Tuesday, 17th May 2022

ಶಿಕ್ಷಕರ ದಿನಾಚರಣೆ: ಒಂದು ಆತ್ಮಾವಲೋಕನ

ಗ.ನಾ.ಭಟ್ಟ

ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು, ಹೊಸ ಹೊಸ ಪುಸ್ತಕಗಳನ್ನು ಓದಿ ಅರಗಿಸಿಕೊಂಡು ಮಕ್ಕಳಿಗೆ ಸಮರ್ಥವಾಗಿ, ಉದ್ಬೋಧಕವಾಗಿ ಪಾಠಮಾಡ ಬಹುದಾಗಿದೆ. ಹಳೆಯ ಸಾಂಪ್ರದಾಯಿಕ ಗೊಡ್ಡು ಶಿಕ್ಷಣನೀತಿಯನ್ನು ಕಿತ್ತೆಸೆಯಬೇಕಾಗಿದೆ. ಮಕ್ಕಳನ್ನು ಜಡ ಶ್ರೋತೃಗಳನ್ನಾಗಿ ರೂಪಿಸುವ ವಿಧಾನವನ್ನು ಕೈಬಿಡಬೇಕಿದೆ. ಉತ್ತರವನ್ನು ನೂರಾರು ಸಲ ಬರೆಯುವ ಅನಿಷ್ಟ ಪದ್ಧತಿಗೆ ತೆರೆ ಎಳೆಯಬೇಕಿದೆ. ಸ್ಪೆಷಲ್ ಕ್ಲಾಸು ಅನ್ನುತ್ತಾ ಅದೇ ಅದೇ ಪ್ರಶ್ನೋತ್ತರಗಳನ್ನು ಉರುಹಾಕಿಸುವ, ಮಕ್ಕಳ ಬುದ್ಧಿಶಕ್ತಿಯನ್ನು ಮೊಂಡು ಮಾಡುವ ಅವೈಜ್ಞಾನಿಕ ಪದ್ಧತಿಗೆ ತಿಲಾಂಜಲಿ ನೀಡಬೇಕಿದೆ.

ಇಂದು ಶಿಕ್ಷಕ ದಿನಾಚರಣೆ.

ಗುರುಭಕ್ತಿ, ಗುರುಪ್ರೇಮಗಳೊಂದಿಗೆ ಶಿಕ್ಷಕರ ಮೇಲೆ ನಮಗಿರುವ ಗೌರವವನ್ನೂ ಅಭಿವ್ಯಕ್ತಿಸುವ ದಿನ. ಅಂತಹ ದಿನಕ್ಕೆ ಅವಕಾಶ ಮಾಡಿಕೊಟ್ಟವರು ಭಾರತರತ್ನ, ಮಹಾತತ್ತ್ವ ಶಾಸ್ತ್ರಜ್ಞ ಡಾ. ಎಸ್.ರಾಧಾಕೃಷ್ಣನ್ ಅವರು. ತಮ್ಮ ಹುಟ್ಟಿದ ಈ ದಿನವನ್ನು (1888 ಸೆಪ್ಟಂಬರ್ 5 ಶಿಕ್ಷಕ ದಿನಾಚರಣೆಯಾಗಿ ಆಚರಿಸಬೇಕೆಂದು ಸಲಹೆ ನೀಡಿದ ಮಹಾನ್ ಚೇತನ ಅವರು.

