Tuesday, 27th July 2021

ಅಂದು ಅಪಮಾನ, ಇಂದು ಸನ್ಮಾನ

ಕೋಲಾರ ಡಿಸಿಸಿ ಬ್ಯಾಂಕ್ ಹಿರಿಮೆ

ಮನೆ ಬಾಗಿಲಿಗೆ ಬ್ಯಾಂಕಿಂಗ್ ಮಹಿಮೆ

ವಿಶೇಷ ವರದಿ: ಕೆ.ಎಸ್‌.ಮಂಜುನಾಥ ರಾವ್ 

ಕೋಲಾರ: ಗೆಟ್‌ಔಟ್ ಎಂದು ಕಚೇರಿಯಿಂದ ಹೊರಗಡೆ ಕಳಿಸಿದವರೇ ಗೆಟ್‌ಇನ್ ಆಗಿ ಕೊಡುಗೆ ಕೊಟ್ಟ ಅಪರೂಪದ ಘಟನೆ ಇದು.

ಹೌದು ಏಳೆಂಟು ವರ್ಷದ ಹಿಂದೆ ಕೋರ್ ಬ್ಯಾಂಕಿಂಗ್ ಸೇವೆ ಅನುಮತಿಗಾಗಿ ಬೆಂಗಳೂರಿನ ನಬಾರ್ಡ್ ಆಫೀಸ್‌ಗೆ ಹೋಗಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ  ಎಂ.ಗೋವಿಂದಗೌಡರನ್ನು ಮಹಿಳಾ ಅಧಿಕಾರಿಯೊಬ್ಬರು ನಾನ್ಸೆನ್ಸ್‌ ಎಂದು ಗದರಿಸಿ ವಾಪಸ್ ಕಳುಹಿಸಿದ್ದರಲ್ಲದೆ ನಷ್ಟದ ಕಾರಣಕ್ಕಾಗಿ ಬೆಂಗಳೂರು ಬ್ಯಾಂಕಿನ ಜತೆಗೆ ವಿಲೀನ ಮಾಡುವುದಾಗಿ ಎಚ್ಚರಿಕೆ ಸಹಾ ನೀಡಿದ್ದರು.

ಅಪಮಾನ ಮತ್ತು ನಿರಾಸೆಯಿಂದ ವಾಪಸ್ ಆದ ಗೋವಿಂದಗೌಡ ಮನೆ ಮರೆತು ಬ್ಯಾಂಕನ್ನೇ ಮಠವಾಗಿಸಿ ಷೇರನ್ನು ಹೆಚ್ಚಿಸಿ ಕೊಂಡು ಮಹಿಳಾ ಸಂಘಗಳಿಗೆ ಸಾಲ ನೀಡುವ ಮೂಲಕ ನಿಧಾನವಾಗಿ ವಹಿವಾಟು ಆರಂಭಿಸುವುದರೊಂದಿಗೆ ಜನಮಾನಸದಲ್ಲಿ ನಂಬಿಕೆಯನ್ನು ಬೆಳೆಸಿಕೊಂಡು ಶೇ.98 ಎನ್‌ಪಿಎ ಪ್ರಮಾಣವನ್ನು ಶೇ.2.5ಕ್ಕೆ ಇಳಿಸಿ ದಾಖಲೆ ಮಾಡಿದ್ದರು.

ಇಡೀ ರಾಜ್ಯದಲ್ಲಿ ಮಹಿಳಾ ಸಂಘಗಳಿಗೆ ನೀಡಿರುವ ಸಾಲವನ್ನೂ ಮೀರಿಸಿದಂತೆ ಕೋಲಾರ ಡಿಸಿಸಿ ಬ್ಯಾಂಕ್ ಒಂದೇ ಸ್ತ್ರೀ ಶಕ್ತಿ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ ದಾಖಲೆ ಸಾಲ ನೀಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಇತಿಹಾಸ ಸೃಷ್ಟಿ ಮಾಡಿದರು.

ಬ್ಯಾಂಕಿಂಗ್ ಆನ್ ವೀಲ್ಸ್‌: ಅಂದು ಅಪಮಾನಿಸಿದ ನಬಾರ್ಡ್ ಅಧಿಕಾರಿಗಳೇ ಇಂದು ಕೋಲಾರ ಡಿಸಿಸಿ ಬ್ಯಾಂಕಿಗೆ ಎರಡು ಮೊಬೈಲ್ ಬ್ಯಾಂಕಿಂಗ್ ವಾಹನಗಳನ್ನು ನೀಡುವ ಮೂಲಕ ಸಂಸ್ಥೆ ಸಾಧನೆಯನ್ನು ಕೊಂಡಾಡಿದ್ದು ಇತರೆ ಬ್ಯಾಂಕ್‌ಗಳಿಗೆ ಮಾದರಿಯಾಗಿ ನಡೆಯುತ್ತಿದೆ ಎಂದು ಶ್ಲಾಘಿಸಿದರು.

