Friday, 9th December 2022

ಮಾತನಾಡದ ಕಲ್ಲುಗಳ ಮರೆಯಬಾರದ ಕತೆ…

ಅಲೆಮಾರಿಯ ಡೈರಿ

mehandale100@gmail.com

ಗಾಂಧಾರದವರೆಗಿನ ನೆಲವನ್ನು ಹಿಡಿತಕ್ಕೆ ಪಡೆದಿದ್ದ ಸಾಮ್ರಾಟ ಅಶೋಕ ಪ್ರಜಾನುರಾಗಿ ಆಡಳಿತ ನಡೆಸಿದ ಬಗ್ಗೆ ಈ ಬಂಡೆಗಳು ಕತೆ ಹೇಳುವಾಗ, ಇಂಥದ್ದೊಂದು ಶಿಲಾಲೇಖವನ್ನು ರುದ್ರದಮನ ಮತ್ತು ಅವನ ನಂತರದ ಕಾಲಾವಧಿಯಲ್ಲೂ ಕಡೆಯಿಸದಿದ್ದಿದ್ದರೆ ಅಽಕೃತ ದಾಖಲೆಯೇ ಇರುತ್ತಿರಲಿಲ್ಲ.

ಬಹುಶಃ ಆ ಒಂದು ಕಲ್ಲು ನಮಗೆ ದಕ್ಕದಿದ್ದಿದ್ದರೆ ನಮ್ಮ ಇತಿಹಾಸ ಕ್ರಿ.ಪೂ.ಕ್ಕೆ ಹೋಗುತ್ತಲೇ ಇರಲಿಲ್ಲವೇನೋ.. ಹೋದರೂ ಈ ರೇಂಜ್‌ನಲ್ಲಿ ಭವ್ಯವಾದ ಭಾರತದ ಇತಿಹಾಸ ಮತ್ತು ಸಾಮ್ರಾಜ್ಯ ಭರತಖಂಡ ಎಂದು ಕರೆಸಿ ಕೊಳ್ಳುವ ಇತಿಹಾಸ, ಪ್ರತಿ ಖಂಡಾತರದಲ್ಲೂ ಹಬ್ಬಿದ್ದು ನಮ್ಮ ಪೀಳಿಗೆ ಮತ್ತು ಜಗತ್ತಿಗೆ ಗೊತ್ತೂ ಆಗುತ್ತಿರಲಿಲ್ಲವೇನೋ.. ಆದರೆ ಇತಿಹಾಸ ಮತ್ತು
ಅದರ ಅಗತ್ಯಗಳನ್ನು ಬಲ್ಲ ರುದ್ರದಮನ ತನ್ನಕಾಲಾವಧಿಯಲ್ಲಿ ಇದನ್ನೆಲ್ಲ ಕಾಯ್ದಿಡಲು ಹರವಾದ ಫಲಕಗಳನ್ನು ಆರಿಸಿ ಕೊಂಡು ತಯಾರಿ ಮಾಡುವ ಬದಲು, ನೇರವಾಗಿ ನಿಸರ್ಗ-ನಿರ್ಮಿತ ಬಂಡೆಗಳನ್ನೇ ಹುಡುಕಿದ; ಮುಂದಿನ ತಲೆಮಾರಿಗೆ, ಜತೆಗೆ ಶತಶತಮಾನದ ನಂತರವೂ ಭವಿಷ್ಯತ್ತಿನ ಪೀಳಿಗೆಗೆ ತಲುಪಬೇಕಾದ ತನ್ನ ಬಳಿಯಿದ್ದ ಆಗಿನ ಮಾಹಿತಿಯನ್ನು ಅವುಗಳ ಮೇಲೆ ಕೆತ್ತಲು ಸೂಚಿಸಿದ.

