Saturday, 5th October 2024

ತ್ಯಾಜ್ಯ ನೀರಿನಿಂದಲೂ ಕರೋನಾ ಬರುವ ಸಾಧ್ಯತೆ 

ವಿಶ್ವ ಆರೋಗ್ಯ ಸಂಸ್ಥೆಯಿಂದ ಒಪ್ಪಿಗೆ, ಬೆಂಗಳೂರಿನ ಕಣಿವೆಗಳು ಅಪಾಯ, ಸರಕಾರಕ್ಕೆ ವರದಿ ಸಲ್ಲಿಕೆ 
ಡಾ.ಯಲ್ಲಪ್ಪಾ ರೆಡ್ಡಿ ನೇತೃತ್ವದಲ್ಲಿ ಅಧ್ಯಯನ, ಪಾದರಾಯನಪುರ, ಬಾಪೂಜಿನಗರ ಪರೀಕ್ಷೆಗೆ
ಶಿವಕುಮಾರ್ ಬೆಳ್ಳಿತಟ್ಟೆ,
ಬೆಂಗಳೂರು 
ಕ್ರೂರಿ ಕರೋನಾ ತಡೆಯಲು ವಿಶ್ವವೇ ಈಗ ಪದೇಪದೇ ಕೈ ತೊಳೆಯಿರಿ ಎನ್ನುತ್ತಿದೆ. ಆದರೆ ವಿಶ್ವದ ಐದಕ್ಕೂ ಹೆಚ್ಚು ರಾಷ್ಟ್ರಗಳು ಕೈ ತೊಳೆಯುವ ನೀರು ಕೂಡ ಕಿಲ್ಲರ್ ಕರೋನಾ ರೋಗ ಹರಡಬಲ್ಲದು ಎಂದು ಎಚ್ಚರಿಸಿವೆ.
ರೋಗಿಯ ಮಲ, ಮೂತ್ರ ಸೇರಿರುವ ತ್ಯಾಜ್ಯ ನೀರಿನಲ್ಲಿ ಕರೋನಾ ವೈರಾಣು ಸಕ್ರಿಯವಾಗಿರುತ್ತವೆ. ಇದನ್ನು ಮುಟ್ಟುವವರಿಗೆ ಸೋಂಕು ತಗಲುವ ಸಾಧ್ಯತೆ ಇರುತ್ತದೆ ಎಂದು ಅಧ್ಯಯನಗಳು ಹೇಳಿವೆ. ಇದನ್ನು ವಿಶ್ವ ಆರೋಗ್ಯ ಸಂಸ್ಥೆಯೂ ಒಪ್ಪಿಕೊಂಡಿದ್ದು, ಈ ಬಗ್ಗೆ ಮಾರ್ಗಸೂಚಿಗಳನ್ನೂ ನೀಡಿದೆ. ಇದನ್ನಾಧರಿಸಿ ದೇಶದಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲೂ ಅಧ್ಯಯನ ನಡೆಸಲಾಗಿದೆ. ಅದರಲ್ಲೂ ವಿಶೇಷವಾಗಿ ದೇಶದ ಗಮನ ಸೆಳೆದಿರುವ ಕರೋನಾ ಹಾಟ್ ಸ್ಪಾಟ್ ಪಾದರಾಯನಪುರ ಹಾಗೂ ಬಾಪೂಜಿನಗರ ಪ್ರದೇಶಗಳಲ್ಲಿ ಹಾದು ಹೋಗುವ ವೃಷಭಾವತಿ ಕಣಿವೆಯಲ್ಲಿನ ತ್ಯಾಜ್ಯ ನೀರಿನಲ್ಲೂ ಕರೋನಾ ಸೋಂಕು ವ್ಯಾಪಿಸುವ ಸಾಧ್ಯತೆ ಬಗ್ಗೆ ಆತಂಕ ಪಡಿಸಲಾಗಿದೆ.