1918ರಲ್ಲಿ ಅವರು ಮೈಸೂರು ಮಹಾರಾಜಾ ಕಾಲೇಜಿಗೆ ಪ್ರೊಫೆಸರ್ ಆಗಿ ನೇಮಕಗೊಳ್ಳುವಷ್ಟ ರಲ್ಲೇ ಅವರೊಬ್ಬ ಪ್ರಸಿದ್ಧ ವ್ಯಕ್ತಿಯಾಗಿದ್ದರು. ‘ಅವರ ಬಾಹ್ಯರೂಪ, ಎತ್ತರವಾದ ನಿಲುವು, ಬಿಸ್ಕಟ್ ಬಣ್ಣದ ರೇಷ್ಮೆಯ ನಿಲುವಂಗಿ, ಶುಭ್ರವೂ, ನಿರಾಡಂಬರವೂ ಆದ ಬಿಳಿಯ ಮಲ್ಲುಪಂಚೆ ಮತ್ತು ರುಮಾಲು, ಇವುಗಳಿಗೆ ಜರತಾರಿಯ ಕಳಂಕ ಎಂದೂ ಬಂದದ್ದಿಲ್ಲ. ಎಲ್ಲೋ ಸ್ವಲ್ಪ ಗಂಟಿಕ್ಕಿ ದಂತಿರುವ, ಆದರೆ ಕೋಪಸೂಚಕವಲ್ಲದ ಹುಬ್ಬು, ಯಾವುದೋ ಸಮಸ್ಯೆಯ ಬಳಿ ಹೋಗು ವಂತಿರುವ ಕಣ್ಣ ನೋಟ, ಮಗುಳು ನಗೆಯ ಸುಳಿವು-ಇವು ಭಾರತೀಯರೆಲ್ಲರಿಗೂ ಪರಿಚಿತವಾಗಿವೆ’ ಎಂದು ಎ. ಎನ್. ಮೂರ್ತಿರಾಯರು ಡಾ. ರಾಧಾಕೃಷ್ಣನ್ ಅವರನ್ನು ಚಿತ್ರಿಸಿದ್ದು ಕಣ್ಣಿಗೆ ಕಟ್ಟಿ ದಂತಿದೆ.

ಅವರು ಪಾಠ ಮಾಡುತ್ತಿದ್ದ ರೀತಿಯನ್ನು ಅವರೇ ಚಿತ್ರಿಸಿದ್ದು ಹೀಗಿದೆ-‘ಅವರ ತರಗತಿಯಲ್ಲಿ ಮೊದಲು ಹದಿನೈದು ನಿಮಿಷ ಪ್ರಶ್ನೋತ್ತರಗಳ ಕಾಲ. ಅವರು ಬಂದು ಕುಳಿತೊಡನೆ-ಇವತ್ತೇನು ಸುದ್ದಿ?’ ಎಂದು ಪ್ರಶ್ನೆ ಹಾಕುವರು. ಗುರು-ಶಿಷ್ಯರು ಆಗ ಒಬ್ಬರನ್ನೊಬ್ಬರು ಯಾವ ಪ್ರಶ್ನೆಯನ್ನು ಬೇಕಾದರೂ ಕೇಳಬಹುದು. ಕಾಫಿ ಒಳ್ಳೆಯದೋ ಟೀ ಒಳ್ಳೆಯದೋ? ತೃಪ್ತಿ ಒಳ್ಳೆಯದೋ ಅತೃಪ್ತಿ ಒಳ್ಳೆಯದೋ? ಬಂಧನವಿಲ್ಲದ ಸ್ವಾತಂತ್ರ್ಯ ಸಾಧ್ಯವೇ? ನೀವು ಇಂಗ್ಲೆಂಡಿಗೆ ಯಾಕೆ ಹೋಗಲಿಲ್ಲ? ಓಪನ್ ಕಾಲರ್ ಅಂಗಿಯನ್ನು ಕಾಲರ್ ನೆಕ್ ಟೈಗಳನ್ನು ಹಾಕಿಕೊಳ್ಳದೆ ನಿಲುವಂಗಿಯನ್ನೇ ಯಾಕೆ ಧರಿಸುತ್ತೀರಿ? ಇಂತಹ ನೂರು ಪ್ರಶ್ನೆಗಳು ಚರ್ಚೆಗೆ ಬರುತ್ತಿದ್ದವು.