ವಾಹನಗಳಲ್ಲಿ ಎಟಿಎಂ ಸೌಲಭ್ಯವಿದ್ದು ಯಾವುದೇ ಎಟಿಎಂ ಕಾರ್ಡ್ ಬಳಿಸಿ ಹಣ ಪಡೆದುಕೊಳ್ಳಬಹುದಾಗಿದೆ. ಅಂತೆಯೇ ಹಣ
ಕಟ್ಟಲೂ ಬಹುದಾಗಿದ್ದು ಕರೆಂಟ್ ಬಿಲ್, ಮೊಬೈಲ್ ಕರೆನ್ಸ್‌ ರೀಚಾರ್ಜ್, ಹಣ ವರ್ಗಾವಣೆ, ಗ್ಯಾಸ್ ಬಿಲ್ ಪಾವತಿ, ಕೇಬಲ್ ಟಿವಿ ರೀಜಾರ್ಜ್, ಆನ್‌ಲೈನ್ ಪೇಮೆಂಟ್, ಶಾಪಿಂಗ್ ಮುಂತಾದ ಎಲ್ಲ ಬ್ಯಾಂಕಿಂಗ್ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ.

ವಾಹನದಲ್ಲಿರುವ ಟಿವಿಯನ್ನು ಬಳಸಿಕೊಂಡು ಸಹಕಾರಿ ಪ್ರಚಾರಾಂದೋಲನ ಸಹಾ ಮಾಡಬಹುದಾಗಿದೆ. ಸಂಪೂರ್ಣ ಹವಾ
ನಿಯಂತ್ರಿತ ವಾಹನಕ್ಕೆ ಸಿಸಿ ಟಿವಿ ಕಣ್ಗಾವಲಿನ ವ್ಯವಸ್ಥೆ ಕಲ್ಪಿಸಲಾಗಿದ್ದು ಇದು ಸೋಲಾರ್‌ನಿಂದ ನಡೆಯುವಂತೆ ಮಾಡಲಾಗಿದ್ದು ಹೀಗಾಗಿ ನಿರ್ವಹಣೆ ವೆಚ್ಚ ಇರುವುದಿಲ್ಲ.

ಮನೆ ಬಾಗಿಲಿಗೆ ಬ್ಯಾಂಕ್: ಎರಡೂ ವಾಹನಗಳು ಪ್ರತಿ ನಿತ್ಯ ಗ್ರಾಮಾಂತರ ಭಾಗದಲ್ಲಿ ಸಂಚರಿಸಲಿದ್ದು ಹಳ್ಳಿ ಜನರಿಗೆ
ಮನೆ ಮುಂದೆಯೇ ಬ್ಯಾಂಕಿಂಗ್ ಸೇವೆ ಸಲ್ಲಿಸಲಿದೆ. ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಹಣಕಟ್ಟಲು ಪಟ್ಟಣಕ್ಕೆ ಎಡತಾಕುತ್ತಿದ್ದ ದೃಶ್ಯ ಇನ್ನು ಮುಂದೆ ಕಾಣಸಿಕ್ಕುವುದಿಲ್ಲ ಎಂದರು.

ಎಟಿಎಂ ಲೋಕಾರ್ಪಣೆಗೊಳಿಸಿ ಮಾತನಾಡಿದ ನಬಾರ್ಡ್ ಮಹಾ ಪ್ರಧಾನ ವ್ಯವಸ್ಥಾಪಕ ನೀರಜ್‌ಕುಮಾರ್ ವರ್ಮಾ,
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇದೊಂದು ಐತಿಹಾಸಿಕ ದಿನವಾಗಿದ್ದು ಡಿಸಿಸಿ ಬ್ಯಾಂಕ್ ಸಾಧನೆಯ ಕ್ರಾಂತಿ ಮಾಡಿದೆ. ಸಹಕಾರಿ ಸಂಸ್ಥೆ ಜನರ ಬ್ಯಾಂಕಾಗಿದ್ದು ಡಿಜಿಟಲೀಕರಣದ ಸೌಲಭ್ಯವನ್ನು ಗ್ರಾಮಾಂತರ ಪ್ರದೇಶಕ್ಕೆ ತಲುಪಿಸಿದ ಕೀರ್ತಿಗೆ ಭಾಜನವಾಗಿದೆ ಎಂದರು.

