Wednesday, 11th December 2024

ರಾಮ ಮಂದಿರ ನಿರ್ಮಾಣ: ರಾಜ್ಯದಲ್ಲಿ ಫೆ.5 ರವರೆಗೆ ದೇಣಿಗೆ ಸಂಗ್ರಹ- ವಿಹಿಂಪ

ಹುಬ್ಬಳ್ಳಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ನಿಟ್ಟಿನಲ್ಲಿ, ದೇಶದಾದ್ಯಂತ ಇದೇ ತಿಂಗಳ 15 ರಿಂದ ಫೆಬ್ರವರಿ 27 ರವರೆಗೆ ದೇಣಿಗೆ ಸಂಗ್ರಹ ಅಭಿಯಾನ ನಡೆಯಲಿದ್ದು, ರಾಜ್ಯದಲ್ಲಿ ಫೆ.5 ರವರೆಗೆ ನಡೆಯಲಿದೆ ಎಂದು ವಿಎಚ್ ಪಿ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಅಡಿಯಲ್ಲಿ, ಜ.15 ರಿಂದ ಫೆಬ್ರವರಿ 5ರವರೆಗೆ, ಸುಮಾರು 27,500 ಗ್ರಾಮಗಳು ಸೇರಿದಂತೆ 90 ಲಕ್ಷ ರಾಮ ಭಕ್ತರನ್ನು ಸಂಪರ್ಕಿಸಿ ದೇಣಿಗೆ ಸಂಗ್ರಹಿಸಲು ವಿಶ್ವ ಹಿಂದೂ ಪರಿಷದ್ ನಿರ್ಧರಿಸಿದೆ ಎಂದರು.

ರಾಜ್ಯದಲ್ಲಿ ಬೆಂಗಳೂರು, ಹುಬ್ಬಳ್ಳಿಯಲ್ಲಿ ದೇಣಿಗೆ ಸಂಗ್ರಹಕ್ಕಾಗಿ ಪ್ರಾಂತೀಯ ಕಚೇರಿಗಳನ್ನು ಮತ್ತು ಜಿಲ್ಲಾ ಮಟ್ಟದಲ್ಲಿ ಕಚೇರಿ ಗಳನ್ನು ಆರಂಭಿಸಲಾಗಿದೆ. ಗ್ರಾಮಗಳಲ್ಲಿ ದೇಣಿಗೆ ಸಂಗ್ರಹಕ್ಕೆ ಐದು ಜನಕ್ಕೆ ಒಂದರಂತೆ ತಂಡ ರಚಿಸಲಾಗಿದೆ ಎಂದರು.

ದೇಣಿಗೆ ನೀಡಲು ಅನುಕೂಲವಾಗುವಂತೆ 10, 100, 1000 ರೂ.ಗಳ ಕೂಪನ್ ಮಾಡಲಾಗಿದೆ. 2000 ರೂ.ಗಳಿಗಿಂತ ಹೆಚ್ಚಿನ ಹಣ ನೀಡುವವರಿಗೆ ರಶೀದಿ ನೀಡಲಾಗುತ್ತದೆ ಎಂದು ತಿಳಿಸಿದರು.

ದೇಣಿಗೆಯನ್ನು ನಿಗದಿತ ಮೂರು ಬ್ಯಾಂಕ್ ಗಳಿಗೆ ಜಮಾ ಮಾಡಲಾಗುವುದು ಎಂದ ಅವರು ಆನ್ ಲೈನ್ ಮೂಲಕವೂ ದೇಣಿಗೆ ನೀಡಬಹುದಾಗಿದೆ ಎಂದರು. 2.7 ಎಕರೆ ಜಾಗದಲ್ಲಿ 54 ಸಾವಿರ ಚದರ ಅಡಿಯಲ್ಲಿ ಮಂದಿರ ನಿರ್ಮಾಣ ಆಗುತ್ತಿದೆ.