Friday, 13th December 2024

Waqf Board: ವಕ್ಫ್ ಆಸ್ತಿ ಕಾಪಾಡುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲೇ ಘೋಷಿಸಿತ್ತು, ಈಗ ಬೊಮ್ಮಾಯಿ ಉಲ್ಟಾ: ಸಿಎಂ ಕಿಡಿ

Waqf Board

ಹುಬ್ಬಳ್ಳಿ: ವಕ್ಫ್ ಆಸ್ತಿ (Waqf Board) ಒತ್ತುವರಿ ತೆರವುಗೊಳಿಸುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲೇ ಘೋಷಿಸಿತ್ತು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಒತ್ತುವರಿಯಾಗಿರುವ ಇಂಚಿಂಚು ವಕ್ಫ್ ಆಸ್ತಿಯನ್ನು ಕಾಪಾಡುವುದಾಗಿ ಹೇಳಿದ್ದರು. ಅವರೇ ಹೇಳಿದ್ದ ಮಾತುಗಳಿಗೆ ಈಗ ರಾಜಕೀಯ ಕಾರಣಕ್ಕಾಗಿ ಉಲ್ಟಾ ಹೊಡೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜಕಾರಣಕ್ಕಾಗಿ ಈ ವಿಚಾರವನ್ನು ಇಟ್ಟುಕೊಂಡು ಹೋರಾಡುತ್ತಿದ್ದಾರೆ. ವಕ್ಫ್ ಆಸ್ತಿ ವಿಚಾರ ನಿನ್ನೆ ಮೊನ್ನೆಯದಲ್ಲ. ಬಿಜೆಪಿ ಸರ್ಕಾರದ ಕಾಲದಲ್ಲೂ ನೋಟಿಸ್‌ ಕೊಟ್ಟಿದ್ದಾರೆ, ಎಲ್ಲಾ ಕಾಲದಲ್ಲಿಯೂ ನೋಟಿಸ್‌ ನೀಡಲಾಗಿದೆ ಎಂದು ಜನರಿಗೆ ಅರ್ಥವಾಗಿದೆ ಎಂದು ತಿಳಿಸಿದರು.

ನಾನು ಸಚಿವರಾದ ಎಚ್.ಕೆ ಪಾಟೀಲ್, ಕೃಷ್ಣ ಬೈರೇಗೌಡ ಅವರೊಂದಿಗೆ ಸಭೆ ನಡೆಸಿ ಯಾವುದೇ ನೋಟಿಸ್‌ ನೀಡಿದ್ದಲ್ಲಿ ಅದನ್ನು ವಾಪಸ್ಸು ಪಡೆಯಬೇಕು ಅಥವಾ ವಿಚಾರಣೆ ಇಲ್ಲದೆಯೇ ಯಾವುದಾದರೂ ಪಹಣಿ ದಾಖಲೆ ಬದಲಾವಣೆಯಾಗಿದ್ದರೆ ಅದನ್ನು ರದ್ದು ಮಾಡಬೇಕು ಹಾಗೂ ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಬಾರದು ಎಂದು ಸ್ಪಷ್ಟ ನಿರ್ದೇಶನ ನೀಡಿದ್ದಾಗಿದೆ. ಮುಸ್ಲಿಂ , ಹಿಂದು, ಕ್ರಿಶ್ಚಿಯನ್ ಆಗಿರಲಿ, ಒಕ್ಕಲೆಬ್ಬಿಸಬಾರದು ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದೇನೆ ಎಂದರು.

ವಕ್ಫ್ ಆಸ್ತಿ ವಿಚಾರ ನಮಗೆ ಗೊತ್ತಾದ ತಕ್ಷಣವೇ ನೋಟಿಸ್‌ ಹಿಂಪಡೆಯಲಾಗಿದೆ. ಬಿಜೆಪಿ ಅವಧಿಯಲ್ಲಿ 216 ಪ್ರಕರಣಗಳಲ್ಲಿ ನೋಟಿಸ್‌ ಕೊಟ್ಟಿದ್ದರು. ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್, ಎಚ್.ಡಿ ಕುಮಾಸ್ವಾಮಿ ಇದ್ದಾಗ ಏಕೆ ನೋಟಿಸ್‌ ಕೊಟ್ಟಿದ್ದಾರೆ. ಬಿಜೆಪಿಯ ಈ ಡಬ್ಬಲ್ ಗೇಮ್ ವಿಚಾರವನ್ನು ಜನರಿಗೆ ನಾವು ತಲುಪಿಸುತ್ತಿದ್ದೇವೆ ಎಂದು ತಿಳಿಸಿದರು.