ಈ ಮೂಲಕ  ನಾಡಿನ ಜೀವನದಿ ಕಾವೇರಿಗೂ ಕರೋನಾ ಅಂಟಿಕೊಂಡರೂ ಅಚ್ಚರಿ ಇಲ್ಲಎನ್ನುವ ಬಗ್ಗೆ ಬೆಂಗಳೂರು  ಎನ್ ವೈರ್ನಮೆಂಟ ಟ್ರಸ್ಟ್ ಸಂಸ್ಥೆ  ಹೇಳಿದೆ.
ಪರಸರವಾದಿ ಡಾ.ಯಲ್ಲಪ್ಪಾ ರೆಡ್ಡಿ ನೇತೃತ್ವದ ಪರಿಸರ ತಜ್ಞರು, ತಂತ್ರಜ್ಞರನ್ನು ಒಳಗೊಂಡು ಈ ಸಂಸ್ಥೆ ವಿಶ್ವದ ಇತರ ರಾಷ್ಟ್ರಗಳಲ್ಲಿ ನೀರಿನಲ್ಲಿ ಕರೋನಾ ಹರಡುವ ಬಗ್ಗೆ ನಡೆಸಿರುವ ಅಧ್ಯಯನಗಳ ಸಾರವನ್ನು ಸಂಗ್ರಹಿಸಿದೆ.
ಇದನ್ನು ಭಾರತದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಹರಿಯವ ತ್ಯಾಜ್ಯ ನೀರು ಕರೋನಾದಿಂದ ಎಷ್ಟು ಸೇಫ್ ಎನ್ನುವ ಸಿಟಿಜನ್ ಸೈಂಟಿಫಿಕ್ ಇನ್ ವೆಸ್ಟಿಗೇಷನ್ ಎಂಬ ಹೆಸರಿನಲ್ಲಿ ಅಧ್ಯಯನ ನಡೆಸಿಲಾಗಿದೆ. ತ್ಯಾಜ್ಯ ನೀರನ್ನು ಹೇಗೆಲ್ಲಾ ಪರೀಕ್ಷೆ ನಡೆಸಿ ರೋಗ ಪತ್ತೆ ಮಾಡಬೇಕನ್ನು ಎನ್ನು ವ ವಿಧಾನಗಳ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಿದೆ.
ಇಲ್ಲಿ ನೀರಿನ ಬಗ್ಗೆ ಎಚ್ಚರವೇ ಇಲ್ಲ
ಕರೋನಾ ಕೇವಲ ಗಾಳಿಯಿಂದ  ಮತ್ತು ಸಂಪರ್ಕದಿಂದ ಮಾತ್ರ ಬರುತ್ತದೆ ಎಂದು ಭಾವಿಸಲಾಗಿತ್ತು. ಆದರೆ ನೆದರ್ ಲ್ಯಾಂಡ್ ನಲ್ಲಿ ಮೊದಲ ಬಾರಿಗೆ ತ್ಯಾಜ್ಯ ನೀರಿನಲ್ಲಿ ಹರಡುವುದೇ ಎಂದು ಪರೀಕ್ಷಿಸಲಾಗಿತ್ತು. ಅಲ್ಲಿ ರೋಗಿಗಳ ಮಲ, ಮೂತ್ರ ಸೇರಿದ ತ್ಯಾಜ್ಯ ನೀರಿನಲ್ಲಿ ಸೋಂಕು ಹೆಚ್ಚು ಕಾಲ ಬದುಕುಳಿಯುತ್ತದೆ ಎನ್ನುವುದು ಪತ್ತೆಯಾಗಿತ್ತು. ನಂತರ ಬೆಲ್ಜಿಯಂ, ಪ್ರಾನ್ಸ್ ಮತ್ತು ಅಮೆರಿಕಾದ ವಿವಿಧ ವೈರಾಲಾಜಿ ಪ್ರಯೋಗಾಲಯಗಳಲ್ಲೂ ಇದು ಸಾಬೀತಾಗಿತ್ತು. ಇದನ್ನು ಒಪ್ಪಿಕೊಂಡು ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ಜಾಗ್ರತೆ ವಹಿಸುವ ಬಗ್ಗೆ ಜಗತ್ತಿಗೆ ಸೂಕ್ತ ಮಾರ್ಗಸೂಚಿ ನೀಡುವುದಾಗಿಯೂ ಹೇಳಿತ್ತು. ಆದರೆ ಇನ್ನೂ ಮಾರ್ಗಸೂಚಿ ನೀಡಿಲ್ಲ. ಹೀಗಾಗಿ  ಆದರೂ ವಿಶ್ವದ ಅನೇಕ ರಾಜ್ಯಗಳಲ್ಲಿ ತ್ಯಾಜ್ಯ ನೀರನ್ನು ಪರೀಕ್ಷೆಗೊಳಪಡಿಸಿ, ನೀರನ್ನು  ಕರೋನಾ ಮುಕ್ತಗೊಳಿಸುತ್ತಿದೆ. ಆದರೆ ನಮ್ಮಲ್ಲಿ ಮಾತ್ರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುತ್ತಾರೆ ಬೆಂಗಳೂರು  ಎನ್ ವೈರ್ನಮೆಂಟ ಟ್ರಸ್ಟ್  ನ ಪರಿಸರ ತಜ್ಞೆ ನಿರ್ಮಾಲಾ ಗೌಡ ಹೇಳುತ್ತಾರೆ.
ಬಾಕ್ಸ್
ಬೆಂಗಳೂರಿಗೆ ಹೇಗೆ ಅಪಾಯ
ಬೆಂಗಳೂರಿನಲ್ಲಿ ಹೆಚ್ಚು ಕರೋನಾ ಸೋಂಕಿತರಿದ್ದಾರೆ ಎಂದು ಸೀಲ್ ಡೌನ್ ಮಾಡಿದ್ದರಿಂದ ಸಿಟಿ ಜನ್  ಸೈಂಟಿಫಿಕ್ ಇನ್ ವೆಸ್ಟಿಗೇಷನ್  ಪಾದರಾಯನಪುರ ಮತ್ತು ಬಾಪೂಜಿ ನಗರವನ್ನೇ ಆಯ್ಕೆ  ಮಾಡಿಕೊಂಡಿದೆ. ಇಲ್ಲಿ ತ್ಯಾಜ ನೀರು ಹರಿಯುವ ವೃಷಭಾವತಿ ಬಗ್ಗೆ ಪರಿಶೀಲಿಸಲಾಗಿ ಇಲ್ಲಿನ  ವೃಷಭಾವತಿ, ಮೈಲುಸಂದ್ರ, ಕೆಂಗೇರಿ ಹಾಗೂ ದೊಡ್ಡಬೆಲೆ ಬಳಿ  ಇರುವ ತ್ಯಾಜ್ಯ ಸಂಸ್ಕರಣಾ ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಇಲ್ಲಿ ಕರೋನಾ ರೋಗಿಯ ಮಲಮೂತ್ರದ ಮೂಲಕ ರೋಗ ಹರಡುತ್ತಿರಬಹುದು ಎಂದು ಶಂಕಿಸಲಾಗಿದೆ. ಆದ್ದರಿಂದ  ಈ ತ್ಯಾಜ್ಯ ನೀರಿನಲ್ಲಿ ಕರೋನಾ ಪತ್ತೆ ಮಾಡಬೇಕು. ಇದರಲ್ಲಿ ವೈರಸ್ ಪತ್ತೆಯಾದರೆ ಅದನ್ನು ಜನರು ಮುಟ್ಟು ಸೋಂಕಿತರಾಗದಂತೆ ನೀರನ್ನು ವೈರಸ್ ಮುಕ್ತವಾಗಿ ಸಂಸ್ಕರಿಸಬೇಕಾಗುತ್ತದೆ ಎನ್ನುವುದನ್ನು ಸೈಂಟಿಫಿಕ್ ಇನ್ ವೆಸ್ಟಿಗೇಷನ್ ತಂಡದ ತಜ್ಞರು ಹೇಳಿದ್ದಾರೆ.