ಇಂಥ ಸಣ್ಣ ವಿಷಯಗಳಿಂದಲೇ ಘನವಾದ ತತ್ತ್ವಗಳನ್ನು ಹೊರಡಿಸುತ್ತಿದ್ದರು. ಸುಂದರ ನಾಡೊಂದು ತತ್ತ್ವಸೌಧದ ನಿರ್ಮಾಣಕ್ಕೆ ಅವೇ ತಳಹದಿಯಾಗುತ್ತಿದ್ದವು’.
‘ಈ ಹರಟೆ ಮುಗಿದ ಮೇಲೆ ಅವರ ಉಪನ್ಯಾಸ ಪ್ರಾರಂಭ. ಯಾವ ವಿಷಯ ಉಪನ್ಯಾಸ ಮಾಡಲಿ, ಅದೊಂದು ಅಮೃತಧಾರೆ. ಕೇಳಿದರೆ ಒಳ್ಳೆಯ ಸಂಗೀತವನ್ನು ಕೇಳಿದ ಅನುಭವವಾಗುತ್ತಿತ್ತು. ಆ ಗಾನಸುಧೆಯನ್ನು ಸವಿಯು ವಾಗ ನಾವು ಅವರ ವಿಚಾರ ಸರಣಿಯನ್ನು, ಬಿಗಿಯಾದ ತರ್ಕಬದ್ಧವಾದ ಆಲೋಚನೆಯನ್ನು ಹೇಗೆ ಅನುಸರಿಸಿ ದೆವೋ ಕಾಣೆ-ಅದೊಂದು ಪವಾಡ. ಅವರಂತೆ ಸಮಸ್ಯೆಯ ಹೃದಯಕ್ಕೆ ನೇರವಾಗಿ ನುಗ್ಗಿ ಅಲ್ಲಿಂದ ವಿಚಾರ ಪುಷ್ಪ ವನ್ನು ಅರಳಿಸುವ ಶಕ್ತಿಯುಳ್ಳ ಜನ ಅಪರೂಪ’ ಎಂದು ಮೂರ್ತಿರಾಯರು ಅವರ ವ್ಯಕ್ತಿತ್ವವನ್ನು ಬಹು ಸುಂದರ ವಾಗಿ ಕಡೆದಿದ್ದಾರೆ. (ಜನತಾ ಜನಾರ್ದನ: ಪುಟ-69,70) ಇದಕ್ಕೆ ವ್ಯಾಖ್ಯಾನ ಬೇಕಾಗಲಾರದು.

ಇಂದು ದುರ್ಬೀನು ಹಾಕಿಕೊಂಡು ಹುಡುಕಿದರೂ ರಾಧಾಕೃಷ್ಣನ್‌ರಂತಹ ಉಪನ್ಯಾಸಕರು ಸಿಗಲಾರರು. ಅವರ ಆದರ್ಶದ ಹಿನ್ನೆಲೆಯಲ್ಲಿ, ಅವರು ದೇಶಕ್ಕಾಗಿ ಸಲ್ಲಿಸಿದ ಸೇವೆಯ ಹಿನ್ನೆಲೆಯಲ್ಲಿ ಇಂದಿನ ಶಿಕ್ಷಕರು ಹೇಗೆ ನಡೆದು ಕೊಳ್ಳಬೇಕು, ತಮ್ಮನ್ನು ತಾವು ಹೇಗೆ ಅರಿತುಕೊಳ್ಳಬೇಕು, ದೇವರು ನಮಗೆ ದಯಪಾಲಿಸಿದ ಸ್ಮೃತಿ, ಮತಿ, ಪ್ರಜ್ಞೆಯನ್ನು ಹೇಗೆ ಅಳವಡಿಸಿಕೊಳ್ಳಬೇಕು ಅನ್ನವುದರ ಬಗ್ಗೆ ಶಿಕ್ಷಕರು ತುಂಬಾ ಕಲಿಯಬೇಕಿದೆ.

