Friday, 13th December 2024

ವರ್ಷವಿಡೀ ವರ್ಗಾವಣೆ: ಬಿಜೆಪಿಯಲ್ಲೇ ಆಕ್ಷೇಪಣೆ

2 ತಿಂಗಳಲ್ಲಿ ಸಾವಿರಕ್ಕೂ ಅಧಿಕ ಅಧಿಕಾರಿ, ಸಿಬ್ಬಂದಿ ಎತ್ತಂಗಡಿ, ಸರಕಾರದಲ್ಲಿ ಆದೇಶಗಳ ಸುರಿಮಳೆ

ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ರಾಜ್ಯದಲ್ಲಿ ಸಚಿವ ಸಂಪುಟ ನಿರ್ಧಾರ ಮತ್ತು ಸರಕಾರದ ನಿಯಮಗಳನ್ನು ಉಲ್ಲಂಘಿಸಿ ಅಪಾರ ಸಂಖ್ಯೆಯ ಅಧಿಕಾರಿಗಳ ವರ್ಗಾವಣೆ ನಡೆಸಲಾಗುತ್ತಿದ್ದು, ಇದಕ್ಕೆ ಪಕ್ಷದೊಳಗೇ ಅಸಮಾಧಾನ ಶುರುವಾಗಿದೆ.

ಅದರಲ್ಲೂ ಎರಡು ತಿಂಗಳಲ್ಲಿ ಸಾವಿರಕ್ಕೂ ಹೆಚ್ಚಿನ ಅಧಿಕಾರಿಗಳ ವರ್ಗಾವಣೆ ನಡೆದಿದ್ದು, ಕೆಲವು ಪ್ರಕರಣಗಳು ಮಾತ್ರ ಬೆಳಕಿಗೆ ಬಂದಿವೆ. ಈ ಮಧ್ಯೆ, ರಾಜ್ಯ ಸರಕಾರ ಉಪ ಚುನಾವಣೆ ಮತ್ತು ನಿತ್ಯ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ನಡುವೆಯೂ
ಐಎಎಸ್, ಕೆಎಎಸ್ ಹಾಗೂ ವಿವಿಧ ಹಂತಗಳ ಅಧಿಕಾರಿಗಳ ವರ್ಗಾವಣೆ ಮಳೆಯನ್ನೇ ಸುರಿಸುತ್ತಿದ್ದು, ಇದನ್ನು ಪ್ರತಿಪಕ್ಷ ಸೇರಿದಂತೆ ಯಾವುದೇ ಪಕ್ಷಗಳು ಪ್ರಶ್ನಿಸುತ್ತಿಲ್ಲ.

ಬದಲಾಗಿ ಶಾಸಕ ಬಸನಗೌಡ ಪಾಟೀಲ್ ಮಾತ್ರ ಪ್ರಶ್ನಿಸುತ್ತಿದ್ದು, ಇವರು ಪಕ್ಷದೊಳಗಿನ ಟೀಕಾಕಾರರು ಎನ್ನುವ ಕಾರಣಕ್ಕೆ ಯತ್ನಾಳ್ ಆರೋಪಕ್ಕೆ ಮಹತ್ವ ಸಿಗುತ್ತಿಲ್ಲ. ಆದರೆ ಸರಕಾರ ಹರಿಸುತ್ತಿರುವ ವರ್ಗಾವಣೆಗಳ ಮಹಾಪೂರ ಮಾತ್ರ ಪಕ್ಷದೊಳಗೆ ದೊಡ್ಡ ಅಸಮಾಧಾನ ಸೃಷ್ಟಿಸಿದ್ದು, ಇದರ ವಿರುದ್ಧ ಮೂಲ ಬಿಜೆಪಿಯ ಕೆಲವರು ಪಕ್ಷದ ಹೈಕಮಾಂಡ್ ಗಮನಕ್ಕೂ
ತಂದಿದ್ದಾರೆ ಎನ್ನಲಾಗಿದೆ.