ಕರ್ನಾಟಕಕ್ಕೆ ಅನ್ಯಾಯವಾಗಿರುವ ಬಗ್ಗೆ ಪ್ರಶ್ನಿಸಬೇಕು

ತೆರಿಗೆ ವಿಚಾರದಲ್ಲಿ ಕೇಂದ್ರದಿಂದ ಅನ್ಯಾಯವಾಗುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, 16ನೇ ಹಣಕಾಸು ಆಯೋಗದವರು ಬೆಂಗಳೂರಿಗೆ ಭೇಟಿ ನೀಡಿದಾಗ 15ನೇ ಹಣಕಾಸು ಆಯೋಗದಿಂದ ಕರ್ನಾಟಕಕ್ಕೆ ಅನ್ಯಾಯವಾಗಿರುವ ಬಗ್ಗೆ ಗಮನ ಸೆಳೆದಿದ್ದೇವೆ. ಸುಮಾರು 4.50 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಮೊತ್ತವನ್ನು ವರ್ಷಕ್ಕೆ ತೆರಿಗೆ ನೀಡುತ್ತಿದ್ದೇವೆ. ಅದರಲ್ಲಿ ನಮಗೆ ವಾಪಸ್ಸು ಬರುವುದು 55 ರಿಂದ 60 ಸಾವಿರ ಕೋಟಿ ರೂಪಯಿಗಳಷ್ಟು ಮಾತ್ರ. ಇದು ನ್ಯಾಯವೇ? ಎಂದು ಪ್ರಶ್ನಿಸಿದರು. ಈ ಬಗ್ಗೆ ನಾವು ನ್ಯಾಯಕ್ಕಾಗಿ ಹೋರಾಡುತ್ತಿದ್ದೇವೆ. ಬಿಜೆಪಿಯ ಪ್ರಲ್ಹಾದ್ ಜೋಶಿ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಅವರು ಈ ಬಗ್ಗೆ ಮಾತನಾಡಿದ್ದಾರೆಯೇ? ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.‌

ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದರೆ ಅದು ರಾಜಕೀಯ ಎಂದರು, ಇದಕ್ಕೆ ಏನು ಹೇಳಬೇಕು? ಎಂದರು . ನ್ಯಾಯಾಲಯಕ್ಕೆ ಹೋದರೆ ನ್ಯಾಯ ಸಿಗುತ್ತದೆ ಎಂದು ಭಾವಿಸಿಲ್ಲ, ಏಕೆಂದರೆ 5 ವರ್ಷಕ್ಕೊಮ್ಮೆ ಸಂವಿಧಾನದ ಪ್ರಕಾರ ಹಣಕಾಸಿನ ಆಯೋಗ ರಚನೆಯಾಗುತ್ತದೆ. ಅವರ ಶಿಫಾರಸಿನ ಮೇಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಹೋಗಬೇಕಾದ ತೆರಿಗೆ ಬಗ್ಗೆ ನಿರ್ಧಾರವಾಗುತ್ತದೆ. 15 ನೇ ಹಣಕಾಸು ಆಯೋಗ ಕೆಲವು ಶಿಫಾರಸು ಮಾಡಿದ್ದಾರೆ. 5495 ಕೋಟಿ ರೂಪಾಯಿಗಳನ್ನು ವಿಶೇಷ ಅನುದಾನ ನೀಡಬೇಕೆಂದು ಹೇಳಿದರು. ಪೆರಿಫೆರಲ್ ರಿಂಗ್ ರೋಡ್ ಹಾಗೂ ಕೆರೆಗಳ ಅಭಿವೃದ್ಧಿಗೆ ತಲಾ 3000 ಕೋಟಿ ರೂಪಾಯಿ ನೀಡಲು ಶಿಫಾರಸು ಮಾಡಿದ್ದರು. ಒಟ್ಟು 11495 ಕೋಟಿಗಳನ್ನು ಕೊಟ್ಟರೆ. ಇದನ್ನು ನಾವು ಕೇಳಬೇಕು. ಪ್ರಲ್ಹಾದ್ ಜೋಶಿಯವರು ಇದನ್ನು ಕೇಂದ್ರದಿಂದ ಕೇಳಬೇಕಲ್ಲವೇ ಎಂದು ಪ್ರಶ್ನಿಸಿದರು.

