Saturday, 23rd November 2024

Karnataka bypoll results: ಉಪ ಚುನಾವಣೆಯಲ್ಲಿ ಬಿಜೆಪಿಗೆ ಸೋಲು; ಟಿವಿ ಒಡೆದು ಆಕ್ರೋಶ ಹೊರಹಾಕಿದ ಕಾರ್ಯಕರ್ತ!

ವಿಜಯಪುರ: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯ ಫಲಿತಾಂಶ ಶನಿವಾರ ಹೊರಬಿದ್ದಿದೆ. 3ಕ್ಕೆ 3 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಿದ ಕೈ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಈ ನಡುವೆ ಬಿಜೆಪಿ ಅಭ್ಯರ್ಥಿಗಳು ಸೋತ ಹಿನ್ನೆಲೆಯಲ್ಲಿ ಬೇಸತ್ತ ಜಿಲ್ಲೆಯ (Karnataka bypoll results) ಬಿಜೆಪಿ ಕಾರ್ಯಕರ್ತರೊಬ್ಬರು, ಮನೆಯಲ್ಲಿನ ಟಿವಿ ಒಡೆದು ಹಾಕಿ ಆಕ್ರೋಶ ಹೊರಹಾಕಿದ್ದಾರೆ.

ಮೂರು ಕ್ಷೇತ್ರಗಳಲ್ಲೂ ಗೆಲುವು ಕಂಡಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. ಇದರಿಂದ ಕೈ ನಾಯಕರ ಆತ್ಮವಿಶ್ವಾಸ ಹೆಚ್ಚಾಗಿದೆ. ಮತ್ತೊಂದೆಡೆ ಬಿಜೆಪಿ ನಾಯಕರು ನಿರೀಕ್ಷೆ ಮಾಡದ ತೀರ್ಪನ್ನು ಮೂರು ವಿಧಾನಸಭಾ ಕ್ಷೇತ್ರದ ಮತದಾರರು ನೀಡಿದ್ದು, ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಸೋಲು ನಿಷ್ಠಾವಂತ ಕಾರ್ಯಕರ್ತರಿಗೆ ತೀವ್ರ ಬೇಸರಕ್ಕೆ ಕಾರಣವಾಗಿದೆ.

ಬೈ ಎಲೆಕ್ಷನ್ ಫಲಿತಾಂಶವನ್ನು ಕೋಲ್ಹಾರ ಪಟ್ಟಣದ ಬಿಜೆಪಿ ಕಾರ್ಯಕರ್ತ ವೀರಭದ್ರಪ್ಪ ಬಾಗಿ ಎಂಬುವವರು ಬೆಳಗ್ಗೆಯಿಂದ ಟಿವಿಯಲ್ಲಿ ನೋಡುತ್ತಾ ಇದ್ದರು. ಮೂರೂ ಕ್ಷೇತ್ರಗಳಲ್ಲೂ ಬಿಜೆಪಿ ಸೋಲುತ್ತಿದ್ದಂತೆ ಟಿವಿ ಒಡೆದು ರಾಜ್ಯ ಬಿಜೆಪಿ ನಾಯಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕರ ಒಗ್ಗಟ್ಟಿನ ಕೊರತೆಯಿಂದ ಉಪಚುನಾವಣೆಯಲ್ಲಿ ಪಕ್ಷಕ್ಕೆ ಹೀನಾಯ ಸೋಲಾಗಿದೆ. ಬಿಜೆಪಿ ವರಿಷ್ಠರು ಮೊದಲು ಬಿಜೆಪಿ ನಾಯಕರು, ಮುಖಂಡರ ಸಭೆ ಕರೆಯಬೇಕು. ಬಿಜೆಪಿ ನಾಯಕರ ನಡುವಿನ ಒಡಕಿನಿಂದ ಕಾರ್ಯಕರ್ತರು ಹಾಳಾಗುವ ಪರಿಸ್ಥಿತಿ ಬಂದಿದೆ. ಇದರಿಂದ ಕಾರ್ಯಕರ್ತರು ಬಲಿಪಶುಗಳಾಗುತ್ತಿದ್ದಾರೆ. ಮೂರು ಕ್ಷೇತ್ರಗಳಲ್ಲಿ ಒಂದರಲ್ಲಾದರೂ ಗೆಲ್ಲಬೇಕಿತ್ತಲ್ಲವೇ? ಎಂದು ವೀರಭದ್ರಪ್ಪ ಬಾಗಿ ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Karnataka Bypoll Results: ಮುಡಾ, ವಾಲ್ಮೀಕಿ, ವಕ್ಫ್:‌ ಬಿಜೆಪಿಯ ಎಲ್ಲಾ ಅಸ್ತ್ರಗಳೂ ಕಾಂಗ್ರೆಸ್‌ ಮುಂದೆ ಟುಸ್!‌