ಶಿಕ್ಷಣ ಪದ್ಧತಿ
ಇಂದಿನ ಶಿಕ್ಷಣಪದ್ಧತಿಯಲ್ಲಿ ಶಿಕ್ಷಕ ಅತ್ಯಂತ ಮಹತ್ವದ ವ್ಯಕ್ತಿಯಾಗಿದ್ದಾನೆ. (ಇದು ಮಹಿಳಾ ಶಿಕ್ಷಕಿಯರಿಗೂ ಅನ್ವಯ.) ‘ಶಿಕ್ಷಕರಿಗಿಂತ ಮಿಗಿಲಾದ, ಮೌಲಿಕವಾದ ಶಿಕ್ಷಣಪದ್ಧತಿ ಉದಿಸಲಾರದು.’ ಅಂದರೆ ಅತ್ಯುತ್ತಮ ಶಿಕ್ಷಣಪದ್ಧತಿಯನ್ನು ಶಿಕ್ಷಕನೇ ನಿರ್ಮಿಸಬಲ್ಲ ಎಂದು ಇದರ ಆರ್ಥ. ‘ಶಿಶುಕೇಂದ್ರಿತ ಶಿಕ್ಷಣಪದ್ಧತಿಯು ಶಿಕ್ಷಕರ ಮೂಲಕ ಅದೊಂದು ಶಿಕ್ಷಕಕೇಂದ್ರಿತ ಶಾಲೆಯಾಗಬಲ್ಲುದು’ ಎಂದು ನಮ್ಮ ಹಿರಿಯರು ಹೇಳಿದ್ದು ಇಲ್ಲಿ ಸ್ಮರಣೀಯ. ಹಾಗೆಯೇ ಶಿಕ್ಷಕರ ಮಹತ್ವದ ಬಗ್ಗೆ ಸಿಸೇರೋ ಹೇಳಿದ ಮಾತೂ ಅಷ್ಟೇ ಮಹತ್ವವಾದುದು.-‘ನಮ್ಮ ಯುವ ಜನತೆಗೆ ಶಿಕ್ಷಕರು ಬೋಧಿಸಿದ್ದಕ್ಕಿಂತ, ಮಾರ್ಗದರ್ಶನ ಮಾಡಿದ್ದಕ್ಕಿಂತ ಶ್ರೇಷ್ಠವಾದ, ಅತ್ಯುತ್ತಮ ವಾದ ಮತ್ತೊಂದು ಕಾಣಿಕೆ ಇನ್ನೇನಿದೆ?’ ಎಂದು ಆತ ಕೇಳುತ್ತಾನೆ.

‘ಶಿಕ್ಷಕನ ಪ್ರಭಾವ ಅಥವಾ ಪರಿಣಾಮ ಶಾಶ್ವತವಾದುದು’ ಎಂದು ಹೇಳುವ ಹೆನ್ರಿ ಆಡಮ್‌ನ ಮಾತಂತೂ ನಿತ್ಯ ಮನನೀಯವಾಗಿದೆ. ಆತ ಹೇಳುತ್ತಾನೆ.
‘ತಂದೆ-ತಾಯಂದಿರು ಮಕ್ಕಳಿಗೆ ಜನ್ಮ ಕೊಡುತ್ತಾರೆ. ಆದರೆ ಅದಕ್ಕಿಂತ ಹೆಚ್ಚು ಏನೂ ಕೊಡಲಾರರು ಅವರು. (ಕೆಲವರು ಅಪವಾದವಾಗಿ ಇರಬಹುದು. ಅದು ಬೇರೆ ಪ್ರಶ್ನೆ) ಒಬ್ಬ ಕೊಲೆಗಾರ ಒಬ್ಬನ ಜೀವವನ್ನು ತೆಗೆಯಬಹುದು; ಆದರೆ ಆವನ ಆ ದುಷ್ಕೃತ್ಯ ಅಲ್ಲಿಗೇ ನಿಂತುಹೋಗುತ್ತದೆ. ಆದರೆ ಶಿಕ್ಷಕನೊಬ್ಬ ವಿದ್ಯಾರ್ಥಿ ಗಳ ಮೇಲೆ ಬೀರಿದ ಪ್ರಭಾವ ಅವನು ಮೃತನಾದಾಗಲೂ ಅದು ಮುಂದುವರಿಯುತ್ತದೆ’ ಎಂದು ಆತ ಶಿಕ್ಷಣದ ಶಾಶ್ವತತೆಯನ್ನು ಮನೋಜ್ಞವಾಗಿ ಸಾರಿದ.

