Sunday, 13th October 2024

ಕಡಿಮೆ ಅವಧಿಯಲ್ಲಿ 10 ಲಕ್ಷಕ್ಕೂ ಅಧಿಕ ಸೇವೆ ಒದಗಿಸಿದ ವಿಜಯಪುರ ಕೇಂದ್ರಗಳು: ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ 

ಕೊಲ್ಹಾರ: ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್‌ಗಳಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲಾಗಿದ್ದು, ಈ ಕೇಂದ್ರಗಳ ಮೂಲಕ ಎಲ್ಲ ಇಲಾಖೆಯ 151 ಸೇವೆಗಳನ್ನು ಜನರಿಗೆ ಒದಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಶನಿವಾರ ತಾಲೂಕಿನ ಬಳೂತಿ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ದೇಶದಲ್ಲಿಯೇ ಗ್ರಾಮ ಒನ್ ಕೇಂದ್ರ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ದೇಶದ ಗಮನ ಸೆಳೆದಿದ್ದು, ವಿಶೇಷವಾಗಿ ವಿಜಯಪುರ ಜಿಲ್ಲೆಯ ಗ್ರಾಮ ಒನ್ ಕೇಂದ್ರಗಳು ಕಡಿಮೆ ಅವಧಿಯಲ್ಲಿಯೇ 10 ಲಕ್ಷಕ್ಕಿಂತ ಹೆಚ್ಚಿನ ಸೇವೆಯನ್ನು ಒದಗಿಸುವ ಮೂಲಕ ಉತ್ತಮ ಕಾರ್ಯ ಮಾಡುತ್ತಿವೆ ಎಂದು ಹೇಳಿದರು.

ಈ ಮೊದಲು ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರು, ರಸ್ತೆ, ಬೀದಿ ದೀಪ ಸೇರಿದಂತೆ ಹಲವು ಸಮಸ್ಯೆಗಳಿಗೆ ಜಿಲ್ಲಾ, ತಾಲೂಕಾ ಕಚೇರಿಗಳಿಗೆ ಅಲೆದಾಡು ವಂತಿತುತ್ತು, ಈ ಕಾರ್ಯಕ್ಕೆ ಗ್ರಾಮೀಣ ಭಾಗದ ರೈತರು ಸೇರಿದಂತೆ ಹಲವಾರು ಜನರ ಸಮಯವೂ ವ್ಯರ್ಥವಾಗಿ ದುಡ್ಡು ಸಹ ವೆಚ್ಚವಾಗುತ್ತಿತ್ತು.

ಆದರೆ ಸರ್ಕಾರ ಜನರ ಅಲೆದಾಟವನ್ನು ತಪ್ಪಿಸಲು ಜನರ ಅನುಕೂಲಕ್ಕಾಗಿ ಒಂದೇ ಸೂರಿನಡಿ ಹಲವು ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಎಲ್ಲ ಗ್ರಾಮ ಪಂಚಾಯತ್‌ಗಳಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸುವುದರ ಮೂಲಕ ಜನರಿಗೆ ಅನುಕೂಲ ಕಲ್ಪಿಸಲಾಗಿದೆ.

ಅದರಂತೆ ರೈತರು ಸಹ ಪಹಣಿ ಸೇರಿದಂತೆ ಯಾವುದೇ ದಾಖಲಾತಿಗಳನ್ನು ಪಡೆಯಲು ಜಿಲ್ಲಾ ಅಥವಾ ಕೇಂದ್ರ ಸ್ಥಾನಕ್ಕೆ ಪಡೆಯುವಂತಾಗಿತ್ತು. ಸರ್ಕಾರ ತಂತ್ರಜ್ಞಾನದ ಬಳಕೆಯಿಂದ ಹೋಬಳಿ ಮಟ್ಟದಲ್ಲಿ ರೈತರಿಗೆ ಅವಶ್ಯಕ ದಾಖಲೆ ಸೇವೆಗಳನ್ನು ಒದಗಿ ಸುವ ವ್ಯವಸ್ಥೆ ಮಾಡಿದೆ ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮುಂಚೆ ಕೊಲ್ಹಾರ ಬಸ್ ನಿಲ್ದಾಣದಲ್ಲಿ ನೂತನವಾಗಿ ಆರಂಭಿಸ ಲಾದ ಬಸ್‌ಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಗಳು, ವಿವಿಧ ಅಧಿಕಾರಿಗಳೊಂದಿಗೆ ನೂತನ್ ಬಸ್‌ನಲ್ಲಿ ಟಿಕೆಟ್ ಪಡೆದು ಪ್ರಯಾಣಿಸುವ ಮೂಲಕ ಕೊಲ್ಹಾರದಿಂದ ಬಳೂತಿ ಗ್ರಾಮಕ್ಕೆ ಆಗಮಿಸಿದರು. ಜಿಲ್ಲಾಧಿಕಾರಿಗಳ ಸರಳತೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾ ಯಿತು.

ಬಳೂತಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳನ್ನು ಭವ್ಯ ಮೆರವಣಿಗೆ ಮೂಲಕ ಸ್ವಾಗತಿಸ ಲಾಯಿತು. ಗ್ರಾಮದ ಹೆಣ್ಣುಮಕ್ಕಳು ಕುಂಭ ಕಳಶದೊಂದಿಗೆ, ಡೊಳ್ಳು, ಸಂಗೀತ ಮೇಳದವರು ಮೆರವಣಿಗೆಯಲ್ಲಿ ಪಾಲ್ಗೊಂಡು ತಮ್ಮ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಸಂಭ್ರಮ ಸಡಗರದಿಂದ ಬರಮಾಡಿಕೊಂಡರು.

