Friday, 13th December 2024

Viral Video: ಬೆಂಗಳೂರಿನಲ್ಲಿ ನೆಕ್ಸ್ಟ್‌ ಲೆವೆಲ್‌ ತಲುಪಿದ ರೋಡ್‌ ರೇಜ್‌, ಮಹಿಳೆಗೆ ಅತ್ಯಾಚಾರ-ಕೊಲೆ ಬೆದರಿಕೆ

viral video road rage

ಬೆಂಗಳೂರು: ರಾಜಧಾನಿಯಲ್ಲಿ ರೋಡ್‌ ರೇಜ್‌ (Road Rage) ಪ್ರಕರಣ ಇನ್ನೊಂದು ಹಂತಕ್ಕೆ ತಲುಪಿದೆ. ಬೆಂಗಳೂರಿನ (Bangalore crime news) ರಸ್ತೆಯಲ್ಲಿ ವಿಕೃತನೊಬ್ಬ ಹಾಡಹಗಲೇ ಮಹಿಳೆಯೊಬ್ಬರಿಗೆ ಬಹಿರಂಗವಾಗಿ ಅತ್ಯಾಚಾರ (Physical Abuse) ಬೆದರಿಕೆ ಹಾಕಿದ್ದಾನೆ. ಇದನ್ನು ಮಹಿಳೆ ಚಿತ್ರೀಕರಿಸಿಕೊಂಡಿದ್ದು, ಈ ವಿಡಿಯೋ ಈಗ ವೈರಲ್‌ (Viral Video) ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಹಿಳೆ ವಿಡಿಯೋ ಸಮೇತ ಪೋಸ್ಟ್‌ ಮಾಡಿದ್ದಾರೆ. ಕತ್ರಿಗುಪ್ಪೆ ಬಳಿ ತಾವು ಕಾರಿನಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದುದಾಗಿ ತಿಳಿಸಿದ್ದಾರೆ. “ನಮ್ಮ ಕಾರಿಗೆ ಆಟೋ ಡಿಕ್ಕಿ ಹೊಡೆದ ಬಳಿಕ 20ರಿಂದ 22 ವರ್ಷದ ಯುವಕ, ನನ್ನ ಬಳಿ ಬಂದು ನನ್ನನ್ನು ಮತ್ತು ನನ್ನ ತಾಯಿಯನ್ನು ವೇಶ್ಯೆ ಎಂದು ದೂಷಿಸಿ ಅಶ್ಲೀಲವಾಗಿ ನಿಂದಿಸಿದ್ದಾನೆ. ನಮ್ಮನ್ನು ಅತ್ಯಾಚಾರ ಮಾಡುವುದಾಗಿ ಅಸಭ್ಯ ಸನ್ನೆ ಮಾಡಿದ್ದಾನೆ” ಎಂದು ದೂಷಿಸಿದ್ದಾರೆ.

“ಇಂದು ಕತ್ರಿಗುಪ್ಪೆ ರಸ್ತೆಯಲ್ಲಿ ಚಾಲನೆ ಮಾಡುತ್ತಿದ್ದೆ. ಆಟೋವೊಂದು ಎಡದಿಂದ ಬಲಕ್ಕೆ ಬಂದು ನನ್ನದೂ ಸೇರಿ 2 ಕಾರುಗಳಿಗೆ ಡಿಕ್ಕಿ ಹೊಡೆಯಿತು. ನಾನು ಜೋರಾಗಿ ಹಾರ್ನ್ ಮಾಡಿದೆ. ತಾನು ಹುಚ್ಚನಂತೆ ಆಟೋ ಓಡಿಸುತ್ತಿದ್ದೇನೆಂದು ಆಟೋದಲ್ಲಿದ್ದ ಚಾಲಕನಿಗೆ ತಿಳಿದಿದ್ದರಿಂದ ಅವನು ಮೌನವಾಗಿದ್ದ. ಆದರೆ ಸಿಗ್ನಲ್ ಕೆಂಪು ಬಣ್ಣಕ್ಕೆ ತಿರುಗಿದಾಗ ಒಬ್ಬ ಯುವಕ ನನ್ನ ಬಳಿಗೆ ಬಂದು ನನ್ನನ್ನು, ನನ್ನ ತಾಯಿ ಮತ್ತು ನನ್ನ ಇಡೀ ಕುಟುಂಬವನ್ನು ಅವಾಚ್ಯವಾಗಿ ನಿಂದಿಸಿದ” ಎಂದಿದ್ದಾರೆ.

ಆ ವ್ಯಕ್ತಿ ನಮ್ಮ ಕಾರಿನ ಕಿಟಕಿಯನ್ನು ಒಡೆಯಲು ಪ್ರಯತ್ನಿಸಿದ. ಬಲವಂತವಾಗಿ ಬಾಗಿಲು ತೆರೆಯಲು ಪ್ರಯತ್ನಿಸಿದ. ಕೊಲೆ ಮತ್ತು ಅತ್ಯಾಚಾರದ ಬೆದರಿಕೆ ಹಾಕಿದ. ಈ ವೇಳೆ ಸುತ್ತಮುತ್ತ ಇದ್ದ ಜನರು ಸುಮ್ಮನೇ ನೋಡುತ್ತಿದ್ದರು. ನನಗೆ ಕನ್ನಡ ಭಾಷೆ ತಿಳಿದಿಲ್ಲ ಎಂದುಕೊಂಡು ಸಿಗ್ನಲ್ ಹಸಿರು ಬಣ್ಣಕ್ಕೆ ತಿರುಗುವವರೆಗೂ ಅವನು ನಮ್ಮನ್ನು ಅವಮಾನಕರ ಮಾತುಗಳಿಂದ ನಿಂದಿಸಿದ. ಅವನ ಅನುಚಿತ ವರ್ತನೆಯನ್ನು ನಾನು ರೆಕಾರ್ಡ್ ಮಾಡಿದ್ದು, ಈ ವೀಡಿಯೊ ಹೊರಬಂದರೆ ನಮ್ಮ ಮೇಲೆ ಅತ್ಯಾಚಾರ ಮಾಡಿದ ನಂತರ ನನ್ನನ್ನು ಮತ್ತು ನನ್ನ ಇಡೀ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದನೆಂದು ಮಹಿಳೆ ಬರೆದಿದ್ದಾರೆ.

ಮಹಿಳೆಯ ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಬೆಂಗಳೂರು ಪೊಲೀಸರು ಪ್ರತಿಕ್ರಿಯಿಸಿದ್ದು, ಅಜಾಗರೂಕತೆಯಿಂದ ಚಾಲನೆ ಮಾಡಿ ಇತರ ಪ್ರಯಾಣಿಕರ ಪ್ರಾಣಕ್ಕೆ ಗಂಡಾಂತರ ತಂದಿಟ್ಟ ಆಟೋ ಚಾಲಕನನ್ನು ಬಂಧಿಸಿದ್ದಾರೆ. ಆದರೆ ಕೊಲೆ ಹಾಗೂ ಅತ್ಯಾಚಾರ ಬೆದರಿಕೆ ಹಾಕಿದ ವ್ಯಕ್ತಿಯನ್ನು ಇನ್ನೂ ಬಂಧಿಸಿಲ್ಲ.

ಇದನ್ನೂ ಓದಿ: Viral Video: ಬೀದಿ ಬದಿ ಭಿಕ್ಷೆ ಬೇಡುವ ಈ ಬಾಲಕಿಯ ಇಂಗ್ಲಿಷ್ ಕೇಳಿದ್ರೆ ‘ವೆರಿ ಗುಡ್’ ಅನ್ನಲೇಬೇಕು!