Friday, 13th December 2024

Vishwavani Clubhouse: ವಿಶ್ವವಾಣಿ ಕ್ಲಬ್‌ಹೌಸ್‌ಗೆ ಸಹಸ್ರ ಸಂಭ್ರಮ, ಸತತ 1000 ಎಪಿಸೋಡ್‌ ಪೂರ್ಣಗೊಳಿಸುತ್ತಿರುವ ಮೊದಲ ಕ್ಲಬ್‌!

vishwavani clubhouse 1

ಕ್ಲಬ್‌ಹೌಸ್‌ ಇತಿಹಾಸದಲ್ಲಿಯೇ ಹಲವು ದಾಖಲೆ ನಿರ್ಮಿಸಿರುವ ವಿಶ್ವವಾಣಿ

ಬೆಂಗಳೂರು: ಅದು ಕೊರೊನಾದ ವಿಷಮ ಕಾಲ. ವಿಶ್ವದೆಲ್ಲೆಡೆ ಮನೆಯಿಂದ ಆಚೆ ಬರಲು ಹೆದರುವ ಪರಿಸ್ಥಿತಿ. ಅಂತಹ ಪರಿಸ್ಥಿತಿಯಲ್ಲಿ ಇಡೀ ವಿಶ್ವದಲ್ಲಿ ಮನೆಮನೆಗಳ ನಡುವೆ, ಮನಮನಗಳ ನಡುವೆ ಮಾತಿಗೆ ಬೆಸುಗೆಯಾದದ್ದು ʼಕ್ಲಬ್‌ಹೌಸ್‌ʼ ಮಾತಿನ ಮನೆ. ಕನ್ನಡದಲ್ಲಿ ಈ ಕ್ಲಬ್‌ಹೌಸ್‌ ಅನ್ನು ಸಮರ್ಥವಾಗಿ ಬಳಸಿಕೊಂಡು ದಾಖಲೆ ಬರೆದದ್ದು `ವಿಶ್ವವಾಣಿ ಕ್ಲಬ್‌ಹೌಸ್‌’ (Vishwavani Clubhouse). ಕೋವಿಡ್‌ ಕಾಲದ ನಂತರವೂ ಬಹುದಿನಗಳಿಂದ ನಿರಂತರತೆ, ಜನಪ್ರಿಯತೆ, ಶ್ರೇಷ್ಠತೆ ಉಳಿಸಿ ಬೆಳೆಸಿಕೊಂಡು ಬಂದಿದೆ ಈ ಶೋ. ವಿಶ್ವವಾಣಿ ಕ್ಲಬ್‌ ಹೌಸ್‌ನ 1000ದ ಸಂವಾದ ಇಂದು ಸಂಜೆ 7 ಗಂಟೆಗೆ ನಡೆಯಲಿದೆ. ಈ ಮಹತ್ವದ ಮೈಲುಗಲ್ಲಿಗೆ ನೀವೂ ಸಾಕ್ಷಿಯಾಗಿ.

ವಿಶ್ವವಾಣಿ ಆರಂಭಿಸಿದ ಕ್ಲಬ್‌ಹೌಸ್‌ ಈ ಗುರುವಾರಕ್ಕೆ 1000 ಸಂವಾದ ಕಾರ್ಯಕ್ರಮಗಳನ್ನು ಪೂರೈಸುತ್ತಿದೆ. ಜನಪ್ರಿಯ ಸಂಪಾದಕ ವಿಶ್ವೇಶ್ವರ ಭಟ್‌ ಅವರ ಸಾರಥ್ಯದಲ್ಲಿ ಆರಂಭಗೊಂಡಿದ್ದ ಈ ಕೇಳ್ಮೆಯ ಕಾರ್ಯಕ್ರಮ ರಾಜ್ಯದಲ್ಲಿ ಈಗಲೂ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ವಿಶ್ವೇಶ್ವರ ಭಟ್‌ ಅವರ ಸಾರಥ್ಯದಲ್ಲಿ ಆರಂಭಗೊಂಡ ಈ ಕ್ಲಬ್‌ಹೌಸ್‌ ಕಾರ್ಯಕ್ರಮಕ್ಕೆ ನಂಜನಗೂಡು ಮೋಹನ್‌ ಹಾಗೂ ರೂಪಾ ಗುರುರಾಜ್‌ ಅವರು ಮಾಡರೇಟರ್‌ಗಳಾಗಿ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.

