Friday, 18th June 2021

ಒಂದು ಹೆಸರಿನಲ್ಲಿ ಏನೇನೆಲ್ಲ ಕತೆಯಿದೆ ಗೊತ್ತಾ ?

ವಿರಾಜಯಾನ

ವಿರಾಜ್‌ ಕೆ.ಅಣಜಿ 

virajkvishwavani@gmail.com

ನನ್ನ ದೂರದ ಸಂಬಂಧಿಯೊಂದಿಗೆ ಇತ್ತೀಚಿಗೆ ಸಹಜವಾಗಿ ಮಾತನಾಡುತ್ತಿದ್ದೆ. ಮಾತಿನ ಮಧ್ಯದಲ್ಲಿ ಅವರು, ತಮ್ಮ ಎರಡು
ವರ್ಷದ ಮಗಳು ವಿಪರೀತ ಅಳುತ್ತಿದ್ದಳು, ಹಟ ಮಾಡುತ್ತಿದ್ದಳು. ಅದಕ್ಕಾಗಿಯೇ ಆಸ್ಪತ್ರೆಗೆ ತೋರಿಸಿದ್ದಾಯಿತು, ಆಟದ ಸಾಮಾನುಗಳನ್ನೆಲ್ಲ ಕೊಡಿಸಿದ್ದಾಯಿತು. ಏನೇ ಮಾಡಿದರೂ ಸಮಾಧಾನ ಮಾಡುವುದೇ ಅಸಾಧ್ಯ ಎನಿಸುತ್ತಿತ್ತು.

ಕೊನೆಗೆ ಹಿರಿಯರೊಬ್ಬರ ಸಲಹೆ ಮೇರೆಗೆ ಮಗಳ ಹೆಸರನ್ನು ಬದಲಾಯಿಸಿದೆವು. ಆಗಿನಿಂದ ಹಟ ಮತ್ತು ಅಳು ಕ್ರಮೇಣ ಕಡಿಮೆಯಾಗಿದೆ. ಮೊದಲಿಗಿಂತ ಈಗ ಚೂಟಿಯಾಗಿದ್ದಾಳೆ ಎಂದು ಸಮಾಧಾನ ವ್ಯಕ್ತಪಡಿಸಿದರು. ನನಗದು ನಿಜಕ್ಕೂ ಅಚ್ಚರಿ ಎನಿಸಿತು. ರಚ್ಚೆ ಹಿಡಿಯುತ್ತಿದ್ದ ಮಗು, ಹೆಸರು ಬದಲಾವಣೆ ಮಾಡಿದ ನಂತರ ಸಹಜವಾಗಿ ಬದಲಾಗಿದೆ ಎಂದರೆ, ನಮ್ಮನ್ನು ಗುರುತಿಸುವ ಹೆಸರಿಗೆ ದೊಡ್ಡ ತಾಕತ್ತು ಇರಲೇ ಬೇಕಲ್ಲವೇ ಎನಿಸಿತು.

ಅಯ್ಯೋ, ಹೆಸರಲ್ಲೇನಿದೆ ರೀ ಎನ್ನುವವರ ಮಧ್ಯೆ, ಹೆಸರಲ್ಲೇ ದೊಡ್ಡ ಶಕ್ತಿ ಅಡಗಿದೆ ಎಂಬ ಸಣ್ಣ ಹೊಳಹು ಮೂಡಿತು. ಆಗಲೇ ಹೆಸರಿನ ಹಿಂದೆ ಬಿದ್ದೆ. ಆಗ ಕಪಾಟಿನಲ್ಲಿದ್ದ How to win friends and influence people ಎಂಬ ಪುಸ್ತಕ ಕಣ್ಣಿಗೆ ಬಿತ್ತು. ಅದನ್ನು ಬರೆದವರು ಅಮೆರಿಕದ ಖ್ಯಾತ ಲೇಖಕ, ವ್ಯಕ್ತಿತ್ವ ವಿಕಸನ ಗುರು Dale Carnegie. ನೀವು ಬೆಂಗಳೂರಿನ ಅವೆನ್ಯೂ ರೋಡಿ ನಲ್ಲಿ ಒಂದು ಸುತ್ತು ಹಾಕಿದರೆ, ಕನಿಷ್ಠ ಹತ್ತು ಕಡೆಯಾದರೂ ಈ ಪುಸ್ತಕವನ್ನು ನೋಡಿರುತ್ತೀರಿ. ಅಥವಾ ನಿಮ್ಮ ಊರಿನಲ್ಲೇ ನವ ಪ್ರಕಾಶನ ಬುಕ್ ಹೌಸ್‌ನವರು ಹಾಕುವ ತಾತ್ಕಾಲಿಕ ಟೆಂಟ್ ಮಾದರಿಯ ಪುಸ್ತಕ ಮಳಿಗೆ ಯಲ್ಲಾದರೂ ನೋಡಿರಲೇಬೇಕು.