ವಿಶೇಷ ಅನುದಾನ ನೀಡಿದ್ದರೆ ರಾಜಕೀಯ ಬಿಟ್ಟುಬಿಡುವೆ!

11495 ಕೋಟಿ ರೂಪಾಯಿಗಳನ್ನು ಕೊಟ್ಟಿದ್ದಾರೆಯೇ? ಕೊಟ್ಟಿದ್ದರೆ ನಾನು ರಾಜಕೀಯ ಬಿಟ್ಟುಬಿಡುವೆ ಎಂದ ಸಿಎಂ, ಇಲ್ಲದಿದ್ದರೆ ಪ್ರಲ್ಹಾದ್‌ ಜೋಶಿ ರಾಜಕೀಯ ಬಿಡುತ್ತಾರೆಯೇ ಕೇಳಿ ಎಂದು ಪ್ರಶ್ನಿಸಿದರು. ಸುಳ್ಳು ಹೇಳಿದ್ದನ್ನು ಕೇಳಿ ಅದನ್ನು ಬರೆಯುತ್ತೀರಿ ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು.

ಬಿಜೆಪಿಯವರು ಗ್ಯಾರಂಟಿಗೆ ವಿರುದ್ಧ

ಬಿಜೆಪಿಯವರು ಗ್ಯಾರಂಟಿಗೆ ವಿರುದ್ಧವಾಗಿದ್ದಾರೆ. ಗ್ಯಾರಂಟಿ ಯೋಜನೆಗಳ ಮೂಲಕ ಎಲ್ಲಾ ಜಾತಿ ಧರ್ಮದವರಿಗೆ ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ತುಂಬುತ್ತಿದ್ದೇವೆ. ಅವರು ಮುಖ್ಯವಾಹಿನಿಗೆ ಬರಬೇಕೆಂದು ಈ ಕಾರ್ಯ ಮಾಡುತ್ತಿದ್ದೇವೆ. ಬಿಜೆಪಿಯವರಿಗೆ ಸಮಾನತೆ ಬರಬಾರದು. ಬಡವರು ಇರಬೇಕು. ಅದಕ್ಕೆ ಅವರನ್ನು ಬಡತನ ವಿರೋಧಿಗಳು ಎಂದು ಕರೆಯುವುದು. ಶಕ್ತಿ ಇಲ್ಲದಿದ್ದರೆ ತಾನೇ ದುರುಪಯೋಗ ಮಾಡಿಕೊಳ್ಳಲು ಸಾಧ್ಯವಾಗುವುದು. ಆರ್ಥಿಕ, ಸಾಮಾಜಿಕ ಶಕ್ತಿ ಬಡವರಿಗೆ ಬರಬಾರದೆಂಬ ತತ್ವದಲ್ಲಿ ಬಿಜೆಪಿಗೆ ನಂಬಿಕೆ ಇದೆ. ಬಿಜೆಪಿ ಪಕ್ಷ 600 ಭರವಸೆ ಗಳನ್ನು 2018 ರಲ್ಲಿ ನೀಡಿತ್ತು. ಅವುಗಳಲ್ಲಿ ಎಷ್ಟು ಈಡೇರಿಸಿದ್ದಾರೆ. ನಾವು 165 ಭರವಸೆ ಕೊಟ್ಟು 158 ಈಡೇರಿಸಿದ್ದಾಗಿ ಲೆಕ್ಕ ಕೊಡುತ್ತಿದ್ದೇವೆ. ಅವರು ಎಷ್ಟು ಭರವಸೆ ನೀಡಿ ಎಷ್ಟನ್ನು ಈಡೇರಿಸಿದ್ದಾರೆ ಎನ್ನುವ‌ ಲೆಕ್ಕ ಕೊಡುತ್ತಾರೆಯೇ ? ಎಂದು ಸವಾಲು ಹಾಕಿದರು. ವಕ್ಫ್ ವಿಚಾರದಲ್ಲಿ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಹೇಳಿದ ಮೇಲೂ ಬಿಜೆಪಿ ಹೋರಾಟ ಮಾಡುತ್ತಿದೆ ಎಂದರೆ ರಾಜಕೀಯ ಅಲ್ಲವೇ ಎಂದರು.