ಪ್ರತಿನಿತ್ಯ ಸಂಜೆ 7 ಗಂಟೆಗೆ ರಾಜ್ಯದ ಸಾವಿರಾರು ಮಂದಿ ಈಗಲೂ ತಮ್ಮ ಮೊಬೈಲ್‌ನಲ್ಲಿ ಕ್ಲಬ್‌ಹೌಸ್‌ ಆ್ಯಪ್‌ ಹುಡುಕುತ್ತಾರೆ. ನಿತ್ಯ ಒಂದೊಂದು ನಿತ್ಯನೂತನ ವಿಷಯಗಳೊಂದಿಗೆ ಜನರ ಮುಂದೆ ವಿಶ್ವವಾಣಿ ಕ್ಲಬ್‌ಹೌಸ್‌ ಹಾಜರಾಗುತ್ತದೆ. ಸತತ ಸಾವಿರ ಎಪಿಸೋಡುಗಳು ಇಲ್ಲಿ ಯಾವುದೇ ಅಡೆತಡೆಯಿಲ್ಲದೇ ನಡೆದಿವೆ. ಆರಂಭದಲ್ಲಿ ವಾರದ ಏಳು ದಿನವೂ ನಡೆಯುತ್ತಿದ್ದ ಕ್ಲಬ್‌ಹೌಸ್‌, ಕೆಲ ತಿಂಗಳುಗಳಿಂದ ಭಾನುವಾರ ವಿರಾಮ ಪಡೆಯುತ್ತಿದೆ. ಕ್ಲಬ್‌ಹೌಸ್‌ ಇತಿಹಾಸದಲ್ಲಿಯೇ ಈ ಪ್ರಮಾಣದಲ್ಲಿ ಸರಣಿ ಕಾರ್ಯಕ್ರಮಗಳು ನಡೆದಿರುವುದು ವಿಶ್ವವಾಣಿ ಕ್ಲಬ್‌ಹೌಸ್‌ ಒಂದರಲ್ಲೇ ಎನ್ನುವುದು ಒಂದು ದಾಖಲೆಯೂ ಹೌದು.

ಇಲ್ಲಿ ಚರ್ಚೆಯಾಗದ ವಿಷಯವಿಲ್ಲ

ವಿಶ್ವವಾಣಿ ಕ್ಲಬ್‌ಹೌಸ್‌ ಮುಟ್ಟದ ವಿಷಯಗಳೇ ಇಲ್ಲ ಅನ್ನಬಹುದು. ಸಾಹಿತ್ಯ, ಸಂಗೀತ, ಆಧ್ಯಾತ್ಮ, ಆರೋಗ್ಯ, ಕಲೆ ಇವೆಲ್ಲವುಗಳ ಜೊತೆಗೆ ಲೈಂಗಿಕ ಆರೋಗ್ಯದ ಅರಿವಿನ ಕಾರ್ಯಕ್ರಮವೂ ನಡೆದಿದೆ. ಎಡ- ಬಲ ಎಂಬ ಪಂಥಬೇಧವಿಲ್ಲದೆ, `ವಿಷಯ’ಕ್ಕೆ ಮಾತ್ರ ಮಹತ್ವ ನೀಡುವ ಅಪರೂಪದ ವೇದಿಕೆ ಇದು.

ಇತ್ತೀಚಿನ ಕೆಲ ದಿನಗಳಿಂದ ಕ್ಲಬ್‌ಹೌಸ್‌ನಲ್ಲಿ ಸರಣಿ ಕಾರ್ಯಕ್ರಮಗಳನ್ನು ಆರಂಭಿಸಲಾಗಿದೆ. ಪ್ರಮುಖವಾಗಿ ಪ್ರತಿ ಶನಿವಾರ ಪ್ರೊ. ಪ್ರಶಾಂತ ಹೆಗಡೆ ಮೂಡಲಮನೆ ಷಟ್ಪದಿಯಲ್ಲಿ ಭಗವದ್ಗೀತೆ' ಹಾಗೂ ಪ್ರತಿ ಸೋಮವಾರ ನಂದೀಶ್‌ ಪಿ.ಕೆ ಅವರಿಂದಕುವೆಂಪು ರಾಮಾಯಣ ದರ್ಶನಂ’ ಎನ್ನುವ ಸರಣಿ ಆರಂಭವಾಗಿದೆ. ಇದರೊಂದಿಗೆ ನಾಡಹಬ್ಬ ದಸರಾ ನಿಮಿತ್ತ ಡಾ. ಮೈಸೂರು ನಾಗರಾಜ ಶರ್ಮಾ `ಮೈಸೂರು ದಸರಾ ಎಷ್ಟೊಂದು ಸುಂದರ’ ಎನ್ನುವ ಸರಣಿಯನ್ನು ಆರಂಭಿಸಲಾಗಿದೆ.