ಸತ್ರಾಪದ ರಾಜ ರುದ್ರದಮನ ಇಂಥದ್ದೊಂದು ಸೂಚನೆ ಕೊಟ್ಟು ಕಲ್ಲಿನ ಮೇಲೆ ಶಿಲಾಲೇಖ ರೂಪಿಸಲು ಆದೇಶಿಸುತ್ತಿದ್ದರೆ ಆಗಿನ ಸ್ಥಪತಿಗಳು, ‘ಇದೇನು ಕೋಟೆ- ಕೊತ್ತಲ, ದೇವಸ್ಥಾನ, ಶಿಲ್ಪಕಲಾ ಸೌಂದರ್ಯದ ಮೂರ್ತಿಗಳನ್ನೂ ಐತಿಹ್ಯದ ಸ್ಮಾರಕಕ್ಕಾಗಿ ಚಿತ್ರಣ ಗಳನ್ನೂ ಜನ ಮಾಡಿಸುತ್ತಾರೆ; ಆದರೆ ಈ ರುದ್ರದಮನ ಕತೆ ಬರೆಸುತ್ತಿದ್ದಾನಲ್ಲ’ ಎಂದು ಒಳಗೊಳಗೆ ಆಡಿಕೊಂಡಿದ್ದರೂ, ಹೊರಗೆ ತೋರಿಸಿಕೊಳ್ಳಲಾಗದೆ ರಾಜಾಜ್ಞೆ ಪೂರೈಸಿದ್ದರು. ಹಾಗೆ ರುದ್ರದಮನ ಒಂದೆರಡಲ್ಲ ಹಲವು ಶಾಸನ ಮತ್ತು ಶಿಲಾಲೇಖಗಳನ್ನು ಬರೆಸಿದ.

ಯಾವುದೇ ರೀತಿಯ ಭೂಪ್ರಕೋಪ ವಿಕೋಪವಾದರೂ ಇವೆಲ್ಲ ಮಣ್ಣಾಗದಂತೆ ಇರಬಲ್ಲ ಶಿಲೆಗಳನ್ನು ಪರಿಣಿತರಿಂದ ಆಯ್ದು, ಅದರ ಮೇಲೆ ಇದ್ದ ನಿಸರ್ಗ ಕಸವನ್ನೆಲ್ಲ ಎತ್ತಿಸಿ, ಹರವಾಗಿಸಿಕೊಂಡು, ಅದನ್ನು ಆದಷ್ಟೂ ಎತ್ತರ ಭೂಮಿಯ ಪರ್ವತದ ಭುಜಗಳಿಗೆ ಸಾಗಿಸಿ ಅಲ್ಲಿ ಅವನ್ನು ಅಳವಾದ ಶಿಲಾ ಸಂಪನ್ಮೂಲ ಇರುವ ಬುನಾದಿಯ ಮೇಲೆ ನೆಲಕ್ಕೆ ಹೂಡಿ ಕೂರಿಸಿದ. ಆಮೇಲೆ ಸ್ಥಪತಿಗಳನ್ನು ಬಿಟ್ಟು ಅದರ ಮೇಲೆ ಮಾಹಿತಿ ಕೊರೆಯಲು ಅನುವು ಮಾಡಿಕೊಟ್ಟ. ಇಂಥದ್ದೇ ವಿಷಯಗಳನ್ನು ಹೀಗೆಯೇ ಬರೆಯಬೇಕೆಂದು ಶಾಸನ ರೂಪಿಸಲು ನಿರ್ದೇಶನ ನೀಡಿದ.

