Friday, 13th December 2024

Waqf Board: ವಕ್ಫ್ ಬೋರ್ಡ್‌ ವಿರುದ್ಧ ಬಿಜೆಪಿ ರಣಕಹಳೆ, ಇಂದು ರಾಜ್ಯಾದ್ಯಂತ ಪ್ರತಿಭಟನೆ

ಬೆಂಗಳೂರು: ಇಂದು ರಾಜ್ಯಾದ್ಯಂತ ವಕ್ಫ್​​ ಬೋರ್ಡ್​ (Waqf Board) ವಿರುದ್ಧ ಬಿಜೆಪಿ ರಣಕಹಳೆ ಮೊಳಗಿಸಲಿದೆ. ವಕ್ಫ್ ವಿವಾದವನ್ನು ಗಂಭೀರವಾಗಿ ಪರಿಗಣಿಸಿರುವ ಪ್ರತಿಪಕ್ಷ ಉಪಚುನಾವಣೆ ಹೊತ್ತಲ್ಲೇ ಸರ್ಕಾರದ (Karnataka Government) ವಿರುದ್ಧ ಪ್ರತಿಭಟನೆ ತೀವ್ರಗೊಳಿಸುತ್ತಿದ್ದು, ಇಂದು ರಾಜ್ಯಾದ್ಯಂತ ಪ್ರತಿಭಟನೆ (BJP protest) ಹಮ್ಮಿಕೊಂಡಿದೆ.

ವಕ್ಫ್‌ ಆಸ್ತಿ ಕುರಿತ ಗೆಜೆಟ್‌ ಅಧಿಸೂಚನೆ ಹಿಂಪಡೆಯಬೇಕು, ಅಧಿಕಾರ ದುರ್ಬಳಕೆಯ ಕುರಿತು ಸಿಬಿಐ ತನಿಖೆ ನಡೆಸಬೇಕು ಹಾಗೂ ವಿವಾದಕ್ಕೆ ಕಾರಣವಾದ ವಕ್ಫ್ ಖಾತೆ ಸಚಿವ ಜಮೀರ್ ಅಹಮದ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಎಲ್ಲ ತಾಲೂಕುಗಳ ತಾಲೂಕು ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪಕ್ಷದ ಎಲ್ಲ ಹಂತದ ಮುಖಂಡರು ಹಾಗೂ ಕಾರ್ಯಕರ್ತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ತಿಳಿಸಿದೆ.

ಬಳ್ಳಾರಿಯಲ್ಲಿ ಬೆಳಗ್ಗೆ 11 ಗಂಟೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ನೇತೃತ್ವದಲ್ಲಿ ಧರಣಿ ನಡೆಯಲಿದೆ. ವಕ್ಫ್​ ಬೋರ್ಡ್ ಮತ್ತು ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ಹೊರಹಾಕಲಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಮುಖಂಡರು ಹಾಗೂ ಉಸ್ತುವಾರಿಗಳ ನೇತೃತ್ವದಲ್ಲಿ ಪ್ರತಿಭಟನೆ, ರಸ್ತೆ ತಡೆ ಹಾಗೂ ಜೈಲ್‌ ಭರೋ ಉದ್ದೇಶಿಸಲಾಗಿದೆ.

ಬಿಜೆಪಿ ಪ್ರತಿಭಟನೆಗೆ ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ. ಗ್ಯಾರಂಟಿಗಳನ್ನು ನಿಲ್ಲಿಸುವಂತೆ ಮಾಡಬೇಕು ಎಂದು ಬಿಜೆಪಿ ಒಳಸಂಚು ಮಾಡಿದೆ. ವಕ್ಫ್‌ ನೋಟಿಸ್ ಹಿಂಪಡೆಯುವಂತೆ ಸೂಚಿಸಿದ ಮೇಲೂ, ಬಿಜೆಪಿ ಯಾವ ಕಾರಣಕ್ಕಾಗಿ ಪ್ರತಿಭಟನೆ ನಡೆಸುತ್ತಿದೆ? ರಾಜಕೀಯ ಲಾಭ ಪಡೆಯುವುದು ಬಿಜೆಪಿಯ ಹುಟ್ಟು ಗುಣವಾಗಿದೆ ಎಂದು ಕಿಡಿಕಾರಿದ್ದಾರೆ.

ಈಗಾಗಲೇ ನೋಟಿಸ್ ಹಿಂಡಪೆಯಲು, ಪಹಣಿಯಲ್ಲಿ ವಕ್ಫ್ ಹೆಸರು ತೆಗೆಯಲು ಸಿಎಂ ಸಿದ್ದರಾಮಯ್ಯ ಖಡಕ್ ಆದೇಶ ಮಾಡಿದ್ದಾರೆ. ಆದರೆ, ವಕ್ಫ್ ವಿವಾದವನ್ನೇ ಕೈಗೆತ್ತಿಕೊಂಡು ಬೃಹತ್ ಹೋರಾಟಕ್ಕೆ ಬಿಜೆಪಿ ಸಜ್ಜಾಗಿದೆ.

ಇದನ್ನೂ ಓದಿ: CM Siddaramaiah: ವಕ್ಫ್ ಆಸ್ತಿ ವಿವಾದ; ರಾಜಕೀಯ ಲಾಭಕ್ಕೆ ಬಿಜೆಪಿ ನಾಯಕರ ಪ್ರತಿಭಟನೆ ಎಂದ ಸಿಎಂ