Wednesday, 11th December 2024

Winter session: ಡಿ.9 ರಿಂದ 20 ರವರೆಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ

Winter session

ಬೆಳಗಾವಿ: ವಿಧಾನಮಂಡಲದ ಚಳಿಗಾಲದ ಅಧಿವೇಶನ (Winter session) ಡಿಸೆಂಬರ್ 9 ರಿಂದ 20 ರವರೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿದ್ದು, ದಿನಾಂಕವನ್ನು ಸಚಿವ ಸಂಪುಟ ಅಂತಿಮಗೊಳಿಸಲಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರೊಂದಿಗೆ ಸುವರ್ಣ ವಿಧಾನಸೌಧಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸ್ಪೀಕರ್ ಯು.ಟಿ.ಖಾದರ್ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಚಳಿಗಾಲದ ಅಧಿವೇಶನದ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದರು.

ಈ ಅಧಿವೇಶನದಲ್ಲಿಯೂ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಮಯ ನಿಗದಿಪಡಿಸಲಾಗುವುದು. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳೊಂದಿಗೆ ಈ ಪ್ರದೇಶದ ಹೆಚ್ಚಿನ ಜನರು ಉಭಯ ಸದನಗಳ ಕಲಾಪಗಳಿಗೆ ಸಾಕ್ಷಿಯಾಗಲು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪಾಸ್‌ಗಳು ಲಭ್ಯವಾಗುವಂತೆ ಮಾಡಲಾಗುವುದು ಎಂದು ಹೇಳಿದರು.

ಅಧಿವೇಶನಕ್ಕೆ ಶಾಸಕರ ಹಾಜರಾತಿ ಹೆಚ್ಚಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅಧಿವೇಶನದ ಸಮಯದಲ್ಲಿ ಸುವರ್ಣ ಸೌಧಕ್ಕೆ ಭೇಟಿ ನೀಡುವ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಸಿಎಂ, ಸಚಿವರು ಮತ್ತು ಶಾಸಕರಿಗೆ ಅನನುಕೂಲ ಆಗದಂತೆ ನಿಗಾವಹಿಸಬೇಕು. ಸಚಿವಾಲಯದ ಅಧಿಕಾರಿ, ಸಿಬ್ಬಂದಿ, ಚಾಲಕರಿಗೆ ಹಾಗೂ ಪೊಲೀಸರಿಗೆ ವಸತಿ, ನೀರು, ಊಟ, ಉಪಾಹಾರದ ವ್ಯವಸ್ಥೆ ಸರಿಯಾಗಿ ಮಾಡಬೇಕು. ಪ್ರತಿಭಟನಾ ಸ್ಥಳಗಳಲ್ಲೂ ಸೂಕ್ತ ಸೌಲಭ್ಯ ನೀಡಲು ಸೂಚಿಸಿದ್ದೇವೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | S M Krishna: ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

ಬೆಳಗಾವಿಯಲ್ಲಿ ಶಾಸಕರ ಭವನ ನಿರ್ಮಾಣ ಚರ್ಚೆ ಆಗಿದೆ. ಪ್ರತಿ ವರ್ಷ ಅಧಿವೇಶನ ವೇಳೆ ವಸತಿಗಾಗಿ 6 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಭವನ ನಿರ್ಮಿಸಿದರೆ ಇದನ್ನು ತಗ್ಗಿಸಬಹುದು. ವರ್ಷದಿಂದ ವರ್ಷಕ್ಕೆ ವಸತಿ ವೆಚ್ಚ ಹೆಚ್ಚುತ್ತಲೇ ಇದೆ. ಈವರೆಗೆ ವ್ಯಯಿಸಿದ ವೆಚ್ಚದಲ್ಲಿ ದೊಡ್ಡ ಕಟ್ಟಡವೇ ನಿರ್ಮಾಣವಾಗುತ್ತಿತ್ತು. ಈ ಬಗ್ಗೆ ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಲಾಗುವುದು ಎಂದು ಹೇಳಿದರು.