Friday, 2nd December 2022

ಜನಸಂದಣಿ ದೂರು: ಕೋಲಾರದಲ್ಲಿ ಲಾಕ್‌ಡೌನ್‌ ಇನ್ನಷ್ಟು ಕಠಿಣ

ಕೋಲಾರ: ಕೋಲಾರ ಜಿಲ್ಲೆಯಲ್ಲಿ ಲಾಕ್ ಡೌನ್ ನಿಯಮಗಳನ್ನು ಕಠಿಣವಾಗಿ ಜಾರಿಗೊಳಿಸಲಾಗಿದೆ. ಇದೇ ಮೇ.21 ಸಂಜೆ 6 ರಿಂದ ಮೇ.25 ಬೆಳಿಗ್ಗೆ 6 ರವರೆಗೆ ಪೆಟ್ರೋಲ್, ಹಾಲು, ವೈದ್ಯಕೀಯ ಸೇವೆ ಹೊರತುಪಡಿಸಿ ಉಳಿದ ಎಲ್ಲ ವಾಣಿಜ್ಯ ವ್ಯವಹಾರ ಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ತಿಳಿಸಿದರು.

ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿ, ಲಾಕ್ ಡೌನ್ ನಿಯಮಗಳು ಜಾರಿಯಲ್ಲಿದ್ದರೂ ಬೆ. 6 ರಿಂದ ಸಂಜೆ 6 ರವರೆಗೆ ಜನಸಂದಣಿ ಸೇರಿರುವ ಹಲವಾರು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ನಿಯಮಗಳನ್ನು ಇನ್ನೂ ಕಠಿಣ ಗೊಳಿಸಲು ಮುಂದಾಗಿದೆ ಎಂದು ತಿಳಿಸಿದರು.

ದಿನಸಿ, ತರಕಾರಿ ಹಾಗೂ ಇನ್ನಿತರೆ ಅಗತ್ಯ ವಸ್ತುಗಳ ಮಾರಾಟಕ್ಕೆ ಈಗ ಬೆಳಿಗ್ಗೆ 6 ರಿಂದ 10ರವರೆಗೆ ಅವಕಾಶವಿತ್ತು. ಅದನ್ನು ಇನ್ನು ಮೂರು ದಿನಗಳ ಕಾಲ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೋಟೆಲ್ ನಿಂದ ಆಹಾರ ಪಾರ್ಸೆಲ್ ತರುವುದು ಈಗ ಜಾರಿಯಿರುವಂತೆ ಮುಂದುವರೆಯಲಿದೆ ಎಂದ ಅವರು, ತಳ್ಳುವ ಗಾಡಿಗಳಲ್ಲಿ ತರಕಾರಿ ಮಾರಾಟಕ್ಕೆ ಸಂಜೆ 6 ರವರೆಗೆ ಅವಕಾಶ ನೀಡಲಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಮಾತನಾಡಿ, ಅನಾವಶ್ಯಕ ವಾಹನ ಓಡಾಟ ನಿಷೇಧಿಸಲಾಗಿದೆ, ಅನಗತ್ಯ ಓಡಾಟ ಕಂಡುಬಂದಲ್ಲಿ ಅಂತಹ ವಾಹನಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಲಾಗುವುದು ಎಂದರು.