Saturday, 23rd November 2024

Viral Video: ಟೆಕ್‌ ಕಂಪನಿಯ ಇಂಜಿನಿಯರ್‌ಗೆ ಬೀದಿ ಬೀದಿ ಭಿಕ್ಷೆ ಬೇಡುವ ದುಸ್ಥಿತಿ- ಭಾರೀ ವೈರಲಾಗ್ತಿದೆ ಈ ವಿಡಿಯೊ

Viral Video

ಬೆಂಗಳೂರು : ಟೆಕ್‌ ಕಂಪನಿಯೊಂದರಲ್ಲಿ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದೆ. ಈಗ ಜೀವನೋಪಾಯಕ್ಕಾಗಿ ಭಿಕ್ಷೆ ಬೇಡುತ್ತಿದ್ದೇನೆ ಎಂದು ವ್ಯಕ್ತಿಯೊಬ್ಬ ಹೇಳಿಕೊಂಡಿರುವ ವಿಡಿಯೋ ಈಗ ಸಾಕಷ್ಟು ಕಡೆ ವೈರಲ್‌(Viral Video) ಆಗುತ್ತಿದೆ. ಬೆಂಗಳೂರಿನ ಈ ವ್ಯಕ್ತಿಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಅಷ್ಟು ದೊಡ್ಡ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾತ ಏಕಾಏಕಿ ಹೀಗೆ ಬೀದಿ ಬೀದಿ ಭಿಕ್ಷೆ ಬೇಡುವಂತಹ ಸ್ಥಿತಿ ಹೇಗೆ ಬಂತು ಎಂದು ಎಲ್ಲರೂ ಅಚ್ಚರಿಗೊಂಡಿದ್ದಾರೆ.

ಆ ಸಂಬಂಧ ಮೂರು ವಿಡಿಯೋಗಳನ್ನು ಶರತ್‌ ಎಂಬುವವರು ತಮ್ಮ Instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. @Sharath_yuvaraja_official ಖಾತೆಯಿಂದ ಒಂದು ವಾರದ ಹಿಂದೆ ವಿಡಿಯೋ ಪೋಸ್ಟ್‌ ಆಗಿದೆ. ಪೋಸ್ಟ್‌ ಪ್ರಕಾರ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯು ಜಯನಗರದ 8ನೇ ಬ್ಲಾಕ್‌ನ ಜೆಎಸ್‌ಎಸ್‌ ಕಾಲೇಜು ಸಮೀಪದ ರಸ್ತೆಯಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಮೂರು ವಿಡಿಯೋಗಳ ಪೈಕಿ, ಮೊದಲ ವಿಡಿಯೋದಲ್ಲಿ ವ್ಯಕ್ತಿಯು ಕೆಂಪು ಟಿ-ಶರ್ಟ್‌ ಧರಿಸಿ,ಕೊಳಕಾಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಮೈಸೂರು ರಸ್ತೆಯ ಸಮೀಪವಿರುವ ಸತ್ವ ಗ್ಲೋಬಲ್‌ ಸಿಟಿ ಎಂದು ಕರೆಯಲ್ಪಡುವ ಗ್ಲೋಬಲ್‌ ವಿಲೇಜ್‌ ಟೆಕ್‌ ಪಾರ್ಕ್‌ ನಲ್ಲಿ ಪ್ರಮುಖ ಟೆಕ್‌ ಕನ್ಸಲ್ಟಿಂಗ್‌ ಕಂಪನಿಯೊಂದಿಗೆ ಇಂಜಿನಿಯರಿಂಗ್‌ ಆಗಿ ಕೆಲಸ ಮಾಡುತ್ತಿದ್ದೆಎಂದು ಅವರು ಹೇಳಿಕೊಂಡಿದ್ದಾರೆ.