ದೊಡ್ಡದಾದ ಬಂಡೆ ನೋಡುನೋಡುತ್ತಲೇ ಚಿತ್ರವಾಗಿ ಹೋಯಿತು. ಅದರಲ್ಲೂ ದೊಡ್ಡದಾದ ಕೆಂಪುಶಿಲೆಯ ಆ ಬಂಡೆಯ ಉಬ್ಬಿದ ಮೈಯ ಮೇಲೆ ಆಳವಾಗಿ ಕೊರೆಯುವಂತೆ ರಚಿಸಿದ್ದ ಕಾರಣ ಮಾಹಿತಿಯ ಪೂರವೇ ಅದರಲ್ಲಿ ತುಂಬಿತ್ತಲ್ಲ, ರುದ್ರದಮನ ನೆಮ್ಮದಿಯಿಂದ ಅದನ್ನು ಒಂದೆಡೆ ಸುರಕ್ಷಿತವಾಗಿ ಶಿಲೆಯಲ್ಲಿ ಹೂಡಿ, ಅಡಕವಾಗಿಸಿ ಇರಿಸಿ ಮರೆತುಬಿಟ್ಟ.
ಅನಾಮತ್ತಾಗಿ ನೂರಾರು ವರ್ಷಗಳು ಮತ್ತದರ ಇತಿಹಾಸ ಭರತಖಂಡದ ಸಾಮ್ರಾಜ್ಯಗಳ ಭೌಗೋಳಿಕ ಪರಿಕಲ್ಪನೆ
ತುಂಡಾಗುವಿಕೆ, ಪರಕೀಯ ದಾಳಿ ಹೀಗೆ ಭಾರತದ ನೆತ್ತಿಯ ಮೇಲೆ ಆಗಬಹುದಾಗಿದ್ದ ಎಲ್ಲ ರೀತಿಯ ಪರಿಣಾಮದ ವಿಕಲ್ಪ ಮತ್ತು ಪರಿಣಾಮದ ಪರಿಕಲ್ಪನೆ ಹೊಂದಿದ್ದ ರುದ್ರದಮನ ಕೈಗೊಂಡ ಶಿಲಾಲೇಖನದ ಪರಿಣಾಮ ಗೊತ್ತಾಗಲು ನೂರಾರು ವರ್ಷಬೇಕಾಯಿತು. ಕತೆಯನ್ನು ಮತ್ತು ಇತಿಹಾಸವನ್ನು ಹೊತ್ತ ಕಲ್ಲು ಮಣ್ಣು ನೀರಿನ ನಿಸರ್ಗ ಪ್ರಕೋಪಕ್ಕೂ ಶತಮಾನಗಳು ಉರುಳಿದರೂ ತುತ್ತಾಗುತ್ತಲೇ ಇತ್ತು.

ರುದ್ರದಮನನ ಕಾಲಾವಕಾಶ ಮತ್ತು ಜೀವನ ಮುಗಿಯಿತು. ಇತ್ತ ಸೌರಾಷ್ಟ್ರದ ಗಿರ್ನಾರ್ ವಲಯದ ಭೌಗೋಳಿಕ ನಕ್ಷೆ ಬದಲಾಯಿತು. ಶತಶತಮಾನಗಳೇ ಉರುಳತೊಡಗಿದ್ದದವು. ಇದ್ದಕ್ಕಿದ್ದಂತೆ ಉದಯಿಸಿದ್ದ ಬುದ್ಧನ ಪರಿಣಾಮ ಎಲ್ಲೆಲ್ಲೂ ಬೌದ್ಧ ಧರ್ಮ ಅಪ್ಪಿಕೊಂಡ ಭಾರತೀಯ ಸಾಮ್ರಾಟರು ಶಾಂತಿಯ ಪರಿಪಾಲನೆಗೆ ಬಿದ್ದು ನೆಲ ಹರಿದು ಹಂಚಿಯೂ ಹೋಯಿತು. ಅಶೋಕನೂ ಕಳಿಂಗ ಯುದ್ಧದ ನಂತರ ತಣ್ಣಗಾಗಿದ್ದ.

ಅದಾಗಲೇ ಅರೇಳನೆಯ ಶತಮಾನದ ಹೊಸ್ತಿಲಲ್ಲಿ ಮೊಘಲ್ ಧರ್ಮ ಸ್ಥಾಪನೆಯಾಯಿತು. ಅದೂ ನಿಧಾನಕ್ಕೆ ಜಾಗತಿಕವಾಗಿ ವ್ಯಾಪಿಸುವ ತನ್ನ ದೂರದರ್ಶಿ ಸಾಮ್ರಾಜ್ಯಶಾಹಿ ಪರಿಕಲ್ಪನೆಯ ಮೇರೆಗೆ ಬೆಳೆಯುತ್ತಲೇ ಹೋಯಿತು. ಅದೂ ಮುಗಿದು ಭಾರತದ ಹಲವು ಪ್ರಕೃತಿ ವಿಕೋಪ ಮತ್ತು ಈಗ ನೇರವಾಗಿ ಮೊಘಲ್ ದಾಳಿಗೂ ಸಿಕ್ಕು ಅನಾಮತ್ತಾಗಿ ಆರೇಳು ಶತಮಾನ ಕಾಲ ಭಾರತೀಯತೆ ಯನ್ನೇ ಮರೆಯುವಂತೆ ಬದುಕುವ ಕಾಲಮಾನ ಆರಂಭವಾಗಿತ್ತು. ಅದನ್ನೆಲ್ಲ ಮೀರಿಸುವಂತೆ ಡಚ್ಚರು, ಫ್ರೆಂಚರು ಮತ್ತು ಕೊನೆಯಲ್ಲಿ ಬ್ರಿಟಿಷರು ಬಂದರು.