ವರ್ಗಾವಣೆ ನಿರ್ಧಾರಗಳು ಸರಕಾರದ ಯಶಸ್ಸು ಮತ್ತು ಪಕ್ಷದ ವರ್ಚಸ್ಸು ಹೆಚ್ಚಿಸುವ ನಿಟ್ಟಿನಲ್ಲಿ ನಡೆಯುತ್ತಿಲ್ಲ. ಬದಲಾಗಿ
ಕೇಲವೇ ಕೇಂದ್ರಗಳಲ್ಲಿ ಮಾತ್ರ ನಿರ್ಧಾರವಾಗಿ ಅದು ವರ್ಗಾವಣೆ ಆದೇಶವಾಗಿ ಹೊರಬರುತ್ತಿವೆ. ಇದರಿಂದ ಪಕ್ಷ ಮತ್ತು ಸರಕಾರದ ವರ್ಚಸ್ಸಿಗೆ ಧಕ್ಕೆಯಾಗಲಿದೆ ಎನ್ನುವ ಮಾಹಿತಿಯನ್ನು ಪಕ್ಷದ ಕೆಲವು ಹೈಕಮಾಂಡ್ ಗೆ ಮಾಹಿತಿ ರವಾನಿಸಿದ್ದಾರೆ
ಎಂದು ತಿಳಿದುಬಂದಿದೆ.

ನಿಯಮ ಹೇಳಿದ್ದೇನು, ಮಾಡಿದ್ದೇನು: ಯಾವುದೇ ಸರಕಾರ ಅಧಿಕಾರಕ್ಕೆ ಬಂದರೂ ಶಾಲೆಗಳ ಪ್ರಾರಂಭ ಮತ್ತು ಆರ್ಥಿಕ ವರ್ಷದ ಆರಂಭ ಗಮನದಲ್ಲಿಟ್ಟುಕೊಂಡು ಮೇ ತಿಂಗಳಲ್ಲಿ ಸರಕಾರಿ ಅಧಿಕಾರಿಗಳ ಸಾಮಾನ್ಯ ವರ್ಗಾವಣೆ ಆದೇಶ ಹೊರಡಿಸುತ್ತದೆ.
ಅದರಲ್ಲೂ ಪ್ರಮಾಣವನ್ನು ಶೇ.5ಕ್ಕೆ ಮೀರದಂತೆ ಎಂದು ನಿಗದಿ ಮಾಡುತ್ತದೆ. ಅದೇರೀತಿ 2020ರ ಜೂನ್ ನಲ್ಲಿ ಶೇ.5ರಷ್ಟು ಮೀರದಂತೆ ವರ್ಗಾವಣೆ ಮಾಡುವಂತೆ ಸಚಿವ ಸಂಪುಟ ತೀರ್ಮಾನಿಸಿತ್ತು.

ಅದರಂತೆ ಸರಕಾರ ಅದೇಶವೂ ಆಗಿತ್ತು. ನಂತರ ವರ್ಗಾವಣೆ ಪ್ರಕ್ರಿಯೆಗಳು ಗರಿಷ್ಠ 2 ತಿಂಗಳ ಒಳಗೆ ಪೂರ್ಣವಾಗಬೇಕಿತ್ತು. ಆದರೆ ಈ ಸರಕಾರದಲ್ಲಿ ಆದೇಶವಾಗಿ ವರ್ಷವೇ ಆಗುತ್ತಿದ್ದರೂ ವರ್ಗಾವಣೆ ಮಾತ್ರ ನಿಲ್ಲುತ್ತಿಲ್ಲ. ಅಷ್ಟೇ ಏಕೆ, ಇತ್ತೀಚಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ವರ್ಗಾವಣೆಯನ್ನು ನಿಲ್ಲಿಸಿ, ಅನಿವಾರ್ಯವಾದರೂ ಮಾತ್ರ ಗಮನಕ್ಕೆ ತಂದು ಮಾಡಿ ಎಂದು ಹೇಳಿದ್ದರೂ ಆದರೂ ವರ್ಗಾವಣೆಗಳು ಮಾತ್ರ ಎಗ್ಗಿಲ್ಲದೆ ನಡೆಯುತ್ತಿವೆ.