ನಬಾರ್ಡ್ ಎಜಿಎಂ ಶಿವಾನಿ ಮಾತನಾಡಿ, ರಿಲಯನ್ಸ್, ಮೋರ್, ಬಿಗ್‌ಬಜಾರ್ ಮುಂತಾದ ಕಂಪನಿಗಳು ಗ್ರಾಹಕರ ಮನೆ ಬಾಗಿಲಿಗೆ ಸೇವೆ ಸಲ್ಲಿಸುತ್ತಿರುವಾಗ ಬ್ಯಾಂಕಿಂಗ್ ಕ್ಷೇತ್ರ ಸಹಾ ಹಳ್ಳಿಯತ್ತ ಮುಖ ಮಾಡಿರುವುದು ಸಕಾಲಿಕವಾಗಿದ್ದು ಸ್ತ್ರೀ ಶಕ್ತಿ ಸಂಘದ ಉನ್ನತಿಯಲ್ಲಿ ಪ್ರಮುಖಪಾತ್ರ ವಹಿಸಿರುವ ಡಿಸಿಸಿ ಬ್ಯಾಂಕ್ ಪ್ರಾಯೋಗಿಕ ಯೋಜನೆಯಲ್ಲೂ ಯಶಸ್ವಿ ಕಾಣುವಂತಾಗಲಿ ಎಂದು ಆಶಿಸಿದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ನಾಗರಾಜ್, ನಿರ್ದೇಶಕರಾದ ಯಲವಾರ ಸೊಣ್ಣೇಗೌಡ, ಎಂ.ಎಲ್.ಅನಿಲ್ ಕುಮಾರ್, ಸೋಮಣ್ಣ, ನಾಗಿರೆಡ್ಡಿ, ದೇವಣ್ಣ, ಮೋಹನ್ ರೆಡ್ಡಿ, ವೆಂಕಟರೆಡ್ಡಿ, ಗೋವಿಂದರಾಜು, ನಾರಾಯಣರೆಡ್ಡಿ, ಅಶ್ವತ್ಥಪ್ಪ, ಎಸ್.ವಿ.ಸುಧಾಕರ್, ಸಿಇಒ ರವಿ ಇದ್ದರು.

ಕಪಾಳಕ್ಕೆ ಹೊಡೆದು ಸರಿಪಡಿಸಿ
ಸಾಧನೆಯನ್ನು ಮುಂದುವರೆಸುವ ಜವಾಬ್ದಾರಿ ಹೆಗಲೇರಿದೆ. ಹೊಗಳಿಕೆಯನ್ನು ಸವಾಲಾಗಿ ತೆಗೆದುಕೊಂಡು ಎನ್ ಪಿಎ ಶೇ.1ಕ್ಕೆೆ ಇಳಿಸಲು ಬ್ಯಾಂಕ್ ಸಿಬ್ಬಂದಿ ಮುಂದಾಗಬೇಕು. ತಾಲೂಕಿಗೊಂದು ಮೊಬೈಲ್ ವಾಹನಗಳನ್ನು ದಾನಿಗಳ ನೆರವಿನಿಂದ ಸಾಕಾರ ಗೊಳಿಸಲಾಗುವುದು. ಟೀಕೆ ಮತ್ತು ಆರೋಪಗಳಿಂದ ಸಾಕಷ್ಟು ನೋವು ಅನುಭವಿಸಲಾಗಿದ್ದು ಇಂದಿನ ಸನ್ಮಾನ ಕೆಲಸದಲ್ಲಿ ದೇವರಿದ್ದಾ ಎಂಬು ನ್ನು ಸಾಕ್ಷೀಕರಿಸಿದೆ. ಜ.26ರೊಳಗೆ ಅವಳಿ ಜಿಲ್ಲೆಯ ಎಲ್ಲ ಸೊಸೈಟಿಗಳು ಆನ್‌ಲೈನ್ ಆಗುವ ಮೂಲಕ ಪಾರದರ್ಶಕತೆಯಿಂದ ನಡೆದಾಗ ಭ್ರಷ್ಟಾಚಾರಕ್ಕೆ ಅವಕಾಶ ಇರುವುದಿಲ್ಲ.

ದಿನನಿತ್ಯ ನಡೆಯುವ ಸಣ್ಣ ಪುಟ್ಟ ಲೋಪಗಳನ್ನು ಸಿಬ್ಬಂದಿಗಳು ಕಪಾಳಕ್ಕೆೆ ಹೊಡೆದು ಸರಿಪಡಿಸಬೇಕಿದ್ದು ಅದನ್ನೇ ಪ್ರಚಾರ ಮಾಡಲು ಮುಂದಾದರೆ ಸಹಕಾರಿ ವ್ಯವಸ್ಥೆ ಹಾಳಾಗುತ್ತದೆ ಎಂಬುದನ್ನು ಮನಗಾಣಬೇಕು. ಸೇವೆ ಪತ್ರಿಕೆ ಪ್ರಚಾರಕ್ಕೆ ಸೀಮಿತ ಆಗದೆ ಫಲಾನುಭವಿಗಳಿಗೆ ತಲುಪಿಸಲು ಮುಂದಾಗಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು

Leave a Reply

Your email address will not be published. Required fields are marked *