ತನ್ನ ಬಣ್ಣ, ಆಕಾರ, ಗಾತ್ರವನ್ನು ಬದಲಿ ಮಾಡಿಕೊಂಡರೂ, ಈ ಪುಸ್ತಕಕ್ಕೆ ಈಗಲೂ ಬಿಸಿಬಿಸಿ ಬೆಣ್ಣೆದೋಸೆಯಂತೆ ಬೇಡಿಕೆ ಇದೆ. ಅಮೆಜಾನ್, ಫ್ಲಿಪ್‌ಕಾರ್ಟ್ ಈಗಲೂ ಈ ಪುಸ್ತಕದ ಪೂರೈಸುವ ಪೋಸ್ಟ್ ಮಾಸ್ಟರ್ ರೀತಿ ಕಾರ್ಯ ನಿರ್ವಹಿಸುತ್ತಿವೆ. ಈ ಪುಸ್ತಕ ಮೊದಲು ಪ್ರಕಟವಾಗಿದ್ದು 1937 ರಲ್ಲಿ ಎಂದರೆ ಹೌದಾ ಎಂದು ಹುಬ್ಬೇರಿಸಿದರೂ, ನಂತರ ನಂಬಲೇಬೇಕು. ಅದೆಲ್ಲ ಇರಲಿ, ಪುಸ್ತಕದಲ್ಲಿ ಅವರೇ ಬರೆದ “A person’s name is to him or her, the sweetest and most important sound in any
language.”ಎಂಬ ಸಾಲು ಕಣ್ಣಿಗೆ ಬಿತ್ತು. ಹೆಸರು ನಮ್ಮ ಜೀವನದಲ್ಲಿ ಎಷ್ಟು ಪ್ರಾಮುಖ್ಯ ಪಡೆದಿದೆ ಎಂಬುದನ್ನು ಇದಕ್ಕಿಂತ ಸರಳವಾಗಿ ವಿವರಿಸುವುದು ಕಷ್ಟವೇನೋ.

ಯಾವುದೇ ಭಾಷೆಯಲ್ಲಿ ಕೇಳಿದರೂ ನಮಗೆ ಹೆಚ್ಚು ಇಷ್ಟವಾಗುವ, ಆಪ್ತವಾಗುವ ಮತ್ತೊಂದು ಪದವೆಂದರೆ ಅದು ಅವರ ಹೆಸರೇ
ಆಗಿರುತ್ತದೆ ಎಂಬುದು ಅದರ ತಾತ್ಪುರ್ಯ. ಒಬ್ಬ ವ್ಯಕ್ತಿಯ ಜೀವನದಲ್ಲಿ ಅವರ ಹೆಸರು ಅವರಿಗೆ ನೀಡುವ ನಂಬಿಕೆ, ಶಕ್ತಿ, ವಿಶ್ವಾಸಕ್ಕೆ ಬೇರೊಂದರ ಹೋಲಿಕೆ ಇಲ್ಲ. ಒಬ್ಬ ವ್ಯಕ್ತಿಯ ಹೆಸರು, ಅವರ ವ್ಯಕ್ತಿತ್ವ ಮತ್ತು ಅವರು ಸಮಾಜದಲ್ಲಿ  ಗುರುತಿಸಿ ಕೊಳ್ಳುವುದರ ಮೇಲೆ ನೇರವಾಗಿ ಅವಲಂಬನೆ ಆಗಲಿದೆ ಎಂಬುದು ಮನಶಾಸ್ತ್ರಜ್ಞರ ಅಭಿಪ್ರಾಯ.