ವಕ್ಫ್ ವಿಚಾರವಾಗಿ ಬಿಜೆಪಿ ರಾಜಕಾರಣಕ್ಕಾಗಿ ಪ್ರತಿಭಟನೆ

ವಕ್ಫ್ ವಿಚಾರವಾಗಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಬಿಜೆಪಿಯವರು ಯಾವಾಗಲೂ ನೈಜ ವಿಷಯಗಳನ್ನು ಬಿಟ್ಟು ಸುಳ್ಳು ಆರೋಪಗಳನ್ನು ಮಾಡುವುದು, ರಾಜಕಾರಣಕ್ಕಾಗಿ ಪ್ರತಿಭಟನೆ ಮಾಡುತ್ತಾರೆ ಎಂದರು.

ಪ್ರತಾಪ್ ಸಿಂಹ ಮಹಾನ್ ಕೋಮುವಾದಿ

ಮಾಜಿ ಸಂಸದ ಪ್ರತಾಪ್ ಸಿಂಹ ಮುಖ್ಯಮಂತ್ರಿಗಳು ಸಂಪೂರ್ಣ ಮುಸ್ಲಿಂ ಆಗಿದ್ದಾರೆ ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರೊಬ್ಬ ಮಹಾನ್ ಕೋಮುವಾದಿ. ಕೋಮುವಾದಿಗಳಿಂದ ಇನ್ನೇನು ನಿರೀಕ್ಷೆ ಮಾಡಲಾಗುತ್ತದೆ. ಅವರಿಗೆ ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ಗೌರವವಿಲ್ಲ. ಕೋಮುವಾದ ಮಾಡುವುದೇ ಅವರ ಕಸುಬು. ಸಮಾಜವನ್ನು ಜಾತಿ, ಧರ್ಮದ ಹೆಸರಿನಲ್ಲಿ ಒಡೆಯುವುದೇ ಅವರ ರಾಜಕಾರಣ. ಕೋಮುವಾದದಲ್ಲಿ ತೊಡಗಿ ರಾಜಕೀಯದಲ್ಲಿ ಬದುಕಲು ಹಾಗು ಮತ ಪಡೆಯಲು ಪ್ರಯತ್ನ ಮಾಡುತ್ತಾರೆ ಎಂದರು.

ಗ್ಯಾರಂಟಿ ಯೋಜನೆಗಳು ಅಭಿವೃದ್ಧಿಯಲ್ಲವೇ?

ಅಭಿವೃದ್ಧಿ ಬಗ್ಗೆ ಚರ್ಚೆ ಯಾರೊಬ್ಬರೂ ಮಾಡುತ್ತಿಲ್ಲ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ, ಗ್ಯಾರಂಟಿ ಯೋಜನೆಗಳು ಅಭಿವೃದ್ಧಿಯಲ್ಲವೇ? ಹಿಂದೆ ಸಿಎಂ ಆಗಿದ್ದಾಗ 165 ಭರವಸೆ ಕೊಟ್ಟು 158 ಭರವಸೆಗಳನ್ನು ಈಡೇರಿಸಿದೆವು. ಅವು ಅಭಿವೃದ್ಧಿಯಲ್ಲವೆ ಎಂದು ಪ್ರಶ್ನಿಸಿದರು. 3 ಲಕ್ಷದ 71 ಸಾವಿರ ಕೋಟಿ ರೂಪಾಯಿಗಳಲ್ಲಿ 52 ಸಾವಿರ ಕೋಟಿ ಗ್ಯಾರಂಟಿಗಳಿಗೆ ವೆಚ್ಚ ಮಾಡುತ್ತಿದ್ದೇವೆ. ಸುಮಾರು 60 ಸಾವಿರ ಕೋಟಿ ಅಭಿವೃದ್ಧಿಗೆ ವೆಚ್ಚ ಮಾಡುತ್ತಿದ್ದೇವೆ. ನೀರಾವರಿ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ರಸ್ತೆ, ಸೇತುವೆ, ನಿರ್ಮಾಣಕ್ಕಾಗಿ ವೆಚ್ಚವಾಗುತ್ತಿದೆ ಇವೆಲ್ಲ ಅಭಿವೃದ್ದಿಯಲ್ಲವೇ ಎಂದರು.