ವಸಾಹತುಶಾಹಿಯೂ ಮುಗಿದು ಭಾರತದ ಇತಿಹಾಸ, ಭೌಗೋಳಿಕ ರಚನೆ, ಅದರ ಸರಹದ್ದು ಎಲ್ಲ 2000 ವರ್ಷದಲ್ಲಿ ಹಲವು ಬಾರಿ ಬದಲಾಗಿ ಹರಿದು ಹಂಚಿಹೋಗಿ, ಕೊನೆಯಲ್ಲಿ ಇನ್ನೇನೂ ತುಂಡರಿಸಲು ಸಾಧ್ಯವಿಲ್ಲ ಎಂದು ಒಂದು ಹಂತಕ್ಕೆ ಬಂದು ನಿಂತಿತ್ತು. ಅಲ್ಲಲ್ಲಿ ಭಾರತದ ಇತಿಹಾಸದ ಮತ್ತು ಮುಸ್ಲಿಂದಾಳಿಗೆ ಸಿಕ್ಕೂ ಬದುಕಿದ್ದ ಚರಿತ್ರೆಯ ಹುಡುಕಾಟ ಮತ್ತು ನೈಜ ಇತಿಹಾಸದ ಮೇಲೆ ಬೆಳಕು ಚೆಲ್ಲುವಂತಹ ಹಲವು ಕಾರ್ಯಕ್ರಮಗಳನ್ನು ಭಾರತೀಯ ಬ್ರಿಟಿಷರು ಆರಂಭಿಸಿದ್ದರಲ್ಲ. ಅದರಲ್ಲಿ ಈ ರೀತಿಯ ಐತಿಹಾಸಿಕ ಸ್ಮಾರಕ ಮತ್ತು ಇತಿಹಾಸದ ಹುಡುಕಾಟ ಕೂಡಾ ಇತ್ತಲ್ಲ, ಸುಮಾರು ೧೮ನೇ ಶತಮಾ ನದಲ್ಲಿ ಅವನೊಬ್ಬ ಇದಕ್ಕಾಗೇ ಕಾರ್ಯಕ್ಕಿಳಿದ ನೋಡಿ.

ಭರತ ಚರಿತ್ರೆಯ ಮುಖವೇ ಬದಲಾಗತೊಡಗಿತ್ತು. ಅಲ್ಲಿಯವರೆಗೆ ದಾಖಲಾತಿ ಇಲ್ಲದ ಇತಿಹಾಸವಾಗಿ ಹೇಗೋ ತನ್ನ ಪಾಡಿಗೆ
ಮುಂದುವರಿಯುತ್ತಿದ್ದ ಹಿಂದೂಸ್ತಾನದ ನಕ್ಷೆ ಅಚಾನಕ್ಕಾಗಿ ಏನಿಲ್ಲವೆಂದರೂ ಕ್ರಿ.ಪೂ. 500 ವರ್ಷಗಳಷ್ಟು ಹಿಂದೆ ಸರಿದಿತ್ತು. ಜತೆಗೆ ಅಧಿಕೃತವಾಗಿ ಗಾಂಧಾರದಿಂದ ಹೂಣರ ನೆಲದವರೆಗೂ ಹಿಂದೂಸ್ತಾನ ಸಾಮ್ರಾಜ್ಯ ಹಿಡಿತ ಸಾಧಿಸಿದ್ದ ಹಿರಿಮೆಗೆ ಇತಿಹಾಸ ಪಾತ್ರವಾಗಿತ್ತು. ಅದನ್ನು ದೃಢೀಕರಿಸಿದವನು 1838ರಲ್ಲಿ ಭಾರತದ ಪ್ರವಾಸ ಮತ್ತು ದಾಖಲಾತಿ ಕಾರ್ಯ ಕೈಗೊಂಡಿದ್ದ ಜೆಮ್ಸ್‌ಪ್ರಿನ್ಸ್.