ಪಶುವಾಗುವ ಅಧ್ಯಾಪಕ ಇದನ್ನೇ ನಮ್ಮ ಪ್ರಾಚೀನರು ಯಜ್ಞತತ್ತ್ವದಲ್ಲಿ ಸೊಗಸಾಗಿ ನಿರೂಪಿಸಿದ್ದಾರೆ. ಉತ್ತಮ ಅಧ್ಯಾಪಕನು ದಿನ ದಿನವೂ ಪ್ರವಚನ ವೇದಿಕೆಯ ಮೇಲೆ ತನ್ನ ಶಿಷ್ಯರಿಗೆ ಉಪನ್ಯಾಸವನ್ನು ಮಾಡುತ್ತಾ, ಒಳ್ಳೆಯ ವಿಚಾರಗಳನ್ನು ಬೋಽಸುತ್ತಾ, ಅವರ ಭಾವನೆ, ನಡವಳಿಕೆ, ಬುದ್ಧಿಸಂಪತ್ತುಗಳಲ್ಲಿ ಆವಿರ್ಭಾವ ಗೊಳ್ಳುತ್ತಾ ಕೊನೆಗೆ ಶಿಷ್ಯರ ವ್ಯಕ್ತಿತ್ವದಲ್ಲಿ ಕರಗಿ ಹೋಗಿ, ಪಶುವಾಗಿ ಹೋಗುತ್ತಾನೆ. ಇಲ್ಲಿ ಪಶು ಎಂಬ ಪದ ಬಹಳ ಮುಖ್ಯವಾದುದು. ಇಲ್ಲಿ ಪಶುವಾಗುವುದು ಎಂದರೆ ತನ್ನನ್ನು ತಾನು ಕಳೆದುಕೊಂಡು ಮತ್ತೊಬ್ಬರಲ್ಲಿ ಆವಿರ್ಭಾವಗೊಳ್ಳುವುದು ಎಂದು ಅರ್ಥ.

ಯಜ್ಞಪಶು, ಬಲಿಪಶು, ನರಮೇಧ, ಪುರುಷಮೇಧ ಎಂಬ ಪದಗಳೆಲ್ಲಾ ಇದರ ಹಿನ್ನೆಲೆಯಲ್ಲೇ ಬಂದದ್ದು. ಯಜ್ಞಪಶುವಾಗುವುದು ಕೇವಲ ಅಧ್ಯಾಪಕ ವೃತ್ತಿಗಷ್ಟೇ ಸೀಮಿತವಾದುದಲ್ಲ. (ಯಜ್ಞ ಎಂದರೆ ಅರ್ಪಣೆ ಎಂದು ಅರ್ಥ. ಕಟ್ಟಿಗೆ ಸುಡುವುದು, ತುಪ್ಪ ಸುರಿಯುವುದು ಎಂದು ಅರ್ಥವಲ್ಲ.) ದೇಶವನ್ನು ಕಾಯುವ ಯೋಧ ನೊಬ್ಬ ಯುದ್ಧಕ್ಕೆ ಹೋಗಿ, ಅಲ್ಲಿ ಹೋರಾಡಿ, ಮಡಿದು ವೀರಸ್ವರ್ಗವನ್ನು ಸೇರುವುದೂ ಕೂಡಾ ಒಂದು ಯಜ್ಞವೇ. ಅಂದರೆ ಅರ್ಪಣೆ ಅಥವಾ ತ್ಯಾಗ. ಅವನು ಪಶುವಾಗಿ ಹೋದ ಅಂದರೆ ಅವನು ದೇಶಕ್ಕಾಗಿ ಅರ್ಪಣೆ ಮಾಡಿದ ಅಂತಲೇ ಅರ್ಥ. ಹೀಗೆ ಗಾಯಕರು, ವೈದ್ಯರು, ವಕೀಲರು, ಶಿಲ್ಪಿಗಳು, ವರ್ತಕರು ಎಲ್ಲರೂ ಪಶುಗಳಾಗಿ ತಮ್ಮ ಮುಂದಿನ ಜನಾಂಗಕ್ಕೆ. ಅಂದರೆ-ಮಕ್ಕಳಿಗೋ, ಶಿಷ್ಯರಿಗೋ ಆ ವೃತ್ತಿಯ ಮಹತ್ವವನ್ನು ಧಾರೆಯೆರೆದು ಹೋಗುತ್ತಾರೆ.