ನಾವು ಯಾರನ್ನಾದರೂ ಭೇಟಿಯಾದಾಗ ಮಾತು ಆರಂಭವಾಗುವುದೇ ನಿಮ್ಮ ಹೆಸರು ಏನು ಎಂಬ ಮೊದಲ ಪ್ರಶ್ನೆಯೊಂದಿಗೆ.
ಒಂದು ಭೇಟಿ ಮತ್ತು ಪರಿಚಯ, ದೀರ್ಘಕಾಲ ನೆನಪಿನಲ್ಲಿರುತ್ತದೆ ಹಾಗೂ ಮುಂದುವರಿಯುತ್ತದೆ ಎಂದರೆ ಅದಕ್ಕೆ ಇಬ್ಬರ ಹೆಸರೂ ಕೂಡ ಪರಸ್ಪರರ ನೆನಪಿನಲ್ಲಿ ಛಾಪೊತ್ತಿದೆ ಎಂದರ್ಥ. ಒಂದೊಮ್ಮೆ ಮರೆತರೂ ಅವರನ್ನೊಮ್ಮೆ ನೆನಪಿಸಿಕೊಂಡಾಗ, ಅವರ ಹೆಸರಿನಿಂದಲೇ ನೆನಪಿಸಿಕೊಳ್ಳಲು ಯತ್ನಿಸಿರುತ್ತೇವೆ.

ಅದಕ್ಕಾಗಿಯೇ ಹೆಸರಿಗೆ ಅಷ್ಟೊಂದು ಮಹತ್ವ. ಈಗೀಗಂತೂ ಮಗುವಿಗೆ ಹೆಸರು ಇಡುವುದು ಒಂದು ಹೊಸ ಟ್ರೆಂಡ್ ಆಗಿ ಬದಲಾಗಿದೆ. ಮೊದಲೆಲ್ಲ ಅಜ್ಜ, ಅಜ್ಜಿ, ಕಾಕ, ಮಾಮಿಯ ಹೆಸರಿಟ್ಟು ಕೈತೊಳೆದುಕೊಳ್ಳಲಾಗುತ್ತಿತ್ತು. ಆದರೀಗ, ಮಗು ಹುಟ್ಟುವ ಮುನ್ನ ಕುಲಾವಿ ಹೊಲೆಯದಿದ್ದರೂ, ಗಂಡಾದರೆ ಇದು, ಹೆಣ್ಣಾದರೆ ಇದು ಎಂದು ಅಕ್ಷರ ಗಳ ಸಮೇತ ಹೆಸರಿನ ಲೀಸ್ಟ್
ಮಾಡಿಟ್ಟುಕೊಂಡಿರುತ್ತಾರೆ. ಹೆತ್ತವರಿಗೆ ಮಗುವಿನ ಹೆಸರಿಡುವುದೇ ದೊಡ್ಡ ಸಂಭ್ರಮ.