ಈತ ಮೊದಲ ಬಾರಿಗೆ ಗಿರ್ನಾರ್ ವಲಯದಲ್ಲಿ ಹಲವಾರು ಇತಿಹಾಸ ಪೂರಕ ಮಾಹಿತಿಯ ಐತಿಹ್ಯಗಳನ್ನು ಗುರುತಿಸುತ್ತಿದ್ದಂತೆ ಭದ್ರವಾದ ಕಲ್ಲಿನ ಬುನಾದಿಯಲ್ಲಿದ್ದ ಬಂಡೆಯ ಮೇಲೆ ಏನೇನೋ ಚಿಹ್ನೆಗಳಿರುವ ಶಿಲಾಲೇಖ ಗುರುತಿಗೆ ಸಿಕ್ಕುತ್ತಿದ್ದಂತೆ, ರುದ್ರದಮನ ಕಾಲದ ಹಲವಾರು ಶಿಲಾಶಾಸನಗಳು ದೊರಕಿದ್ದವು. ಅದರ ನಂತರವೂ ಲಾಸೆನ್ ಮತ್ತು ವಿಲ್ಸನ್ ಜೋಡಿ ಈ ಬಗ್ಗೆ ಮತ್ತಷ್ಟು ಆಳವಾದ ಅಧ್ಯಯನ ಮಾಡಿ ವರದಿ ನೀಡಿತ್ತು.

ಜತೆಗೆ ಪ್ಲೀಟ್ ಮತ್ತು ಸ್ಥಳೀಯರಾದ ಭಗವಾನಲಾಲ್ ಇಂದ್ರಜಿ ಸೇರಿದಂತೆ ಹಲವರು ಈ ಗಿರ್ನಾರ್ ಮತ್ತು ಉಪರ್ ಕೋಟ್ ಮೇಲೆ ಸಂಶೋಧನೆಗಿಳಿದರು. ಆಯಾ ಕಾಲಘಟ್ಟದ ಪ್ರಾಕ್ತನ ಭಾಷೆಯ ಚಿಹ್ನೆಗಳ ತೊಡಕನ್ನು ಪರಿಹರಿಸಲು ಹಲವು ತಾಂತ್ರಿಕ, ವೈಜ್ಞಾನಿಕ ಆಧಾರಸಹಿತ ಮಾಹಿತಿಗಳನ್ನು ಕಲೆಹಾಕಿದ್ದರು. ಬ್ರಾಹ್ಮಿಲಿಪಿ ಮತ್ತು ಪ್ರಾಕ್ತನ ಲಿಪಿಯಲ್ಲಿನ ಓದುವಿಕೆಯ ಸೂತ್ರಗಳನ್ನು ಪರಿಶೀಲಿಸಿ ಕೈಗೂಡಿಸಿಕೊಂಡರು. ಇದನ್ನು ಸತತವಾಗಿ 30 ವರ್ಷ ಅಭ್ಯಸಿಸಿ ಮತ್ತು ಅದರಲ್ಲಿನ ತಪ್ಪು ಒಪ್ಪುಗಳನ್ನು ತಿದ್ದುಪಡಿ ಮಾಡಿ ಇತಿಹಾಸದ ಸತ್ಯತೆಗಳು ತಪ್ಪು ಮಾಹಿತಿ ಆಗದಂತೆ ಮೊದಲ ಬಾರಿಗೆ ಅದರ ಪ್ರಕಟಣೆಯನ್ನು
ಬಿಡುಗಡೆ ಮಾಡಿದರೂ, 1842ರ ಪರಿಷ್ಕೃತ ಆವೃತ್ತಿ ಮತ್ತು ವ್ಯಾಖ್ಯಾನ ಬಿಡುಗಡೆ ಆದಾಗ ಜಾಗತಿಕವಾಗಿ ಶಿಲಾಶಾಸನ
ಜತೆಗೆ ಹಿಂದೂಸ್ತಾನದ ಅಖಂಡ ನಕ್ಷೆಯ ಸೂತ್ರಧಾರ ಸಾಮ್ರಾಟ ಅಶೋಕ ಬೆಳಕಿಗೆ ಬಂದಿದ್ದ, ದಾಖಲೆ ಸಮೇತ.