ವೇದಿಕೆಯ ಮುಂಭಾಗದಲ್ಲಿ ಏರ್ಪಡಿಸಲಾದ ಕೃಷಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಸ್ತುಪ್ರದರ್ಶನ ಮಳಿಗೆಗಳನ್ನು ಜಿಲ್ಲಾಧಿಕಾರಿಗಳು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗತ್ತಿ, ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ರಾಜಶೇಖರ್ ದೈವಾಡಿ, ಪ್ರವಾಸೋದ್ಯ ಇಲಾಖೆಯ ಡಿಡಿ ಭಜಂತ್ರಿ, ಕೃಷಿ ಇಲಾಖೆ ಜಂಟಿ‌ ನಿರ್ದೇಶಕರು, ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎ.ಮುಲ್ಲಾ, ವಿವಿಧ ಕಂದಾಯ ಅಧಿಕಾರಿಗಳು ಸೇರಿದಂತೆ  ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕುಂದು-ಕೊರತೆಗಳ ವಿಚಾರಣೆ : ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರು ಅವರು ನವೆಂಬರ್ 19 ರ ಶನಿವಾರದಂದು ಕೊಲ್ಹಾರ ತಾಲೂಕಿನ ಬಳೂತಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ಸ್ಮಶಾನಕ್ಕಾಗಿ ಮಂಜೂರಾಗಿರುವ 5 ಎಕರೆ ಜಮೀನಿನ ಸುತ್ತಲೂ ಬೌಂಡರಿ ಹಾಕಬೇಕು, ಬಳೂತಿಯಿಂದ ಹಣಮಾಪುರಕ್ಕೆ ಹೋಗಲು ರಸ್ತೆ ವ್ಯವಸ್ಥೆ ಕಲ್ಪಿಸುವಂತೆ ಕೇಳಿಕೊಂಡ ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಆದ್ಯತೆ ಮೇಲೆ 8 ಅಡಿ ಇರುವ ಸರ್ಕಾರಿ ರಸ್ತೆಗೆ ಇದೇ 26 ರಂದು  ಸರ್ವೇ ಮಾಡಿಸಿ, ರೈತರ ಸಭೆ ನಡೆಸಿ,  ರಸ್ತೆ ನಿರ್ಮಾಣಕ್ಕೆ  ಕ್ರಮ ಕೈಗೊಳ್ಳಲಾಗುವುದು,  ಸ್ಮಶಾನಕ್ಕೆ ಸುತ್ತಲೂ ಬೇಲಿ ತಂತಿ ನಿರ್ಮಿಸಿ ಹದ್ದು ಬಸ್ತು ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದರೊಂದಿಗೆ ಕುಂದು-ಕೊರತೆ ಸಭೆಯಲ್ಲಿ ಹಕ್ಕು ಪತ್ರ ಕಳೆದಿದೆ, ಬಡ ವಿದ್ಯಾರ್ಥಿಗಳಿಗೆ ಬಿಸಿಎಂ ಹಾಸ್ಟೆಲ್ ನಿರ್ಮಾಣ, ದೇವಸ್ಥಾನ ಗಳಿಗೆ ಹಕ್ಕುಪತ್ರ, ಭಾವಿ-ಬಸವೇಶ್ವರ ದೇವಸ್ಥಾನ  ರಸ್ತೆ ನಿರ್ಮಾಣ, ಪಶು ವೈದ್ಯಕೀಯ ವೈದಾದಿಕಾರಿ, ಸಿಬ್ಬಂದಿ ನೇಮಕ, ಆಟದ ಮೈದಾನ ನಿರ್ಮಾಣ, ಗ್ರಾಮಸ್ಥರ ಆರೋಗ್ಯಕ್ಕಾಗಿ ವೈದ್ಯರ ನಿಯೋಜನೆ, ಗ್ರಾಮಕ್ಕೆ ರಾ ಬ್ಯಾಂಕ್, ಸಕಾಲಕ್ಕೆ ಬಿತ್ತನೆ ಬೀಜ ಪೂರೈಕೆ, ರಸ್ತೆ, ಕುಡಿಯುವ ನೀರಿನ ಸಮಸ್ಯೆ, ನಿವೇಶನ ಮಂಜೂರು ಸೇರಿದಂತೆ ಹಲವು ಮನವಿಗಳನ್ನು ಗ್ರಾಮಸ್ಥರು ಸಲ್ಲಿಸಿದರು.

ಕೊಲ್ಹಾರ ಬದಲಿಗೆ ಕೋಲಾರ: ಜಿಲ್ಲಾಧಿಕಾರಿಗಳನ್ನು ಸ್ವಾಗತಿಸುವ ಬ್ಯಾನರ್ ಬರಹದಲ್ಲಿ ಕೊಲ್ಹಾರ ಬದಲಿಗೆ ಕೋಲಾರ ಎಂಬ ಬರಹ ಕಂಡು ಕೊಲ್ಹಾರ ಪಟ್ಟಣದ ನಾಗರಿಕರು ಅಸಮಾದಾನಗೊಂಡು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿ ಅಧಿಕಾರಿಗಳು ಜಿಲ್ಲಾಧಿಕಾರಿಗಳು ಆಗಮಿಸುವ ಮುಂಚೆಯೇ ಕೊಲ್ಹಾರ ಎಂದು ಸರಿಪಡಿಸಿದರು.