ಅಧಿಕಾರಿಗಳಿಗೆ ಟಾರ್ಗೆಟ್ ಇದೆಯೇ ?
ಐಎಎ, ಐಪಿಎಸ್ ಹಾಗೂ ಕೆಎಎಸ್ ಅಧಿಕಾರಿಗಳು ಗ್ರೂಪ್ ಎ ಗೆ ಬರುವುದರಿಂದ ನಿತ್ಯ ಹಿರಿಯ ಅಧಿಕಾರಿಗಳ ವರ್ಗಾವಣೆ ಮಾಡುತ್ತಾ ಇದನ್ನುಸರಕಾರ ಆಡಳಿತಾತ್ಮಕ ಬದಲಾವಣೆ ಎಂದು ಸಮರ್ಥಿಸುತ್ತದೆ. ಆದರೆ ವರ್ಗಾವಣೆಯಾಗಿ ಎರಡೇ ತಿಂಗಳಲ್ಲಿ
ಎತ್ತಂಗಡಿ ಹಾಗೂ ವರ್ಗಾವಣೆಯಾದರೂ ಸ್ಥಳ ನಿಯೋಜನೆ ಇಲ್ಲದಿರುವುದು ಮತ್ತು ಕೆಲವು ಅಧಿಕಾರಿಗಳಿಗೆ ನ್ಯಾಯಾಲಯ ಆದೇಶವಿದ್ದರೂ ವರ್ಗಾವಣೆ ಮಾಡಿರುವ ಪ್ರಕರಣಗಳು ಸಾಕಷ್ಟಿವೆ. ಇವು ಪಕ್ಷದ ಮುಖಂಡರನ್ನು ಕೆರಳಿಸಿವೆ ಎಂದು ಮೂಲ ಗಳು ತಿಳಿಸಿವೆ. ನಿಯಮದ ಪ್ರಕಾರ ನಿಯೋಜನೆಯಾದ ಅಧಿಕಾರಿಗಳನ್ನು 2ವರ್ಷಕ್ಕಿಂತ ಮುನ್ನವೇ ಎತ್ತಂಗಡಿ ಮಾಡುವಂತಿಲ್ಲ.

ಆದರೆ ಬಿಡಿಎ, ಬಿಬಿಎಂಪಿ, ಎಂಎಲ್ ಹಾಗೂ ಪ್ರಮುಖ ಜಿಲ್ಲಾ ಪಂಚಾಯತ್ ನಂಥ ಆಯಕಟ್ಟಿನ ಸ್ಥಳಗಳಲ್ಲಿ ಅನೇಕ ಅಧಿಕಾರಿ ಗಳನ್ನು ಅವಧಿಗೂ ಮುನ್ನವೇ ವರ್ಗಾವಣೆ ಮಾಡಲಾಗುತ್ತಿದೆ. ಇಂಥ ಅಧಿಕಾರಿಗಳಿಗೆ ಟಾರ್ಗೆಟ್ ನೀಡಲಾಗುತ್ತಿದ್ದು, ಟಾರ್ಗೆಟ್
ಮುಟ್ಟಲಾದವರನ್ನು ಎತ್ತಂಗಡಿ ಮಾಡಲಾಗುತ್ತಿದೆ ಎಂದೂ ಆರೋಪಿಸಲಾಗುತ್ತಿದೆ. ಈ ಮಧ್ಯೆ, ಅನೇಕ ನಿಗಮಗಳಿಗೆ
ಆಡಳಿತ ತರಬೇತಿ ಇರುವ ಐಎಎಸ್ ಅಧಿಕಾರಿಗಳ ಬದಲಿಗೆ ಐಎಫ್ ಎಸ್ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿದೆ. ಇದು ಕೂಡ ಅನೇಕ ಕಡೆ ಅಕ್ರಮಗಳಿದೆ ದಾರಿ ಮಾಡುತ್ತಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.