ಹೆಸರಿನ ಬಗ್ಗೆ ಕೆಲವರಿಗೆ ಎಲ್ಲಿಲ್ಲದ ಒಲವು, ಇನ್ನೂ ಕೆಲವರಿಗೆ ಅಸಡ್ಡೆ, ಹೆಸರಲ್ಲೇನಿದೆ ಬಿಡಿ ಎಂಬ ಮಾತುಗಳೂ ಕೇಳಿರುತ್ತೇವೆ. ಬಹಳಷ್ಟು ಬಾರಿ, ನಾವು ಮ್ಮ ಹೆಸರಿನ ಬಗ್ಗೆ ಹೆಚ್ಚು ಗಮನ ನೀಡದೇ ಇದ್ದರೂ, ಯಾರಾದರೂ ನಮ್ಮ ಹೆಸರನ್ನು ವಕ್ರವಾಗಿ,
ವ್ಯಂಗ್ಯದಿಂದ ಕರೆದರೆ ಕಣ್ಣು ಕೆಂಪು ಮಾಡಿಕೊಂಡಿರುತ್ತೇವೆ. ಒಬ್ಬ ವ್ಯಕ್ತಿಯ ಜೀವನ ವಿಕಸನದಲ್ಲಿ ಅವರ ಹೆಸರು ಅತ್ಯಂತ ದೊಡ್ಡ ಪಾತ್ರ ವಹಿಸುತ್ತದೆ ಎಂಬುದನ್ನು ಹಲವು ಸಂಶೋಧನೆ ಸಿದ್ಧ ಮಾಡಿ ತೋರಿಸಿವೆ. A Good man must die, but death cannot kill their names ಎಂಬ ಮಾತಿದೆ.

ಕೆಲವರು ತಮ್ಮ ಹೆಸರಿಗೆ ಖ್ಯಾತಿ ತಂದು ಕೊಟ್ಟರೆ, ಇನ್ನು ಕೆಲವರು ಹೆಸರು ಬದಲಿಸಿಕೊಂಡು ಖ್ಯಾತರಾದ ನೂರಾರು ಉದಾಹರಣೆಗೆಳು ನಮ್ಮ ಮುಂದಿದೆ. ಆದಿ ಶಂಕರಾಚಾರ್ಯರು, ಮಧ್ವರು, ಬುದ್ಧ, ಬಸವಣ್ಣನವರಂಥ ವ್ಯಕ್ತಿತ್ವಗಳನ್ನು ನಾವೆಲ್ಲ
ನೋಡಿರದಿದ್ದರೂ ಅವರ ಹೆಸರು ಮೂಡಿದಾಕ್ಷಣ ದೊಡ್ಡ ಚಿತ್ರಣಗಳು ಕಣ್ಣ ಮುಂದೆ ಮೂಡಿಬಿಡುತ್ತದೆ. ಆದರೆ, ಅಣ್ಣಾವ್ರ ಮೊದಲ ಹೆಸರು ಮುತ್ತುರಾಜ್, ಸಂಪತ್ ಕುಮಾರ್ ವಿಷ್ಣುವರ್ಧನ್ ಅವರ ಮೊದಲ ಹೆಸರು, ರೆಬೆಲ್ ಸ್ಟಾರ್ ಅಂಬರೀಷ್ ಅವರಿಗೆ ಅಮರನಾಥ್ ಎಂಬುದು ಮೊದಲ ಹೆಸರಾಗಿತ್ತು.

ತಮ್ಮ ಮೂಲ ಹೆಸರು ಬದಲಾದ ಬಳಿಕವೇ ಅವರ ಸ್ಟಾರ್‌ಗಿರಿ ಬದಲಾಗಿದ್ದು. ಅದೇ ರೀತಿ, ಇನ್ಕಿಲಾಬ್ ಶ್ರೀವತ್ಸ, ಶಿವಾಜಿ ರಾವ್
ಗಾಯಕ್ವಾಡ್, ರಾಜೀವ್ ಹರಿ ಓಂ ಭಾಟಿಯಾ, ವೆಂಕಟ ಸತ್ಯನಾರಾಯಣ ಪ್ರಭಾಸ್ ರಾಜು ಉಪ್ಪಲಪಟ್ಟಿ, ಶ್ರೀ ಅಮ್ಮ ಯಂಗರ್ ಅಯ್ಯಪ್ಪನ್, ಸ್ವೀಟಿ ಶೆಟ್ಟಿ, ಅಶ್ವಿನಿ ಶೆಟ್ಟಿ, ಕತ್ರಿನಾ ಟರ‍್ಕೋಟ್ಟಿ, ಧರಮ್ ದೇವದತ್ ಪಿಶೋರಿಮಲ್ ಆನಂದ್ ಇವರೆಲ್ಲ ಗೊತ್ತಾ ಎಂದರೆ ತಕ್ಷಣಕ್ಕೆ ಗೊತ್ತಾಗದು. ಅದೇ, ಅಮಿತಾಭ್ ಬಚ್ಚನ್, ರಜನಿಕಾಂತ್, ಅಕ್ಷಯ್ ಕುಮಾರ್, ಪ್ರಭಾಸ್, ಶ್ರೀದೇವಿ, ಅನುಷ್ಕಾ ಶೆಟ್ಟಿ, ಶಿಲ್ಪಾ ಶೆಟ್ಟಿ, ಕತ್ರೀನಾ ಕೈಫ್, ದೇವ್ ಆನಂದ್ ಎಂದಾಕ್ಷಣ ಕಣ್ಣು ಅರಳುವುದು ಖಂಡಿತ. ಎಲ್ಲವೂ ಅವರ ಬದಲಾದ ನಾಮಬಲ ತಂದ ಅದೃಷ್ಟದ ಮೂಟೆ.