ಅದು ಪದೇಪದೆ ಪರಿಷ್ಕೃತಗೊಳ್ಳುತ್ತಾ ಆಗೀಗ ಅಲ್ಲಲ್ಲಿ ತಿದ್ದು ಪಡಿಯಾಗುತ್ತಾ ‘ಎಫಿಗ್ರಾಫಿಯಾ ಇಂಡಿಯಾ’ದಲ್ಲಿ ಅದರ ಒಂದು ಗೆಜೆಟ್ ಹೊರಡುತ್ತಿದ್ದಂತೆ ಗಿರ್ನಾರ್‌ನಲ್ಲಿನ ಶಾಸನ ಅಧಿಕೃತವಾಗಿ ಅತ್ಯಂತ ಸ್ಪಷ್ಟ ಶಾಸನವಾಗಿ ಪರಿಗಣಿಸಲ್ಪಟ್ಟಿತು. ನಾನು ಗುಜರಾತ್ ಪ್ರವಾಸದಲ್ಲಿದ್ದಾಗ, ಜುನಾಗಢ್‌ನ ಉಪರ್‌ಕೋಟ ಬೆಟ್ಟದ ಮೇಲೆ ಇರುವ ಉಪರ್‌ಗಿರಿಯ ಜತೆಗೆ ಈ ಶಾಸನ ವನ್ನು ಇರಿಸಿರುವ ಗ್ಯಾಲರಿಗೆ ಭೇಟಿಕೊಟ್ಟು ಸಾಮ್ರಾಟ ಅಶೋಕನ ಇತಿಹಾಸದ ಮೇಲೆ ಮತ್ತು ಆ ಅಧಿಕೃತತೆಯ ಮೇಲೆ ಬೆಳಕು ಚೆಲ್ಲುವ ಶಿಲಾಬಂಡೆಯ ಮೈದಡವಿದ್ದೆ.

ಸುಲಭಕ್ಕೆ ಕೈಗೆಟುಕುವಷ್ಟು ಹತ್ತಿರದ ಶಿಲಾಬಂಡೆಯನ್ನು ಆಯ್ದ ವಿಶೇಷತೆ ಎಂದರೆ ಯಾವ ಕಾಲಕ್ಕೂ ಅದರ ಮೇಲಿನ ಆ ದಾಖಲೆ ಅಳಿಸದಂತೆಯೂ ಆದಷ್ಟು ಸ್ಪಷ್ಟವಾಗಿರುವಂತೆಯೂ ಮಾಡಲಾದ ಆಗಿನ ತಂತ್ರಜ್ಞಾನ ಮತ್ತು ಒಮ್ಮೆ ಬೆಳಕಿಗೆ ಬಂದ ನಂತರ ಅದನ್ನು ಉಳಿಸಿಕೊಳ್ಳಲು ತೆಗೆದುಕೊಂಡ ರಕ್ಷಣಾ ಕ್ರಮಗಳು. ಕಾಲಕ್ರಮೇಣ ಪರಿಸರ ವೈಪರೀತ್ಯಕ್ಕೆ ಸಿಕ್ಕು ಹಾಳಾಗ ದಂತೆ ಜಾಗರೂಕತೆ ವಹಿಸಿದ್ದ ಪರಿಣಾಮ ಇವತ್ತು ಅಶೋಕನ ಬಗ್ಗೆ ಭದ್ರವಾದ ಮಾಹಿತಿಯ ದಾಖಲೆ ಈ ಕಲ್ಲಿನ ಕತೆಯಲ್ಲಿದೆ.

ಸಾಮಾನ್ಯವಾಗಿ ಉಪರ್‌ಕೋಟ ಪ್ರವಾಸದಲ್ಲಿ ದರ್ಶಿಸುವ ಪ್ರವಾಸಿಗರಿಗೆ ಅಷ್ಟೇನೂ ಆಕರ್ಷಕವಲ್ಲದ ಈ ಶಿಲಾಲೇಖ
ಗಮನವನ್ನೂ ಸೆಳೆಯದ ಒಣ ಉಸಾಬರಿ ಅನ್ನಿಸುತ್ತೇನೊ? ಅದಕ್ಕಾಗಿ ಯಾರ ‘ಬಕೆಟ್‌ಲಿಸ್ಟ್’ನಲ್ಲೂ ಇದೆಲ್ಲ ಇಲ್ಲವಾಗುತ್ತದೆ ಹೊರತಾಗಿ ಅಶೋಕನ ಶಿಲಾಶಾಸನ ಎಷ್ಟು ಮಹತ್ವದ್ದೆಂದು ಅರಿವಿಗೂ ಬಾರದೇ ಹೋಗುತ್ತದೆ.