ಎಷ್ಟೆಷ್ಟು ವರ್ಗಾವಣೆ ನಡೆದಿವೆ, ಏಕೆ 
ಮಾ.6ರಂದು ಕೆಎಎಸ್ ಅಧಿಕಾರಿಗಳ ವರ್ಗಾ ವರ್ಗಿ, ಮಾ.16ಕ್ಕೆ ಮತ್ತೆ ವರ್ಗಾವಣೆ, 26ರಂದು ಐಎಎಸ್ ಅಧಿಕಾರಿಗಳ ವರ್ಗಾವಣೆ, ಮಾ.26 ರಂದು ಡಿವೈಎಸ್ ಪಿ ಮತ್ತು ಐಎಎಸ್ ಅಧಿಕಾರಿಗಳ ವರ್ಗಾ, ಮಾ.29ರಂದು 100ಕ್ಕೂ ಹೆಚ್ಚು ಪಿಎಸ್ ಐಗಳ ವರ್ಗಾವಣೆ, ಮಾ.31 ಮತ್ತೆ 31 ಐಎಎಸ್ ಅಧಿಕಾರಿಗಳ ವರ್ಗಾವಣೆ, ಮಾ.31 ಅನೇಕ ಪಿಎಸ್ಐಗಳ ವರ್ಗಾವಣೆ, ಏಪ್ರಿಲ್ 1ರಂದು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಹಾಗೂ ಕೆಲವು ಐಎಎಸ್ ಅಧಿಕಾರಿಗಳ ಎತ್ತಂಗಡಿ, ಏ.2 ರಂದು 60ಕ್ಕೂ ಹೆಚ್ಚು ಶಿರಸ್ತೇ ದಾರರು ಹಾಗೂ ತಹಸೀಲ್ದಾರ್ ಗಳ ಎತ್ತಂಗಡಿ, ಮರುದಿನ ಮತ್ತೆೆಪಿಎ??? ಗಳ ವರ್ಗಾವಣೆ ಹಾಗೂ ಕೆಲವು ಐಎ ಎಸ್
ಅಧಿಕಾರಿಗಳ ವರ್ಗಾವಣೆ. ಹೀಗೆ ವರ್ಗಾ ವಣೆ ಆದೇಶ ಇಲ್ಲದ ದಿನವೇ ಇಲ್ಲ ಎನ್ನವ ರೀತಿ ಯಲ್ಲಿ ವರ್ಗಾವಣೆಗಳು ನಡೆಯುತ್ತಿವೆ.

ಇದಿಷ್ಟು ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ವ್ಯಾಪ್ತಿಯ ಮತ್ತು ಗಮನಕ್ಕೆ ಬಂದಿರುವ ವರ್ಗಾವಣೆಗಳು. ಇದಲ್ಲದೆ ಸಾವಿರಾರು ಮಂದಿ ವರ್ಗಾವಣೆಗಳು ಮತ್ತು ಎತ್ತಂಗಡಿ ನಡೆಯುತ್ತಿದೆ.

***

ಈ ಸರಕಾರ ದಲ್ಲಿ ವರ್ಗಾವಣೆ ಎನ್ನುವುದು ಪ್ರಮಾಣ, ಸಮಯ ಮಿತಿ ಇಲ್ಲದೆ ವರ್ಷಪೂರ್ತಿ ನಡೆಯುತ್ತಿದ್ದು, ಇದೊಂದು ದಂಧೆಯಾಗಿ ಪರಿವರ್ತನೆಯಾಗಿದೆ ಇದನ್ನು ಯಾರೂ ಪ್ರಶ್ನಿಸದಿರುವುದು ನೋವಿನ ಸಂಗತಿ.
-ರಮೇಶ್ ಬಾಬು ಕಾಂಗ್ರೆಸ್, ವಕ್ತಾರರು