ಕರನ್‌ಜಿತ್ ಕೌರ್ ವೋಹ್ರಾ ಎಂದರೆ ಸನ್ನಿ ಲಿಯೋನಿ ಎಂದು ತಕ್ಷಣ ಯಾರಿಗೆ ಹೊಳೆಯಲು ಸಾಧ್ಯ ಹೇಳಿ? ಆದರೆ, ಕೆಲವೊಬ್ಬ ರಿಗೆ ತಮ್ಮ ಹೆಸರಿನ ಬಗ್ಗೆ ಒಂದಷ್ಟು ಹಿಂಜರಿಕೆ, ಕೀಳರಿಮೆ ಇರುತ್ತದೆ. ಉದಾಹರಣೆಗೆ ಸಾಕಮ್ಮ, ಶೋಭನಾ, ನಂದಾ, ಗೋವಿಂದ, ಶಂಭುಲಿಂಗ, ಕಪ್ಪೇಶ ರೀತಿಯ ಹೆಸರಿದ್ದವರಲ್ಲಿ ಒಂದಷ್ಟು ಮುಜುಗರ ಸನ್ನಿವೇಶಗಳು (ಶಾಲಾ ದಿನಗಳಲ್ಲಾದರೂ) ಬಂದಿರ ಬಹುದು. ಯಾರನ್ನಾದರೂ ಪರಿಚಯ ಮಾಡಿಕೊಂಡಾಗ, ನಮ್ಮ ಹೆಸರಿನ ಬಗ್ಗೆ ಯಾರಾದರೂ ಮೆಚ್ಚುಗೆ ವ್ಯಕ್ತಪಡಿಸಿದರೆ, ನಮಗಾಗುವ ಖುಷಿ ಅಷ್ಟಿಷ್ಟಲ್ಲ.

ಆ ಕ್ಷಣದಿಂದಲೇ ನಮ್ಮ ವ್ಯಕ್ತಿತ್ವ ಮತ್ತು ನಡವಳಿಕೆಯಲ್ಲಿ ಪಾಸಿಟಿವಿಟಿ ಹೆಚ್ಚುತ್ತದೆ, ಹೆಸರಿಗೆ ಅಂಥ ಶಕ್ತಿಯಿದೆ. ಕೆಲವರ ಹೆಸರು ಗಳು ಸುದ್ದಿ ಹೆಸರು ಮಾಡಿದರೆ, ಕೆಲವು ಬಾರಿ ಯಾವ ಹೆಸರು ಎಂಬುದೇ ದೊಡ್ಡ ಸುದ್ದಿಯಾಗುತ್ತದೆ. ಉದಾಹರಣೆಗೆ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಪುತ್ರಿಗೆ ಯಾವ ಹೆಸರು ಸೂಕ್ತ ಎಂಬುದು ಅತಿ ದೊಡ್ಡ ಸುದ್ದಿಯಾಗಿತ್ತು.