ಹಾಗಾಗಿ ಅಲ್ಲೊಬ್ಬ ಇಲ್ಲೊಬ್ಬ ನನ್ನಂತಹ ಅಲೆಮಾರಿ ಬಂದು ಹೋಗಿ ಮಾಡುವುದರಿಂದ ಗ್ಯಾಲರಿ ಅಷ್ಟಕ್ಕಷ್ಟೆ ಅನ್ನಿಸುತ್ತದೆ. ಆದರೆ ಅಲ್ಲಿ ಇರಿಸಲಾದ ಮತ್ತು ಕಾಯ್ದುಕೊಳ್ಳಲಾದ ಮಾಹಿತಿಯ ಈ ಸಂಪತ್ತಿಗೆ ನೆನಪಿನಿಂದ ಒಮ್ಮೆ ಭೇಟಿ ಕೊಡಬೇಕಾದ ಮತ್ತು ಅಶೋಕನ ಕಾಲದ ಶಿಲೆಯ ಮೇಲೆ ಸಾಧ್ಯವಾದರೆ ಕೈಯ್ಯಾಡಿಸಬೇಕಾದ ಅಗತ್ಯವಿದೆ.

ಸಾಮ್ರಾಟ ಅಶೋಕ ಬಹುಶಃ ಹಿಂದೂಸ್ತಾನ ಕಂಡ ಅತಿದೊಡ್ಡ ಮತ್ತು ಅತಿ ವಿಸ್ತಾರವಾದ ಸಾಮ್ರಾಜ್ಯ ಹೊಂದಿದ್ದ
ಮಹಾರಾಜ. ಹೂಣರಿಂದ ಶಕರ ಆದಿಯಾಗಿ ಗಾಂಧಾರ ದವರೆಗಿನ ನೆಲವನ್ನು ಹಿಡಿತಕ್ಕೆ ಪಡೆದಿದ್ದ ಅಶೋಕ ಅತ್ಯಂತ
ಪ್ರಜಾನುರಾಗಿ ಆಡಳಿತ ನಡೆಸಿದ ಬಗ್ಗೆ ಮತ್ತು ಅಪರೂಪದ ‘ದೇವನಾಂಪ್ರಿಯ’ ಎಂಬ ಬಿರುದಾಂಕಿತನಾದ ಬಗ್ಗೆ ಈ
ಬಂಡೆಗಳು ಕತೆ ಹೇಳುವಾಗ, ಅಕಸ್ಮಾತ್ ಇಂಥದ್ದೊಂದು ಶಿಲಾಲೇಖವನ್ನು ರುದ್ರದಮನ ಮತ್ತು ಅವನ ನಂತರದ
ಕಾಲಾವಧಿಯಲ್ಲೂ ಸಾಲುಸಾಲಾಗಿ ಕಡೆಯಿಸದಿದ್ದಿದ್ದರೆ ಅಧಿಕೃತ ದಾಖಲೆಯೇ ಇರುತ್ತಿರಲಿಲ್ಲವಲ್ಲ ಎನ್ನಿಸದಿರಲಾರದು.

ಅದರಲ್ಲೂ ಪ್ರಮುಖ 14 ಶಾಸನಗಳ ಮಹತ್ವ ಅರಿಯಬೇಕೆಂದರೆ ಮೊದಲು ಈ ಅಶೋಕನ ಶಾಸನ ಹೇಳುವ ಕಲ್ಲಿನ ಕತೆ ಕೇಳಬೇಕು. ಗುಜರಾತ್‌ನ ಸೌರಾಷ್ಟ್ರದ ಕಡೆಗೆ ಕಾಲು ಹರಿಸಿದರೆ ಅಶೋಕನ ಈ ಬಂಡೆಯ ಮೈದಡವಲು ಮರೆಯದಿರಿ. ಮೌನಕತೆಗಳು ನಿಮ್ಮವಾದಾವು….