ವ್ಯಕ್ತಿಯು ಎರಡನೇ ವಿಡಿಯೋದಲ್ಲಿ ಧ್ಯಾನ,ಅಧ್ಯಾತ್ಮದ ಬಗ್ಗೆ ಮಾತನಾಡುತ್ತಾ ಡೇವಿಡ್‌ ಹ್ಯೂಮ್‌ ಅವರ ಪುಸ್ತಕಗಳು ಭೌತ ವಿಜ್ಞಾನಿ ಆಲ್ಬರ್ಟ್‌ ಐನ್ಸ್ಟೈನ್‌ ಅವರ ಕೆಲಸಗಳು ಹಾಗೂ ಮೆದುಳಿನ ಹಿಪೊಕ್ಯಾಂಪಸ್‌ ಮತ್ತು ಅಮಿಗ್ಡಾಲಾಗಳ ಬಗ್ಗೆ ವಿವರವಾಗಿ ಹೇಳಿದ್ದಾರೆ. ಮೂರನೇ ವಿಡಿಯೋದಲ್ಲಿಅವರು 2013 ರಲ್ಲಿ ಫ್ರಾಂಕ್‌ಫರ್ಟ್‌ ನಗರಕ್ಕೆ ಹೋಗಿದ್ದೆ ಎಂದು ಹೇಳಿಕೊಂಡಿದ್ದಾರೆ. ಧರ್ಮ, ಜಾತಿ ಏನೂ ಇಲ್ಲ. ಅಂತಿಮವಾಗಿ ನಾನು ಏನಾಗಿದ್ದೇನೆ ನೋಡಿ. ಹೆಚ್ಚು ಹೆಚ್ಚು ಓದಬೇಕು ಅಷ್ಟೇ ಎಂಬ ಅವರ ಮಾತನ್ನು ಹಲವರು ಮೆಚ್ಚಿಕೊಂಡಿದ್ದಾರೆ.

ತಂದೆ-ತಾಯಿಯನ್ನು ಕಳೆದುಕೊಂಡಾಗ ತೀರಾ ಖಿನ್ನತೆಗೊಳಗಾದೆ. ವಿಪರೀತ ಕುಡಿತಕ್ಕೆ ಅಡಿಕ್ಟ್‌ ಆದೆ. ಈಗ ಜೀವನೋಪಾಯಕ್ಕಾಗಿ ಭಿಕ್ಷೆ ಬೇಡುತ್ತಿದ್ದೇನೆ ಆತ ಹೇಳಿದ್ದಾನೆ. ವಿಡಿಯೋಗಳನ್ನು ಪೋಸ್ಟ್‌ ಮಾಡಿರುವ ವ್ಯಕ್ತಿಯ ಪ್ರಕಾರ ಅವರು ಜಯನಗರದ 8ನೇ ಬ್ಲಾಕ್‌ ನ ಜೆಎಸ್‌ಎಸ್‌ ಕಾಲೇಜು ರಸ್ತೆಯಲ್ಲಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ. ಇನ್ನು ಈ ವಿಡಿಯೋ ನೋಡಿದ ಕೆಲವರು ಈತನನ್ನು ಕೆಲವು ದಿನಗಳ ಹಿಂದೆ ತೀವ್ರ ಮದ್ಯಪಾನ ಮಾಡಿ ಬಿದ್ದಿದ್ದ ಸ್ಥಿತಿ ನೋಡಿದ್ದೆವು ಎಂದು ಕಮೆಂಟ್‌ ಮಾಡಿದ್ದಾರೆ.

ವಿಡಿಯೋಗಳನ್ನು ಪೋಸ್ಟ್‌ ಮಾಡಿರುವ ಶರತ್‌ ಎಂಬ ವ್ಯಕ್ತಿ ಸಹಾಯಕ್ಕಾಗಿ ಎನ್‌ಜಿಒ ಅನ್ನು ಸಂಪರ್ಕಿಸುವುದಾಗಿ ಹೇಳಿದ್ದಾರೆ. ವೈದ್ಯರಿಗೂ ವಿಡಿಯೋ ಕಳುಹಿಸಿದ್ದಾರೆ. ಪೊಲೀಸರ ಅನುಮತಿಯಿಲ್ಲದೆ ಎನ್‌ಜಿಒ ಗಳು ವ್ಯಕ್ತಿಗಳನ್ನು ತೆಗೆದುಕೊಳ್ಳಲಾಗುವುದಿಲ್ಲ ಎನ್ನಲಾಗುತ್ತಿದೆ. ಸದ್ಯಕ್ಕೆ ಟೆಕ್‌ ಇಂಜಿನಿಯರ್‌ ಭಿಕ್ಷೆ ಬೇಡುವ ಪರಿಸ್ಥಿತಿಯಲ್ಲಿರುವ ವಿಡಿಯೋಗಳು ಹಲವರ ಸಾಮಾಜಿಕ ಜಾಲತಾಣಗಳ ಖಾತೆಯಿಂದ ನಿರಂತರವಾಗಿ ಶೇರ್‌ ಆಗುತ್ತಿದೆ.

ಈ ಸುದ್ದಿಯನ್ನೂ ಓದಿ: Viral News: ಹಸೆಮನೆ ಏರಬೇಕಾದವ ಸೇರಿದ್ದು ಮಸನಕ್ಕೆ; ಸಾವಿಗೂ ಮುನ್ನ ಮದುವೆ ಸಂಭ್ರಮದಲ್ಲಿದ್ದ ವರನ ವಿಡಿಯೊ ಫುಲ್‌ ವೈರಲ್‌!