ವಿರೋಧ ಪಕ್ಷಗಳ ಸುಳ್ಳು ಆರೋಪಕ್ಕೆ ಮತದಾರರಿಂದ ತಕ್ಕ ಉತ್ತರ: ಡಿ.ಕೆ. ಸುರೇಶ್

DK Suresh

ಬೆಂಗಳೂರು: ಇಂದು ರಾಜ್ಯದ ಮೂರು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಸಂಪೂರ್ಣ ಬೆಂಬಲ ದೊರೆತಿದೆ. ಗ್ಯಾರಂಟಿಗಳ ವಿರುದ್ಧ, ಮುಖ್ಯಮಂತ್ರಿಗಳ ವಿರುದ್ಧದ ವಿರೋಧ ಪಕ್ಷಗಳ ಸುಳ್ಳು ಆರೋಪಕ್ಕೆ ರಾಜ್ಯದ ಮೂರು ಭಾಗಗಳಲ್ಲಿ ಜನ ತಕ್ಕ ಪಾಠ ಕಲಿಸಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ (DK Suresh) ತಿಳಿಸಿದ್ದಾರೆ. ರಾಜ್ಯದ 3 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶದ ಬಗ್ಗೆ ಮಾಧ್ಯಮಗಳಿಗೆ ಶನಿವಾರ ಅವರು ಪ್ರತಿಕ್ರಿಯೆ ನೀಡಿದರು.

ಚನ್ನಪಟ್ಟಣದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಶಿಗ್ಗಾವಿಯಲ್ಲಿ ಮಾಜಿ ಸಿಎಂ ಬೊಮ್ಮಾಯಿ ಅವರ ಪುತ್ರರನ್ನು ಜನ ಸೋಲಿಸಿದ್ದಾರೆ. ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ, ವಿರೋಧ ಪಕ್ಷಗಳು ಸರ್ಕಾರಕ್ಕೆ ಅನಗತ್ಯವಾಗಿ ಅಡ್ಡಿ ಮಾಡಿ ಅಭಿವೃದ್ಧಿಗೆ ತೊಂದರೆ ನೀಡದಂತೆ ಸಂದೇಶ ರವಾನಿಸಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | IND vs AUS: ಕಪಿಲ್‌ ದಾಖಲೆ ಸರಿಗಟ್ಟಿದ ಜಸ್‌ಪ್ರೀತ್‌ ಬುಮ್ರಾ

ಸರ್ಕಾರದ ವಿರುದ್ಧದ ಇದು ಆರೋಪಗಳಿಗೆ ಉತ್ತರವೇ ಎಂದು ಕೇಳಿದಾಗ, ಮಾಜಿ ಪ್ರಧಾನಿಗಳು, ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವರು, ವಿರೋಧ ಪಕ್ಷಗಳ ನಾಯಕರ ಆರೋಪಗಳಿಗೆ ಜನ ಸ್ಪಷ್ಟ ತೀರ್ಪು ನೀಡಿದ್ದಾರೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಹಳೆ ಮೈಸೂರು ಭಾಗದ ಜನ ಈ ಸಂದೇಶ ನೀಡಿದ್ದಾರೆ. ಇನ್ನಾದರೂ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಮೇಲೆ ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ರಾಜ್ಯದ ಅಭಿವೃದ್ಧಿಗೆ ಸಹಕಾರ ನೀಡಲಿ ಎಂದು ಹೇಳಿದರು.

