Saturday, 14th December 2024

Vishwavani Exclusive: ಕಾಲು ಮುಟ್ಟಿ ಆಶೀರ್ವಾದ ಪಡೆಯುವಾಗ ಶಾಸಕನ ಪತ್ನಿಯ ಹಿಂಭಾಗ ಗಿಲ್ಲಿದ ಕರ್ನಾಟಕ ಬಿಜೆಪಿ ಹಿರಿಯ ನಾಯಕ!

vishwavani exclusive

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ಸ್ಫೋಟಗೊಂಡಿದೆ! ಬಿಜೆಪಿಯ ಹಿರಿಯ ರಾಜಕಾರಣಿಯೊಬ್ಬರ ʼಸ್ಪರ್ಶ ಚಪಲʼ ಈ ಬಾರಿ ಪಕ್ಷದೊಳಗೇ ಭಾರಿ ಸದ್ದು (Vishwavani Exclusive) ಮಾಡುತ್ತಿದೆ.

ಆಗಿರುವ ಘಟನೆ ಏನೆಂದರೆ, ಬಿಜೆಪಿ ಶಾಸಕರೊಬ್ಬರು ಇತ್ತೀಚೆಗೆ ಹಿರಿಯ ಮುಖಂಡರೊಬ್ಬರ ಭೇಟಿಗಾಗಿ ಬೆಂಗಳೂರಿನಲ್ಲಿರುವ ಅವರ ಮನೆಗೆ ಹೋಗಿದ್ದರು. ಆಗ ಶಾಸಕರ ಜತೆ ಅವರ ಪತ್ನಿ ಕೂಡ ಇದ್ದರು. ಹಿರಿಯ ಮುಖಂಡರು ಎದುರಾಗುತ್ತಿದ್ದಂತೆ ಶಾಸಕರು ಶಿರಬಾಗಿ ನಮಸ್ಕರಿಸಿದರು. ಬಳಿಕ ಶಾಸಕರ ಪತ್ನಿ ಬಾಗಿ ಆ ಹಿರಿಯ ಮುಖಂಡರ ಕಾಲು ಮುಟ್ಟಿ ನಮಸ್ಕರಿಸಲು ಹೋದರು. ಈ ಸಂದರ್ಭದಲ್ಲಿ ಹಿರಿಯ ಮುಖಂಡರು ಆಶೀರ್ವಾದ ಮಾಡುವ ನೆಪದಲ್ಲಿ ಶಾಸಕರ ಪತ್ನಿಯ ಹಿಂಭಾಗವನ್ನು ಮೆಲ್ಲಗೆ ಸವರುತ್ತ ನಿಧಾನವಾಗಿ ಗಿಲ್ಲಿ ಬಿಟ್ಟರು! ಶಾಸಕರ ಪತ್ನಿ ತಕ್ಷಣವೇ ಹಾವು ತುಳಿದಂತೆ ಹೌಹಾರಿ ಹಿಂದೆ ಸರಿದರು. ತಾವು ಅತಿಯಾಗಿ ಗೌರವಿಸುತ್ತಿದ್ದ ನಾಯಕನ ಈ ಅನಿರೀಕ್ಷಿತ ನಡವಳಿಕೆ ಕಂಡು ಶಾಸಕರೂ ಬೆಚ್ಚಿ ಬಿದ್ದರು ಎನ್ನಲಾಗಿದೆ.