ಇದರ ಹಿನ್ನೆಲೆಯಲ್ಲಿ ಶಿಕ್ಷಕವೃತ್ತಿಯೂ ಕೂಡಾ ಒಂದು ಯಜ್ಞಪಶುವಾಗುವ ಮಹತ್ವವನ್ನು ಹೊಂದಿದೆ. ಪಠ್ಯ ಪಠ್ಯೇತರ ಮಾರ್ಗದರ್ಶನ ಇವೆಲ್ಲದರ ಮುನ್ನುಡಿಯಲ್ಲಿ ನಾವಿಂದು ಶಿಕ್ಷಕನ ಪಾತ್ರ ಮತ್ತು ಅವನ ಹೊಣೆಗಾರಿಕೆಯನ್ನು ಅರಿಯಬೇಕಿದೆ. ಶಿಕ್ಷಕನ ಶೈಕ್ಷಣಿಕ ಪಾತ್ರ ಬಹಳ ವೈವಿಧ್ಯಮಯವಾದುದು. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಯೋಜನೆಯನ್ನು ರೂಪಿಸಿವುದು, ಕಾರ್ಯಕ್ರಮಗಳ ಸಂಘಟನೆ, ವಿದ್ಯಾರ್ಥಿಗಳು ದಾರಿತಪ್ಪದಂತೆ ನೋಡಿಕೊಳ್ಳುವುದು ಮತ್ತು
ಮಾರ್ಗದರ್ಶನ ನೀಡುವುದು, ರೆಕಾರ್ಡುಗಳನ್ನು ಪರಿಶೀಲಿಸುವುದು, ವಿದ್ಯಾರ್ಥಿಗಳ ಸಾಧನೆಯನ್ನು ದಾಖಲಿಸುವುದು, ಸಮಾಜದ ಆಧಾರಸ್ತಂಭವಾಗಿ ನಡೆದು ಕೊಳ್ಳುವುದು, ಸಮಾಜಶಿಲ್ಪಿಯಾಗಿ ಮತ್ತು ಸಮಾಜದ ಉಪಯುಕ್ತ ಸೇವಕನಾಗಿ ನಡೆದುಕೊಳ್ಳುವುದು, ಮಕ್ಕಳ ತಂದೆ-ತಾಯಂದಿರಲ್ಲಿ ಉತ್ತಮ ಬಾಂಧವ್ಯ ಬೆಸೆಯವುದು, ಸಹಶಿಕ್ಷಕರೊಡನೆ ಸಂಬಂಧ ಹಾಳಾಗದಂತೆ ನಡೆದುಕೊಳ್ಳುವುದು ಹೀಗೆ ಹಲವು ಹೊಣೆಗಾರಿಕೆಯುಳ್ಳ ಸ್ಥಾನ ಶಿಕ್ಷಕರದ್ದು.