ಚನ್ನಪಟ್ಟಣದಲ್ಲಿ ಜಮೀರ್ ಅವರ ಹೇಳಿಕೆ ಅಡ್ಡಿಯಾಗಬಹುದು ಎಂಬ ಊಹಾಪೋಹ ಇತ್ತು ಎಂದು ಕೇಳಿದಾಗ, “ಆ ಭಾವನೆ ಸ್ಥಳೀಯ ಮಟ್ಟದಲ್ಲಿಲ್ಲ ಎಂದು ನಾನು ಸ್ಪಷ್ಟನೆ ನೀಡಿದ್ದೆ. ಒಬ್ಬ ಅಭ್ಯರ್ಥಿಯ ಪರವಾಗಿ ಮಾಧ್ಯಮಗಳ ಸೃಷ್ಟಿ ಎಂದು ಹೇಳಿದ್ದೆ. ಇದರಿಂದ ಮಾಧ್ಯಮಗಳಿಗೆ ಬೇಸರವಾಗಿರಬಹುದು. ಜಮೀರ್ ಅವರ ಹೇಳಿಕೆ ಮೊದಲ ಬಾರಿಗೆ ಹೇಳಿದ್ದಲ್ಲ. ಜಮೀರ್ ಅವರು ಯಾರಿಗೆ ಈ ಪದ ಬಳಸಿದ್ದರು ಅವರು ಇದಕ್ಕೆ ಈ ಹಿಂದೆ ಆಕ್ಷೇಪ ಮಾಡಿರಲಿಲ್ಲ. ಈ ಹಿಂದೆ ಮಾಧ್ಯಮಗಳು ಪ್ರಶ್ನೆ ಮಾಡಿರಲಿಲ್ಲ ಎಂದು ಹೇಳಿದ್ದೆ. ನಾವು ಹಳ್ಳಿ ಹಳ್ಳಿಗೆ ಹೋಗಿ ಒಂದು ತಿಂಗಳ ಕಾಲ ಚುನಾವಣೆ ಮಾಡಿದ್ದೆವು. ಕ್ಷೇತ್ರದ ಹೊರಗೆ ಈ ವಿಚಾರ ಚರ್ಚೆಯಾಗುತ್ತಿತ್ತೇ ಹೊರತು, ಕ್ಷೇತ್ರದ ಒಳಗೆ ಅಭಿವೃದ್ಧಿ ವಿಚಾರವಷ್ಟೇ ಚರ್ಚೆಯಾಗಿತ್ತು. ಕಾರಣ, ಈ ಕ್ಷೇತ್ರ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದ ಕ್ಷೇತ್ರ. ಅವರಿಂದ ತೆರವಾದ ಹಿನ್ನೆಲೆಯಲ್ಲಿ ಅವರ ಅಭಿವೃದ್ಧಿ ಯೋಜನೆಗಳ ಚರ್ಚೆಯಾಗಿತ್ತು. ನಾನು ನನ್ನ ಅಂತರಾಳದ ಮಾತುಗಳನ್ನು ವ್ಯಕ್ತಪಡಿಸಿದ್ದೆ ಹೊರತು ಮಾಧ್ಯಮಗಳನ್ನು ದೂಷಿಸುವುದಲ್ಲ. ನನ್ನ ಮಾತಿನಿಂದ ಮಾಧ್ಯಮಗಳಿಗೆ ಬೇಸರವಾಗಿದ್ದರೆ ಕ್ಷಮೆ ಇರಲಿ ಎಂದರು.

ಎಷ್ಟು ಅಂತರದಲ್ಲಿ ಗೆಲ್ಲಬಹುದು ಎಂದು ಕೇಳಿದಾಗ, “ಈಗಾಗಲೇ 22 ಸಾವಿರ ಮತಗಳ ಅಂತರದ ಮುನ್ನಡೆ ಕಾಯ್ದುಕೊಂಡಿದ್ದು, ಇದೇ ಅಂತರ ಕಾಯ್ದುಕೊಳ್ಳುವ ವಿಶ್ವಾಸವಿದೆ” ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Vande Bharat Train: ವಂದೇ ಭಾರತ್‌ ರೈಲಿಗೆ ಕಲ್ಲು ತೂರಾಟ; ಇಬ್ಬರು ಕಿಡಿಗೇಡಿಗಳು ಅರೆಸ್ಟ್‌

ಮಹಾರಾಷ್ಟ್ರ ಚುನಾವಣೆ ಫಲಿತಾಂಶದ ಬಗ್ಗೆ ಕೇಳಿದಾಗ, ನೀವು ನನ್ನ ಮೇಲೆ ಒತ್ತಡ ಹಾಕಿದ್ದ ಕಾರಣ ನಾನು ಕೇವಲ ಕರ್ನಾಟಕ ಚುನಾವಣೆ ಬಗ್ಗೆ ಮಾತ್ರ ಗಮನ ಹರಿಸಿದ್ದೆ. ಬೇರೆ ರಾಜ್ಯಗಳ ಚುನಾವಣೆ ಬಗ್ಗೆ ಗಮನಹರಿಸಿರಲಿಲ್ಲ. ಸಿಎಂ, ಡಿಸಿಎಂ ಸೇರಿದಂತೆ ಕಾಂಗ್ರೆಸ್ ನಾಯಕರು ಪ್ರಚಾರಕ್ಕೆ ತೆರಳಿದ್ದರು. ಅವರು ಕೂಡ ವಿಶ್ವಾಸ ವ್ಯಕ್ತಪಡಿಸಿದ್ದರು. ಈ ಫಲಿತಾಂಶದ ಬಗ್ಗೆ ನಮ್ಮ ಹೈಕಮಾಂಡ್ ನಾಯಕರು ಪರಿಶೀಲನೆ ಮಾಡಲಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಿಸಿದ ಎಲ್ಲಾ ಮತದಾರರಿಗೆ ವಿಶೇಷವಾಗಿ ಧನ್ಯವಾದಗಳು. ಪಕ್ಷದ ಪರವಾಗಿ ಶ್ರಮಿಸಿದ ಕಾರ್ಯಕರ್ತರು, ಮಂತ್ರಿಗಳು, ಶಾಸಕರು ಚುನಾವಣೆ ಮಾಡಿದ್ದು, ಈ ಗೆಲುವಿನಲ್ಲಿ ಅವರ ಕಾಣಿಕೆಯೂ ಇದೆ. ಅವರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಡಿಸಿಎಂ ಡಿ.ಕೆ. ಸುರೇಶ್‌ ತಿಳಿಸಿದರು.