ಈ ಸುದ್ದಿಯನ್ನೂ ಓದಿ | Khalistani attack : ಕೆನಡಾದಲ್ಲಿ ಹಿಂದೂಗಳೇ ಟಾರ್ಗೆಟ್‌? ಪೊಲೀಸರಿಂದಲೂ ನಡೀತಿದೆ ಭೀಕರ ಹಲ್ಲೆ-ಮತ್ತೊಂದು ಶಾಕಿಂಗ್‌ ವಿಡಿಯೋ ವೈರಲ್‌

ಶಿಗ್ಗಾಂವಿಯಲ್ಲಿ ನೂರಕ್ಕೆ ನೂರು ಗೆಲ್ಲಲಿದ್ದೇವೆ : ಸಿಎಂ ವಿಶ್ವಾಸ

ಇಂದು ಮತ್ತು ನಾಳೆ ಎರಡು ದಿನ ಶಿಗ್ಗಾಂವಿ ಕ್ಷೇತ್ರದಲ್ಲಿ ಪ್ರಚಾರ ಮಾಡಲಾಗುವುದು. ಶಿಗ್ಗಾಂವಿ ಕ್ಷೇತ್ರದಲ್ಲಿ ಹಿಂದೆಯೂ ಪ್ರಚಾರ ಮಾಡಿದ್ದೇನೆ. ಕೊನೆಯಲ್ಲಿ ಅಭ್ಯರ್ಥಿಯನ್ನು ನಿಗದಿ ಮಾಡಿದ್ದರಿಂದ ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡಲಾಗಲಿಲ್ಲ. ಈ ಬಾರಿ ಮೂರು ದಿನ ಶಿಗ್ಗಾಂವಿ ಭೇಟಿ ನೀಡುತ್ತಿದ್ದು, ಶಿಗ್ಗಾಂವಿ ಯಲ್ಲಿ ನೂರಕ್ಕೇ ನೂರು ಗೆಲ್ಲಲಿದ್ದೇವೆ ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಲೀಡ್ ಬಂದಿತ್ತು. ಈ ಬಾರಿಯೂ ಕೂಡ ನಮಗೆ ಮುನ್ನಡೆ ದೊರೆಯುವ ಪರಿಸ್ಥಿತಿ ಇದ್ದು ನಾವು ಗೆಲ್ಲುತ್ತೇವೆ ಎಂದು ತಿಳಿಸಿದರು.

ಬೊಮ್ಮಾಯಿ ಏನು ಹೇಳಿದ್ದರು?

2022ರಲ್ಲಿ ಮುಸ್ಲಿಂ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ವಕ್ಫ್ ಬೋರ್ಡ್ ಆಸ್ತಿಯನ್ನು ಉಳಿಸಿಕೊಳ್ಳಿ. ಎಲ್ಲವನ್ನೂ ಊಪರ್ ವಾಲ (ದೇವರು) ನೋಡುತ್ತಿರುತ್ತಾನೆ ಎಂದು ಭಾಷಣ ಮಾಡಿದ್ದರು. ವಕ್ಫ್ ಆಸ್ತಿ ಅಲ್ಲಾನದ್ದು, ಅದನ್ನು ಕಾಪಾಡಿಕೊಳ್ಳುವುದು ನಿಮ್ಮ ಡ್ಯೂಟಿ, ಅದನ್ನು ಮರಳಿ ಪಡೆಯಲು ಯಾವುದೇ ಕಾಂಪ್ರಮೈಸ್ ಮಾಡಿಕೊಳ್ಳಬೇಡಿ. ಕಾಂಪ್ರಮೈಸ್ ಮಾಡಿಕೊಂಡರೆ ನಾವೇನೂ ಮಾಡಲು ಸಾಧ್ಯವಾಗುವುದಿಲ್ಲ ಎಂದು ವಕ್ಫ್‌ ಬೋರ್ಡ್‌ನವರಿಗೆ ಹೇಳಿದ್ದರು. ಅಂದು ವಕ್ಫ್‌ ಆಸ್ತಿ ಕಾಪಾಡುತ್ತೇವೆ ಎಂದು ಹೇಳಿ, ಇಂದು ನೋಟಿಸ್‌ ನೋಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್‌ ನಾಯಕರು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ವಕ್ಫ್‌ ಆಸ್ತಿ ಬಗ್ಗೆ ಮಾತನಾಡಿದ್ದ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.