ದಿನ ಬೆಳಗಾದರೆ ಮಕ್ಕಳಿಗೆ ಕೋಳಿಮೊಟ್ಟೆ ಕೊಡಬೇಕೋ ಅಥವಾ ತರಕಾರಿ ಕೊಡಬೇಕೋ? ಕೊಡುವುದಾದರೆ ಅದರಲ್ಲಿ ಹೈಬ್ರೀಡ್ ಮೊಟ್ಟೆಯನ್ನು ಕೊಡ ಬೇಕೋ, ನಾಟೀ ಕೋಳಿಮೊಟ್ಟೆಯನ್ನ ಕೊಡಬೇಕೋ? ಬಾಳೆ ಹಣ್ಣಿನಲ್ಲಿ ಪಚ ಬಾಳೆಹಣ್ಣು ಕೊಡಬೇಕೋ ಅಥವಾ ಏಲಕ್ಕಿ ಬಾಳೆಹನ್ಣು ಕೊಡಬೇಕೋ? ಕರೋನಾ ವ್ಯಾಕ್ಸಿನ್ ಆಗಿದೆಯೋ ಇಲ್ಲವೋ? ಪೋಲಿಸ್ ಸ್ಟೇಷನನ್ನಲ್ಲಿ ಶಿಕ್ಷಕರ ಫಿಂಗರ್ ಪ್ರಿಂಟ್ ಆಗಿದೆಯೋ ಇಲ್ಲವೋ? ಹೀಗೆ ಅಲ್ಪ ಪ್ರಾಮುಖ್ಯತೆಯ ವಿಚಾರದಲ್ಲೇ ಕಾಲ ಕಳೆಯುವ, ಶಿಕ್ಷಣದ ಬಗ್ಗೆ ಕಿಂಚಿತ್ತೂ ಯೋಚಿಸದ ಸರಕಾರಿ ಬೃಹತ್ ಬೃಹತ್ ಯೋಜನೆಗಳ ಮಧ್ಯದಲ್ಲಿ ಶಿಕ್ಷಕನು ತಾನೇ ಸ್ವತಃ ತನಗೆ ತಾನೇ ಮಾರ್ಗದರ್ಶಕ ನಾಗಿ, ಸ್ವಯಂ ಪ್ರೇರಣೆ ಪಡೆದು ಮಕ್ಕಳಿಗೆ ಹಿತವನ್ನು ಸಾಧಿಸಬೇಕಾಗಿದೆ; ಒಳಿತನ್ನು ಬೋಧಿಸಬೇಕಾಗಿದೆ.

ಬೇಕಿದೆ ಹೊಸತನ
ಈಗಂತೂ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು, ಹೊಸ ಹೊಸ ಪುಸ್ತಕಗಳನ್ನು ಓದಿ ಅರಗಿಸಿಕೊಂಡು ಮಕ್ಕಳಿಗೆ ಸಮರ್ಥವಾಗಿ, ಉದ್ಬೋಧಕವಾಗಿ ಪಾಠಮಾಡಬಹುದಾಗಿದೆ. ಹಳೆಯ ಸಾಂಪ್ರದಾಯಿಕ ಗೊಡ್ಡು ಶಿಕ್ಷಣನೀತಿಯನ್ನು ಕಿತ್ತೆಸೆಯಬೇಕಾಗಿದೆ. ಮಕ್ಕಳನ್ನು ಜಡ ಶ್ರೋತೃಗಳನ್ನಾಗಿ ರೂಪಿಸುವ ವಿಧಾನವನ್ನು ಕೈಬಿಡಬೇಕಿದೆ. ಉತ್ತರವನ್ನು ನೂರಾರು ಸಲ ಬರೆಯುವ ಅನಿಷ್ಟ ಪದ್ಧತಿಗೆ ತೆರೆ ಎಳೆಯಬೇಕಿದೆ. ಸ್ಪೆಷಲ್ ಕ್ಲಾಸು ಅನ್ನುತ್ತಾ ಅದೇ ಅದೇ ಪ್ರಶ್ನೋತ್ತರಗಳನ್ನು ಉರುಹಾಕಿಸುವ, ಮಕ್ಕಳ ಬುದ್ಧಿಶಕ್ತಿಯನ್ನು ಮೊಂಡು ಮಾಡುವ ಅವೈಜ್ಞಾನಿಕ ಪದ್ಧತಿಗೆ ತಿಲಾಂಜಲಿ ನೀಡ ಬೇಕಿದೆ.

