೋರು ಬೇರೆ ಯಾರೂ ಇಲ್ಲವೇ? ಎಂದು ಪ್ರಶ್ನಿಸಿದ ಸಚಿವ ಜೋಶಿ, ಕಾಂಗ್ರೆಸ್ ಒಬಿಸಿ ನಾಯಕರಿಗೆ ಹಿಂದಿನಿಂದಲೂ ಅಧಿಕಾರ ವಂಚಿತರನ್ನಾಗಿ ಮಾಡುತ್ತಲೇ ಇದೆ ಎಂದು ಆರೋಪಿದರು.

ಈ ಸುದ್ದಿಯನ್ನೂ ಓದಿ | Iran Israel War: ಇರಾನ್-ಇಸ್ರೇಲ್‌ ಬಳಿ ಎಂಥೆಂಥ ಶಸ್ತ್ರಾಸ್ತ್ರಗಳಿವೆ? ಏನಿವುಗಳ ಸಾಮರ್ಥ್ಯ?

ಕಾಂಗ್ರೆಸ್ ಸರ್ಕಾರ ಬೀಳಿಸುವ ಉದ್ದೇಶ ಬಿಜೆಪಿಗಿಲ್ಲ

ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಅಥವಾ ಬೀಳಿಸುವ ಯಾವುದೇ ಉದ್ದೇಶ ಬಿಜೆಪಿಗಿಲ್ಲ. ಆದರೆ, ಭ್ರಷ್ಟಾಚಾರದ ವಿರುದ್ಧ ನ್ಯಾಯಯುತ ಹೋರಾಟದಿಂದ ಬಿಜೆಪಿ ಹಿಂದೆ ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಸ್ಪಷ್ಟಪಡಿಸಿದರು.