ಬಳಿಕ ಶಾಸಕರು ಮತ್ತು ಅವರ ಪತ್ನಿ ಈ ಕೃತ್ಯಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅವಮಾನದಿಂದ ಶಾಸಕರ ಪತ್ನಿ ರೊಚ್ಚಿಗೆದ್ದಿದ್ದರು. ಇಬ್ಬರೂ ಸೇರಿ ಆ ʼಗೌರವಾನ್ವಿತʼ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು. ತಂದೆಯ ಸಮಾನ ಎಂದು ಭಾವಿಸಿ ಪಾದ ಮುಟ್ಟಿ ನಮಸ್ಕರಿಸಲು ಹೋದರೆ ನೀವು ಹೀಗೆ ಮಾಡಬಹುದೇ ಸರ್‌ ಎಂದು ಖಾರವಾಗಿ ಪ್ರಶ್ನಿಸಿದರು. ಆಗ ಆ ಹಿರಿಯ ಮುಖಂಡರು, ಹಾಗಲ್ಲಮ್ಮ, “”ಒಳ್ಳೆಯದಾಗಲಿ ಎಂದು ನಾನು ಮುಟ್ಟಿ ಆಶೀರ್ವಾದ ಮಾಡಿದೆ ಅಷ್ಟೆ. ತಪ್ಪು ಭಾವಿಸಬೇಡʼʼ ಎಂದು ಸಮಾಧಾನ ಮಾಡಲು ಯತ್ನಿಸಿದರು ಎಂದು ಪಕ್ಷದ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.

ಪಕ್ಷದಲ್ಲಿ ಇಷ್ಟು ಹಿರಿಯರೂ ಗೌರವಾನ್ವಿತರೂ ಆಗಿರುವ ಈ ಮುಖಂಡರಿಂದ ಇಂಥ ನಡೆ ನಿರೀಕ್ಷಿರಲಿಲ್ಲ. ನನ್ನ ಕಣ್ಣೆದುರೇ ಹೆಂಡತಿ ಈ ರೀತಿ ಲೈಂಗಿಕ ಕಿರುಕುಳ ಅನುಭವಿಸಿದ್ದು ಕಂಡು ಭಾರಿ ಆಘಾತ ಮತ್ತು ಸಂಕಟವಾಯಿತು. ಬೇರೆಯವರಾಗಿದ್ದರೆ ಕೇಸ್‌ ದಾಖಲಿಸಬಹುದಾಗಿತ್ತು. ಏನು ಮಾಡೋದು ಹೇಳಿ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದರು ಎನ್ನಲಾಗಿದೆ. ಬಿಜೆಪಿ ಪಕ್ಷದೊಳಗೆ ಈಗ ಈ ವಿಚಾರದ ಬಗ್ಗೆ ಭಾರಿ ಚರ್ಚೆ ನಡೆಯಲಾರಂಭಿಸಿದೆ!

ಇದೂ ಒಂದು ಕಾಯಿಲೆ!:

ಇದು ಫ್ರೋಟ್ಯೂರಿಸ್ಟಿಕ್ ಡಿಸಾರ್ಡರ್‌ (ಅನ್ಯರ ಮೈಸವರಿ ಲೈಂಗಿಕ ತೃಷೆ ತೀರಿಸುವ ಕಾಯಿಲೆ).
ಗುಂಪಿನಲ್ಲಿ ಸಾಗುವಾಗ ಅಥವಾ ಏಕಾಂತದಲ್ಲಿ ಸಿಕ್ಕಾಗ ಮಹಿಳೆಯರ ಗುಪ್ತಾಂಗಗಳನ್ನು ಸವರುವ ಅಭ್ಯಾಸ ಕೆಲವರಿಗೆ ಇರುತ್ತದೆ. ಅವರು ಆಗಾಗ ಸಾಮಾಜಿಕವಾಗಿ ಅವಮಾನಕ್ಕೆ ಒಳಗಾಗುತ್ತಾರೆ. ಪೆಟ್ಟು ತಿನ್ನುತ್ತಾರೆ. ಆದಾಗ್ಯೂ ಅವರು ತಮ್ಮ ಅಭ್ಯಾಸ ನಿಲ್ಲಿಸುವುದಿಲ್ಲ. ಯಾಕೆಂದರೆ, ಇದೊಂದು ರೀತಿಯ ಮಾನಸಿಕ ಕಾಯಿಲೆಯಾಗಿದೆ. ಇದು ಪುನರಾವರ್ತಿತ ಮತ್ತು ತೀವ್ರ ಲೈಂಗಿಕ ಪ್ರಚೋದನೆಯನ್ನು ತಣಿಸುವ ಅವರ ಕೃತ್ಯವಾಗಿರುತ್ತದೆ. ಇದನ್ನು ಫ್ರೊಟ್ಯೂರಿಸ್ಟಿಕ್‌ ಡಿಸಾರ್ಡರ್‌ ಎಂದು ಕರೆಯಲಾಗುತ್ತದೆ.