ಕ್ಲಬ್‌ಹೌಸ್‌ನ ಸಾರಥಿಗಳಿವರು

ವಿಶ್ವೇಶ್ವರ ಭಟ್‌ ಅವರು ಈ ಕ್ಲಬ್‌ಹೌಸ್‌ ಪರಿಕಲ್ಪನೆಯ ರೂವಾರಿ ಮತ್ತು ವಿಶ್ವವಾಣಿ ಕ್ಲಬ್‌ಹೌಸ್‌ನ ಕ್ಯಾಪ್ಟನ್‌. ರೂಪಾ ಗುರುರಾಜ್‌ ಅವರು ಪ್ರತಿನಿತ್ಯ ಕಾರ್ಯಕ್ರಮದ ಅತಿಥಿಗಳನ್ನು ಲೈನ್‌ಅಪ್‌ ಮಾಡುವುದು, ಅವರ ಪ್ರೊಫೈಲ್‌ ಸಿದ್ಧಪಡಿಸುವುದು ಮಾಡುತ್ತಾರೆ. ಶಿಶಿರ್‌ ಹೆಗಡೆ ಹಾಗೂ ಕಿರಣ್‌ ಉಪಾಧ್ಯಾಯ ಕಾರ್ಯಕ್ರಮದ ಮಾಡರೇಟರ್‌ ಆಗಿರುತ್ತಾರೆ. ರಾಜೇಶ್‌ ಪಟವರ್ಧನ್‌ ಅತಿಥಿಗಳ ಪರಿಚಯವನ್ನು ಸಿದ್ಧಪಡಿಸುತ್ತಾರೆ.

ಇಲ್ಲಿ ಗಣ್ಯರದೂ ವಿಶೇಷವೇ

ಇಲ್ಲಿ ಕನ್ನಡನಾಡಿನ ಬಹುತೇಕ ಗಣ್ಯರು ಹಾಗೂ ವಿಷಯತಜ್ಞರು ಬಂದು ಹೋಗಿದ್ದಾರೆ. ಸಿಎಂ ಸಿದ್ದರಾಮಯ್ಯ ಮುಂತಾದವರು ಕೂಡ ಇಲ್ಲಿ ಬಂದು ಮಾತನಾಡಿದ್ದಾರೆ. ಹಲವರು ಮತ್ತೆ ಮತ್ತೆ ಬಂದಿದ್ದಾರೆ. ಇಲ್ಲಿ ಅತಿ ಹೆಚ್ಚು ಬಾರಿ ಮಾತನಾಡಿದ ಗಣ್ಯರಲ್ಲಿ ಡಿ.ವಿ ಗುರುಪ್ರಸಾದ್‌ 23 ಬಾರಿ, ಡಾ.ನಾ. ಸೋಮೇಶ್ವರ್‌ 18 ಬಾರಿ ಕಾಣಿಸಿಕೊಂಡಿದ್ದಾರೆ.

ಸರ್ವರ್‌ ಕ್ರಾಶ್‌ ಮಾಡಿದ್ದ ಆ ಎಪಿಸೋಡ್‌

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಪ್ರತಿನಿತ್ಯ ಸಾವಿರಾರು ಮಂದಿ ಕೇಳುಗರಾಗಿ ಭಾಗವಹಿಸುತ್ತಾರೆ. ಈಶಾ ಫೌಂಡೇಶನ್‌ನ ಸಂಸ್ಥಾಪಕ ಜಗ್ಗಿ ವಾಸುದೇವ್‌ ಅವರು ಭಾಗವಹಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಸಂಖ್ಯೆ ಎಂಟು ಸಾವಿರ ಜನ ದಾಟಿದ್ದರಿಂದ, ಕ್ಲಬ್‌ಹೌಸ್‌ನ ಮೇನ್‌ ಸರ್ವರ್‌ ಕ್ರಾಷ್‌ ಆಗಿದ್ದು ಇತಿಹಾಸ. ಇದಾದ ಬಳಿಕ ನಡೆದ ಹಲವಾರು ಕಾರ್ಯಕ್ರಮದಲ್ಲಿ ಐದಾರು ಸಾವಿರ ಜನ ಭಾಗವಹಿಸಿದ ಇತಿಹಾಸವಿದೆ.

ಈ ಹಿಂದೆ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಭಾಗಬಹಿಸಿದ್ದ ಹಲವು ಗಣ್ಯರು ಇಂದು ಇಲ್ಲ. ಆಹಾರ ತಜ್ಞ ಡಾ.ಕೆ.ಸಿ. ರಘು, ಸೈಕಲಿಸ್ಟ್‌ ನಿತಿನ್‌ ಜಗತಪ್‌, ಕೃಷಿ ವಿಜ್ಞಾನಿ ಡಾ.ಶಕುಂತಲಾ ಶ್ರೀಧರ್‌, ಯಕ್ಷಗಾನ ಭಾಗವತರು ಸುಬ್ರಹ್ಮಣ್ಯ ಧಾರೇಶ್ವರ, ನೇತ್ರ ತಜ್ಞ ಡಾ.ಭುಜಂಗ ಶೆಟ್ಟಿ, ಮಾಜಿ ಸಂಸದ ಆರ್‌. ಧೃವನಾರಾಯಣ, ನಿರೂಪಕಿ ಅಪರ್ಣಾ ವಸ್ತಾರೆ ನಮ್ಮೊಂದಿಗೆ ಇಲ್ಲ.

ಇದನ್ನೂ ಓದಿ: ವಿಶ್ವವಾಣಿ ಕ್ಲಬ್‌ಹೌಸ್‌ ಪ್ರಥಮ ವಾರ್ಷಿಕ ಸಂಭ್ರಮದಲ್ಲಿ ಮಿಂದೆದ್ದ ಶ್ರೋತೃ ವೃಂದ