ಏಕೆಂದರೆ, ರೋಗಿಯ ಮಲಮೂತ್ರದಲ್ಲಿ ಇರುವ ಕರೋನಾ ವೈರಸ್ ನೀರಿನಲ್ಲಿ ಸೇರಿದಾಗ ದ್ವಿಗುಣವಾಗುವುದಿಲ್ಲ. ಆದರೆ ರೋಗಿ ಮಲದಲ್ಲಿ ಹೆಚ್ಚು ಕಾಲ ಉಳಿಯುತ್ತದೆ ಎನ್ನುವುದು ಪರೀಕ್ಷೆಯಿಂದ ಸಾಬೀತಾಗಿದೆ. ಹೀಗಾಗಿ ವೃಷಭಾವತಿ ನೀರನ್ನು ಕರೋನಾ ಮುಕ್ತಗೊಳಿಸಬೇಕಿದೆ. ಇಲ್ಲವಾದರೆ, ಈ ಕಣಿವೆ ಬೆಂಗಳೂರಿನಿಂದ ಮುಂದೆ ಕಾವೇರಿ ಸೇರಿ ಅದನ್ನೂ ಕರೋನಾಗೊಳಿಸಬಹುದು. ಹಾಗೆಯೇ ಕೆ.ಸಿ.ವ್ಯಾಲಿಯ ಮಲಿನ ನೀರು ಕೋಲಾರ, ದೊಡ್ಡಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರದಲ್ಲಿ ರೈತರ ಬಳಕೆಗೆ ಹೋಗುತ್ತಿದ್ದು, ಇದರಿಂದ ಆಗುವ ಅನಾಹುತಗಳನ್ನು ತಡೆಯಬೇಕಿದೆ. ಇದರ ಹೊಣೆ ಬಿಬಿಎಂಪಿ, ಬಿಡಿಎ, ಜಲಮಂಡಳಿ, ಪರಿಸರ ನಿಯಂತ್ರಣ ಮಂಡಳಿ, ಸಣ್ಣ  ನೀರಾವರಿ ಇಲಾಖೆಗೆ ಸೇರಿದೆ ಎಂದು ಅಧ್ಯಯನ ವರದಿಯಲ್ಲಿದೆ.
ಕೋಟ್
ಈತನಕ ಗಾಳಿಯಲ್ಲಿ ಮಾತ್ರ ಕರೋನಾ ಸೋಂಕು ಹರಡುತ್ತದೆ ಎಂದು ಕೇಳಿದ್ದೆವು. ಈಗ ನೀರಿನಿಂದಲೂ ಹರಡುವ ಸಾಧ್ಯತೆ ಇದೆ. ಈ ಬಗ್ಗೆ ಸರಕಾರಕ್ಕೆ ಮಾಹಿತಿಗಳನ್ನು ಒಳಗೊಂಡು ವರದಿ ಸಲ್ಲಿಸಲಾಗಿದೆ. ಈ ಬಗ್ಗೆ ಗಂಭೀರ ಕ್ರಮ ಆಗತ್ಯವಿದೆ.
ಡಾ.ಎ.ಎನ್. ಯಲ್ಲಪ್ಪಾ ರೆಡ್ಡಿ, ಪರಿಸರವಾದಿ, ಬೆಂಗಳೂರು  ಎನ್ ವೈರ್ನಮೆಂಟ ಟ್ರಸ್ಟ್ ಅಧ್ಯಕ್ಷ