ಮಹಿಳೆಯ ಒಪ್ಪಿಗೆಯಿಲ್ಲದೆ ಆಕೆಯ ಅಂಗಗಳನ್ನು ಸ್ಪರ್ಶಿಸುವುದು ಅಥವಾ ಉಜ್ಜುವುದು ಇದರ ಪ್ರಮುಖ ಲಕ್ಷಣ. ಸ್ತನಗಳು, ಕಾಲುಗಳು, ಪೃಷ್ಠಗಳು ಅಥವಾ ಜನನಾಂಗಗಳನ್ನು ಸ್ಪರ್ಶಿಸಲು ಇಂಥವರು ಪ್ರಯತ್ನ ಮಾಡುತ್ತಾರೆ. ಆದರೆ ಇದು ತೀವ್ರತರದ ಅಪರಾಧ.
ಈ ಕಾಯಿಲೆಗೆ ಒಳಗಾದವರು ಲೈಂಗಿಕ ಪ್ರಚೋದನೆಯ ಕಾರಣಕ್ಕೆ ಈ ರೀತಿ ಮಾಡುತ್ತಾರೆ. ಪುರುಷರಿಗೆ ಈ ರೋಗ ಬಾಧಿಸುವುದ ಹೆಚ್ಚು.
ಫ್ರೋಟ್ಯೂರಿಸ್ಟಿಕ್ ಡಿಸಾರ್ಡರ್‌ ಪ್ಯಾರಾಫಿಲಿಕ್ ರೋಗದ ಒಂದು ಲಕ್ಷಣವಾಗಿದೆ. ಪ್ಯಾರಾಫಿಲಿಯಾ ಎಂದರೆ ವಿಲಕ್ಷಣ ಲೈಂಗಿಕತೆ ಅಥವಾ ನಿರಂತರ ಲೈಂಗಿಕ ಆಸಕ್ತಿಯಾಗಿದೆ. ಈ ಸಮಸ್ಯೆ ಇದ್ದವರು ಇತರರಿಗೆ ಗಮನಾರ್ಹ ತೊಂದರೆಯನ್ನು ಉಂಟುಮಾಡಿದಾಗ ಮಾತ್ರ ಅದನ್ನು ಫ್ರೊಟ್ಯೂರಿಸಂ ಎಂದು ಪರಿಗಣಿಸಲಾಗುತ್ತದೆ.
ಈ ಸಮಸ್ಯೆ ಹೊಂದಿರುವವರು ಸಾಮಾನ್ಯವಾಗಿ ಗುಂಪಿನಲ್ಲಿ ತಪ್ಪು ಎಸಗುತ್ತಾರೆ. ಮಹಿಳೆಯರು ಇಂಥ ರೋಗಿಗಳಿಗೆ ಬಲಿಪಶುವಾಗುವಾಗುತ್ತಾರೆ. ಆದರೆ, ಬಹುತೇಕ ಪ್ರಸಂಗಗಳಲ್ಲಿ ಇವುಗಳು ವರದಿಯಾಗುವುದಿಲ್ಲ. ಆದರೆ ರೋಗಿಯ ಈ ನಡವಳಿಕೆ ಯಥಾಪ್ರಕಾರ ಮುಂದುವರಿಯುತ್ತದೆ.