ಕರೀನಾ ಮತ್ತು ಸೈಫ್ ಅಲಿ ಖಾನ್ ತಮ್ಮ ಮಗನಿಗೆ ತೈಮೂರ್ ಪಟೌಡಿ ಖಾನ್ ಎಂದು ಹೆಸರಿಟ್ಟಾಗ ರೊಚ್ಚಿಗೆದ್ದವರಿಗೆ ಲೆಕ್ಕವೇ ಇಲ್ಲ. ಕನ್ನಡ ಸ್ಟಾರ್ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಪುತ್ರಿ ಜನಿಸಿದಾಗ, ಸಲಹೆ ರೂಪದಲ್ಲಿ ಬಂದ ಹೆಸರುಗಳು
ಒಂದೆರಡೆಲ್ಲ. ಕೆಲವರು ತಮ್ಮ ಮಗ, ಮಗಳಿಗೆ ಇಂಥದ್ದೇ ಹೆಸರಿಡಬೇಕು ಎಂಬುದನ್ನು ತಮ್ಮ ಮದುವೆಗೆ ಮುಂಚೆಯೇ ನಿರ್ಧರಿ ಸಿರುತ್ತಾರೆ! ಹೆಸರೆಂದರೆ ಕೆಲವರಿಗೆ ಅಷ್ಟೊಂದು ಹುಚ್ಚು, ಅಚ್ಚು ಮೆಚ್ಚು. ತಾವು ಇಷ್ಟ ಪಡುವವರ, ಆರಾಧಿಸುವರರ ಹೆಸರನ್ನು ತಮ್ಮ ಮಕ್ಕಳಿಗೆ ಇಟ್ಟು ಖುಷಿಪಡುತ್ತಾರೆ.

ಇದೇ ರೀತಿ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ ಕರುಣಾನಿಧಿ ಅವರು ತಮ್ಮ ಪುತ್ರನಿಗೆ ರಷ್ಯಾ ಕ್ರಾಂತಿಯ
ಹರಿಕಾರ ಜೋಸೆಫ್ ಸ್ಟಾಲಿನ್ ಹೆಸರನ್ನು ಅಂದಿನ ಕಾಲದಲ್ಲೇ ಇಟ್ಟಿದ್ದು ಹಲವರ ಹುಬ್ಬೇರಿಸಿತ್ತು. ಅವರೇ ತಮಿಳುನಾಡಿನ ಈಗಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್!

ಯಾವ ದೇಶದವರಿಗೇ ಆಗಲಿ, ಹೆಸರಿನ ಮಹತ್ವ ನಿನ್ನೆ ಮೊನ್ನೆಯಿಂದ ಬಂದದ್ದಲ್ಲ. ಹೆಸರಿನ ಹಸಿರು ಶತ ಶತಮಾನಗಳಿಂದಲೂ ಬಂದಿದೆ. ಭಾರತಕ್ಕೆ ಇಂಡಿಯಾ ಎಂಬ ಹೆಸರು ಬಂದಿದ್ದು ಕೂಡ ಇಂಡಸ್ ನದಿಯಿಂದ ಎಂದು ಹೇಳಲಾಗುತ್ತದೆ. ಆರ್ಯನ್ನರು ಇದೇ ಇಂಡಸ್ ನದಿಯನ್ನು ಸಿಂಧು ನದಿ ಎಂದು ಕರೆದಿದ್ದರಂತೆ. ಬೆಂದಕಾಳೂರು ಆಗಿದ್ದ ಬೆಂಗಳೂರು, ದೇವ ನಗರಿಯಾಗಿದ್ದ ದೆಹಲಿಯಂಥ ನೂರಾರು ಹೆಸರುಗಳು ತಮ್ಮ ಹೆಸರಿನ ಬಲದಿಂದಲೇ ಹೆಸರುವಾಸಿ ಆಗಿವೆ.