ಇಂದು ಶಿಕ್ಷಣಕ್ಷೇತ್ರದಲ್ಲಿ ಎದ್ದು ಕಾಣುವ ಕೊರತೆಯೆಂದರೆ- ವಿಮರ್ಶಾತ್ಮಕ ಬೋಧನೆ. ಅದರ ಬಗ್ಗೆ ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್ ಅವರು ‘ವಿಮರ್ಶಾ ತ್ಮಕ ಬೋಧನೆಯ ಪ್ರಪಂಚ’ ಎಂಬ ಕಿರು ಹೊತ್ತಗೆಯನ್ನೇ ಬರೆದಿದ್ದಾರೆ. ಅದರಲ್ಲಿ ಅವರು ವಿಮರ್ಶಾತ್ಮಕ ಬೋಧನೆಯ ಅಗತ್ಯ, ಚಾರಿತ್ರಿಕ ಹಿನ್ನೆಲೆ, ಉದ್ದೇಶ ಗಳು, ಪ್ರೇರಕ ತತ್ತ್ವಗಳು, ಸದ್ಯದ ಶಾಲಾ ಸಂದರ್ಭ, ವಿಮರ್ಶಾತ್ಮಕ ಜಾಗೃತಿ ಹೀಗೆ ಹಲವು ಹತ್ತು ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.

ಕೊನೆಯದಾಗಿ ಒಂದು ಮಾತು. ಶಾಲೆಯೊಂದು ಒಳ್ಳೆಯ ಹೆಸರು ಪಡೆಯುವುದು ಆ ಶಾಲೆಯ ಮುಖ್ಯಸ್ಥನಿಂದಲೇ ಹೊರತು ಬೇರೆ ಯಾರಿಂದಲೂ ಅಲ್ಲ. ಶಿಕ್ಷಣ ತಜ್ಞ ಕೊಚಾರ್ ಹೇಳುತ್ತಾರೆ. The character of the school reflects and proclaims the character of the principal. He is the seal and school is the wax” ‘ಸ್ಕೂಲಿನ ಚಾರಿತ್ರ್ಯ ಸ್ಕೂಲಿನ ಮುಖ್ಯೋಪಾಧ್ಯನ ಚಾರಿತ್ರ್ಯವನ್ನು ಪ್ರತಿಫಲಿಸುತ್ತದೆ ಮತ್ತು ಘೋಷಿಸಿ ಹೇಳುತ್ತದೆ. ಆತ ಸೀಲ್ ಅಥವಾ ಠಸ್ಸೆ ಇದ್ದ ಹಾಗೆ. ಸ್ಕೂಲ್ ಮೇಣ ಇದ್ದ ಹಾಗೆ.’

ಅಂದರೆ ಸೀಲ್ ಇದ್ದ ಹಾಗೆ ಮುದ್ರೆ ಬೀಳುತ್ತದೆ ಅಂತ ಅರ್ಥ. ಇದರ ಬಗ್ಗೆ ಮುಖ್ಯೋಪಾಧ್ಯಾಯನಾದವನು ಎಚ್ಚರದಿಂದ ಇರಬೇಕು. ಇಂದಿನ ಬಹುಪಾಲು ಮುಖ್ಯಶಿಕ್ಷಕರು ತಮ್ಮ ಜೀವಮಾನದಲ್ಲೇ ಇಂತಹ ಅಪೂರ್ವ, ಚಿಂತನಶೀಲ ಮಾತುಗಳನ್ನು ಕೇಳಿರುವುದಿಲ್ಲ. ಶಾಲೆ ಬದಲಾಗುವುದಾದರೂ ಹೇಗೆ? ಅಂತಹ ಉದಾತ್ತ ಚಿಂತನೆಗಳ ಪರಿಚಯವನ್ನು ನಮ್ಮ ಇಂದಿನ ಶಿಕ್ಷಕರು ಮಾಡಿ ಕೊಂಡು, ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಬೇಕಾಗಿದೆ. ಶಿಕ್ಷಕ ದಿನಾಚರಣೆಗೆ ಜಯವಾಗಲಿ.