Saturday, 5th October 2024

ನ್ಯಾಯಾಲಯಗಳಲ್ಲಿ ವಕೀಲರ ರಕ್ಷಣೆಗಾಗಿ ಭದ್ರತೆ ಒದಗಿಸಬೇಕು: ಬೆಂಗಳೂರು ವಕೀಲರ ಸಂಘ ಒತ್ತಾಯ

ಬೆಂಗಳೂರು: ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ವಕೀಲರ ರಕ್ಷಣೆಗಾಗಿ ಸೂಕ್ತ ಭದ್ರತೆಯನ್ನು ತಕ್ಷಣವೇ ಒದಗಿಸಬೇಕು ಹಾಗೂ ರಕ್ಷಣಾ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಬೇಕೆಂದು ರಾಜ್ಯ ಸರ್ಕಾರವನ್ನು ಬೆಂಗಳೂರು ವಕೀಲರ ಸಂಘ ಒತ್ತಾಯಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಅವರು, ವಕೀಲರುಗಳ ಮೇಲೆ ಹಲ್ಲೆ, ಹತ್ಯೆ, ಪ್ರಾಣ ಬೆದರಿಕೆಗಳು ನ್ಯಾಯಾಲಯದ ಆವರಣದಲ್ಲಿಯೇ ನಡೆಯುತ್ತಿರುವುದು ಕಾನೂನು ಸುವ್ಯವಸ್ಥೆ ಕುಸಿಯುತ್ತಿರುವುದು ದ್ಯೋತಕವಾಗಿದೆ. ಹಾಗಾಗಿ, ಘಟನೆಗಳು ಮರುಕಳಿಸದಂತೆ ತುರ್ತಾಗಿ ರಾಜ್ಯದ ಎಲ್ಲಾ ನ್ಯಾಯಾಲಯ ಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.

ದೆಹಲಿಯ ರೋಹಿಣಿ ನ್ಯಾಯಾಲಯ ದಲ್ಲಿ ನಡೆದ ಘಟನೆ ನ್ಯಾಯಾಂಗದ ಮೇಲೆ ನಡೆದ ದಾಳಿಯಾಗಿದ್ದು, ಇಂತಹ ಘಟನೆಗಳು ಜನರಲ್ಲಿ ಭೀತಿ ಮೂಡಿಸುವ ಜೊತೆಗೆ ಕಾನೂನಿನ ಮೇಲೆ ವಿಶ್ವಾಸ ಕಡಿಮೆ ಮಾಡುತ್ತದೆ.

ತಾವು ಕೂಡ ಶೀಘ್ರದಲ್ಲಿ ಕಾಯ್ದೆಯನ್ನು ಜಾರಿಗೆ ತರುವ ಭರವಸೆ ನೀಡಿದ್ದಿರಿ. ದೆಹಲಿಯಲ್ಲಿ ನಡೆದ ಶೂಟೌಟ್ ಪ್ರಕರಣ ಸಮಾಜಘಾತುಕ ಶಕ್ತಿಗಳು ಯಾವುದೇ ಭಯವಿಲ್ಲದೆ ಏನು ಬೇಕಾದರೂ ಮಾಡುತ್ತೇವೆ ಎಂದು ಸಂದೇಶ ರವಾನಿಸಿದ್ದಾರೆ. ಇಂತಹ ಘಟನೆಗಳಿಂದ ನಿರ್ಭೀತಿಯಿಂದ ವಕೀಲರು ನ್ಯಾಯಾಲಯಗಳಲ್ಲಿ ಕೆಲಸ ಮಾಡುವ ಬದಲು ಭಯಭೀತಿಯ ವಾತಾವರಣ ನಿರ್ಮಾಣವಾಗಿರುವುದು ದುರದೃಷ್ಟಕರ ಎಂದಿದ್ದಾರೆ.