ರಾಕೆಟ್‌ಗಾಗಲಿ, ಯುದ್ಧನೌಕೆಗಳಿಂದ ಹಿಡಿದು ಒಂದು ಸಣ್ಣ ಗೂಡಂಗಿ ಇಟ್ಟರೂ ಅದಕ್ಕೆ ಇಂಥದ್ದೇ ಹೆಸರಿಡಬೇಕು ಎಂದು ಎರಡು ಬಾರಿ ಯೋಚಿಸಿಯೇ ಮುಂದುವರಿಯಲಾಗುತ್ತದೆ. ಈ ನಡುವೆ ಸುದ್ದಿಯಲ್ಲಿ ತೌಕ್ತೆ, ಯಾಸ್, ಫನಿ ಎಂಬ ಹೆಸರುಗಳನ್ನು ಪದೇಪದೆ ಕೇಳಿದ್ದೇವೆ. ಇವೆಲ್ಲ ಭಾರತದ ಕಡಲ ತೀರಕ್ಕೆ ಅಪ್ಪಳಿಸಿದ ಚಂಡಮಾರುತಗಳ ಹೆಸರುಗಳು. ಈ ಹೆಸರುಗಳನ್ನು ಸುಮ್ಮನೇ ಇಟ್ಟಿರುವುವಂಥವಲ್ಲ. ಇದಕ್ಕಾಗಿ ಭಾರತ ಸೇರಿ ನಮ್ಮ ಸುತ್ತಮುತ್ತಲಿನ ಎಂಟು ದೇಶಗಳ ಒಂದು ತಂಡವಿದೆ.

ಅವರು ಚಂಡಮಾರುತಗಳಿಗೆ ಹೆಸರಿಡುತ್ತಾರೆ. ಅವರಿಡುವ ಪ್ರತಿ ಹೆಸರುಗಳೂ ಕೂಡ ವಿಶೇಷವಾಗಿ ಇರುವಂತೆ ನೋಡಿಕೊಳ್ಳು ತ್ತಾರೆ. ಪ್ರಸ್ತಾವಿತ ಹೆಸರು ರಾಜಕೀಯ ಮತ್ತು ರಾಜಕೀಯ ವ್ಯಕ್ತಿಗಳು, ಧಾರ್ಮಿಕ ನಂಬಿಕೆಗಳು, ಸಂಸ್ಕೃತಿಗಳು ಮತ್ತು ಯಾವುದೇ ವ್ಯಕ್ತಿಗೆ ಹೋಲಿಕೆಯಾಗಬಾರದು. ಜಗತ್ತಿನಾದ್ಯಂತದ ಯಾವುದೇ ಗುಂಪಿನ ಜನರ ಭಾವನೆಗಳನ್ನು ನೋಯಿಸದ ರೀತಿಯಲ್ಲಿ ಹೆಸರನ್ನು ಆರಿಸಬೇಕು.

ಇದು ತುಂಬಾ ಅಸಭ್ಯವಾಗಿರಬೇಕು ಮತ್ತು ಕ್ರೂರ ಸ್ವಭಾವದಲ್ಲಿರಬಾರದು. ಆದಷ್ಟು ಚಿಕ್ಕದಾಗಿರಬೇಕು, ಉಚ್ಚರಿಸಲು ಸುಲಭ ವಾಗಿರಬೇಕು. ಹೆಸರಿನ ಗರಿಷ್ಠ ಉದ್ದ ಎಂಟು ಅಕ್ಷರಗಳಿರಬೇಕು ಎಂಬೆಲ್ಲ ಖಡಕ್ ಮಾರ್ಗಸೂಚಿಗಳು ಸಮಿತಿಗೆ ಇವೆ. ಅದರಂತೆ ಮ್ಯಾನ್ಮಾರ್ ದೇಶದವರು ತೌಕ್ತೆ ಎಂದು ಹೆಸರು ನೀಡಿದ್ದರು. ಗೆಕ್ಕೊ ಎಂದೂ ಕರೆಯಲ್ಪಟ್ಟ ತೌಕ್ತೆಗೆ ಹಲ್ಲಿ ಎಂಬ ಅರ್ಥವಿತ್ತು. ಒಮನ್ ದೇಶ ಸೂಚಿಸಿದ ಯಾಸ್ ಚಂಡಮಾರುತ ಮರ ಎಂಬ ಅರ್ಥವಿತ್ತಂತೆ ವೂಲ್ ಎಂದು ಜಗತ್ತಿನ ಕಣ್ಣಿಗೆ ಕಂಡ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಕೂಡ ತನ್ನ ದೇಶದ ಜನಸಾಮಾನ್ಯರಿಗೆ ಕಾರುಗಳು ಎಂದು ಕನಸು ಕಂಡಿದ್ದರು.

62 ಎಂಎಚ್‌ಪಿ ವೇಗದಲ್ಲಿ ಇಬ್ಬರು ವಯಸ್ಕರು ಮತ್ತು ಮೂವರು ಮಕ್ಕಳನ್ನು ಸುಲಭವಾಗಿ ಓಡಾಡಲು ಅನುವಾಗುವ ಚೆಂದದ ಕಾರನ್ನು ರಚಿಸಲು ಹಿಟ್ಲರ್ ಯೋಜನೆ ಆರಂಭಿಸಿದ್ದರು. ಅದಕ್ಕಾಗಿಯೇ ತುಂಬಾ ಆಸ್ಥೆ ವಹಿಸಿ ಆರಂಭಿಸಿದ್ದೇ ಫೋಕ್ಸ್‌ವ್ಯಾಗನ್ ಕಂಪನಿ. ಕಾರಿನ ಕಂಪನಿ ಜತೆಗೆ ಕಂಪನಿ ಹೆಸರೇನು ಎಂಬ ಬಗ್ಗೆಯೂ ಹಿಟ್ಲರ್‌ಗೆ ಹೆಚ್ಚು ಕಾಳಜಿ ಇತ್ತಂತೆ. ಅದೇ ಜರ್ಮನಿಯ ಅತ್ಯಂತ ಜನಪ್ರಿಯ, ಲೋಕಪ್ರಿಯ ಕಾರುಗಳ ಬ್ರಾಂಡ್ ಫೋಕ್ಸ್‌ವ್ಯಾಗನ್, ಅದರರ್ಥ ಜನರ ಕಾರು.

ಜೆಫ್ ಬಿಜೋಸ್ ಹೆಸರು ಕೇಳಿರಲೇಬೇಕು. ತಾವೊಂದು ಉದ್ಯಮವನ್ನು ಆರಂಭಿಸಬೇಕು ಎಂದಾಗ ತಮ್ಮ ಕಂಪನಿಗೆ ಯಾವ ಹೆಸರಿಡಬೇಕು ಎಂಬುದರ ಬಗ್ಗೆ ತೀವ್ರವಾಗಿ ಆಲೋಚಿಸಿ, ಹುಡುಕಿ ಕೊನೆಗೆ ಅಮೆಜಾನ್ ಎಂಬ ಹೆಸರನ್ನು ಆಯ್ಕೆ ಮಾಡಿಕೊಂಡಿ ದ್ದರು. ಅಮೆಜಾನ್ ಲೋಗೋವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇಂಗ್ಲಿಷಿನ ಎ ಇಂದ ಝಡ್‌ವರೆಗೆ  ಒಂದು ಬಾಣ ಹಾಕಿ, ನಮ್ಮ ಸಂಸ್ಥೆಯಲ್ಲಿ ಎ-ಟು-ಜಡ್ ಎಲ್ಲ ರೀತಿಯ ಸೇವೆ ಲಭ್ಯ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ. ಹಾಗೆಯೇ ಅವರಿಂದು ವಿಶ್ವದ ನಂಬರ್ ಒನ್ ಶ್ರೀಮಂತ.

ಅದಕ್ಕೇ ಹೇಳಿದ್ದು, ಯಾರ ನಸೀಬು ಯಾವ ಯಾವ ಹೆಸರಿನಲ್ಲಿ ಅಡಗಿರುವುದೋ ಬಲ್ಲವರಾರು?

Leave a Reply

Your email address will not be published. Required fields are marked *